ಬೀಗ ಹಾಕಿದ ಮನೆಗಳ ಸುರಕ್ಷತೆಗೆ ‘ಲಾಕ್ಡ್ ಹೌಸ್ ಬೀಟ್ ಸಿಸ್ಟಮ್’ — ಜನರಲ್ಲಿ ಭದ್ರತೆಯ ಭರವಸೆ ಮೂಡಿಸಿದ ಶ್ಲಾಘನೀಯ ಕಾರ್ಯ.
ಮನೆಯವರೆಲ್ಲರೂ ಪ್ರಯಾಣಕ್ಕೆ ಹೊರಟಿದ್ದೀರಾ? ಹಾಗಾದರೆ ನಿಮ್ಮ ಮನೆಯ ಸುರಕ್ಷತೆಯ ಚಿಂತೆ ಬಿಡಿ! ನಿಮ್ಮ ಮನೆಯ ಭದ್ರತೆಯ ಜವಾಬ್ದಾರಿ ನಮ್ಮದು ಎಂಬ ಭರವಸೆಯನ್ನು ನೀಡುವ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ‘ಲಾಕ್ಡ್ ಹೌಸ್ ಬೀಟ್ ಸಿಸ್ಟಮ್’ ನಿಜಕ್ಕೂ ಶ್ಲಾಘನೀಯ ಸೇವೆಯಾಗಿದೆ.
ಸುಮಾರು ಆರು ತಿಂಗಳ ಹಿಂದೆ, ಬೀಗ ಹಾಕಿದ ಮನೆಗಳ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ಕೈಗೊಂಡಿರುವ ಈ ಗಸ್ತು ವ್ಯವಸ್ಥೆಯ ಕುರಿತು ಶಿವಮೊಗ್ಗದ ಪ್ರಮುಖ ಸ್ಥಳಗಳಲ್ಲಿ, ರಸ್ತೆ ಬದಿಗಳಲ್ಲಿ ಫ್ಲೆಕ್ಸ್ ಗಳ ಮೂಲಕ ಹಾಗೂ ಸ್ಥಳೀಯ ಮತ್ತು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಿತ್ತು.
ನಾನು ಮತ್ತು ನನ್ನ ಪತಿಯವರು ಸುಮಾರು ಮೂರು ತಿಂಗಳ ಕಾಲ ಅಮೆರಿಕದಲ್ಲಿರುವ ನಮ್ಮ ಕಿರಿಯ ಮಗನ ಮನೆಗೆ ಹೋಗಲು ನಿರ್ಧರಿಸಿದ್ದೆವು. ನಾವು ಊರಿನಲ್ಲಿ ಇಲ್ಲದಿರುವಾಗ ಮನೆಯ ಜವಾಬ್ದಾರಿಯನ್ನು ಯಾರಿಗೆ ವಹಿಸಬೇಕೆಂಬುದು ನಮಗೆ ದೊಡ್ಡ ಚಿಂತೆಯಾಗಿತ್ತು. ಸುಮಾರು 25 ವರ್ಷಗಳಿಂದ ನಮ್ಮ ಮನೆಯ ಕೆಲಸಕಾರ್ಯಗಳಲ್ಲಿ ಸಹಕರಿಸುತ್ತಿದ್ದ, ಅತ್ಯಂತ ವಿಶ್ವಾಸಾರ್ಹವಾಗಿದ್ದ ಕೆಲಸದಾಕೆ ಮೇ ತಿಂಗಳಲ್ಲಿ ತನ್ನ ತಂದೆ-ತಾಯಿಯನ್ನು ನೋಡಿಕೊಳ್ಳುವ ಸಲುವಾಗಿ ಸ್ವಗ್ರಾಮಕ್ಕೆ ತೆರಳಿದ್ದಳು. ಹೊಸ ಕೆಲಸದವರು ಬಂದಿದ್ದರೂ, ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಅವರಿಗೆ ವಹಿಸಲು ನಮ್ಮ ಮನಸ್ಸು ಒಪ್ಪುತ್ತಿರಲಿಲ್ಲ.
ಇಂತಹ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ಈ ಅಮೂಲ್ಯ ಸೇವೆಯನ್ನು ಬಳಸಿಕೊಳ್ಳಲು ನಾವು ನಿರ್ಧರಿಸಿದೆವು. ಪೊಲೀಸ್ ಇಲಾಖೆ ಕೇಳಿದ ಅಗತ್ಯ ಮಾಹಿತಿಗಳನ್ನು ನೀಡಿ, ಜುಲೈ 12ರಂದು ಶಿವಮೊಗ್ಗದಿಂದ ಬೆಂಗಳೂರಿನಲ್ಲಿರುವ ನಮ್ಮ ಹಿರಿಯ ಮಗನ ಮನೆಗೆ ತೆರಳಿದೆವು.
ಅಂದು ಮಧ್ಯರಾತ್ರಿ ಸುಮಾರು 1ರಿಂದ 1.30ರ ವೇಳೆಗೆ ನಮ್ಮ ಮನೆಯವರ ಮೊಬೈಲ್‌ಗೆ ಪೊಲೀಸರಿಂದ ಕರೆಗಳು ಬರಲಾರಂಭಿಸಿದವು. ನಮ್ಮ ಮನೆಯ ಸುರಕ್ಷತೆಯನ್ನು ಮತ್ತಷ್ಟು ಖಚಿತಪಡಿಸಿಕೊಳ್ಳಲು ಸಿ.ಸಿ. ಕ್ಯಾಮೆರಾಗಳನ್ನೂ ಅಳವಡಿಸಿದ್ದೆವು. ಹೀಗಾಗಿ ಮನೆಯಲ್ಲಿ ಅಥವಾ ಮನೆಯ ಸುತ್ತಮುತ್ತ ಏನಾಗುತ್ತಿದೆ ಎಂಬುದನ್ನು ಮೊಬೈಲ್ ಮೂಲಕವೇ ಗಮನಿಸಲು ಸಾಧ್ಯವಾಗುತ್ತಿತ್ತು.
ಜುಲೈ 15ರಂದು ನಾವು ಅಮೆರಿಕಕ್ಕೆ ಪ್ರಯಾಣ ಬೆಳೆಸಿ, ಅಕ್ಟೋಬರ್ 14ರವರೆಗೆ ನಮ್ಮ ಮಗನ ಮನೆಯಲ್ಲಿ ವಾಸ್ತವ್ಯ ಹೂಡಿದ್ದೆವು. ಅಲ್ಲಿದ್ದಾಗಲೂ ಮೊಬೈಲ್ ಮೂಲಕ ನಮ್ಮ ಮನೆಯ ಸಿ.ಸಿ. ಕ್ಯಾಮೆರಾ ದೃಶ್ಯಗಳನ್ನು ಗಮನಿಸುತ್ತಿದ್ದೆವು.
ಭಾರತ ಮತ್ತು ಅಮೆರಿಕದ ಸಮಯದ ವ್ಯತ್ಯಾಸದಿಂದಾಗಿ, ಅಮೆರಿಕದಲ್ಲಿ ಹಗಲಿರುವಾಗ ಭಾರತದಲ್ಲಿ ರಾತ್ರಿಯಾಗಿರುತ್ತಿತ್ತು. ಪ್ರತಿದಿನ ರಾತ್ರಿ ಸುಮಾರು 1ರಿಂದ 1.30ರ ವೇಳೆಗೆ ಪೊಲೀಸರು ನಮ್ಮ ಮನೆಯ ಮುಂದೆ ಬಂದು, ಸುತ್ತಮುತ್ತ ಟಾರ್ಚ್ ಬೆಳಕಿನಲ್ಲಿ ಪರಿಶೀಲನೆ ನಡೆಸಿ, ಸುಮಾರು ಅರ್ಧ ಗಂಟೆ ಗಸ್ತು ತಿರುಗುತ್ತಿದ್ದರು. ನಂತರ ಮನೆಯ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡು ತೆರಳುತ್ತಿದ್ದರು. ಕೆಲವು ದಿನಗಳಲ್ಲಿ ಬೆಳಗಿನ ಜಾವ 3ರಿಂದ 4 ಗಂಟೆಯ ನಡುವೆಯೂ ಮತ್ತೊಮ್ಮೆ ಬಂದು ಪರಿಶೀಲನೆ ನಡೆಸುತ್ತಿದ್ದರು. ಈ ಎಲ್ಲ ದೃಶ್ಯಗಳನ್ನು ನಾವು ದೂರದ ಅಮೆರಿಕದಲ್ಲಿದ್ದರೂ ಮೊಬೈಲ್ ಮೂಲಕವೇ ನೋಡುತ್ತಿದ್ದೆವು. ಅವರ ಕರ್ತವ್ಯನಿಷ್ಠೆ ಮತ್ತು ಎಚ್ಚರಿಕೆಯನ್ನು ಕಂಡು ನಮಗೆ ಅಪಾರ ಸಂತೋಷ ಹಾಗೂ ನೆಮ್ಮದಿ ಉಂಟಾಗುತ್ತಿತ್ತು.
ಈ ಮಧ್ಯೆ ಬೆಂಗಳೂರಿನಲ್ಲಿರುವ ನಮ್ಮ ಹಿರಿಯ ಮಗ, ಸೊಸೆ ಮತ್ತು ಮೊಮ್ಮಗ ಶಿವಮೊಗ್ಗದ ಮನೆಗೆ ತಡರಾತ್ರಿ ಬಂದು ಒಮ್ಮೆ ಉಳಿದುಕೊಂಡಿದ್ದರು. ಆಗ ಮನೆಯೊಳಗೆ ದೀಪ ಉರಿಯುವುದನ್ನು ಗಮನಿಸಿದ ಪೊಲೀಸರು, ಪದೇ ಪದೇ
ಟಾರ್ಚ್ ಬೆಳಕನ್ನು ಮನೆಯೊಳಗೆ ಬಿಟ್ಟು ಮನೆಯವರು ಹೊರಗೆ ಬಂದು ಪೊಲೀಸರೊಂದಿಗೆ ಮಾತನಾಡಿ, ಅವರೊಂದಿಗೆ ಒಂದು ಛಾಯಾಚಿತ್ರ ತೆಗೆಸಿಕೊಂಡ ಬಳಿಕ ಪೊಲೀಸರು ಅಲ್ಲಿಂದ
ತೆರಳಿದರಂತೆ.
