“ಶಿವಮೊಗ್ಗ ನಗರದ ಸಂಚಾರ ದಟ್ಟಣೆ ನಿವಾರಣೆ ಹಾಗೂ ಸಾರ್ವಜನಿಕರ ಸುಗಮ ಸಂಚಾರ ಹಾಗೂ ಸುರಕ್ಷತೆ ದೃಷ್ಟಿಯಿಂದ ತುಂಗಾ ನದಿಗೆ ನೂತನ ಸೇತುವೆ ನಿರ್ಮಾಣ ಕಾಮಗಾರಿಗೆ ಸರ್ಕಾರದಿಂದ ಆಡಳಿತಾತ್ಮಕ ಹಾಗೂ ಹಣಕಾಸಿನ ಅನುಮೋದನೆ ದೊರೆತಿರುವುದು ಅತ್ಯಂತ ಸಂತಸದ ವಿಷಯ. ಶಿವಮೊಗ್ಗ ಜನತೆಯ ಬಹುದಿನಗಳ ಈ ಮಹತ್ವದ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ಅನುಮೋದನೆ ನೀಡಿದ ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ ಅವರಿಗೆ ಸಮಸ್ತ ಶಿವಮೊಗ್ಗ ನಗರದ ನಾಗರಿಕರ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ,” ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ತಿಳಿಸಿದ್ದಾರೆ.
“ಶಿವಮೊಗ್ಗ ನಗರದ ಹೃದಯಭಾಗದಲ್ಲಿರುವ ತುಂಗಾ ನದಿಯ ಹಳೆಯ ಸೇತುವೆಯು ನಿರ್ಮಾಣವಾಗಿ ಶತಮಾನವೇ (೧೦೦ ವರ್ಷಗಳು) ಕಳೆದಿದೆ. ನಗರವು ಶರವೇಗದಲ್ಲಿ ಬೆಳೆಯುತ್ತಿರುವುದರಿಂದ ವಾಹನ ದಟ್ಟಣೆ ಗಣನೀಯವಾಗಿ ಹೆಚ್ಚಾಗಿದ್ದು, ಹಳೆಯ ಸೇತುವೆಯ ಮೇಲೆ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿರುವುದರಿಂದ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಭವಿಷ್ಯದ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಸೇತುವೆ ನಿರ್ಮಾಣ ಅತ್ಯಂತ ಅನಿವಾರ್ಯವಾಗಿತ್ತು.”
“ಈ ಹಿನ್ನೆಲೆಯಲ್ಲಿ ನೂತನ ಸೇತುವೆ ನಿರ್ಮಾಣದ ತುರ್ತು ಅಗತ್ಯವನ್ನು ಮನಗಂಡು, ಲೋಕೋಪಯೋಗಿ ಇಲಾಖೆಯ ಉನ್ನತ ಮಟ್ಟದಲ್ಲಿ ನಿರಂತರವಾಗಿ ಚರ್ಚೆ ನಡೆಸಿ, ಅಗತ್ಯ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಡಲಾಗಿತ್ತು. ನಮ್ಮ ಸತತ ಪರಿಶ್ರಮ ಹಾಗೂ ನಿರಂತರ ಪ್ರಯತ್ನದ ಫಲವಾಗಿ ಇದೀಗ ಈ ಯೋಜನೆಗೆ ಸರ್ಕಾರದ ಆಡಳಿತಾತ್ಮಕ ಮತ್ತು ಆರ್ಥಿಕ ಇಲಾಖೆಯಿಂದ ಅಧಿಕೃತ ಅನುಮೋದನೆ ದೊರೆತಿದೆ. ಇದರಿಂದಾಗಿ ಶಿವಮೊಗ್ಗ ನಗರಕ್ಕೆ ಹೊಸ ಚೈತನ್ಯ ಸಿಕ್ಕಂತಾಗಿದೆ.”
“ಟೆಂಡರ್ ಪ್ರಕ್ರಿಯೆ ಸೇರಿದಂತೆ ಮುಂದಿನ ಎಲ್ಲಾ ತಾಂತ್ರಿಕ ಪ್ರಕ್ರಿಯೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಆದಷ್ಟು ಬೇಗ ಕಾಮಗಾರಿಗೆ ಚಾಲನೆ ನೀಡುವ ಮೂಲಕ ನಿಗದಿತ ಕಾಲಮಿತಿಯೊಳಗೆ ಗುಣಮಟ್ಟದೊಂದಿಗೆ ಸೇತುವೆ ನಿರ್ಮಾಣವನ್ನು ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು,” ಎಂದು ಶ್ರೀ ಎಸ್.ಎನ್. ಚನ್ನಬಸಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
