Joga Falls ಪ್ರಸಿದ್ಧ ಜೋಗ ಜಲಪಾತ ಪ್ರವಾಸಿಗರಿಗೆ ವೀಕ್ಷಣೆಗೆ ಬಲು ದುಬಾರಿಯಾಗಿದೆ. ಜೋಗ ನಿರ್ವಹಣಾ ಪ್ರಾಧಿಕಾರ ಜಲಪಾತ ವೀಕ್ಷಣೆಗೆ ಹೆಚ್ಚಿನ ಶುಲ್ಕ ವಿಧಿಸಿದೆ. ಪ್ರವಾಸಿಗರ ವೀಕ್ಷಣೆಗೆ ಹೆಚ್ಚಿಸಿರುವ ದರಕ್ಕೆ ಪ್ರವಾಸಿಗರು ಹಾಗೂ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜೋಗವನ್ನು ಅಭಿವೃದ್ಧಿ ಪಡಿಸುವ ವೇಳೆ ಜಲಪಾತದ ವೀಕ್ಷಣೆಯ ದರ ಏರಿಕೆ ಯಾವ ಕಾರಣಕ್ಕೆ ಮಾಡಿದರು ಎಂಬ ಪ್ರಶ್ನೆಯನ್ನು ಸ್ಥಳೀಯರು ಮಾಡುತ್ತಿದ್ದಾರೆ. ಜೋಗ ಜಲಪಾತದ ಪ್ರವೇಶ ದರ, ಪಾರ್ಕಿಂಗ್ ದರವನ್ನು ಏರಿಕೆ ಮಾಡಲಾಗಿದೆ. ಅಲ್ಲದೇ ಜಲಪಾತದ ವೀಕ್ಷಣೆಯನ್ನು ಪ್ರವಾಸಿಗರಿಗೆ ಕೇವಲ ಎರಡು ಗಂಟೆಗೆ ಸೀಮಿತ ಮಾಡಲಾಗಿದೆ.
ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ನಿಗದಿಪಡಿಸಿರುವ ಹಿಂದಿನ ದರ ಹಾಗೂ ಈಗಿನ ದರ ವ್ಯತ್ಯಾಸ ಇಂತಿದೆ
ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ನಿಗದಿಪಡಿಸಿರುವ ಹಿಂದಿನ ದರ ಹಾಗೂ ಈಗಿನ ದರ ವ್ಯತ್ಯಾಸ ಇಂತಿದೆ.
ಜೋಗದಲ್ಲಿ ಹಿಂದೆ ಇದ್ದ ದರಕ್ಕಿಂತ ಶೇ 30 ರಿಂದ ಶೇ 50 ರಷ್ಟು ಏರಿಕೆ ಮಾಡಲಾಗಿದೆ. ಹಿಂದೆ ಬಸ್ಗೆ 150 ರೂ. ಇತ್ತು. ಈಗ ಅದನ್ನು 200ಕ್ಕೆ ಏರಿಕೆ ಮಾಡಲಾಗಿದೆ. ಅದೇ ರೀತಿ ಕಾರಿಗೆ 50 ರೂ. ಇದ್ದು ಅದನ್ನು 80 ರೂ. ಏರಿಕೆ ಮಾಡಲಾಗಿದೆ. ಒಬ್ಬ ಪ್ರವಾಸಿಗನಿಗೆ 10 ರೂ. ಇದ್ದ ಶುಲ್ಕ 20 ರೂ. ಗೆ ಏರಿಕೆ ಮಾಡಲಾಗಿದೆ. ಶುಲ್ಕ ಏರಿಕೆ ಮಾಡಿ ಜೋಗ ನಿರ್ವಹಣಾ ಪ್ರಾಧಿಕಾರ ಈಗಾಗಲೇ ಫಲಕವನ್ನು ಅಳವಡಿಸಿದೆ. ಪ್ರಕೃತಿ ದತ್ತವಾಗಿರುವ ಜಲಪಾತ ವೀಕ್ಷಣೆಗೆ ಏಕೆ ದುಬಾರಿ ಶುಲ್ಕ ಎಂಬುದು ಎಲ್ಲರ ಕೆಂಗಣ್ಣಿಗೆ ಕಾರಣವಾಗಿದೆ.
