ಪಟ್ಟಣಗಳಲ್ಲಿ ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದಂತೆ ಪ್ರಸ್ತುತ ಕೈಗೊಳ್ಳುವ ಯೋಜನೆಗಳು ಭವಿಷ್ಯದ ಯೋಜನೆಗಳಿಗೆ ಪೂರಕವಾಗಿರುವಂತೆ ಸಮರ್ಪಕವಾಗಿ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪಟ್ಟಣಗಳಲ್ಲಿ ಸಾರ್ವತ್ರಿಕವಾಗಿ ಮನೆಗಳಿಗೆ ನೀರು ಪೂರೈಕೆ ಮಾಡುವ ಯೋಜನೆಯಾದ ಅಮೃತ್ 2.0 ಯೋಜನೆ ಕುರಿತಾದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಗರ, ಶಿಕಾರಿಪುರ, ಶಿರಾಳಕೊಪ್ಪ, ಸೊರಬ, ಜೋಗ-ಕಾರ್ಗಲ್, ಹೊಸನಗರ, ತೀರ್ಥಹಳ್ಳಿ, ಹೊಳೆಹೊನ್ನೂರು ಮತ್ತು ಆನವಟ್ಟಿ ಪಟ್ಟಣಗಳು ಅಮೃತ 2.0 ಯೋಜನೆಯಡಿ ಗುರುತಿಸಲಾಗಿದ್ದು, 2025 ರ ವೇಳೆಗೆ ಈ ಪಟ್ಟಣಗಳ ಎಲ್ಲ ಮನೆಗಳಿಗೆ ಕುಡಿಯುವ ನೀರು ಸರಬರಾಜು ನೀಡುವ ಸಂಬಂಧ ತಯಾರಿಸಲಾಗುತ್ತಿರುವ ಯೋಜನೆಗಳು ಸಮರ್ಪಕವಾಗಿರಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸಾಗರ ಪಟ್ಟಣಕ್ಕೆ ರೂ.2.6 ಕೋಟಿ ವೆಚ್ಚದಲ್ಲಿ ಒತ್ತಡಯುಕ್ತ ನೀರು ಸರಬರಾಜು ಯೋಜನೆಯನ್ನು ತಯಾರಿಸಿದ್ದು, ಒಂದೇ ಏಜೆನ್ಸಿಗೆ ಓ & ಎಂ ನೀಡುವಂತೆ ಯೋಜಿಸಿಕೊಳ್ಳಿರಿ ಎಂದು ಸಲಹೆ ನೀಡಿದರು. ಶಿರಾಳಕೊಪ್ಪ ಮತ್ತು ಸೊರಬದಲ್ಲಿ ಬೋರ್‍ವೆಲ್‍ಗಳ ಸಂಖ್ಯೆ ಹೆಚ್ಚಿದೆ. ಬೋರ್‍ವೆಲ್ ಮೇಲೆ ಹೆಚ್ಚು ಅಲವಂಬನೆ ಬೇಡ. ಈ ಎರಡು ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಕುರಿತು ಸಮಗ್ರ ಯೋಜನೆ ರೂಪಿಸಬೇಕು. ಪ್ರಸ್ತುತ ಯೋಜನೆಯನ್ನು ಮತ್ತೊಮ್ಮೆ ಪರಿಶೀಲಿಸಿ, ಶಿರಾಳಕೊಪ್ಪಕ್ಕೆ ಹೊಸ ಯೋಜನೆ ತಯಾರಿಸುವಂತೆ ಸೂಚನೆ ನೀಡಿದರು. ಜನಸಂಖ್ಯೆ ನಿರ್ಧರಣೆ, ಜನಸಂಖ್ಯಾಧಾರಿತ ನೀರಿನ ಸರಬರಾಜು ಸೇರಿದಂತೆ ಎಲ್ಲ ಮಾನದಂಡಗಳನ್ನು ಯೋಜನೆಯ ಮಾರ್ಗಸೂಚನೆಯನ್ವಯ ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಹೇಳಿದರು.
