ಕೃಷಿ ಘಟಕ, ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಶಿವಮೊಗ್ಗ ಕಛೇರಿ ವತಿಯಿಂದ ಕಾಡಾ ಅಧ್ಯಕ್ಷರಾದ ಡಾ.ಕೆ.ಪಿ. ಅಂಶುಮಂತ್ ರವರ ಅಧ್ಯಕ್ಷತೆಯಲ್ಲಿ ಅಚ್ಚಕಟ್ಟು ಭಾಗದ ರೈತರಿಗೆ ಕೃಷಿ ಸಂಬಂಧಿತ ಮಾಹಿತಿಯನ್ನು ಸುಲಭವಾಗಿ ತಲುಪಿಸುವ ಉದ್ದೇಶದಿಂದ ಅಡಕೆಯಲ್ಲಿ ನೀರು ನಿರ್ವಹಣೆ ಹಾಗೂ ಸಮಗ್ರ ಪೋಷಕಾಂಶ ನಿರ್ವಹಣೆ ತರಬೇತಿಯನ್ನುonline ನಲ್ಲಿ Google Meet ಮುಖಾಂತರ ಹಮ್ಮಿಕೊಳ್ಳಲಾಗಿತ್ತು.
ಮಾನ್ಯ ಅಧ್ಯಕ್ಷರು ಮಾತನಾಡುತ್ತಾ – ರೈತರು ಬರಗಾಲದಂತಹ ಸನ್ನಿವೇಶಗಳಲ್ಲಿ ಅಡಿಕೆ ತೋಟಗಳಲ್ಲಿ ನಿಯಮಿತವಾಗಿ ನೀರಿನ ನಿರ್ವಹಣೆ, ವೈಜ್ಞಾನಿಕವಾಗಿ ರಸಗೊಬ್ಬರಗಳ ನಿರ್ವಹಣೆ, ಹೆಚ್ಚಿನದಾಗಿ ಸಾವಯವ ಗೊಬ್ಬರಗಳ ಬಳಕೆ, ರೈತರು ಬಹು ಬೆಳೆ ಮಾದರಿಯನ್ನು ಅನುಸರಿಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕು ಹಾಗೂ ನೀರನ್ನು ಮಿತವಾಗಿ ಬಳಸಿ ಆಧುನಿಕ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ನೀರು ಮತ್ತು ಗೊಬ್ಬರಗಳನ್ನು ವೈಜ್ಞಾನಿಕವಾಗಿ ಬಳಸುವುದರಿಂದ ಕೃಷಿ ಉತ್ಪಾದಕತೆ ಹೆಚ್ಚಿಸಲು ಹಾಗೂ ವಿವಿಧ ರೀತಿಯಲ್ಲಿ ಅಭಿವೃದ್ಧಿಗಳನ್ನು ಸಾಧಿಸಿ ಆರ್ಥಿಕವಾಗಿ ಸಬಲರಾಗಿ ಮುನ್ನಡೆಯಬೇಕು ಎಂದು ಅಭಿಪ್ರಾಯಿಸಿದರು.
ಡಾ. ಬಸವನಗೌಡ, ವಿಜ್ಞಾನಿಗಳು ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ ರವರು ನೀರಿನ ಸಮರ್ಪಕ ಬಳಕೆ, ಹನಿ ನೀರಾವರಿ ಮತ್ತು ತುಂತುರು ನೀರಾವರಿ ಪದ್ಧತಿಗಳ ಅಳವಡಿಕೆ, ಮಣ್ಣಿನ ತೇವಾಂಶ ಸಂರಕ್ಷಣೆ ಹಾಗೂ ನೀರಿನ ದಕ್ಷ ಬಳಕೆಯಿಂದ ಕೃಷಿಯಲ್ಲಿ ನೀರಿನ ಉಳಿತಾಯದ ಜೊತೆಗೆ ಬೆಳೆಗಳ ಬೆಳವಣಿಗೆಗೆ ಸಹಕಾರಿಯಾಗುವುದರ ಜೊತೆಗೆ ಅದೇ ರೀತಿ ಸಮಗ್ರ ಪೋಷಕಾಂಶ ನಿರ್ವಹಣೆಯಡಿ ಸಮತೋಲನಗೊಳಿಸಿದ ರಸಗೊಬ್ಬರ ಬಳಕೆ, ಜೈವಿಕ ಮತ್ತು ಸಾವಯವ ಗೊಬ್ಬರಗಳ ಬಳಕೆ, ಮಣ್ಣಿನ ಆರೋಗ್ಯ ಕಾಪಾಡುವುದು ಹಾಗೂ ಉತ್ತಮ ಕೃಷಿ ಪದ್ಧತಿಗಳ ಅನುಸರಣೆ ಕುರಿತು ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಕಾಡಾ ಆಡಳಿತಾಧಿಕಾರಿಗಳಾದ, ಶ್ರೀ.ಸತೀಶ್ ಆರ್ ರವರು ರೈತರಿಗೆ ಕಾಡಾ ಪ್ರಾಧಿಕಾರದಿಂದ ಈ ರೀತಿಯಾಗಿ ತರಬೇತಿಗಳನ್ನು ನಿಯತವಾಗಿ ನಡೆಸಲಾಗುವುದು. ಸದರಿ ತರಬೇತಿಗಳ ಪ್ರಯೋಜನವನ್ನು ಅಚ್ಚುಕಟ್ಟು ಭಾಗದ ರೈತರು ಪಡೆದುಕೊಳ್ಳಲು ಕೋರಿದರು.
ಶ್ರೀ.ಶ್ರೀನಿವಾಸ ಚಿಂತಾಲ್ ವಿ ಭೂ ಅಭಿವೃದ್ಧಿ ಅಧಿಕಾರಿ(ಕೃಷಿ), ರವರು ತರಬೇತಿಯ ರೂಪುರೇಷಗಳನ್ನು ಸಿದ್ದಪಡಿಸಿ ತರಬೇತಿಯಲ್ಲಿ ರೈತರೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಶ್ರೀ.ಪ್ರಶಾಂತ್ ಕೆ ಭೂ ಅಭಿವೃದ್ದಿ ಅಧಿಕಾರಿ(ತಾಂತ್ರಿಕ) ಹಾಗೂ ಉಪಆಡಳಿತಾಧಿಕಾರಿಗಳು, ಡಾ. ನಾಗೇಶ್ ಎಸ್ ಡೋಂಗರೆ ಭೂ ಅಭಿವೃದ್ಧಿ ಅಧಿಕಾರಿ(ಸಹಕಾರ), ಶ್ರೀ.ನಾಗೇಂದ್ರ ರಾವ್ ವೈ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಅಚ್ಚುಕಟ್ಟು ಭಾಗದ ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ರೈತರು ಭಾಗವಹಿಸಿದ್ದರು.
