ಕುರಿ ಶೆಡ್ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು 300ಕ್ಕೂ ಹೆಚ್ಚು ಕುರಿ ಹಾಗೂ ಮರಿಗಳು ಸಜೀವ ದಹನಗೊಂಡಿರುವ ದಾರುಣ ಘಟನೆ ಸೊರಬ ತಾಲೂಕಿನ ಸೂರಣಗಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಗ್ರಾಮದ ರಾಮಣ್ಣ ಎಂಬುವವರಿಗೆ ಸೇರಿದ ಕುರಿ ಶೆಡ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಶೆಡ್ನಲ್ಲಿದ್ದ 300ಕ್ಕೂ ಹೆಚ್ಚು ಕುರಿ ಮತ್ತು ಮರಿಗಳು ಬೆಂಕಿಗೆ ಆಹುತಿಯಾಗಿವೆ. ಘಟನೆಯಲ್ಲಿ ಕುರಿ ಮಾಲೀಕ ರಾಮಣ್ಣ ಅವರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಶೆಡ್ಗೆ ಬೆಂಕಿ ಬಿದ್ದಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಬೆಂಕಿ ಅವಘಡದ ಹಿಂದೆ ಅನುಮಾನ ವ್ಯಕ್ತಪಡಿಸಿರುವ ಕುರಿ ಮಾಲೀಕ ರಾಮಣ್ಣ ಅವರು ಆನವಟ್ಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನೆ ಕುರಿತು ಸಮಗ್ರ ತನಿಖೆ ನಡೆಸಿ, ಸೂಕ್ತ ನ್ಯಾಯ ಒದಗಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಆನವಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