ಜೋಗ ವೀಕ್ಷಣೆ 2 ಗಂಟೆಗೆ ಸೀಮಿತ :
ಪ್ರವಾಸಿಗರು ಶರಾವತಿ ನದಿ ಮೇಲಿಂದ ಬೀಳುವ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಗಂಟೆ ಗಟ್ಟಲೆ ನಿಂತು ಎಲ್ಲ ಆಯಾಮಗಳಿಂದಲೂ ನೋಡಿ, ಫೋಟೊ, ವಿಡಿಯೋ ತೆಗೆದುಕೊಂಡು ಖುಷಿ ಪಡುತ್ತಿದ್ದರು. ಆದರೆ, ಇನ್ಮುಂದೆ ನೀವು ಜೋಗಕ್ಕೆ ಟಿಕೆಟ್ ನೀಡಿ ಬಂದಿದ್ದೀರಿ ಅಂದರೆ ಜೋಗವನ್ನು ಕೇವಲ ಎರಡು ಗಂಟೆಗಳ ಕಾಲ ಮಾತ್ರ ವೀಕ್ಷಿಸಲು ಸಾಧ್ಯ. ಜೋಗ ಜಲಪಾತವನ್ನು ಮಳೆಗಾಲದಲ್ಲಿ ನೋಡುವುದೇ ಒಂದು ಅದ್ಭುತ. ಆದರೆ, ಮಳೆಗಾಲದಲ್ಲಿ ಮೇಲಿಂದ ಕೆಳಕ್ಕೆ ಬೀಳುವ ನೀರಿನಿಂದ ಮಂಜು ಎದ್ದೇಳುತ್ತದೆ. ಇದರಿಂದ ಜಲಪಾತವನ್ನು ಸರಿಯಾಗಿ ನೋಡಲು ಆಗುವುದಿಲ್ಲ. ಜೋರಾಗಿ ಗಾಳಿ ಬಂದಾಗ ಮಾತ್ರ ಜೋಗದ ಸೌಂದರ್ಯವನ್ನು ಸವಿಯಲು ಸಾಧ್ಯವಾಗುತ್ತದೆ. ಆದರೆ, ಇವುಗಳಿಗೆ ಕೂಡ ಬ್ರೇಕ್ ಬೀಳುವ ಸಾಧ್ಯತೆಗಳಿವೆ.
Joga Falls ಜೋಗ ನಿವಾಸಿ ಹೇಳಿಕೆ: “ಜೋಗ ಜಲಪಾತವನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗಿಲ್ಲ. ಅದಾಗಲೇ ಶುಲ್ಕ ಏರಿಕೆ ಮಾಡಿ ಫಲಕವನ್ನು ಅಳವಡಿಸಿದ್ದಾರೆ. ಜೋಗ ಅಭಿವೃದ್ಧಿ ಮಾಡಿದ್ದೇವೆ, ಇದರಿಂದ ದರ ಏರಿಕೆ ಮಾಡಿದ್ದೇವೆ ಎಂದು ಹೇಳಿದಿದ್ದರೆ ನ್ಯಾಯ ಅನ್ನಬಹುದಾಗಿತ್ತು. ಆದರೆ ಯಾವ ಅಭಿವೃದ್ಧಿ ಮಾಡದೇ ಏಕಾಏಕಿ ದರ ಏರಿಕೆ ಸರಿಯಲ್ಲ. ಮಾನ್ಯ ಜಿಲ್ಲಾಧಿಕಾರಿಗಳಿಗೂ, ಮಾನ್ಯ ಸಂಸದ ಬಿ.ಎಸ್. ರಾಘವೇಂದ್ರ ಅವರು ತಾವು ದಯಮಾಡಿ ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು”.
ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರಲ್ಲಿ ಕೇಳಿಕೊಳ್ಳುವುದು ಇಷ್ಟೇ ‘ದಯಮಾಡಿ ಸಾರ್ವಜನಿಕರ ಪರವಾಗಿ, ಬಡ ಕೂಲಿ ಕಾರ್ಮಿಕರ, ಮಧ್ಯಮವರ್ಗದವರ ಪರವಾಗಿ ತಾವು ಧ್ವನಿ ಎತ್ತಿ ಈಗಿರುವ ಆದೇಶವನ್ನು ರದ್ದುಗೊಳಿಸಿ. ಹಿಂದಿನ ದರವನ್ನು ಮುಂದುವರೆಸಲು ತಾವು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಇದನ್ನು ರದ್ದು ಪಡಿಸಬೇಕು’. ಈ ಕಾಮಗಾರಿಗಳೆಲ್ಲ ಅಭಿವೃದ್ಧಿಯಾದ ಮೇಲೆ ಅದಕ್ಕೆ ತಕ್ಕಂತೆ ದರ ನಿಗದಿ ಪಡಿಸಲಿ ನಮ್ಮ ವಿರೋಧವಿಲ್ಲ. ಆದರೆ ಇದು ಇನ್ನೂ ಮುಂದೆ ಹೋದರೆ ಕಾನೂನು ಹೋರಾಟ ಮಾಡಲು ಸಿದ್ಧನಿದ್ದೇನೆ” ಎಂದು ಜೋಗ ನಿವಾಸಿ ರಾಜಕುಮಾರ್ ಎಚ್ಚರಿಕೆ ನೀಡಿದ್ದಾರೆ.