Friday, November 13, 2026
Friday, November 13, 2026

Klive special Article ನಗುವ ಮಗು , ದೇಶದ ಭವಿಷ್ಯ ಲೇ: ತಾಜುದ್ದೀನ್ ಖಾನ್, ಶಿವಮೊಗ್ಗ

Date:

Klive special Article ಮಕ್ಕಳ ಮುಗ್ಧ ನಗು ಮನೆಯ ಸಂತೋಷ, ಅವರ ಲವಲವಿಕೆ ಸಮಾಜದ ಚೈತನ್ಯ, ಅವರ ಕನಸುಗಳು ದೇಶದ ಭವಿಷ್ಯ. ಪ್ರತಿಯೊಂದು ಮಗುವಿನಲ್ಲೂ ಒಂದೊಂದು ಪ್ರತಿಭೆ, ಹೊಸತನ್ನು ಕಲಿಯುವ ಕುತೂಹಲ ಮತ್ತು ಸಾಧನೆಯ ಹಂಬಲ ಅಡಗಿದೆ. ಆ ಮುಗ್ಧತೆಯನ್ನು ಕಾಪಾಡಿ, ಪ್ರತಿಭೆಯನ್ನು ಬೆಳೆಸಿ, ಕನಸುಗಳಿಗೆ ರೆಕ್ಕೆ ನೀಡಿ, ಬದುಕಿಗೆ ಭದ್ರ ಬುನಾದಿ ಹಾಕುವುದು ಕುಟುಂಬದಿಂದ ಸರ್ಕಾರದವರೆಗೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

ಭಾರತದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನವಾದ ನವೆಂಬರ್ 14ನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಮಕ್ಕಳ ಮೇಲಿನ ಅವರ ಪ್ರೀತಿ ಮತ್ತು ಕಾಳಜಿಯನ್ನು ಸ್ಮರಿಸುವ ಈ ದಿನ ಕೇವಲ ಸಿಹಿ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಭಾಷಣಗಳಿಗೆ ಸೀಮಿತವಾಗಬಾರದು. ಪ್ರತಿಯೊಂದು ಮಗುವಿಗೂ ಸುರಕ್ಷಿತ ಬಾಲ್ಯ, ಗುಣಮಟ್ಟದ ಶಿಕ್ಷಣ, ಉತ್ತಮ ಆರೋಗ್ಯ ಮತ್ತು ಗೌರವಯುತ ಬದುಕು ದೊರೆಯುವಂತೆ ಮಾಡುವ ಸಂಕಲ್ಪದ ದಿನವಾಗಬೇಕು.

ಬಾಲ್ಯದ ಕನಸುಗಳಿಗೆ ಸವಾಲಾಗುತ್ತಿರುವ ಸಾಮಾಜಿಕ ವಾಸ್ತವಗಳು

ಇಂದಿನ ಮಕ್ಕಳು ನಾಳಿನ ವಿಜ್ಞಾನಿಗಳು, ವೈದ್ಯರು, ಶಿಕ್ಷಕರು, ಕ್ರೀಡಾಪಟುಗಳು ಮತ್ತು ಜವಾಬ್ದಾರಿಯುತ ನಾಗರಿಕರು. ಆದರೆ ಶಾಲೆಯಿಂದ ಹೊರಗುಳಿಯುವಿಕೆ, ಬಾಲಕಾರ್ಮಿಕತೆ, ಬಾಲ್ಯವಿವಾಹ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಅಪೌಷ್ಟಿಕತೆ, ಮಾನಸಿಕ ಒತ್ತಡ, ಮಾದಕ ವ್ಯಸನ ಹಾಗೂ ಆನ್‌ಲೈನ್ ಶೋಷಣೆ ಅವರ ಸಹಜ ಬೆಳವಣಿಗೆಗೆ ಅಡ್ಡಿಯಾಗುತ್ತಿವೆ.

