Thursday, October 8, 2026
Thursday, October 8, 2026

ಸಂಚಾರಿ ನಿಯಮ ಪಾಲನೆ ಪ್ರತಿಯೊಬ್ಬರ ನಾಗರಿಕ ಕರ್ತವ್ಯ: ನ್ಯಾ. ಸಂತೋಷ್

Date:

ಒಂದು ಕ್ಷಣದ ವೇಗವನ್ನು ಆನಂದಿಸಲು ಬದುಕನ್ನೆ ಬಲಿಕೊಡುವುದು ಬೇಡ ಎಂದು ಜಿಲ್ಲಾ ಹಿರಿಯ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ. ಸಂತೋಷ್ ಅವರು ಅಭಿಪ್ರಾಯಪಟ್ಟರು.

ಶಿವಮೊಗ್ಗ ನಗರದ ಗಂಗೋತ್ರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಗಂಗೋತ್ರಿ ಪದವಿ ಪೂರ್ವ ಕಾಲೇಜು, ರೋಟರಿ ಕ್ಲಬ್ ಶಿವಮೊಗ್ಗ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಭಾಗಿತ್ವದಲ್ಲಿ ನಡೆದ ರಸ್ತೆ ಸುರಕ್ಷತಾ ಅಭಿಯಾನ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವ ಜನಾಂಗ ವಿವೇಚನಗೆ ಒಳಪಡದೆ ರಸ್ತೆಯ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದೆ. ಇದರಿಂದ ಹೆಚ್ಚು ಅನಾಹುತಗಳು ಸಂಭವಿಸುತ್ತಿವೆ. ರಸ್ತೆ ನಿಯಮಗಳನ್ನು ಪಾಲಿಸುವುದು ನಾಗರೀಕ ಕರ್ತವ್ಯ ಎಂಬುದನ್ನು ಎಲ್ಲರು ಮನಗಾಣಬೇಕು ಎಂದು ಹೇಳಿದರು.

ದೇಶದಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸುತ್ತಿರುವುದು ರಸ್ತೆ ಅಪಘಾತಗಳಿಂದಲೇ ಎಂದು ಅಂಕಿ ಅಂಶಗಳ ಸಮೇತ ವಿವರಣೆ ನೀಡಿದ ಅವರು, ಪ್ರತಿ ವರ್ಷ ಇತರ ಕಾಯಿಲೆಗಳಿಂದ ಸಾವು ಸಂಭವಿಸುವುದು ಕಡಿಮೆ. ಅಪಘಾತಗಳ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ನಮ್ಮಲ್ಲಿನ ಸಂಚಾರದ ಅರಿವಿನ ಕೊರತೆ ಎಂದು ಅಭಿಪ್ರಾಯಪಟ್ಟರು.

ಶಿಕ್ಷಿತರೇ ಸಂಚಾರಿ ನಿಯಮಗಳನ್ನು ಪಾಲಿಸದೇ ಇರುವುದು ಹೆಚ್ಚಾಗುತ್ತಿದೆ. ಅವರಿಗೆ ಸಂಚಾರಿ ನಿಯಮಗಳ ಹಾಗೂ ನಿಯಮಗಳ ಉಲ್ಲಂಘನೆಗೆ ವಿಧಿಸಲಾಗುವ ದಂಡಗಳ ಬಗ್ಗೆ ಮಾಹಿತಿ ಕೊರತೆ ಇದೆ. ಅದ್ದರಿಂದ ಎಲ್ಲ ಶಾಲಾ ಕಾಲೇಜುಗಳಲ್ಲಿ ರಸ್ತೆ ಸುರಕ್ಷತೆಯ ಮಾಹಿತಿ ನೀಡಲು ಪ್ರಾಧಿಕಾರ ಪ್ರಯತ್ನ ಮಾಡುತ್ತಿದೆ ಎಂದು ಅವರು ತಿಳಿಸಿದರು.

ಅಪಘಾತ ಸಂಭವಿಸಿದ ಅನಂತರದಲ್ಲಿ ಆ ವ್ಯಕ್ತಿಯ ಕುಟುಂಬದ ಪರಿಸ್ಥೀತಿಗಳ ಕುರಿತು ಯಾರೂ ಯೋಚಿಸುವುದಿಲ್ಲ. ಬಹುತೇಕ ಸಂದರ್ಭದಲ್ಲಿ ಅಪಘಾತಕ್ಕೆ ಒಳಗಾದ ಕುಟುಂಬಗಳು ಅರ್ಥಿಕವಾಗಿ ಸಾಕಷ್ಟು ಸಂಕಷ್ಟಕ್ಕೆ ಒಳಗಾಗುತ್ತವೆ. ಸಾಮಾಜಿಕವಾಗಿ ಹಾಗೂ ಮಾನಸಿಕವಾಗಿ ಆ ಕುಟುಂಬಗಳ ಪರಿಸ್ಥಿತಿ ಶೋಚನೀಯವಾಗಿರುತ್ತದೆ. ಇಂತಹ ಅನೇಕ ಪ್ರಕರಣಗಳನ್ನು ತಾವು ಕಣ್ಣಾರೆ ನೋಡಿದ್ದು, ಅವಸರ ಅಪಘಾತಕ್ಕೆ ಕಾರಣವಾಗುತ್ತದೆ ಎಂಬ ಅಂಶವನ್ನು ವಿದ್ಯಾರ್ಥೀಗಳಿಗೆ ಹಲವು ಪ್ರಸಂಗಗಳ ಮೂಲಕ ಮನವರಿಕೆ ಮಾಡಿದರು.