ನಾವು ಅಮೆರಿಕದಿಂದ ಹಿಂದಿರುಗುವ ಮುನ್ನ ಮತ್ತೊಮ್ಮೆ ನಮ್ಮ ಹಿರಿಯ ಮಗ ಶಿವಮೊಗ್ಗದ ಮನೆಯಲ್ಲಿ ಉಳಿಯಲು ಬಂದಾಗ, “ಮನೆಯಲ್ಲಿ ಮಗ ಮಲಗಿದ್ದಾನೆ ಎಂದು ಪೊಲೀಸರಿಗೆ ವಾಟ್ಸಾಪ್‌ನಲ್ಲಿ ತಿಳಿಸಿಬಿಡಿ. ಇಲ್ಲದಿದ್ದರೆ ರಾತ್ರಿ ಅವರು ಬಂದು ಪರಿಶೀಲಿಸುವುದರಿಂದ ನನಗೆ ನಿದ್ರೆ ಮಾಡಲು ಬಿಡುವುದಿಲ್ಲ!” ಎಂದು ನಗುತ್ತಾ ಹೇಳಿದನು. ಈ ಮಾತು ನಮ್ಮೆಲ್ಲರಿಗೂ ನಗು ತರಿಸಿದರೂ, ಪೊಲೀಸರು ತಮ್ಮ ಕರ್ತವ್ಯವನ್ನು ಎಷ್ಟೊಂದು ಶ್ರದ್ಧೆಯಿಂದ ನಿರ್ವಹಿಸುತ್ತಿದ್ದಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ಸುಮಾರು ಮೂರು ತಿಂಗಳ ಕಾಲ ನಾವು ಅಮೆರಿಕದಲ್ಲಿದ್ದರೂ, ನಮ್ಮ ಮನೆಯ ಸುರಕ್ಷತೆಯ ಬಗ್ಗೆ ಯಾವುದೇ ಆತಂಕವಿಲ್ಲದೆ ನೆಮ್ಮದಿಯಿಂದ ಇರಲು ಸಾಧ್ಯವಾಯಿತು. ಇದಕ್ಕೆ ಕಾರಣ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ಈ ಜನಪರ ಸೇವೆ.
ನಮ್ಮ ಮನೆಯ ಸುರಕ್ಷತೆಯನ್ನು ತಮ್ಮ ಮನೆಯ ಸುರಕ್ಷತೆಯೆಂಬಂತೆ ಪರಿಗಣಿಸಿ, ಅತ್ಯಂತ ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಗೂ, ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಹಾಗೂ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಗೆ ನಮ್ಮ ಹೃದಯಪೂರ್ವಕ ಅನಂತಾನಂತ ಧನ್ಯವಾದಗಳು.
ಇಂತಹ ಜನಪರ ಸೇವೆಗಳು ಸಾರ್ವಜನಿಕರಲ್ಲಿ ಪೊಲೀಸರ ಮೇಲಿನ ವಿಶ್ವಾಸವನ್ನು ಹೆಚ್ಚಿಸುವುದಲ್ಲದೆ, ಸಮಾಜದಲ್ಲಿ ಭದ್ರತೆಯ ಭಾವನೆಯನ್ನೂ ಮೂಡಿಸುತ್ತವೆ. ದೂರದ ಊರುಗಳಿಗೆ ಅಥವಾ ವಿದೇಶಗಳಿಗೆ ಪ್ರಯಾಣಿಸುವವರು ಪೊಲೀಸ್ ಇಲಾಖೆಯ ಈ ಸೌಲಭ್ಯವನ್ನು ಅಗತ್ಯವಿದ್ದಾಗ ಸದುಪಯೋಗಪಡಿಸಿಕೊಳ್ಳಬೇಕು. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಿದರೆ, ಇಂತಹ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.
ಕೊನೆಯದಾಗಿ, ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ಈ ಶ್ಲಾಘನೀಯ ಸೇವೆಗೆ ನನ್ನದೊಂದು ದೊಡ್ಡ ಸಲಾಂ! 🙏
ವಾರಿಜಾ ಜಗದೀಶ್
ಲಕ್ಷ್ಮೀ ನಾರಾಯಣ ನಿಲಯ
ಬಿ.ಬಿ. ರಸ್ತೆ,
ಶಿವಮೊಗ್ಗ.
ಮೊಬೈಲ್: 94499 28268
