ಲೇ: ತುಳಸೀರಾಂ.
ಮೈಸೂರು
Bramayugam Movie ಭ್ರಮಯುಗಂ ಇದೊಂದು ಮಲೆಯಾಳಂ ಭಾಷೆಯ ಚಲನಚಿತ್ರ. ಪ್ರಖ್ಯಾತ ಚಿತ್ರನಟ ಮುಮ್ಮುಟ್ಟಿ ಅಭಿನಯದ ಚಿತ್ರ.
ಹಸಿರು ದಟ್ಟ ಕಾಡಿನ ನಡುವೆ ಒಬ್ಬ ದಿಕ್ಕು ತಪ್ಪಿದ ಆಗಂತುಕ ನಿಂದ ಪ್ರಯಾಣ ಆರಂಭವಾಗುತ್ತದೆ. ದಿಕ್ಕುಗೆಟ್ಟು ಅರಣ್ಯದಲ್ಲಿ ದಾರಿ ಕಾಣದೆ ಯಾವುದೊ ಪಾಳುಬಿದ್ದ ಗುಡಿಯ ಕಡೆ ಬರುತ್ತಾನೆ. ಅಲ್ಲಿದ್ದ ಒಬ್ಬ ವ್ಯಕ್ತಿ ತನ್ನ ರೂಪು ಕಾಣಿಸದೆ ಧನಿ ಮಾತ್ರದಲ್ಲಿ ” ನೀನು ಯಾರು ? ” ಎಂಬ ಸಹಜ ಪ್ರಶ್ನೆ ಕೇಳುತ್ತಾನೆ. ಆಗಂತುಕ ತಬ್ಬಿಬ್ಬಾಗುತ್ತಾನೆ. ಉತ್ತರ ಹೊಳೆಯುವುದಿಲ್ಲ. ಉತ್ತರ ಹುಡುಕುತ್ತಾ ಆ ಅರಣ್ಯದಲ್ಲಿಯೆ ಗತಿ ಕಾಣದೆ ಉಳಿಯುತ್ತಾನೆ. ಆದರೆ ಅವನಿಗೆ ಪ್ರತಿ ನಿತ್ಯ ಗುಹೆ ಹೊಕ್ಕಂತೆ, ಸೆರೆ ಸಿಕ್ಕಂತೆ, ಗುಡಿ ಸೇರಿದಂತೆ ಭಾಸವಾಗುತ್ತದೆ.
ಮತ್ತೊಂದು ಹಂತದಲ್ಲಿ ಅದೇ ಗುಹೆ ಯಲ್ಲಿದ್ದ ಮತ್ತೊಬ್ಬ ಹಿರಿಯ ಆ ಆಗಂತುಕನ ಜೊತೆ ಮಾತನಾಡುತ್ತಾ ಹೋಗುವಾಗ ” ದೇವರು ನಮಗೆ ಕೊಟ್ಟಿರುವ ವರ ಯಾವುದು? ಎಂದು ಕೇಳುತ್ತಾನೆ. ಆಗಂತುಕ ಯೋಚಿಸ ತೊಡಗುತ್ತಾನೆ- ನಮ್ಮ ಸುತ್ತಲಿರುವ ಪ್ರಕೃತಿಯೇ? – ನಾವು ನಿರ್ಮಿಸಿಕೊಂಡ ಅರಮನೆಯೇ? ಗಳಿಸಿದ ಐಶ್ವರ್ಯವೇ? ಇವೆನೂ ಅಲ್ಲ !
ಆ ಹಿರಿಯ ಆಗಂತುಕನಿಗೆ ತಿಳಿ ಸುತ್ತಾನೆ-” ಅದು ಸಮಯ ” ಎಂದು. ಕಾಲ ಮುಂದೆ ಚಲಿಸಿದರೆ ಬರುವುದೇ ಇಲ್ಲವಲ್ಲ.!.
ಅರಣ್ಯವಾಸಿ ಹಿರಿಯ ಅರೆಬೆಂದ ಮಾಂಸವನ್ನು ಅಗಿದಗಿದು ನುಂಗಿದರೆ, ಆಗಂತುಕ ಮಡಕೆಯಲ್ಲಿದ್ದ ಗಂಜಿಯನ್ನು ಶತಮಾನಗಳಿಂದ ಹಸಿದವನಂತೆ ಗಪ ಗಪ ಎಂದು ಬಾಯಿಗಿಟ್ಟು ಸುರಿದು ಕೊಂಡು ಹಸಿವು ನೀಗಿಸಿಕೊಳ್ಳುತ್ತಾನೆ.
ಹಿರಿಯ ಹೇಳುತ್ತಾನೆ – ನೋಡು , ಮನುಷ್ಯನಿಗೆ ದೇವರು ಕೊಟ್ಟಿರುವುದು ಎರಡೇ, ಅದು ” ಅನ್ನ ಮತ್ತು ಸಮಯ “.
ಒಂಟಿತನ , ಏಕಾಂತ, ಸಮಸ್ಯೆಗಳಲ್ಲದವಕ್ಕೆ ಅನಗತ್ಯವಾಗಿ ಸಿಕ್ಕಿಹಾಕಿಕೊಳ್ಳುವುದು, ತಪ್ಪಿಸಿ ಕೊಳ್ಳುವುದು , ಸ್ವಾಭಾವಿಕ ಎಂದು ಚಿತ್ರ ನಿರೂಪಿಸುತ್ತ ಹೋಗುತ್ತದೆ.
ಅಂತ್ಯದಲ್ಲಿ – ಡಚ್ಚರ ಸೈನ್ಯ ಹೊಳೆ ದಾಟಿ ಬರುವ, ಹೊಳೆಯಲ್ಲಿ ತೇಲಿ ಹೋಗುವ ಹೆಣದ ದೃಶ್ಯ- ನಮ್ಮ ಅಂತರಂಗ ಬಹಿರಂಗದ Bramayugam Movie ಬದುಕಿನ ಚಿತ್ರಣವೇನೊ ಅನಿಸಿಬಿಡುತ್ತದೆ.
ಸೃಜನಶೀಲ ಪ್ರತಿಭಾನ್ವಿತ ಚಿತ್ರ ” ಭ್ರಮಯುಗಂ” .