ಜನರ ಮನೆಬಾಗಿಲಿಗೆ ತೆರಳಿ, ಅವರ ಕಷ್ಟ-ಕಾರ್ಪಣ್ಯಗಳನ್ನು ಆಲಿಸಿ ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸುವಲ್ಲಿ ನಿರತರಾಗಿರುವ ಅಂಗನವಾಡಿ, ಆಶಾ ಹಾಗೂ ಆರೋಗ್ಯ ಕಾರ್ಯಕರ್ತರ ಶ್ರಮ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ,ಶಿವಮೊಗ್ಗ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ನೌಕರರ ಭವನದಲ್ಲಿ ಏರ್ಪಡಿಸಲಾಗಿದ್ದ ‘ರಾಷ್ಟ್ರೀಯ ಪೋಷಣ್ ಮಾಸಾಚರಣೆ’ (ಧ್ಯೇಯವಾಕ್ಯ: ನಮ್ಮ ಅಂಗನವಾಡಿ-ನಮ್ಮ ಜವಾಬ್ದಾರಿ) ಹಾಗೂ ‘ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯ ಅಭಿಯಾನ’ (ಧ್ಯೇಯವಾಕ್ಯ: ತಾಯಂದಿರ ಆರೋಗ್ಯಕ್ಕಾಗಿ ನಗದು ವರ್ಗಾವಣೆ) ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧ ಕೊರತೆಗಳು ಮತ್ತು ಕೆಲಸದ ಒತ್ತಡಗಳ ನಡುವೆಯೂ ಸಿಬ್ಬಂದಿಗಳು ಪ್ರೀತಿಯಿಂದ ಹೆಗಲಿಗೆ ಹೆಗಲು ಕೊಟ್ಟು ಕಾರ್ಯನಿರ್ವಹಿಸುತ್ತಿದ್ದಾರೆ. ನಾವು ಕಚೇರಿಗಳಲ್ಲಿ ಕುಳಿತು ಕೆಲಸ ಮಾಡುವುದು ಸಾಮಾನ್ಯ. ಆದರೆ ದಿನನಿತ್ಯ ಜನರ ಮನೆಗೆ ತೆರಳಿ ಕುಂದುಕೊರತೆಗಳನ್ನು ತಿಳಿದು ಯೋಜನೆಗಳನ್ನು ತಲುಪಿಸುವ ಮಹತ್ವದ ಕೆಲಸವನ್ನು ನೀವು ಮಾಡುತ್ತಿದ್ದೀರಿ. ಸಾರ್ವಜನಿಕರು, ಮಹಿಳೆಯರು, ಮಕ್ಕಳಲ್ಲಿ ಪೌಷ್ಟಿಕಾಂಶದ ಮಹತ್ವ, ಆರೋಗ್ಯಕರ ಜೀವನಶೈಲಿ ಮತ್ತು ಅಪೌಷ್ಟಿಕತೆಯ ನಿವಾರಣೆಯ ಬಗ್ಗೆ ಜಾಗೃತಿ ಮೂಡಿಸುವುದು, ಪೋಷಣ್ ಅಭಿಯಾನ ಸೇರಿದಂತೆ ಇಲಾಖೆಯ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಸಂತಸ ತಂದಿದೆ ಎಂದು ಶ್ಲಾಘಿಸಿದರು.