ಒಂದು ಮಗು ಶಾಲೆಗೆ ಹೋಗುವ ಬದಲು ದುಡಿಮೆಗೆ ತೆರಳುತ್ತಿದ್ದರೆ, ಮತ್ತೊಂದು ಮಗು ಭಯದಿಂದ ತನ್ನ ನೋವನ್ನು ಹೇಳಿಕೊಳ್ಳಲಾಗದಿದ್ದರೆ, ಇನ್ನೊಂದು ಮಗು ಮೊಬೈಲ್ ಜಗತ್ತಿನಲ್ಲಿ ಮುಳುಗಿ ಆಟ, ಓದು ಮತ್ತು ಸ್ನೇಹದಿಂದ ದೂರವಾಗುತ್ತಿದ್ದರೆ ಅದು ಕೇವಲ ಆ ಮಗುವಿನ ಸಮಸ್ಯೆಯಲ್ಲ; ನಮ್ಮ ಸಮಾಜದ ಆತ್ಮಾವಲೋಕನಕ್ಕೆ ಎದುರಾದ ಪ್ರಶ್ನೆಯಾಗಿದೆ.

ತಂತ್ರಜ್ಞಾನ ಮಕ್ಕಳ ಕಲಿಕೆಗೆ ಹೊಸ ಅವಕಾಶಗಳನ್ನು ತೆರೆದಿದ್ದರೂ ಅದರ ಸುರಕ್ಷಿತ ಬಳಕೆಯ ಅರಿವು ಅತ್ಯಗತ್ಯ. ಮಕ್ಕಳಿಗೆ ಡಿಜಿಟಲ್ ಜ್ಞಾನ ನೀಡುವುದಷ್ಟೇ ಅಲ್ಲ, ಡಿಜಿಟಲ್ ಅಪಾಯಗಳಿಂದ ಅವರನ್ನು ರಕ್ಷಿಸುವ ಜವಾಬ್ದಾರಿಯೂ ನಮ್ಮದಾಗಿದೆ.

ಪೋಷಕರಿಗೆ ಕಿವಿಮಾತು: ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಆತ್ಮವಿಶ್ವಾಸದ ಆಸ್ತಿಯಾಗಿಸಿ.

ಮಗುವಿನ ಮೊದಲ ಶಾಲೆ ಮನೆ; ಮೊದಲ ಶಿಕ್ಷಕರು ತಂದೆ-ತಾಯಿ. ಮಕ್ಕಳಿಗೆ ಉತ್ತಮ ಶಾಲೆ, ಆಹಾರ ಮತ್ತು ಸೌಲಭ್ಯಗಳನ್ನು ಒದಗಿಸುವುದಷ್ಟೇ ಪೋಷಕರ ಕರ್ತವ್ಯವಲ್ಲ. ಅವರೊಂದಿಗೆ ಪ್ರತಿದಿನ ಮಾತನಾಡುವುದು, ಆಸಕ್ತಿಗಳನ್ನು ಗುರುತಿಸುವುದು, ಭಾವನೆಗಳನ್ನು ಗೌರವಿಸುವುದು ಮತ್ತು ತಪ್ಪುಗಳನ್ನು ಪ್ರೀತಿಯಿಂದ ತಿದ್ದುವುದು ಅಷ್ಟೇ ಮುಖ್ಯ.

ಮಕ್ಕಳನ್ನು ಇತರರೊಂದಿಗೆ ಹೋಲಿಸಬೇಡಿ. ಅಂಕಗಳಿಗಾಗಿ ಒತ್ತಡ ಹೇರಬೇಡಿ. ಮೊಬೈಲ್ ಅನ್ನು ಮಕ್ಕಳನ್ನು ಸುಮ್ಮನಿರಿಸುವ ಸಾಧನವನ್ನಾಗಿ ಮಾಡಬೇಡಿ. ದಿನದ ಸ್ವಲ್ಪ ಸಮಯವನ್ನಾದರೂ ಮಕ್ಕಳೊಂದಿಗೆ ಆಟವಾಡಲು, ಕಥೆ ಹೇಳಲು ಮತ್ತು ಅವರ ಅನುಭವಗಳನ್ನು ಆಲಿಸಲು ಮೀಸಲಿಡಿ.

