ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸೂಚನೆಯಂತೆ ಶಿವಮೊಗ್ಗದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ವಕೀಲರ ಸಂಘ, ರೋಟರಿ ಕ್ಲಬ್, ಜೆಸಿ ಸಂಸ್ಥೆ, ರಾಷ್ಟ್ರೀಯ ಶಿಕ್ಷಣ ಸಂಸ್ಥೆ, ಹಾಗೂ ಸರ್ಜಿ ಫೌಂಡೇಶನ್ ರವರ ಸಹಭಾಗಿತ್ವದಲ್ಲಿ 12 ರಿಂದ 18 ವರ್ಷ ವಯಸ್ಸಿನ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಮಾದಕ ವಸ್ತು ದುರ್ಬಳಕೆ ವಿರುದ್ಧ ಜಾಗೃತಿ ಅಭಿಯಾನವನ್ನು ಮ್ಯಾರಥಾನ್ ಹಮ್ಮಿಕೊಳ್ಳುವ ಮೂಲಕ ಮಕ್ಕಳ ದಿನಾಚರಣೆಯನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಮ್ಯಾರಥಾನ್ ಕಾರ್ಯಕ್ರಮವು ಜಿಲ್ಲಾ ನ್ಯಾಯಾಲಯದ ಆವರಣದಿಂದ ಹೊರಟು ಗೋಪಿ ಸರ್ಕಲ್, ಅಮೀರ್ ಅಹ್ಮದ್ ಸರ್ಕಲ್, ಕರ್ನಾಟಕ ಸಂಘದ ವೃತ್ತದಿಂದ ಮಾರ್ಗವಾಗಿ ಮರಳಿ ಜಿಲ್ಲಾ ನ್ಯಾಯದ ಆವರಣದಲ್ಲಿ ಅಂತ್ಯಗೊಂಡಿತು. ಈ ಮ್ಯಾರಥಾನ್ನಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳಿಂದ ಭಾಗವಹಿಸಿ ಯಶಸ್ವಿಗೊಳಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಶ್ರೀ ಮಂಜುನಾಥ ಜಿ. ಎ. ರವರು ಮಾತನಾಡಿ ಮಕ್ಕಳು ಈಗಿನ ಕಾಲದಲ್ಲಿ ಅತಿ ಹೆಚ್ಚು ಮೊಬೈಲ್ ಬಳಕೆಯನ್ನು ಮಾಡಬಾರದು ಹಾಗೂ ಅದರ ಮೇಲೆ ಅವಲಂಬಿತರಾಗಬಾರದು ಅಲ್ಲದೆ ಮಾದಕ ವಸ್ತುಗಳ ದುರ್ಬಳಕೆಯಿಂದ ದೂರವಿರಬೇಕು ಮತ್ತು ಮಕ್ಕಳು ತಮ್ಮ ಶಕ್ತಿಯನ್ನು ಹಾಗೂ ಸಮಯವನ್ನು ತಮ್ಮ ಏಳಿಗೆಗಾಗಿ ಹಾಗೂ ಒಳ್ಳೆಯ ವಿಷಯಗಳ ಮನನಕ್ಕೆ ಮೀಸಲಿಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಸಂತೋಷ್ ಎಂ ಎಸ್ ರವರು ಕಾನೂನು ಸೇವೆಗಳ ಪ್ರಾಧಿಕಾರಗಳು ವಿದ್ಯಾರ್ಥಿಗಳಲ್ಲಿ ಮತ್ತು ಜನಸಾಮಾನ್ಯರಲ್ಲಿ ಮಾದಕ ವಸ್ತುಗಳ ದುರ್ಬಳಕೆ ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ NALSA Drug Awareness and Wellness Navigation- (DAWN) ಯೋಜನೆಯಂತೆ ಕಾರ್ಯಗತಗೊಳಿಸುತ್ತಿದೆ. ಅಲ್ಲದೆ ಮಾದಕ ವಸ್ತುಗಳ ವ್ಯಸನಿಯಾದ ವ್ಯಕ್ತಿಗೆ ವ್ಯಸನ ಮುಕ್ತ ಮಾಡುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳ ಸಹಕಾರದಲ್ಲಿ ಕ್ರಮ ವಹಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಆದ್ದರಿಂದ ಮಕ್ಕಳು ಮತ್ತು ಯುವ ಜನರು ಮಾದಕ ವಸ್ತುಗಳ ಉಪಯೋಗದಿಂದ ದೂರವಿರಬೇಕು ಮತ್ತು ಯಾರಾದರೂ ವ್ಯಸನಿ ಇದ್ದರೆ ಅವರು D A W N ಯೋಜನೆಯ ಲಾಭ ಪಡೆದು ನಶಾ ಮುಕ್ತರಾಗಬೇಕು ಎಂದು ತಿಳಿಸುತ್ತಾ ಸಶಕ್ತ ಯುವಕರ ಮೂಲಕ ಸಶಕ್ತ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ಎಲ್ಲರೂ ಸಂಕಲ್ಪ ಮಾಡಬೇಕಾಗಿದೆ ಎನ್ನುವ ಸಂದೇಶವನ್ನು ಸಾರುವ ಉದ್ದೇಶಕ್ಕಾಗಿ ಇಂದಿನ ಮ್ಯಾರಥಾನ್ ಕಾರ್ಯಕ್ರಮವನ್ನು ಜಿಲ್ಲೆ ಹಾಗೂ ಎಲ್ಲಾ ತಾಲೂಕಿನಲ್ಲಿ ಉದ್ಘಾಟಿಸಿ ಈ ಜಾಗೃತಿ ಅಭಿಯಾನವು ದಿನಾಂಕ 27.11.2026 ರ ವರೆಗೂ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಜರುಗಳಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀ ಪ್ರಕಾಶ್ ಜಿ ಟಿ ನಿಟ್ಟಲಿ ರವರು, ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಋಷಿ ಆನಂದ್ ರವರು, ಹೆಚ್ಚುವರಿ ಪೊಲೀಸ್ ಅಧಿಕರಾದ ಶ್ರೀ ಎ ಜಿ ಕಾರ್ಯಪ್ಪ ರವರು, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಚಂದ್ರಪ್ಪ ಎಸ್ ಗುಂಡಪಲ್ಲಿ ರವರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಮಂಜುನಾಥ್ ರವರು ಹಾಗೂ ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಆದಂತಹ ಶ್ರೀ ರಮೇಶ್ ರವರು, ತಾಲೂಕ ವೈದ್ಯಾಧಿಕಾರಿ ಆದಂತಹ ಡಾ. ಚಂದ್ರಶೇಖರ್ ರವರು, ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಜಿ ಆರ್ ರಾಘವೇಂದ್ರ ಸ್ವಾಮಿ ರವರು, ರೋಟರಿ ಸಂಸ್ಥೆಯ ಶ್ರೀ ವಿಜಯಕುಮಾರ್ ಹಾಗೂ ಮನೋಹರ್ ರವರು, ಸರ್ಜಿ ಫೌಂಡೇಶನ್ ವತಿಯಿಂದ ಶ್ರೀ ಈಶ್ವರ್ ರವರು, ಜೆಸಿ ಸಂಸ್ಥೆಯಿಂದ ಶ್ರೀ ಪ್ರಜ್ವಲ್ ರವರು, ಹಾಗೂ ಎನ್. ಈ.ಎಸ್ ಸಂಸ್ಥೆಯ ಪ್ರತಿನಿಧಿಗಳು ಅಲ್ಲದೆ ಡಿವಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳು, ಕಸ್ತೂರ್ಬಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳು ಹಾಗೂ ಶ್ರೀ ರುದ್ರಪ್ಪ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳು ಒಳಗೊಂಡಂತೆ 5 ಸರ್ಕಾರಿ ಶಾಲೆಗಳಿಂದ ತಲಾ 40 ವಿದ್ಯಾರ್ಥಿಗಳಂತೆ ಒಟ್ಟು 300 ಜನ ವಿದ್ಯಾರ್ಥಿಗಳು ಈ ಮ್ಯಾರಥಾನ್ ನಲ್ಲಿ ಭಾಗಿಯಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಅರೆಕಾಲಿಕ ಕಾನೂನು ಸ್ವಯಂ ಸೇವಕರು ಹಾಗೂ ಪೊಲೀಸ್ ಇಲಾಖೆಯ ನಿರೀಕ್ಷಕರು, ಪೇದೆಗಳು ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿಗಳು ಭಾಗವಸಿದ್ದರು.