ಅಪಘಾತ ಸಂಭವಿಸಿದಾಗ ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಗಳಿಗೆ ಸಹಾಯ ಮಾಡಿದರೆ ಯಾವುದೇ ಅಪರಾಧವಾಗುವುದಿಲ್ಲ. ಬದಲಿಗೆ ಸಹಾಯ ಮಾಡಿದ ವ್ಯಕ್ತಿಯ ಪರವಾಗಿ ಕಾನೂನು ಕೆಲಸ ಮಾಡುತ್ತದೆ, ಅವರಿಗೆ ರಕ್ಷಣೆ ನೀಡುತ್ತದೆ. ಅದ್ದರಿಂದ ಅಪಘಾತ ಸಂಭವಿಸಿದಾಗ ರೀಲ್ಸ್ ಮಾಡುವ ಬದಲು ರಿಯಲ್ ಹೀರೋಗಳಾಗಿ ವರ್ತನೆ ಮಾಡಿ ಎಂದು ಸಲಹೆ ನೀಡಿದರು.

ಸಂಚಾರಿ ನಿಯಮಗಳನ್ನು ಪಾಲಿಸಬೇಕಾದಾಗ ಅದನ್ನು ನಿರ್ವಹಿಸುವ ಪೊಲೀಸ್ ಅಧಿಕಾರಿಗಳ ಮೇಲೆ ದುರ್ವತನೆ ಅಥವಾ ಅಸಹಕಾರ ತೋರಿದರೆ ಕಾನೂನಿನ ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳುವ ಎಲ್ಲ ಅವಕಾಶಗಳು ನ್ಯಾಯಾಲಯಗಳಿಗೆ ಇದೆ. ಅದ್ದರಿಂದ ಸಂಚಾರಿ ನಿರ್ವಹಣೆಯಲ್ಲಿ ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎಂದು ಮನವರಿಕೆಮಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ರೋಟರಿ ಕ್ಲಬ್ ಶಿವಮೊಗ್ಗದ ಅಧ್ಯಕ್ಷ ಬಿ.ಗೋಪಿನಾಥ ಅವರು ಮಾತನಾಡಿ, ನಗರದಲ್ಲಿ ಸಂಚಾರಿ ವ್ಯವಸ್ಥೆಯನ್ನು ಅರಿವು ಮೂಡಿಸಲು ಪಾರ್ಕ್ ನಿರ್ಮಾಣ ಮಾಡಲು ರೋಟರಿ ಕ್ಲಬ್ ಉದ್ದೇಶಿಸಿದೆ. ಇದಕ್ಕೆ ೩೦ ಲಕ್ಷ ರೂ. ಅಂದಾಜು ವೆಚ್ಚವಾಗಲಿದೆ. ಅದಕ್ಕೆ ಬೇಕಾದ ನೆರವನ್ನು ಜಿಲ್ಲಾಡಳಿತದ ಕಡೆಯಿಂದ ನೀಡಬೇಕೆಂದು ನ್ಯಾಯಮೂರ್ತಿಗಳಲ್ಲಿ ಕೋರಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಂಗೋತ್ರಿ ಪದವಿ ಪೂರ್ವ ಕಾಲೇಜಿನ ನಿರ್ದೇಶಕ ಸುಬ್ರಮಣ್ಯಸ್ವಾಮಿ ಮಾತನಾಡಿ, ರಸ್ತೆ ಸಂಚಾರದ ಅರಿವು ಕಾಲೇಜಿನ ವಿದ್ಯಾರ್ಥಿಗಳಿಗೆ ಅವಶ್ಯಕವಾಗಿ ನೀಡಬೇಕಾಗಿದೆ. ಮುಂದಿನ ದಿನಗಳಲ್ಲಿ ಅವರು ಅದರ ಬಗ್ಗೆ ಹೆಚ್ಚು ಜಾಗೃತರಾಗಿ ಇರುವಂತೆ ಮಾಡುವುದು ನಮ್ಮದೇ ಕರ್ತವ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಗಂಗೋತ್ರಿ ಪದವಿ ಪೂರ್ವ ಕಾಲೇಜಿನ ಜಂಟಿ ಕಾರ್ಯದರ್ಶಿ ರಾಕೇಶಗೌಡ ಮಾತನಾಡಿ, ರೋಟರಿ ಕ್ಲಬ್ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಕೆಲಸ ಯುವಜನರನ್ನು ಎಚ್ಚರಗೊಳಿಸುವಂತಹ ಅಭಿಯಾನ ಮಾಡುತ್ತಿದೆ. ಸಂಚಾರಿ ನಿಯಮಗಳ ಅರಿವಿಲ್ಲದೆ ಅನೇಕ ಅಪಘಾತಗಳು ಸಂಭವಿಸುತ್ತಿವೆ. ಅದನ್ನು ಶಾಲಾ ಮಟ್ಟದಿಂದಲೇ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಶೈಲೆನ್ ಬಾಬು, ಗಂಗೋತ್ರಿ ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿ ಜಗದೀಶ, ರೋಟರಿ ಕ್ಲಬ್ ಸದಸ್ಯರಾದ ವೀರಣ್ಣಹುಗ್ಗಿ, ಸಂತೋಷ, ನವ್ಯಶ್ರೀ ನಾಗೇಶ್, ಸತ್ಯನಾರಾಯಣ ಉಡುಪ ಹಾಗೂ ಇತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...