ಹವಾಮಾನ ವೈಪರೀತ್ಯ ಹಾಗೂ ಮಳೆಯ ಅಭಾವದ ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ದಿನಗಳಲ್ಲಿ ರೈತರ ಆದಾಯ ಹೆಚ್ಚಿಸುವುದು ಮತ್ತು ಸುಸ್ಥಿರ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಅ.30 ರಿಂದ ನ.2ರವರೆಗೆ ನಾಲ್ಕು ದಿನಗಳ ಕಾಲ ಕೃಷಿ ಮತ್ತು ತೋಟಗಾರಿಕೆ ಮೇಳ-2026 ಆಯೋಜಿಸಲಾಗಿದೆ.
ನಗರದ ನವಿಲೆ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ‘ಬರ ನಿರ್ವಹಣೆಗಾಗಿ ನಾವೀನ್ಯತಾ ಕೃಷಿ’ ಎಂಬ ಧ್ಯೇಯವಾಕ್ಯದೊಂದಿಗೆ ನಡೆಯಲಿರುವ ಮೇಳದಲ್ಲಿ ಕೃಷಿ ಹಾಗೂ ಸಂಬಂಧಿತ ಇಲಾಖೆಗಳು ಭಾಗವಹಿಸಲಿವೆ. ಬರ ನಿರ್ವಹಣೆ, ನೀರು ಸಂರಕ್ಷಣೆ, ಹವಾಮಾನ ಆಧಾರಿತ ಕೃಷಿ, ಕಡಿಮೆ ನೀರು ಬೇಡುವ ಬೆಳೆಗಳ ತಳಿಗಳು ಹಾಗೂ ತೇವಾಂಶ ಸಂರಕ್ಷಣೆ ಕುರಿತು ಮೂರು ದಿನಗಳ ವಿಚಾರಸಂಕಿರಣ ನಡೆಯಲಿದೆ. ರೈತ ಮಹಿಳೆಯರು ಮತ್ತು ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ.
ಮೇಳದಲ್ಲಿ 500ಕ್ಕೂ ಹೆಚ್ಚು ಮಳಿಗೆಗಳು ಹಾಗೂ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ 17ಕ್ಕೂ ಹೆಚ್ಚು ಕೃಷಿ ಸಂಶೋಧನಾ ಸಂಸ್ಥೆಗಳು ಭಾಗವಹಿಸಲಿವೆ. ವಿಶ್ವವಿದ್ಯಾಲಯದ ವಿಜ್ಞಾನಿಗಳಿಂದ ರೈತರಿಗೆ ವಿವಿಧ ಬೆಳೆಗಳ ಕುರಿತು ಸಲಹೆ ನೀಡಲು ಸಲಹಾ ಕೇಂದ್ರ ಸ್ಥಾಪಿಸಲಾಗುತ್ತದೆ. ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ಮತ್ಸ್ಯ ಕೃಷಿ ಪ್ರಾತ್ಯಕ್ಷಿಕೆ, ಹೈನುಗಾರಿಕೆ ಮತ್ತು ಜಾನುವಾರುಗಳ ಪ್ರದರ್ಶನವೂ ನಡೆಯಲಿದೆ.
ಮೇಳದ ಪ್ರಮುಖ ಆಕರ್ಷಣೆಗಳಾಗಿ ಹೊಸ ಬೆಳೆ ತಳಿಗಳ ಪ್ರಾತ್ಯಕ್ಷಿಕೆ, ನೈಸರ್ಗಿಕ ಮತ್ತು ಸಾವಯವ ಕೃಷಿ ಪದ್ಧತಿ, ಹೈಟೆಕ್ ತೋಟಗಾರಿಕೆ, ನಗರ ಕೃಷಿ, ತಾರಸಿ ಮತ್ತು ಲಂಬ ತೋಟಗಾರಿಕೆ, ಅಣಬೆ ಬೇಸಾಯ, ಸಿರಿಧಾನ್ಯಗಳು, ಗೋಡಂಬಿ ಕೃಷಿ ಹಾಗೂ ಮೌಲ್ಯವರ್ಧನೆ, ಕೃಷಿ ಯಂತ್ರೋಪಕರಣಗಳು, ಆಧುನಿಕ ಎಂಜಿನಿಯರಿಂಗ್ ಮತ್ತು ರೋಬೋಟಿಕ್ಸ್ ಪ್ರದರ್ಶನ ಏರ್ಪಡಿಸಲಾಗಿದೆ. ಜತೆಗೆ ರೈತರು ಮತ್ತು ವಿಜ್ಞಾನಿಗಳ ನೇರ ಸಂವಾದ ನಡೆಯಲಿದೆ.
ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಆರು ಜಿಲ್ಲೆಗಳ 12 ಮಂದಿ ಪ್ರಗತಿಪರ ರೈತರು ಹಾಗೂ ರೈತ ಮಹಿಳೆಯರಿಗೆ ಜಿಲ್ಲಾಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ರೈತರು, ಕೃಷಿ ಆಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮೇಳದ ಪ್ರಯೋಜನ ಪಡೆದುಕೊಳ್ಳುವಂತೆ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶನಾಲಯ ಕೋರಿದೆ.
ಶಿವಮೊಗ್ಗದಲ್ಲಿ ಅ.30 ರಿಂದ ನಾಲ್ಕು ದಿನಗಳ ಕೃಷಿ ಮತ್ತು ತೋಟಗಾರಿಕೆ ಮೇಳ
Date:
