ಶಿವಮೊಗ್ಗ ಜಿಲ್ಲೆಯಲ್ಲಿ ವನ್ಯಜೀವಿಗಳ ರಕ್ಷಣಾ ವ್ಯವಸ್ಥೆಯ ನಿರ್ಲಕ್ಷ್ಯ ಮತ್ತೊಮ್ಮೆ ಪ್ರಶ್ನೆಗೀಡಾಗಿದೆ. ಹೆದ್ದಾರಿ ಅಪಘಾತದಲ್ಲಿ ಗಾಯಗೊಂಡ ಶೆಡ್ಯೂಲ್-1 ವನ್ಯಪ್ರಾಣಿಯಾದ ಕಾಟಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಮೃತಪಟ್ಟಿರುವ ಘಟನೆ ಸಾಗರ ತಾಲೂಕಿನ ಕಾಸ್ಪಾಡಿ ಬಳಿ ನಡೆದಿದೆ.
ಚೋರಡಿ ವಲಯದ ವ್ಯಾಪ್ತಿಯಲ್ಲಿ ರಸ್ತೆ ಅಪಘಾತಕ್ಕೀಡಾದ ಕಾಟಿಗೆ ತುರ್ತು ಚಿಕಿತ್ಸೆ ನೀಡಬೇಕಿತ್ತು. ಆದರೆ, ಶಿವಮೊಗ್ಗ ಮೃಗಾಲಯದಲ್ಲಿ ಪಶುವೈದ್ಯರಿಲ್ಲ, ಸಕ್ರೆಬೈಲು ಆನೆ ಶಿಬಿರದಲ್ಲೂ ವೈದ್ಯರಿಲ್ಲದ ಪರಿಸ್ಥಿತಿ ಎದುರಾಗಿದೆ ಎನ್ನಲಾಗಿದೆ.
ಹೀಗಾಗಿ, ಬೇರೆ ವಲಯದಿಂದ ಚಿತ್ರದುರ್ಗದ ಪಶುವೈದ್ಯರನ್ನು ಕರೆಸಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ, ವೈದ್ಯರು ಸ್ಥಳಕ್ಕೆ ಬರುವಷ್ಟರಲ್ಲಿ ಕಾಟಿ ಮೃತಪಟ್ಟಿದೆ. ಕಾರ್ಯಾಚರಣೆಗೆ ಶಿವಮೊಗ್ಗ ಮೃಗಾಲಯದಿಂದ ವಾಹನ ಹಾಗೂ ಅಗತ್ಯ ಪರಿಕರಗಳ ನೆರವು ಪಡೆಯಲಾಗಿತ್ತು.
ಇನ್ನೊಂದೆಡೆ, ಕಾಟಿಯ ಸಂರಕ್ಷಣೆ ಮತ್ತು ಅಧ್ಯಯನಕ್ಕಾಗಿ ಅರಣ್ಯ ಇಲಾಖೆ ಕೋಟಿ ರೂಪಾಯಿ ವೆಚ್ಚದಲ್ಲಿ ಅಧ್ಯಯನ ನಡೆಸಿತ್ತು ಎನ್ನಲಾಗಿದೆ. ಆರು ತಿಂಗಳ ಹಿಂದೆಯಷ್ಟೇ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಎಸ್ಟೇಟ್ನಲ್ಲಿ ಅಧ್ಯಯನ ನಡೆಸಲಾಗಿತ್ತು.
ಆದರೆ, ವನ್ಯಜೀವಿಯೊಂದು ಅಪಘಾತಕ್ಕೀಡಾದಾಗ ತಕ್ಷಣ ಚಿಕಿತ್ಸೆ ನೀಡಲು ಪಶುವೈದ್ಯರೇ ಇಲ್ಲದಿರುವುದು ಅರಣ್ಯ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಒಂದೆಡೆ ಶಿವಮೊಗ್ಗ ದಸರಾ ಸಂದರ್ಭದಲ್ಲಿ ಆನೆಗಳ ಅವಾಂತರ, ಮತ್ತೊಂದೆಡೆ ಅಪಘಾತಕ್ಕೀಡಾದ ಕಾಟಿಯ ಸಾವು. ರಾಜ್ಯದ ವನ್ಯಜೀವಿಗಳಿಗೆ ತುರ್ತು ಚಿಕಿತ್ಸೆ ಒದಗಿಸುವ ವ್ಯವಸ್ಥೆಯಲ್ಲಿ ವೈದ್ಯರ ಕೊರತೆ ಎದ್ದು ಕಾಣುತ್ತಿದೆ.
ವನ್ಯಜೀವಿಗಳ ಸಂರಕ್ಷಣೆಗಾಗಿ ಕೋಟಿ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಆದರೆ, ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲವೇ? ಕಾಟಿಯ ಸಾವಿಗೆ ನಿಖರ ಕಾರಣವೇನು? ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಂದ ಸ್ಪಷ್ಟ ಮಾಹಿತಿ ಲಭ್ಯವಾಗಬೇಕಿದೆ.
ವನ್ಯಜೀವಿಗಳ ರಕ್ಷಣೆಗೆ ಅಧ್ಯಯನ ಮಾತ್ರ ಸಾಕೇ? ಅವುಗಳ ಜೀವ ಉಳಿಸಲು ಅಗತ್ಯವಿರುವ ವೈದ್ಯಕೀಯ ಸೌಲಭ್ಯ ಮತ್ತು ತುರ್ತು ಚಿಕಿತ್ಸಾ ವ್ಯವಸ್ಥೆಯನ್ನು ಬಲಪಡಿಸುವುದು ಯಾವಾಗ? ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಮೂಡಿವೆ.
