ಅಲ್ಪಸಂಖ್ಯಾತ ಸಮುದಾಯದ ಕುಶಲಕರ್ಮಿಗಳ ಕಲೆ, ಕೌಶಲ್ಯ, ಕರಕುಶಲ ಉತ್ಪನ್ನಗಳು ಹಾಗೂ ಉದ್ಯಮಶೀಲತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಸೆಪ್ಟೆಂಬರ್ 26 ರಿಂದ 30 ರವರೆಗೆ ‘ಕರ್ನಾಟಕ ಪರ್ವ-2026’ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಬೆಂಗಳೂರಿನ ಅರಮನೆ ಮೈದಾನದ ‘ತ್ರಿಪುರ ವಾಸಿನಿ’ಯಲ್ಲಿ ಆಯೋಜಿಸಲಾಗಿದೆ.
ಸೆಪ್ಟೆಂಬರ್ 26 ರಂದು ಬೆಳಿಗ್ಗೆ 11.00 ಗಂಟೆಗೆ ಮಾನ್ಯ ಮುಖ್ಯಮಂತ್ರಿಗಳು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನ್ಯ ಸಚಿವರು ಉಪಸ್ಥಿತರಿರಲಿದ್ದಾರೆ.
180ಕ್ಕೂ ಹೆಚ್ಚು ಸ್ಟಾಲ್ಗಳು: ರಾಜ್ಯದ ವಿವಿಧ ಭಾಗಗಳ ಅಲ್ಪಸಂಖ್ಯಾತ ಕುಶಲಕರ್ಮಿಗಳು ತಯಾರಿಸಿದ ವಿಶಿಷ್ಟ ಕರಕುಶಲ ಹಾಗೂ ಸಾಂಪ್ರದಾಯಿಕ ಉತ್ಪನ್ನಗಳನ್ನು ಒಂದೇ ವೇದಿಕೆಯಲ್ಲಿ ಪ್ರದರ್ಶಿಸಿ, ವಿಶಾಲ ಮಾರುಕಟ್ಟೆ ಮತ್ತು ನೇರ ಗ್ರಾಹಕ ಸಂಪರ್ಕ ಕಲ್ಪಿಸಲಾಗುವುದು.
ಕುಶಲಕರ್ಮಿಗಳಿಗೆ ಇ-ಕಾಮರ್ಸ್, ಡಿಜಿಟಲ್ ಮಾರ್ಕೆಟಿಂಗ್, ಆಧುನಿಕ ವ್ಯಾಪಾರ ಪದ್ಧತಿಗಳು, ಮಾರುಕಟ್ಟೆ ವಿಸ್ತರಣೆ ಮತ್ತು ಉದ್ಯಮ ಸಂಪರ್ಕಕುರಿತು ಜ್ಞಾನವರ್ಧಕ ತರಬೇತಿ ಹಾಗೂ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕರಕುಶಲ ಉತ್ಪನ್ನಗಳ ಮಾರಾಟದ ಜೊತೆಗೆ ಆಕರ್ಷಕ ಸಾಂಸ್ಕೃತಿಕ ಸಂಜೆಗಳು ಹಾಗೂ ವೈವಿಧ್ಯಮಯ ಆಹಾರ ಮೇಳವನ್ನು ಆಯೋಜಿಸಲಾಗಿದೆ.
ಉದ್ದೇಶ:
“ಕಲೆ ಉಳಿಯಲಿ, ಕೌಶಲ್ಯ ಬೆಳೆಯಲಿ, ಕುಶಲಕರ್ಮಿಗಳ ಬದುಕು ಸಮೃದ್ಧವಾಗಲಿ” ಹಾಗೂ “ಕರ್ನಾಟಕ ಪರ್ವ – ಸ್ವಾಭಿಮಾನ ಮತ್ತು ಸ್ವಾವಲಂಬನೆಯ ದಾರಿಯಲ್ಲಿ” ಎಂಬ ಆಶಯ ಮತ್ತು ಸಂದೇಶದೊಂದಿಗೆ ಈ ಕಾರ್ಯಕ್ರಮ ರೂಪುಗೊಂಡಿದೆ. ಕುಶಲಕರ್ಮಿಗಳ ಆರ್ಥಿಕ ಸ್ವಾವಲಂಬನೆ ಹೆಚ್ಚಿಸುವುದು ಮತ್ತು ಸಾಂಪ್ರದಾಯಿಕ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಸಾರ್ವಜನಿಕರು, ಕಲಾಭಿಮಾನಿಗಳು, ಉದ್ಯಮಿಗಳು ಹಾಗೂ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸಬೇಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೋರಿದ್ದಾರೆ.
ಸೆಪ್ಟೆಂಬರ್ 26 ರಿಂದ ಬೆಂಗಳೂರಿನಲ್ಲಿ ‘ಕರ್ನಾಟಕ ಪರ್ವ-2026’ ಬೃಹತ್ ಉತ್ಸವ
Date:
