Farmer’s Day ನಾಡಿಗೆ ಅನ್ನ ನೀಡುವ ರೈತರ ಬಗ್ಗೆ ಆಳುವ ಸರ್ಕಾರಗಳು ಗಮನ ನೀಡುತ್ತಿಲ್ಲ. ಈಗಾಗಲೇ ರಾಜ್ಯದಲ್ಲಿ ರೈತಾಪಿ ವರ್ಗ ಸಂಕಷ್ಟದಲ್ಲಿ ಸಿಲುಕಿದೆ ಎಂದು ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಆರೋಪಿಸಿದರು.
ಚಿಕ್ಕಮಗಳೂರು ಪಟ್ಟಣದ ಪುರಸಭೆ ಮುಂಭಾಗದ ವೃತ್ತದಲ್ಲಿ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ, ಗೋ ಸಂರಕ್ಷಣಾ ಹೋರಾಟ ಸಮಿತಿಯಿಂದ ಹಮ್ಮಿಕೊಂಡ ರೈತ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಅನೇಕ ಮಹನೀಯರ ದಿನಾಚರಣೆಗಳನ್ನು ಸರ್ಕಾರ ಅದ್ಧೂರಿಯಾಗಿ ಆಚರಿಸುತ್ತಿದೆ. ಅಂತೆಯೇ ದೇಶದ ಬೆನ್ನೆಲುಬಾದ ರೈತರ ದಿನವನ್ನು ಸಹ ಸರ್ಕಾರದಿಂದ ಆಚರಿಸಬೇಕು. ಅಂದು ಉತ್ತಮ ರೈತರಿಗೆ ಗುರುತಿಸುವ ಕೆಲಸವಾಗುವ ಜೊತೆಗೆ ರೈತರಿಗಾಗಿ ವಿಶೇಷ ಯೋಜನೆಗಳು ಘೋಷಣೆಯಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಸಮಿತಿಯಿಂದ ಕಳೆದ ಎಂಟು ವರ್ಷಗಳಿಂದ ಹೋರಾಟ ಹಾಗೂ ರೈತ ದಿನಾಚರಣೆ ಮಾಡಿಕೊಂಡು ಬಂದಿದ್ದೇವೆ. ರೈತ ದಿನಾಚರಣೆಯನ್ನು ಸರ್ಕಾರದಿಂದ ಆಚರಿಸದೇ ಹೋದರೆ ಮುಂದಿನ ದಿನಗಳಲ್ಲಿ ವಿಧಾನಸೌಧ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಪ್ರಶಾಂತ್ ಮೇಸ್ತಿç ಮಾತನಾಡಿ, ತಾಲೂಕಿನಲ್ಲಿ ಜಲಮೂಲಗಳು ಬತ್ತಿವೆ. ನೈಸರ್ಗಿಕವಾಗಿ ನೀರಾವರಿ ನಂಬಿದ ಬದುಕು ತುಂಬ ಕಷ್ಟದಲ್ಲಿದೆ. ರೈತರು ಯಾವುದೇ ಕ್ಷಣದಲ್ಲಿ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು. ಸರ್ಕಾರಗಳು ರೈತರ ಸಂಕಷ್ಟಕ್ಕೆ ಧಾವಿಸಲಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಎಸ್. ಶಂಕರ್ ಶೇಟ್ ಮಾತನಾಡಿ, ದೇಶ ಕಾಯುವ ಯೋಧ ಮತ್ತು ನಾಡಿಗೆ ಅನ್ನ ನೀಡುವ ರೈತರಿಗೆ ಗೌರವಿಸುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗದೆ. ಸರ್ಕಾರದಿಂದಲೇ ರೈತ ದಿನಾಚರಣೆಯಾಗಬೇಕು ಎಂದು ಒತ್ತಾಯ ಮಾಡಿದರು.
Farmer’s Day ಇದೇ ಸಂದರ್ಭದಲ್ಲಿ ಮಂಜುನಾಥ ಗುತ್ತಿ ಅವರ ರೈತ ಕ್ಯಾಂಟೀನ್ ಮೂಲಕ ಜನತೆಗೆ ಉಚಿತವಾಗಿ ಫಲಾಹಾರ ವಿತರಿಸಲಾಯಿತು.
ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಉಪಾಧ್ಯಕ್ಷ ಕೆ.ವಿ. ದತ್ತಾತ್ರೇಯ, ಕಾರ್ಯದರ್ಶಿ ಶರತ್ ಸ್ವಾಮಿ, ಸದಸ್ಯರಾದ ಮಂಜುನಾಥ ಗುತ್ತಿ, ವಿನಯ, ದೀಪಕ್, ಎಸ್.ಪಿ. ನಾಗಪ್ಪ, ನಿತಿನ್ ಕುಮಾರ್, ಪ್ರಕಾಶ್, ಪ್ರಮುಖರಾದ ಶಿವಪ್ಪ ಕೊಡಕಣಿ, ತಾತಪ್ಪ, ಯುವರಾಜ ಕೊಡಕಣಿ, ಹಿರಿಯಣ್ಯಪ್ಪ ಕೊಡಕಣಿ, ನಿಂಗಪ್ಪ ಕೊಡಕಣಿ, ಬೆನಕೇಶಿ, ಮಾರುತಿ ಸೇರಿದಂತೆ ಆಟೋ ಚಾಲಕ ಮತ್ತು ಮಾಲೀಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.