ಎಲೆಕ್ಷನ್ ನಡೆಸಲು ಕೋರ್ಟ್ ಆದೇಶ ನೀಡುತ್ತಿದ್ದಂತೆ ಸರ್ಕಾರ ಹುಮ್ಮಸ್ಸಿನಿಂದ ಕೆಲಸ ಆರಂಭಿಸಿದೆ.
ಇದೀಗ ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಮಾಡಿ ಸರ್ಕಾರ ಅಂತಿಮ ಆದೇಶ ಪ್ರಕಟಿಸಿದೆ. 198 ಇದ್ದ ವಾರ್ಡ್ ಗಳನ್ನು ಡಿಲಿಮಿಟೇಷನ್ ಮಾಡಿ 243 ವಾರ್ಡ್ಗಳಾಗಿ ವಿಂಗಡಿಸಿದೆ.
ಸಾರ್ವಜನಿಕ ವಲಯದಿಂದ ಬಂದಿದ್ದ 2,500ಕ್ಕೂ ಅಧಿಕ ಆಕ್ಷೇಪಣಾ ಅರ್ಜಿ ವಿಲೇವಾರಿ ಮುಕ್ತಾಯಗೊಂಡಿದೆ. ಸಾರ್ವಜನಿಕರಿಂದ ಸಲಹೆ, ಸೂಚನೆಗಳನ್ನು ಅಳವಡಿಸಿ ಸಣ್ಣ ಪುಟ್ಟ ಬದಲಾವಣೆ ಮಾಡಿ ಡಿ ಲಿಮಿಟೇಷನ್ ಮಾಡಿ ರಾಜ್ಯ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಿದೆ.
ನಟ ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಮತ್ತೊಮ್ಮೆ ಸರ್ಕಾರ ಗೌರವ ಸಲ್ಲಿಸಿದೆ. ಬಿಬಿಎಂಪಿ ವಾರ್ಡ್ಗಳ ಮರು ವಿಂಗಡಣೆ ಮಾಡಿ, ವಾರ್ಡ್ ನಂಬರ್ 55ಕ್ಕೆ ದಿವಂಗತ ನಟ ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ ಮಾಡಿದೆ.
ಸರ್ಕಾರ 29 ಜನವರಿ 2021ರಲ್ಲಿ ಡಿಲಿಮಿಟೇಷನ್ ಕಮಿಟಿ ರಚಿಸಿತ್ತು ಈ ಸಮಿತಿಯಿಂದ 09 ಜೂನ್ 2022 ರಂದು ಸರ್ಕಾರಕ್ಕೆ ವಾರ್ಡ್ ಮರುವಿಂಗಡಣಾ ಪಟ್ಟಿ ಸಲ್ಲಿಕೆ ಮಾಡಿತ್ತು. ಬಳಿಕ ಸಾರ್ವಜನಿಕರ ಸಲಹೆ ಸೂಚನೆ ಮೇರೆಗೆ 15 ದಿನಗಳ ಕಾಲವಕಾಶ ನೀಡಿದ್ದ ಸರ್ಕಾರ ಇದೀಗ ಅಂತಿಮವಾಗಿ ಬೆಂಗಳೂರು ವಾರ್ಡ್ ಗಳ ಸಂಖ್ಯೆ 243ಕ್ಕೆ ಏರಿಕೆ ಮಾಡಿ ಆದೇಶ ಹೊರಡಿಸಿದೆ.
ರಾಜ್ಯ ಪತ್ರದಲ್ಲಿ 2011ರ ಜನಗಣತಿ ಪ್ರಕಾರ ಡಿ ಲಿಮಿಟೇಷನ್ ಮಾಡಿರುವುದಾಗಿ ಸರ್ಕಾರ ಹೇಳಿತ್ತು. ಬಿಬಿಎಂಪಿ ಅಧಿನಿಯಮ 2020ರ ಕಲಂ 7ರ ಅಡಿಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ವಿಂಗಡಣೆಯಾಗಿದೆ.