ಸುರಕ್ಷಿತ ಸ್ಪರ್ಶ –ಆಸುರಕ್ಷಿತ ಸ್ಪರ್ಶ, ವೈಯಕ್ತಿಕ ಸುರಕ್ಷತೆ ಮತ್ತು ಆನ್‌ಲೈನ್ ಸುರಕ್ಷತೆಯ ಅರಿವು ಮೂಡಿಸಿ. ಮಗು ಏಕಾಏಕಿ ಮೌನವಾಗುವುದು, ಶಾಲೆಗೆ ಹೋಗಲು ಹೆದರುವುದು ಅಥವಾ ನಡವಳಿಕೆಯಲ್ಲಿ ಬದಲಾವಣೆ ಕಾಣಿಸಿಕೊಳ್ಳುವುದು ಕಂಡುಬಂದರೆ ನಿರ್ಲಕ್ಷಿಸಬೇಡಿ. ಅದರ ಮಾತನ್ನು ತಾಳ್ಮೆಯಿಂದ ಆಲಿಸಿ, ನಂಬಿಕೆ ನೀಡಿ, ಅಗತ್ಯ ನೆರವು ಒದಗಿಸಿ.

ಮಕ್ಕಳಿಗೆ ದುಬಾರಿ ಉಡುಗೊರೆಗಿಂತ ಪೋಷಕರ ಪ್ರೀತಿ, ಸಮಯ, ಸಂಭಾಷಣೆ ಮತ್ತು ಭದ್ರತೆ ಹೆಚ್ಚು ಅಮೂಲ್ಯ.

ಶಿಕ್ಷಕರಿಗೆ ಸಂದೇಶ: ಪ್ರತಿಯೊಂದು ಮಗುವಿನಲ್ಲೂ ಒಂದು ಪ್ರತಿಭೆಯಿದೆ!

ಶಿಕ್ಷಕರು ಕೇವಲ ಪಾಠ ಬೋಧಿಸುವವರಲ್ಲ; ಮಕ್ಕಳ ವ್ಯಕ್ತಿತ್ವ ಮತ್ತು ಭವಿಷ್ಯ ರೂಪಿಸುವ ಶಿಲ್ಪಿಗಳು. ಪ್ರತಿಯೊಂದು ಮಗುವೂ ಒಂದೇ ರೀತಿಯಲ್ಲಿ ಕಲಿಯುವುದಿಲ್ಲ. ಕೆಲವರು ಓದಿನಲ್ಲಿ, ಕೆಲವರು ಕ್ರೀಡೆಯಲ್ಲಿ, ಮತ್ತೆ ಕೆಲವರು ಕಲೆ ಮತ್ತು ಸೃಜನಶೀಲತೆಯಲ್ಲಿ ಪ್ರತಿಭೆ ಹೊಂದಿರುತ್ತಾರೆ. ಆ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಶಿಕ್ಷಕರ ಜವಾಬ್ದಾರಿ.