ಸೊರಬದಲ್ಲಿ ಸಹ 73 ಬೋರ್‍ವೆಲ್‍ಗಳಿವೆ. ಪ್ರತಿ ವರ್ಷ ಹೊಸ ಬೋರ್‍ಗಳನ್ನು ಕೊರೆಯಲಾಗುತ್ತಿದೆ. ಇದು ನಿಲ್ಲಬೇಕು. ಸಂಸ್ಕರಿಸಿದ ನೀರು ಜನರಿಗೆ ಸಿಗಬೇಕು. ಜೊತೆಗೆ ಭವಿಷ್ಯದಲ್ಲಿ ಕೈಗೊಳ್ಳುವ ಯೋಜನೆಗಳಿಗೆ ಉಪಯೋಗವಾಗುವಂತೆ ಈ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಬೇಕೆಂದು ತಿಳಿಸಿದರು.
ಆನವಟ್ಟಿ ಮತ್ತು ಹೊಳೆಹೊನ್ನೂರಿನಲ್ಲಿ ಸಹ ಒಂದು ಸಮಗ್ರ ಕುಡಿಯುವ ನೀರಿನ ಯೋಜನೆಯಾಗಬೇಕು. ಹೊಸನಗರದಲ್ಲಿ ಹಿನ್ನೀರು ಖಾಲಿಯಾದಾಗ 3 ರಿಂದ 4 ತಿಂಗಳು ಕುಡಿಯುವ ನೀರಿಗೆ ತೊಂದರೆಯಾಗುತ್ತಿದ್ದು ಆ ವೇಳೆ ನೀರು ಒದಗಿಸಿ, ಸರಿದೂಗಿಸುವಂತೆ ಯೋಜನೆ ರೂಪಿಸಬೇಕು. ಜಿಲ್ಲಾ ನಗರಾಭಿವೃದ್ದಿ ಕೋಶದ ಕಾರ್ಯಪಾಲಕ ಇಂಜಿನಿಯರ್‍ರವರು ಹೊಸನಗರ ಪ.ಪಂ ಯ ಮುಖ್ಯಾಧಿಕಾರಿಗಳೊಂದಿಗೆ ಅಲ್ಲಿ ಸರ್ವೇ ಕಾರ್ಯ ನಡೆಸಿ ಯೋಜನೆ ಸಿದ್ದಪಡಿಸುವಂತೆ ತಿಳಿಸಿದರು.
ಕೆಯುಡಬ್ಲ್ಯುಎಸ್ & ಡಿಬಿ ಶಿವಮೊಗ್ಗ ವಿಭಾಗದ ಕಾರ್ಯಪಾಲಕ ಅಭಿಯಂತರ ಹೆಚ್.ಚಂದ್ರಶೇಖರ್ ಅಮೃತ್ 2.0 ಅಡಿ ಬರುವ ಪಟ್ಟಣಗಳಲ್ಲಿನ ಮನೆಗಳಿಗೆ ನೀರು ಪೂರೈಕೆಗೆ ಕೈಗೊಳ್ಳಲಾಗಿರುವ ಯೋಜನೆ ಕುರಿತು ಪ್ರಗತಿ ವರದಿ ಸಲ್ಲಿಸಿದರು.
ಸಭೆಯಲ್ಲಿ ಡಿಯುಡಿಸಿ ಯೋಜನಾ ನಿರ್ದೇಶಕ ಮೂಕಪ್ಪ ಕರಿಭೀಮಣ್ಣನವರ್, ಸಿಎಓ ಮೋಹನ್ ಕುಮಾರ್, ಎಇಇ ಮಂಜುನಾಥ್, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಇತರೆ ಅಧಿಕಾರಿಗಳು ಹಾಜರಿದ್ದರು.