ಕಾರ್ಗಿಲ್ ವಿಜಯ್ ದಿವಸ್ ಅನ್ನು ಭಾರತದಲ್ಲಿ ಪ್ರತಿ ಜುಲೈ 26 ರಂದು ಸ್ಮರಿಸಲಾಗುತ್ತದೆ. ಕಾರ್ಗಿಲ್ ಯುದ್ಧದ ವೀರರ ಗೌರವಾರ್ಥವಾಗಿ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸ್ ಅನ್ನು ಆಚರಿಸಲಾಗುತ್ತದೆ.
ಈ ದಿನವನ್ನು ಭಾರತದಾದ್ಯಂತ ಹಾಗೂ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆಚರಿಸಲಾಗುತ್ತದೆ. ಭಾರತದ ಪ್ರಧಾನ ಮಂತ್ರಿ ಪ್ರತಿ ವರ್ಷ ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಯಲ್ಲಿ ಸೈನಿಕರಿಗೆ ಗೌರವ ಸಲ್ಲಿಸುತ್ತಾರೆ.
ಕಾರ್ಗಿಲ್ ವಿಜಯ್ ದಿವಸ್ 1999 ರಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ ಸೇನೆಯ ವಿರುದ್ಧ ಯುದ್ಧವನ್ನು ಗೆದ್ದ ದಿನವಾಗಿದೆ. ಜುಲೈ 26 ರಂದು ಭಾರತೀಯ ಸೇನೆಯು ಪಾಕಿಸ್ತಾನದ ಸೇನೆಯು ಆಕ್ರಮಿಸಿಕೊಂಡಿದ್ದ ಎಲ್ಲಾ ಭಾರತೀಯ ಪೋಸ್ಟ್‌ಗಳನ್ನು ವಶಪಡಿಸಿಕೊಂಡಿತು. ಈ ದಿನ ಪಾಕಿಸ್ತಾನಿ ನುಸುಳುಕೋರರ ವಿರುದ್ಧ ಭಾರತೀಯ ಸೇನೆಯ ವಿಜಯವನ್ನು ಸೂಚಿಸುತ್ತದೆ.
ಅಂದಿನಿಂದ, ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನಿಕರ ಶ್ರಮ ಮತ್ತು ತ್ಯಾಗವನ್ನು ಸ್ಮರಿಸಲು ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ.
ಪಾಕಿಸ್ತಾನವು ಭಾರತ ಸೇನೆಯ ಗಮನಕ್ಕೆ ಬರದಂತೆ ರಹಸ್ಯವಾಗಿ ತನ್ನ 5000 ಸೈನಿಕರನ್ನು ಗಡಿಯೊಳಗೆ ನುಗ್ಗಿಸಿತ್ತು. ಇದಕ್ಕೆ ಪಾಕ್‌ನ ಅಂದಿನ ಸೇನಾ ಮುಖ್ಯಸ್ಥ ಪರ್ವೇಜ್ ಮುಷರ್ರಫ್ ಕುಮ್ಮಕ್ಕು ನೀಡಿದ್ದರು. ಪಾಕ್ ಪಡೆಗಳು ದೇಶದ ಗಡಿಯೊಳಗೆ ನುಗ್ಗಿರುವ ಸುಳಿವನ್ನು ಸ್ಥಳೀಯ ಕುರಿಗಾಹಿಗಳು ಭಾರತೀಯ ಸೈನಿಕರಿಗೆ ನೀಡಿದರು. ಈ ಹಿನ್ನೆಲೆಯಲ್ಲಿ ಭಾರತ 5 ಯೋಧರನ್ನು ಗಸ್ತಿಗಾಗಿ ಕಳುಹಿಸಿದಾಗ, ಪಾಕ್ ಐವರನ್ನೂ ನಿಷ್ಕರುಣೆಯಿಂದ ಕೊಂದು ಹಾಕಿತು. ಇದರಿಂದ ಕೆರಳಿದ ಭಾರತ ಸರ್ಕಾರ, ಕೂಡಲೇ ಪಾಕಿಸ್ತಾನಿ ನುಸುಳುಕೋರರನ್ನು ದೇಶದ ಸೀಮೆಯಿಂದ ಹೊರಗಟ್ಟಲು 20,000 ಯೋಧರನ್ನು ಸಜ್ಜುಗೊಳಿಸಿತು.
ಈ ಕಾರ್ಯಾಚರಣೆಗೆ ‘ಆಪರೇಶನ್ ವಿಜಯ್’ ಎಂದು ಹೆಸರಿಡಲಾಯಿತು.
ಆದ್ದರಿಂದ ಕಾರ್ಗಿಲ್ ವಿಜಯ್ ದಿವಸ್ ಅನ್ನು ಆಪರೇಷನ್ ವಿಜಯ್ ಎಂದೂ ಕರೆಯಲಾಗುತ್ತದೆ.
ಭಾರತದಲ್ಲಿ ಈ ವರ್ಷ ಕಾರ್ಗಿಲ್ ವಿಜಯ್ ದಿವಸ್‌ನ 23ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಭಾರತೀಯ ಸೇನೆಯು ದೆಹಲಿಯಿಂದ ಕಾರ್ಗಿಲ್ ವಿಜಯ್ ದಿವಸ್ ಮೋಟಾರ್ ಬೈಕ್ ಯಾತ್ರೆಗೆ ಚಾಲನೆ ನೀಡುತ್ತದೆ. ಯುದ್ಧ ಸ್ಮಾರಕದಲ್ಲಿ ಧ್ವಜಾರೋಹಣ ಸಮಾರಂಭಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ವೇಳೆ ಹುತಾತ್ಮ ಯೋಧರ ಕುಟುಂಬಗಳನ್ನು ಆಹ್ವಾನಿಸಲಾಗುತ್ತದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ನೃತ್ಯ ಪ್ರದರ್ಶನ, ದೇಶಭಕ್ತಿ ಗೀತೆ ಮತ್ತು ವಿವಿಧ ಕಾರ್ಯಕ್ರಮ ಆಯೋಜಿಸಲಾಗುತ್ತದೆ.
ಇಂದು ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ, ನಮ್ಮ ಕೆಚ್ಚೆದೆಯ ಯೋಧರನ್ನು ಸ್ಮರಿಸುತ್ತಾ, ನಾವು ನಮ್ಮನ್ನು ಮತ್ತು ನಮ್ಮ ಕರ್ತವ್ಯಗಳನ್ನು ರಾಷ್ಟ್ರಕ್ಕಾಗಿ ಸಮರ್ಪಿಸೋಣ.
ಮಳೆ , ಗಾಳಿ ,ಚಳಿ ಎನ್ನದೇ ನಿದ್ರೆ ಮತ್ತು ವಿಶ್ರಾಂತಿ ಇಲ್ಲದೆ ದೇಶವನ್ನು ರಕ್ಷಿಸುವ ಎಲ್ಲಾ ವೀರ ಸೈನಿಕರಿಗೆ ಗೌರವ ಸಲ್ಲಿಸೋಣ.