ಶಿವಮೊಗ್ಗ ನಗರದ ರೋವರ್ಸ್ ಕ್ಲಬ್‌ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ರೋವರ್ಸ್ ಕ್ಲಬ್‌ನ ಗೌರವ ಕಾರ್ಯದರ್ಶಿ ಜಿ. ವಿಜಯ್ ಕುಮಾರ್ ಅವರು, ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸೆ ಹಾಗೂ ಸರಳ ಜೀವನದ ಆದರ್ಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಲಾಲ್ ಬಹದ್ದೂರ್ ಶಾಸ್ತ್ರಿಯವರು ಸರಳತೆ, ಪ್ರಾಮಾಣಿಕತೆ, ಶಿಸ್ತು ಹಾಗೂ ದೇಶಭಕ್ತಿಗೆ ಮಾದರಿಯಾಗಿದ್ದರು. ದೇಶದ ಪ್ರಗತಿಗೆ ಯುವಜನರ ಪಾತ್ರ ಮಹತ್ವದ್ದಾಗಿದ್ದು, ಮಹನೀಯರ ತತ್ವ, ಆದರ್ಶ ಮತ್ತು ದೇಶಪ್ರೇಮವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಗಾಂಧೀಜಿಯವರು ನಡೆಸಿದ ಹೋರಾಟ ಮತ್ತು ಅವರು ಸಾರಿದ ಸತ್ಯ ಹಾಗೂ ಅಹಿಂಸೆಯ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನಮಂತ್ರಿಯಾಗಿ ದೇಶದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಸ್ಮರಣೀಯವಾಗಿದ್ದು, “ಜೈ ಜವಾನ್, ಜೈ ಕಿಸಾನ್” ಎಂಬ ಘೋಷಣೆಯ ಮೂಲಕ ಸೈನಿಕರು ಮತ್ತು ರೈತರ ಮಹತ್ವವನ್ನು ದೇಶಕ್ಕೆ ಸಾರಿದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಹ ಕಾರ್ಯದರ್ಶಿ ಎಂ.ಆರ್. ಬಸವರಾಜ್ ಅವರು, ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರಂತಹ ಮಹನೀಯರ ಆದರ್ಶಗಳು ಪ್ರತಿಯೊಬ್ಬರ ಬದುಕಿಗೆ ಮಾರ್ಗದರ್ಶನ ನೀಡುತ್ತವೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ದೇಶಭಕ್ತಿಯ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಇಂತಹ ಜಯಂತಿ ಆಚರಣೆಗಳು ಪ್ರೇರಣಾದಾಯಕವಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕ ಎಸ್. ಚಿನ್ನಪ್ಪ, ಸುನಿಲ್, ಅಗಡಿ ಮಹೇಶ್, ಸತ್ಯನಾರಾಯಣ, ಅಶೋಕ್ ಸೇರಿದಂತೆ ಕ್ಲಬ್‌ನ ಸದಸ್ಯರು, ನಿರ್ದೇಶಕರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