ಶಾಲೆಗಳು ಮಕ್ಕಳಿಗೆ ಭಯ ಹುಟ್ಟಿಸುವ ಸ್ಥಳವಾಗದೆ, ಸಂತೋಷದಿಂದ ಕಲಿಯುವ ಸುರಕ್ಷಿತ ತಾಣಗಳಾಗಬೇಕು. ದೈಹಿಕ ಶಿಕ್ಷೆ, ಅವಮಾನ, ತಾರತಮ್ಯ ಮತ್ತು ಕಿರುಕುಳಕ್ಕೆ ಅವಕಾಶವಿರಬಾರದು. ಶಾಲೆಯಿಂದ ನಿರಂತರವಾಗಿ ಗೈರುಹಾಜರಾಗುವ ಮಕ್ಕಳನ್ನು ಗುರುತಿಸಿ, ಅವರ ಕುಟುಂಬವನ್ನು ಸಂಪರ್ಕಿಸಿ ಶಿಕ್ಷಣದ ಮುಖ್ಯವಾಹಿನಿಗೆ ಮರಳಿಸಬೇಕು. ಪ್ರತಿಯೊಂದು ಮಗುವಿಗೂ ಸಮಾನ ಅವಕಾಶ ಮತ್ತು ಗೌರವ ದೊರೆಯಬೇಕು.

ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ: ಯೋಜನೆಗಳ ಯಶಸ್ಸು ಕಡತಗಳಲ್ಲಿ ಅಲ್ಲ, ಮಕ್ಕಳ ಬದುಕಿನಲ್ಲಿ ಕಾಣಬೇಕು!

Klive special Article ಮಕ್ಕಳ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಿಷನ್ ವಾತ್ಸಲ್ಯ, ಸಮಗ್ರ ಶಿಕ್ಷಣ ಅಭಿಯಾನ, ಪಿಎಂ ಪೋಷಣ್, ಪೋಷಣ್ ಅಭಿಯಾನ ಹಾಗೂ ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಗಳನ್ನು ಜಾರಿಗೊಳಿಸಿವೆ. ಈ ಯೋಜನೆಗಳ ಪ್ರಯೋಜನ ಪ್ರತಿಯೊಂದು ಅರ್ಹ ಮಗುವಿಗೂ ತಲುಪುವಂತೆ ಪರಿಣಾಮಕಾರಿ ಅನುಷ್ಠಾನ ಮತ್ತು ನಿರಂತರ ಮೇಲ್ವಿಚಾರಣೆ ಅಗತ್ಯ.

ಪ್ರತಿ ಗ್ರಾಮ ಪಂಚಾಯಿತಿ ಮತ್ತು ನಗರ ವಾರ್ಡ್ ಮಟ್ಟದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಶಾಲೆಗೆ ಮರಳಿಸುವ ವ್ಯವಸ್ಥೆ ರೂಪಿಸಬೇಕು. ಶಾಲೆಗಳಲ್ಲಿ ಮಕ್ಕಳ ಸುರಕ್ಷತಾ ಪರಿಶೀಲನೆ, ಮಾನಸಿಕ ಆರೋಗ್ಯ ಸಮಾಲೋಚನೆ, ಡಿಜಿಟಲ್ ಸುರಕ್ಷತಾ ಶಿಕ್ಷಣ ಮತ್ತು ಮಕ್ಕಳ ಸ್ನೇಹಿ ದೂರು ವ್ಯವಸ್ಥೆಯನ್ನು ಬಲಪಡಿಸಬೇಕು.

ಮಕ್ಕಳ ಕಲ್ಯಾಣ ಸಮಿತಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಮತ್ತು ಮಕ್ಕಳ ಆರೈಕೆ ಸಂಸ್ಥೆಗಳಿಗೆ ಅಗತ್ಯ ಸಿಬ್ಬಂದಿ, ಅನುದಾನ ಹಾಗೂ ಮೂಲಸೌಕರ್ಯ ಒದಗಿಸಬೇಕು. ಬಾಲಕಾರ್ಮಿಕತೆ, ಬಾಲ್ಯವಿವಾಹ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ತ್ವರಿತ ಕ್ರಮ ಕೈಗೊಳ್ಳಬೇಕು. ಮಕ್ಕಳಿಗಾಗಿ ಮೀಸಲಾದ ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು.

