ಇತ್ತೀಚೆಗೆ ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ದಿನಾಂಕ 10ರಂದು ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿವಮೊಗ್ಗ ಇವರ ವತಿಯಿಂದ ಆಯೋಜಿಸಲಾದ ಈ ಪಂದ್ಯಾವಳಿಯಲ್ಲಿ ಸಹ್ಯಾದ್ರಿ ಶಿವಮೊಗ್ಗ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ, ವಿವಿಧ ವಿಭಾಗಗಳಲ್ಲಿ ಪದಕಗಳನ್ನು ಗಳಿಸುವ ಮೂಲಕ ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ.
ಪಂದ್ಯಾವಳಿಯಲ್ಲಿ ಪದಕಗಳನ್ನು ಗಳಿಸಿದ ಎಲ್ಲಾ ವಿಜೇತ ವಿದ್ಯಾರ್ಥಿಗಳಿಗೆ ಶಿವಮೊಗ್ಗ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹ ನಿರ್ದೇಶಕರಾದ ಶ್ರೀಯುತ ರೇಖಾ ನಾಯಕ್ ಅವರು ಅಭಿನಂದನೆ ಸಲ್ಲಿಸಿ, ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ಶುಭ ಹಾರೈಸಿದರು.
ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ಮುಂದಿನ ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದು, ಮುಂದಿನ ಹಂತದಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತರಲಿ ಎಂದು ಹಾರೈಸಲಾಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಶ್ರೀಯುತ ನವೀನ್, ಉಪಾಧ್ಯಕ್ಷರಾದ ಶ್ರೀಯುತ ಸಾಧಿಕ್, ಖಜಾಂಚಿಗಳಾದ ಶ್ರೀಯುತ ಮಂಜುನಾಥ್ ಹಾಗೂ ಅಸೋಸಿಯೇಷನ್‌ನ ಎಲ್ಲಾ ಪದಾಧಿಕಾರಿಗಳು ಪದಕ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡುವಂತೆ ಪ್ರೋತ್ಸಾಹಿಸಿದರು.
ವಿದ್ಯಾರ್ಥಿಗಳ ಈ ಸಾಧನೆಗೆ ತರಬೇತುದಾರರು, ಪೋಷಕರು ಹಾಗೂ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಮತ್ತು ಪರಿಶ್ರಮದ ಮೂಲಕ ಸಹ್ಯಾದ್ರಿ ಶಿವಮೊಗ್ಗ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್‌ನ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.
