ದೇವಸ್ಥಾನದ ಹುಂಡಿಯಲ್ಲಿದ್ದ ಹಣವನ್ನು ಇಲಿಗಳು ಕಡಿದು ನುಚ್ಚುನೂರು ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗದ ಶಾಂತಿನಗರದ ಬಂಗಾರಪ್ಪ ಬಡಾವಣೆಯ ಶ್ರೀ ವಿಜಯ ಗಣಪತಿ ದೇವಸ್ಥಾನದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ದೇವಸ್ಥಾನದ ಹುಂಡಿ ತೆರೆಯುವ ವೇಳೆ ಹಲವು ನೋಟುಗಳು ಇಲಿಗಳಿಂದ ಕಚ್ಚಿ ಹಾನಿಗೊಳಗಾಗಿರುವುದು ಪತ್ತೆಯಾಗಿದೆ. ಹುಂಡಿ ಎಣಿಕೆ ಸಂದರ್ಭದಲ್ಲಿ ₹100, ₹50, ₹20 ಹಾಗೂ ₹10 ಮುಖಬೆಲೆಯ ನೋಟುಗಳು ಹಾನಿಯಾಗಿರುವುದು ಕಂಡುಬಂದಿದೆ.
ಸುಮಾರು ₹5 ಸಾವಿರದಿಂದ ₹6 ಸಾವಿರ ಮೌಲ್ಯದ ಹಣ ಇಲಿಗಳಿಂದ ಹಾನಿಗೊಳಗಾಗಿರಬಹುದು ಎಂದು ಅಂದಾಜಿಸಲಾಗಿದೆ.
ಹುಂಡಿಯಲ್ಲಿ ಹಣವನ್ನು ಸುರಕ್ಷಿತವಾಗಿ ಸಂಗ್ರಹಿಸುವ ವ್ಯವಸ್ಥೆ ಹಾಗೂ ಇಲಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಮಾತುಗಳು ಕೇಳಿಬಂದಿವೆ.
