ಶಿವಮೊಗ್ಗದ ಇ.ಎಸ್.ಐ. ಫಲಾನುಭವಿ ಕಾರ್ಮಿಕರು ಎದುರಿಸುತ್ತಿರುವ ಆರೋಗ್ಯ ಸೇವೆಗಳ ಸಮಸ್ಯೆಯನ್ನು ಪರಿಹರಿಸುವಂತೆ ಒತ್ತಾಯಿಸಿ ಶಿವಮೊಗ್ಗ ಭದ್ರಾವತಿ ಕೈಗಾರಿಕೆಗಳ ಸಂಘ, ಶಿವಮೊಗ್ಗ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ, ಎಂಪ್ಲಾಯೀಸ್ ಯೂನಿಯನ್ ಹಾಗೂ ವಿವಿಧ ಕೈಗಾರಿಕಾ ಸಂಘಟನೆಗಳ ಪದಾಧಿಕಾರಿಗಳು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗ ನಗರದ ರಾಯಲ್ ಆರ್ಕಿಡ್ ನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿದ ಸಂಘದ ಪದಾಧಿಕಾರಿಗಳು, ಸಮಸ್ಯೆಯನ್ನು ಅವರ ಗಮನಕ್ಕೆ ತಂದು, ರಾಜ್ಯ ಸರ್ಕಾರದ ಸುತ್ತೋಲೆಯ ಹಿನ್ನೆಲೆಯಲ್ಲಿ ಇಎಸ್‌ಐ ಯೋಜನೆಯಡಿ ಖಾಸಗಿ ಒಪ್ಪಂದದ ಆಸ್ಪತ್ರೆಗಳಲ್ಲಿ ಹೊರರೋಗಿ ಚಿಕಿತ್ಸೆಗೆ ಶಿಫಾರಸು ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಕಾರ್ಮಿಕರು ಹಾಗೂ ಅವರ ಕುಟುಂಬದವರಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ ಎಂದು ಸಂಘದ ಮುಖಂಡರು ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಇ.ಎಸ್.ಐ. ಫಲಾನುಭವಿ ಕಾರ್ಮಿಕರಿಗೆ ಆಸ್ಪತ್ರೆಗಳಲ್ಲಿ ಲಭ್ಯವಾಗುತ್ತಿದ್ದ ರೆಫರಲ್ ಹಾಗೂ ಚಿಕಿತ್ಸಾ ವ್ಯವಸ್ಥೆಯನ್ನು ಸ್ಥಗಿತಗೊಳಿಸಿರುವುದರಿಂದ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರು ತೀವ್ರ ತೊಂದರೆ ಅನುಭವಿಸುತ್ತಿರುವ ವಿಷಯವನ್ನು ಸಚಿವರ ಗಮನಕ್ಕೆ ತರಲಾಯಿತು. ಈ ಸಮಸ್ಯೆಯಿಂದ ಕಾರ್ಮಿಕರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯಲು ತೊಂದರೆಯಾಗುತ್ತಿದ್ದು, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಲಾಯಿತು.
ಮನವಿಗೆ ತಕ್ಷಣ ಸ್ಪಂದಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ಸಂಬಂಧಪಟ್ಟ ಕೇಂದ್ರ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ, ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಪರಿಶೀಲಿಸಿ, ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಕಾರ್ಮಿಕರ ಆರೋಗ್ಯ ಮತ್ತು ಹಿತಾಸಕ್ತಿಯ ದೃಷ್ಟಿಯಿಂದ ವಿವಿಧ ಸಂಘಟನೆಗಳು ಒಗ್ಗಟ್ಟಿನಿಂದ ಧ್ವನಿ ಎತ್ತಿರುವುದು ಮಹತ್ವದ ಬೆಳವಣಿಗೆಯಾಗಿದೆ. ಸಚಿವರು ತಕ್ಷಣ ಸ್ಪಂದಿಸಿ ಅಧಿಕಾರಿಗಳಿಗೆ ಸೂಚನೆ ನೀಡಿರುವುದರಿಂದ ಇ.ಎಸ್.ಐ. ಕಾರ್ಮಿಕರ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯುವ ನಿರೀಕ್ಷೆ ಮೂಡಿದೆ.
ಕಾರ್ಮಿಕರ ಆರೋಗ್ಯವೇ ಕೈಗಾರಿಕೆಗಳ ಶಕ್ತಿ ಎಂಬ ಆಶಯದೊಂದಿಗೆ ಕಾರ್ಮಿಕರ ಹಿತ ಕಾಪಾಡಲು ಸಂಘಟನೆಗಳು ಒಗ್ಗಟ್ಟಿನಿಂದ ಮುಂದಾಗಿವೆ.
ಈ ಸಂದರ್ಭದಲ್ಲಿ ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ. ವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ. ಸುರೇಶ್, ಖಜಾಂಚಿ ಆರ್. ಮನೋಹರ್, ಶಿವಮೊಗ್ಗ ಭದ್ರಾವತಿ ಕೈಗಾರಿಕೆಗಳ ಸಂಘದ ಅಧ್ಯಕ್ಷ ಎಲ್. ಚಂದ್ರಶೇಖರ್, ಕಾರ್ಯದರ್ಶಿ ಎಸ್.ಎಸ್. ರಾಜೇಶ್, ಶಿವಮೊಗ್ಗ ಭದ್ರಾವತಿ ಕೈಗಾರಿಕೆಗಳ ಸಂಘದ ಪದಾಧಿಕಾರಿ ದಿನೇಶ್, ಎಂಪ್ಲಾಯೀಸ್ ಯೂನಿಯನ್ ಅಧ್ಯಕ್ಷ ರಾಜಾಸಾಬ್, ಕಲ್ಲೂರು ಮಂಡಳಿ ಅಸೋಸಿಯೇಷನ್ ಕಾರ್ಯದರ್ಶಿ ರವಿ ಜನ್ಯ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