ಮಕ್ಕಳ ಹಕ್ಕುಗಳ ರಕ್ಷಣೆ ಸರ್ಕಾರದ ಆದ್ಯತೆಯಾಗಬೇಕು; ಅದು ಕೇವಲ ಘೋಷಣೆ, ಯೋಜನೆ ಅಥವಾ ಕಡತಗಳಲ್ಲಿನ ದಾಖಲೆಯಾಗಿ ಉಳಿಯಬಾರದು.

ಸಮಾಜದ ಜವಾಬ್ದಾರಿ: ಮಕ್ಕಳ ನೋವಿಗೆ ಮೌನ ಸಾಕ್ಷಿಯಾಗಬೇಡಿ!

ಮಕ್ಕಳ ರಕ್ಷಣೆ ಕೇವಲ ಪೋಷಕರು ಅಥವಾ ಸರ್ಕಾರದ ಜವಾಬ್ದಾರಿಯಲ್ಲ. ನೆರೆಹೊರೆಯವರು, ಸಾರ್ವಜನಿಕರು, ಸಂಘ-ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ಮತ್ತು ಪ್ರತಿಯೊಬ್ಬ ನಾಗರಿಕರೂ ಮಕ್ಕಳ ಸುರಕ್ಷತೆಯಲ್ಲಿ ಪಾಲುದಾರರಾಗಬೇಕು.

ಬಾಲಕಾರ್ಮಿಕತೆ, ಬಾಲ್ಯವಿವಾಹ, ಭಿಕ್ಷಾಟನೆ, ಮಕ್ಕಳ ಮೇಲಿನ ದೌರ್ಜನ್ಯ ಅಥವಾ ಕಳ್ಳಸಾಗಣೆ ಕಂಡುಬಂದಾಗ ಮೌನವಾಗಿರದೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕು. ಬಾಲನ್ಯಾಯ ಕಾಯ್ದೆ–2015, ಪೋಕ್ಸೋ ಕಾಯ್ದೆ–2012, ಶಿಕ್ಷಣ ಹಕ್ಕು ಕಾಯ್ದೆ–2009 ಮತ್ತು ಬಾಲ್ಯವಿವಾಹ ನಿಷೇಧ ಕಾಯ್ದೆ–2016 ಮಕ್ಕಳ ರಕ್ಷಣೆಗೆ ಕಾನೂನುಬದ್ಧ ಬಲ ನೀಡಿವೆ. ಸಂಕಷ್ಟದಲ್ಲಿರುವ ಮಕ್ಕಳ ನೆರವಿಗಾಗಿ 1098 ಮಕ್ಕಳ ಸಹಾಯವಾಣಿ ಹಾಗೂ ತುರ್ತು ಪರಿಸ್ಥಿತಿಯಲ್ಲಿ 112 ಸಂಪರ್ಕಿಸಬಹುದು.

ನವೆಂಬರ್ 14 ಮಾತ್ರವಲ್ಲ, ವರ್ಷದ 365 ದಿನಗಳೂ ಮಕ್ಕಳ ದಿನವಾಗಲಿ.

ಮಕ್ಕಳ ದಿನಾಚರಣೆ ಒಂದು ದಿನದ ಸಂಭ್ರಮವಲ್ಲ; ಪ್ರತಿದಿನವೂ ಮಕ್ಕಳ ಹಕ್ಕುಗಳನ್ನು ಗೌರವಿಸುವ ಸಾಮಾಜಿಕ ಬದ್ಧತೆಯಾಗಬೇಕು. ವರ್ಷದಲ್ಲಿ ಒಂದು ದಿನ ಮಕ್ಕಳಿಗೆ ಉಡುಗೊರೆ ನೀಡುವುದಕ್ಕಿಂತ ವರ್ಷದ ಪ್ರತಿಯೊಂದು ದಿನವೂ ಅವರಿಗೆ ಸುರಕ್ಷತೆ, ಪ್ರೀತಿ, ಪೌಷ್ಟಿಕ ಆಹಾರ, ಗುಣಮಟ್ಟದ ಶಿಕ್ಷಣ ಮತ್ತು ಸಮಾನ ಅವಕಾಶಗಳನ್ನು ಒದಗಿಸುವುದು ಮುಖ್ಯ.