ಶಿಕ್ಷಿತರಾಗಿರಲಿ ಅಥವಾ ಅಶಿಕ್ಷಿತರಾಗಿರಲಿ, ಪ್ರತಿಯೊಬ್ಬರಿಗೂ ವಿಷಯಗಳನ್ನು ಸ್ಪಷ್ಟವಾಗಿ ಮನವರಿಕೆ ಮಾಡಿಕೊಡುವುದು ಮುಖ್ಯವಾಗಿದೆ. ನಾವು ಕಚೇರಿಗಳಲ್ಲಿ ಕುಳಿತು ಕೆಲಸ ಮಾಡುವುದು ಅಥವಾ ಕೆಲವೊಮ್ಮೆ ಸಾರ್ವಜನಿಕರ ಬಳಿ ಹೋಗಿ ಕೆಲಸ ಮಾಡುವುದು ಸಾಮಾನ್ಯ. ಆದರೆ, ದಿನನಿತ್ಯ ಪ್ರತಿಯೊಬ್ಬ ಜನರ ಮನೆಗಳಿಗೆ ತೆರಳಿ, ಅವರ ಕುಂದುಕೊರತೆಗಳನ್ನು ತಿಳಿದುಕೊಂಡು, ಅದನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ಅರ್ಹರಿಗೆ ಯೋಜನೆಗಳನ್ನು ತಲುಪಿಸುವ ಅತ್ಯಂತ ಮಹತ್ವದ ಕೆಲಸವನ್ನು ನೀವು ಮಾಡುತ್ತಿದ್ದೀರಿ” ಎಂದು ಅಂಗನವಾಡಿ, ಆಶಾ ಕಾರ್ಯಕರ್ತೆಯರ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಕೊಂಡಾಡಿದರು. ಇದೇ ವೇಳೆ, ಧಾನ್ಯಗಳು ಮತ್ತು ಹೂವುಗಳಿಂದ ಸುಂದರ ರಂಗೋಲಿ ಬಿಡಿಸಿ ಪೌಷ್ಟಿಕ ಆಹಾರ ಹಾಗೂ ಗರ್ಭಿಣಿಯರ ಆರೋಗ್ಯದ ಕುರಿತು ಜಾಗೃತಿ ಮೂಡಿಸಿದ ಸಿಬ್ಬಂದಿಗಳ ಸೃಜನಶೀಲತೆಯನ್ನು ಅವರು ಮೆಚ್ಚಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂತೋಷ್ ಎಂ.ಎಸ್. ಮಾತನಾಡಿ, “ಅಂಗನವಾಡಿಗಳು ಪ್ರತಿ ಮನೆಯ ಅಂಗಳದAತೆ. ಸಮಗ್ರ ಶಿಕ್ಷಣ ಮತ್ತು ಪೋಷಕಾಂಶಗಳನ್ನು ನೀಡುವ ಪವಿತ್ರ ಸ್ಥಳಗಳು, ಇವು ಮಕ್ಕಳ ದೇವಾಲಯಗಳಿದ್ದಂತೆ. ಕೆಲವರ ದುಶ್ಚಟಗಳಿಗೆ ಈ ಪವಿತ್ರ ಸ್ಥಳಗಳು ದುರ್ಬಳಕೆಯಾಗಬಾರದು. ಅದು ಆಕ್ಷೇಪಾರ್ಹ ಮತ್ತು ದಂಡನೀಯ ಎಂದು ಎಚ್ಚರಿಸಿದರು. ‘ನಮ್ಮ ಅಂಗನವಾಡಿ ನಮ್ಮ ಜವಾಬ್ದಾರಿ’ ಎಂಬ ಸಂದೇಶ ಸಾರ್ವಜನಿಕರಿಗೆ ತಲುಪಬೇಕು ಎಂದ ಅವರು, ಪೌಷ್ಟಿಕ ಆಹಾರದೊಂದಿಗೆ ಪೌಷ್ಟಿಕ ಆಲೋಚನೆಗಳನ್ನೂ ಮನಸ್ಸಿಗೆ ನೀಡಬೇಕಿದೆ ಎಂದರು.
ಅಪೌಷ್ಟಿಕತೆ ಇಳಿಕೆ: ತೀವ್ರ ತೀವ್ರತರ ಅಪೌಷ್ಟಿಕತೆ (ಎಸ್ಎಎಂ) ಹೊಂದಿದ್ದ ಮಕ್ಕಳ ಸಂಖ್ಯೆ 2025 ರಲ್ಲಿ 118 ಇದ್ದು, ನಿರಂತರ ಪೋಷಣೆಯ ಫಲವಾಗಿ ಮಾರ್ಚ್ 2026 ರ ವೇಳೆಗೆ 53 ಕ್ಕೆ ಇಳಿಕೆಯಾಗಿದೆ.
