ರಂಗ ದಸರಾ ಪ್ರಯುಕ್ತ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಇಂದು ‘ಮಳೆ ನಿಲ್ಲುವವರೆಗೆ’ ಎಂಬ ಕುತೂಹಲಭರಿತ ನಾಟಕ ಪ್ರದರ್ಶನಗೊಳ್ಳಲಿದೆ.
ಬೆಟ್ಟದ ಮೇಲಿನ ನಿಗೂಢ ಮನೆಯೊಂದರಲ್ಲಿ ನಿವೃತ್ತ ನ್ಯಾಯಾಧೀಶ, ಇಬ್ಬರು ವಕೀಲರು ಹಾಗೂ ಇಬ್ಬರು ಸಹಚರರ ನಡುವೆ ನಡೆಯುವ ಕೇಸುಗಳ ವಿಚಾರಣೆ, ಅನಿರೀಕ್ಷಿತವಾಗಿ ಎದುರಾಗುವ ಆರೋಪಿ ಮತ್ತು ತಿರುವು ಪಡೆದುಕೊಳ್ಳುವ ಪ್ರಕರಣದ ಸುತ್ತ ನಾಟಕದ ಕಥೆ ಸಾಗುತ್ತದೆ. ಪ್ರಕರಣದಲ್ಲಿ ಯಾರಿಗೆ ಶಿಕ್ಷೆಯಾಗಲಿದೆ ಎಂಬ ಕುತೂಹಲವನ್ನು ನಾಟಕ ಮೂಡಿಸುತ್ತದೆ.
ನಮ್ ಟೀಮ್ ರಂಗತಂಡದ ಪ್ರಸ್ತುತಿಯಲ್ಲಿ ಮೂಡಿಬರುತ್ತಿರುವ ಈ ನಾಟಕವನ್ನು ಎಲ್.ಎಸ್. ಸುಧೀಂದ್ರ ರಚಿಸಿದ್ದು, ವಿಜಯ್ ನೀನಾಸಂ ನಿರ್ದೇಶನ ಮಾಡಿದ್ದಾರೆ. ಲಕ್ಷ್ಮಿನಿವಾಸ ಧಾರಾವಾಹಿಯ ವೆಂಕಿ ಖ್ಯಾತಿಯ ಚಂದ್ರಶೇಖರ ಶಾಸ್ತ್ರಿ, ಕಾಮಿಡಿ ಕಿಲಾಡಿ ಖ್ಯಾತಿಯ ಚಂದ್ರಶೇಖರ ಹಿರೇಗೋಣಿಗೆರೆ ಸೇರಿದಂತೆ ಹೊನ್ನಾಳಿ ಚಂದ್ರಶೇಖರ್, ಯೋಗೀಶ್, ವೆಂಕಟೇಶ್, ಸೂರಜ್ ಹಾಗೂ ತ್ರಿಷಾ ಶೆಟ್ಟಿ ಅಭಿನಯಿಸಿದ್ದಾರೆ.
ಚಂದನ್ ನೀನಾಸಂ ಬೆಳಕಿನ ವಿನ್ಯಾಸ ಹಾಗೂ ಸಾಸ್ವೆಹಳ್ಳಿ ಸತೀಶ್ ಪ್ರಸಾಧನದ ಜವಾಬ್ದಾರಿ ನಿರ್ವಹಿಸಿದ್ದಾರೆ.
ಇಂದು, ಅಕ್ಟೋಬರ್ 19ರ ಸಂಜೆ 7 ಗಂಟೆಗೆ ಪ್ರದರ್ಶನ ನಡೆಯಲಿದ್ದು, ಪ್ರೇಕ್ಷಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.
