ಮಹಿಳೆಯರು ಪುರುಷರಿಗೆ ಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಸಮಾಜದಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಎಸ್. ಶಂಕರ್ ಶೇಟ್ ಹೇಳಿದರು.
ಭಾನುವಾರ ಪಟ್ಟಣದ ಮಾರ್ಕೆಟ್ ರಸ್ತೆಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ದುರ್ಗಾಷ್ಟಮಿ ಅಂಗವಾಗಿ ಹಮ್ಮಿಕೊಂಡ ನವದುರ್ಗೆ ವೈಭವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸನಾತನ ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ವಿಶೇಷ ಹಾಗೂ ಗೌರವಾನ್ವಿತ ಸ್ಥಾನವಿದೆ. ಧರ್ಮೋ ರಕ್ಷತಿ ರಕ್ಷಿತಃ ಎನ್ನುವ ಸಂಸ್ಕೃತದ ಪ್ರಸಿದ್ಧ ಶ್ಲೋಕದಂತೆ ಧರ್ಮವನ್ನು ರಕ್ಷಿಸಿದರೆ, ಧರ್ಮವು ನಮ್ಮನ್ನು ರಕ್ಷಿಸುತ್ತದೆ. ಅಂತೆಯೇ ಪೋಷಕರಾದವರು ಮಕ್ಕಳನ್ನು ಅಂಕಗಳಿಗೆ ಮಾತ್ರ ಸೀಮಿತಗೊಳಿಸದೇ, ಧಾರ್ಮಿಕ ಕ್ಷೇತ್ರಗಳಲ್ಲಿ ಬೆರೆಯುವಂತೆ ಮಾಡಬೇಕು. ನಾಡಿನ ಸಂಸ್ಕೃತಿ ಮತ್ತು ಸಂಸ್ಕಾರವನ್ನು ತಿಳಿಹೇಳುವ ಜವಾಬ್ದಾರಿ ಪೋಷಕರದ್ದಾಗಿದೆ. ಧರ್ಮ ಎಂದರೆ ಕೇವಲ ಪೂಜೆ-ಪುನಸ್ಕಾರಗಳಿಗೆ ಸೀಮಿತವಲ್ಲ, ಬದಲಾಗಿ ಸದಾಚಾರ, ನ್ಯಾಯ, ಪ್ರಾಮಾಣಿಕತೆ, ನೈತಿಕತೆ ಮತ್ತು ಸತ್ಯದ ಹಾದಿಯಾಗಿದೆ. ಗ್ರಾಮೀಣ ಭಾಗದಲ್ಲಿ ಅನೇಕರು ಸಾಧನೆ ಮಾಡುತ್ತಿದ್ದಾರೆ. ಅವರನ್ನು ಗುರುತಿಸುವ ಕೆಲಸವನ್ನು ಕೈಲಾದ ಪ್ರಮಾಣದಲ್ಲಿ ಮಾಡಲಾಗುತ್ತಿದೆ ಎಂದರು.
ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ. ವೀಣಕ್ಕ ಮಾತನಾಡಿ, ಆಡಂಬರದ ಜೀವನ ಶೈಲಿಯು ವ್ಯಕ್ತಿಯ ಮತ್ತು ಸಮಾಜದ ಮೇಲೆ ಹಲವು ರೀತಿಯ ದುಷ್ಪರಿಣಾಮಗಳನ್ನು ಬೀರುತ್ತದೆ. ಆರ್ಥಿಕ ಹೊರೆ, ನೆಮ್ಮದಿಯ ಕೊರತೆ, ಸಾಂಸ್ಕೃತಿಕ ಮೌಲ್ಯಗಳ ಕುಸಿತ, ಸಾಮಾಜಿಕ ಅಸಮಾನತೆ ಹೀಗೆ ಹಲವು ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಎಲ್ಲರೊಂದಿಗೆ ಸಮಾನತೆಯಿಂದ ಬೆರೆಯುವ ಪ್ರಯತ್ನ ಮಾಡಬೇಕು. ಪ್ರಸ್ತುತ ದಿನಗಳಲ್ಲಿ ನಾಡಿನಲ್ಲಿ ಬರದ ಛಾಯೆ ಎದುರಾಗಿದೆ. ರೈತಾಪಿ ವರ್ಗ ಸಂಕಷ್ಟವನ್ನು ಎದುರಿಸುತ್ತಿದೆ. ಆದರೆ, ಭಗವಂತ ಆಹಾರಕ್ಕೆ ಕೊರತೆ ಮಾಡುವುದಿಲ್ಲ. ಭಗವಂತನ ದೃಷ್ಟಿಯಲ್ಲಿ ಎಲ್ಲರೂ ಸಮಾನರಾಗಿದ್ದಾರೆ. ಸದಾ ಒಳ್ಳೆಯ ವಿಷಯಗಳನ್ನು ಮಾತನಾಡುವುದು ಮತ್ತು ಯೋಚಿಸುವುದನ್ನು ಮಾಡಿದರೆ, ವ್ಯಕ್ತಿಯ ವ್ಯಕ್ತಿತ್ವದಲ್ಲಿ ಬದಲಾವಣೆ ಕಂಡು ಸಮಾಜದ ಸತ್ಪçಜೆಯಾಗಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಗಾಯಕಿ ಕೀರ್ತಿ, ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಗೆ ಆಯ್ಕೆಯಾದ ನಿರೀಕ್ಷಾ ಚಂದ್ರ ನಾಯ್ಕ್, ಕರಾಟೆ ಪಟು ಖುಷಿ ಹಾಗೂ ಕಾರ್ತಿಕ್ ಆರ್. ನಾಯ್ಕ್ ಅವರನ್ನು ಸನ್ಮಾನಿಸಲಾಯಿತು.
ನವದುರ್ಗೆಯರ ವೇಷದಲ್ಲಿ ಶ್ರೀಮತಿ ಸುಬ್ರಹ್ಮಣ್ಯ ಬೆನ್ನೂರು, ಸವೀನ್ ವೀರೇಂದ್ರ ಪಾಟೀಲ್, ಅರ್ಚನಾ ಮನೀಶ್ ಕಾಕಡೆ, ಸರೋಜ ಗುರುನಾಥ್ ರಾಕುಂಡೆ, ಶ್ರೀನಿಧಿ ನಿತಿನ್ ಬೆನ್ನೂರು, ಆರತಿ ಸುಂದರೇಶ್ ಬಾಂಬೋರೆ, ದೀಪಾ ಪ್ರವೀಣ್ ಬಾಂಬೋರೆ, ಭವಾನಿ ನಟರಾಜ್ ಬಾಂಬೋರೆ, ಸಾಹಿತ್ಯ ರಾಜು, ಎಂ.ಕೆ. ತ್ರಿಷಿಕಾ ಪಾಲ್ಗೊಂಡಿದ್ದರು.
ಬಿಎಸ್ಎನ್ಎಲ್ ನಿವೃತ್ತ ನೌಕರ ವೇಣುಗೋಪಾಲ್, ಶಿಕ್ಷಕ ಕೆರೆಸ್ವಾಮಿ, ಪ್ರಶಾಂತ್ ನಾಯ್ಕ್ ಸೇರಿದಂತೆ ಮತ್ತಿತರರಿದ್ದರು.
ಸೊರಬದಲ್ಲಿ ಈಶ್ವರೀಯ ವಿವಿಯಲ್ಲಿ ನವದುರ್ಗೆ ವೈಭವ
Date:
