ರೈಲ್ವೆ ನಿಲ್ದಾಣದ ಪ್ರೀ-ಪೇಯ್ಡ್ ಆಟೋ ಕೌಂಟರ್ನಿಂದ ಟಿಕೆಟ್ ಪಡೆದು ಪ್ರಯಾಣಿಸುವ ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ, ಶಿವಮೊಗ್ಗ ಸಂಚಾರ ಪೊಲೀಸರು ಇಂದು ಬೆಳಗಿನ ಜಾವ ಅನಿರೀಕ್ಷಿತ ತಪಾಸಣೆ ನಡೆಸಿದರು.
ಸೆಪ್ಟೆಂಬರ್ 30ರಂದು ಬೆಳಗಿನ ಜಾವ 4:30ರಿಂದ ರೈಲ್ವೆ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಆಟೋ ಚಾಲಕರಿಗೆ ಪ್ರೀ-ಪೇಯ್ಡ್ ಟಿಕೆಟ್ನಲ್ಲಿ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚುವರಿ ಹಣವನ್ನು ಪ್ರಯಾಣಿಕರಿಂದ ಪಡೆಯದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಬೆಂಗಳೂರು–ತಾಳಗುಪ್ಪ ರೈಲಿನಲ್ಲಿ ಆಗಮಿಸಿದ ಪ್ರಯಾಣಿಕರು ಒಟ್ಟು 112 ಪ್ರೀ-ಪೇಯ್ಡ್ ಆಟೋ ಟಿಕೆಟ್ಗಳನ್ನು ಪಡೆದು ಪ್ರಯಾಣಿಸಿರುವುದು ಗಮನಕ್ಕೆ ಬಂದಿದೆ.
ರೈಲ್ವೆ ನಿಲ್ದಾಣದಿಂದ ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಪ್ರೀ-ಪೇಯ್ಡ್ ಕೌಂಟರ್ನಲ್ಲಿ ಟಿಕೆಟ್ ಪಡೆದು, ನಿಗದಿತ ದರದಂತೆ ಸುರಕ್ಷಿತ ಹಾಗೂ ಪಾರದರ್ಶಕವಾಗಿ ಪ್ರಯಾಣಿಸುವಂತೆ ಪೊಲೀಸರು ಜಾಗೃತಿ ಮೂಡಿಸಿದರು.
ಕಾರ್ಯಾಚರಣೆಯಲ್ಲಿ ಶಿವಮೊಗ್ಗ ಸಂಚಾರ ವೃತ್ತದ ಸಿಪಿಐ ದೇವರಾಜ್ ಟಿ.ವಿ., ಪೂರ್ವ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ನಾಗರಾಜ್ ಹೆಚ್.ಎನ್. ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಪ್ರಯಾಣಿಕರ ಹಿತವೇ ನಮ್ಮ ಆದ್ಯತೆ ಎಂಬ ಸಂದೇಶವನ್ನು ಪೊಲೀಸರು ನೀಡಿದ್ದು, ನಿಗದಿತ ದರಕ್ಕಿಂತ ಹೆಚ್ಚುವರಿ ಹಣ ವಸೂಲಿ ಮಾಡುವುದನ್ನು ತಡೆಯಲು ಮುಂದಿನ ದಿನಗಳಲ್ಲಿಯೂ ತಪಾಸಣೆ ಮುಂದುವರಿಸುವ ಸೂಚನೆ ನೀಡಿದ್ದಾರೆ.
