ಪಶುವೈದ್ಯಕೀಯ ಚಿಕಿತ್ಸಾ ಕ್ಷೇತ್ರದಲ್ಲಿ ಆಯುರ್ವೇದ ಹಾಗೂ ಗಿಡಮೂಲಿಕೆಗಳ ಬಳಕೆಯನ್ನು ಅಳವಡಿಸಿಕೊಳ್ಳುವ ಕುರಿತು ರಾಜ್ಯದ 25 ಜಿಲ್ಲೆಗಳಿಂದ ಆಗಮಿಸಿದ 73 ಪಶುವೈದ್ಯಾಧಿಕಾರಿಗಳಿಗೆ ಮಾಹಿತಿ ಹಾಗೂ ತರಬೇತಿ ಕಾರ್ಯಾಗಾರವನ್ನು ಕೋಣಂದೂರು ರೋಟರಿ ಕ್ಲಬ್ ವತಿಯಿಂದ ಆಯೋಜಿಸಲಾಯಿತು.
ಖ್ಯಾತ ಪಶುವೈದ್ಯರಾದ ಡಾ. ಪಣಿರಾಜ್ ಅವರ ಮಾರ್ಗದರ್ಶನದಲ್ಲಿ, ಸಿದ್ಧಿವಿನಾಯಕ ಯುವಕ ಸಂಘ, ಹುಂಚ ಮಠ ಹಾಗೂ ಲಯನ್ಸ್ ಕ್ಲಬ್, ತೀರ್ಥಹಳ್ಳಿ ಇವರ ಸಹಯೋಗದೊಂದಿಗೆ ಸಮೀಪದ ನೆಸ್ಟ್ ಹೋಮ್ಸ್ಟೇನಲ್ಲಿ ಮೂರು ದಿನಗಳ ಕಾರ್ಯಕ್ರಮ ನಡೆಯಿತು.
ಕಾರ್ಯಾಗಾರದಲ್ಲಿ ವಿವಿಧ ಗಿಡಮೂಲಿಕೆಗಳ ಮಹತ್ವ, ಅವುಗಳ ಔಷಧೀಯ ಗುಣಗಳು ಹಾಗೂ ಪಶು ಚಿಕಿತ್ಸೆಯಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವ ವಿಧಾನಗಳ ಕುರಿತು ತಜ್ಞರಿಂದ ಮಾಹಿತಿ ನೀಡಲಾಯಿತು. ಪ್ರಸ್ತುತ ಬಳಕೆಯಲ್ಲಿರುವ ಚಿಕಿತ್ಸಾ ಪದ್ಧತಿಗಳಿಂದ ಮಾನವ ಆರೋಗ್ಯ, ಪರಿಸರ ಹಾಗೂ ಗೊಬ್ಬರದ ಮೂಲಕ ಕೃಷಿ ಬೆಳೆಗಳ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ವಿಜ್ಞಾನಿಗಳೊಂದಿಗೆ ಸುದೀರ್ಘ ಚರ್ಚೆ ನಡೆಯಿತು.
ಪಶು ಚಿಕಿತ್ಸೆಯಲ್ಲಿ ಸಾಂಪ್ರದಾಯಿಕ ಜ್ಞಾನ ಹಾಗೂ ಆಯುರ್ವೇದ ಪದ್ಧತಿಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಬಳಸುವ ಅಗತ್ಯದ ಕುರಿತು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಮುಂದಿನ ದಿನಗಳಲ್ಲಿ ಈ ಚಿಕಿತ್ಸಾ ಪದ್ಧತಿಗೆ ‘ಪಶುವೇದ’ ಎಂಬ ಹೆಸರನ್ನು ನೀಡಿ, ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿ ಪಶುವೈದ್ಯಕೀಯ ಚಿಕಿತ್ಸೆಯಲ್ಲಿ ಅಳವಡಿಸಿಕೊಳ್ಳುವ ಚಿಂತನೆ ಕೂಡ ವ್ಯಕ್ತವಾಯಿತು.
ಮನುಕುಲ ಹಾಗೂ ಸಸ್ಯಸಂಕುಲದ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಪರ್ಯಾಯ ಚಿಕಿತ್ಸಾ ವಿಧಾನಗಳ ಕುರಿತು ಹೆಚ್ಚಿನ ಸಂಶೋಧನೆ ಹಾಗೂ ಜಾಗೃತಿ ಅಗತ್ಯವಿದೆ ಎಂದು ಕಾರ್ಯಕ್ರಮದಲ್ಲಿ ಚರ್ಚಿಸಲಾಯಿತು.
ಕಾರ್ಯಕ್ರಮವನ್ನು ಮಾನ್ಯ ಶಾಸಕರು ಉದ್ಘಾಟಿಸಿದರು. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು, ಅಗತ್ಯ ಕ್ರಮಗಳಿಗೆ ಪ್ರೋತ್ಸಾಹ ನೀಡುವ ಭರವಸೆಯನ್ನು ಶಾಸಕರು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ಸಂದೇಶ್ ಕುಮಾರ್ ಕೆ.ಎಂ., ಕಾರ್ಯದರ್ಶಿ ಸುಧೀರ್ ಕುಮಾರ್ ಶೆಟ್ಟಿ, ಪ್ರೊ. ಎಚ್.ಎಂ. ಸುರೇಶ್, ಸದಾಶಿವ ಕೆ.ಆರ್., ಝೆಡ್.ಎಲ್. ವಿಷ್ಣುಮೂರ್ತಿ ಎಸ್.ಎಂ., ಬಿ.ಟಿ. ಈಶ್ವರಪ್ಪ, ಎಂ.ಟಿ. ಪುಟ್ಟಪ್ಪ, ಸಚಿನ್ ಸುರೇಶ್, ಎಸ್. ರಂಜನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