ಪ್ರತಿಯೊಂದು ಮಗುವಿಗೂ ಭಯವಿಲ್ಲದ ಮನೆ, ತಾರತಮ್ಯವಿಲ್ಲದ ಶಾಲೆ, ಶೋಷಣೆಯಿಲ್ಲದ ಸಮಾಜ ಮತ್ತು ಅವಕಾಶಗಳಿಂದ ತುಂಬಿದ ಭವಿಷ್ಯ ನಿರ್ಮಿಸೋಣ. ಮಕ್ಕಳ ಪ್ರಶ್ನೆಗಳಿಗೆ ಕಿವಿಯಾಗೋಣ, ಪ್ರತಿಭೆಗೆ ಪ್ರೋತ್ಸಾಹ ನೀಡೋಣ, ಹಕ್ಕುಗಳಿಗೆ ರಕ್ಷಾಕವಚವಾಗೋಣ.

ಮಕ್ಕಳ ಕೈಯಲ್ಲಿ ಪುಸ್ತಕವಿರಲಿ, ಕಣ್ಣಿನಲ್ಲಿ ಕನಸಿರಲಿ, ಮನಸ್ಸಿನಲ್ಲಿ ಆತ್ಮವಿಶ್ವಾಸವಿರಲಿ, ಬದುಕಿನಲ್ಲಿ ಭದ್ರತೆಯಿರಲಿ.

ಮಕ್ಕಳನ್ನು ರಕ್ಷಿಸುವುದು ಎಂದರೆ ಕೇವಲ ಅವರ ಇಂದಿನ ಬದುಕನ್ನು ಉಳಿಸುವುದಲ್ಲ; ನಾಳಿನ ರಾಷ್ಟ್ರದ ಭವಿಷ್ಯವನ್ನು ಭದ್ರಪಡಿಸುವುದು. ಮಕ್ಕಳ ನಗು ಉಳಿಸುವುದು ಎಂದರೆ ಮಾನವೀಯತೆಯನ್ನು ಉಳಿಸಿದಂತೆ.

ಮಕ್ಕಳ ದಿನಾಚರಣೆ ನವೆಂಬರ್ 14ಕ್ಕೆ ಮಾತ್ರ ಸೀಮಿತವಾಗದಿರಲಿ; ಮಕ್ಕಳ ಸುರಕ್ಷತೆ, ಶಿಕ್ಷಣ, ಸಂತೋಷ, ಹಕ್ಕುಗಳು ಮತ್ತು ಭವಿಷ್ಯದ ಭದ್ರತೆ ವರ್ಷದ 365 ದಿನಗಳೂ ನಮ್ಮೆಲ್ಲರ ಸಂಕಲ್ಪವಾಗಲಿ.

ಎಲ್ಲಾ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು.

ತಾಜುದ್ದೀನ್ ಖಾನ್
ಅಧ್ಯಕ್ಷರು,
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ
(ನ್ಯಾಯಪೀಠ), ಶಿವಮೊಗ್ಗ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಶ್ರೀ ಜ್ಯೋತಿಪ್ರಕಾಶ್ ರವರಿಗೆ 68 ನೇ ಹುಟ್ಟು ಹಬ್ಬ

ವಿವಿಧ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ...

ಗೃಹಲಕ್ಷ್ಮಿಯ ಬಲ, ಸ್ವಾವಲಂಬನೆಯ ಫಲ- ಡಿ.ಕೆ.ಶಿವಕುಮಾರ್

ಚಕ್ಕುಲಿ, ನಿಪ್ಪಟ್ಟು ಸೇರಿದಂತೆ 20ಕ್ಕೂ ಹೆಚ್ಚು ಬಗೆಯ ತಿನಿಸುಗಳನ್ನು ತಯಾರಿಸಿ ಮಾರಾಟ...