ವೈದ್ಯಕೀಯ ಆರೈಕೆ: ಜಿಲ್ಲೆಯಲ್ಲಿ 7 ಎನ್ಆರ್ಸಿ ಕೇಂದ್ರಗಳಿದ್ದು ಕೇಂದ್ರಗಳ ಮೂಲಕ ಮಕ್ಕಳಿಗೆ ಅಗತ್ಯ ವೈದ್ಯಕೀಯ ವ್ಯವಸ್ಥೆ ಮತ್ತು ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಪೋಕ್ಸೋ ಹಾಗೂ ಬಾಲ್ಯವಿವಾಹ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 269 ಪ್ರಕರಣಗಳನ್ನು ದಾಖಲಿಸಿಕೊಂಡು ಸೂಕ್ತ ಕ್ರಮ ವಹಿಸಲಾಗಿದೆ. ಸಖಿ ಒನ್ ಸ್ಟಾಪ್ ಸೆಂಟರ್ನಲ್ಲಿ ನೋಂದಾಯಿತ 418 ಪ್ರಕರಣಗಳಲ್ಲಿ 6 ಪ್ರಕರಣಗಳು ಮಾತ್ರ ಬಾಕಿ ಉಳಿದಿದ್ದು, ಉಳಿದೆಲ್ಲವಕ್ಕೂ ಪರಿಹಾರ ಒದಗಿಸಲಾಗಿದೆ. ಸೌಲಭ್ಯಕ್ಕಾಗಿ ಮಹಿಳಾ ಪೊಲೀಸ್ ಠಾಣೆ ಹಾಗೂ ಸಾಂತ್ವನ ಕೇಂದ್ರಗಳು ಸಕ್ರಿಯವಾಗಿವೆ ಎಂದು ತಿಳಿಸಿದ ಅವರು ಅಂಗನವಾಡಿ, ಆಶಾ ಸೇರಿದಂತೆ ನೌಕರರು, ಸಿಬ್ಬಂದಿಗಳ ನಿರಂತರ ಪರಿಶ್ರಮದಿಂದ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಾಣಲಾಗುತ್ತಿದೆ ಎಂದು ಶ್ಲಾಘಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಭಾರತಿ ಆರ್. ಬಣಕಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಗರ್ಭಿಣಿಯರು, ಬಾಣಂತಿಯರು, ನವಜಾತ ಶಿಶುಗಳು ಹಾಗೂ 6 ವರ್ಷದೊಳಗಿನ ಮಕ್ಕಳಲ್ಲಿ ಕಂಡುಬರುವ ಅಪೌಷ್ಟಿಕತೆ, ರಕ್ತಹೀನತೆ ಮತ್ತು ಬೆಳವಣಿಗೆ ಕುಂಠಿತವನ್ನು ತಡೆಯುವುದು. ಸ್ಥಳೀಯವಾಗಿ ಸಿಗುವ ಪೌಷ್ಟಿಕ ಆಹಾರ ಧಾನ್ಯಗಳು, ಹಣ್ಣು-ಹಂಪಲು ಮತ್ತು ತರಕಾರಿಗಳ ಬಳಕೆಯ ಬಗ್ಗೆ ಅರಿವು ಮೂಡಿಸುವುದು. ನೈರ್ಮಲ್ಯ, ಶುದ್ಧ ಕುಡಿಯುವ ನೀರು, ಸರಿಯಾದ ಕೈ ತೊಳೆಯುವ ವಿಧಾನ ಹಾಗೂ ಎದೆಹಾಲುಣಿಸುವಿಕೆಯ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಲೆ, ಕ್ರೀಡೆ, ನಾವೀನ್ಯತೆ ಹಾಗೂ ತಾಂತ್ರಿಕ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೊತೆಗೆ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನಡೆಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮೆಗ್ಗಾನ್ ಬೋಧನಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಬಿ.ಡಿ. ತಿಮ್ಮಪ್ಪ ಮಾಡಿ ಮಕ್ಕಳ ಹಾರೈಕೆಗಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಎನ್ಐಸಿಯು, ಎನ್ಆರ್ಸಿ ಹಾಗೂ ಎದೆಹಾಲಿನ ಕೇಂದ್ರಗಳಿದ್ದು, ಉತ್ತಮ ಸೇವೆ ನೀಡುತ್ತಿವೆ ಎಂದು ತಿಳಿಸಿದರು, ಶಿವಮೊಗ್ಗ ಸಿಮ್ಸ್ನ ಮಕ್ಕಳ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಹ್ಯಾಳ್ಯಾದ ಸುನಿತಾ ಸಿ. ಪರಶುರಾಮಪ್ಪ ವಿಶೇಷ ಉಪನ್ಯಾಸ ನೀಡಿದರು., ಡಿಹೆಚ್ಓ ಡಾ. ನಟರಾಜ್, ಜಿಲ್ಲಾ ನಿರೂಪಣಾಧಿಕಾರಿ ಕವಿತಾ ಟಿ.ಎನ್., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಂಗಾಬಾಯಿ ಸಿ. ಸೇರಿದಂತೆ ಹಲವು ಅಧಿಕಾರಿಗಳು, ಸಿಬ್ಬಂದಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಜನರ ಮನೆಬಾಗಿಲಿಗೆ ತೆರಳಿ ಕಷ್ಟ-ಕಾರ್ಪಣ್ಯ ಆಲಿಸುವ ಅಂಗನವಾಡಿ-ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘನೀಯ : ಪ್ರಭುಲಿಂಗ ಕವಳಿಕಟ್ಟಿ
Date:
