Rotary Club of Shivamogga ಶಿವಮೊಗ್ಗ ನಗರದ ರಾಜೇಂದ್ರನಗರದ ರೋಟರಿ ಈಸ್ಟ್ ಶಾಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ವತಿಯಿಂದ ಆಯೋಜಿಸಲಾದ ತಿಂಗಳ ಕುಟುಂಬ ಸಮ್ಮಿಲನ ಸಭೆಯಲ್ಲಿ “ಸವಿನೆನಪು ಮೆಲ್ಲುಸಿರೇ ಸವಿಗಾನ – ಹಳೆಯ ಕನ್ನಡ ಚಿತ್ರಗೀತೆಗಳು” ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದೆ ಕುಮಾರಿ ಆದ್ಯ ಮಾತನಾಡಿ, ಸಂಗೀತದ ಪರಂಪರೆಯನ್ನು ಸಂರಕ್ಷಿಸುವ ಅಗತ್ಯವನ್ನು ಒತ್ತಿ ಹೇಳಿದರು. ಗಾಯಕರಾಗುವುದು ಅಷ್ಟು ಸುಲಭವಲ್ಲ. ಅದಕ್ಕಾಗಿ ನಿರಂತರ ಅಭ್ಯಾಸ, ಕಠಿಣ ಪರಿಶ್ರಮ ಹಾಗೂ ಬದ್ಧತೆ ಅಗತ್ಯ. ಗಾಯಕರಾಗ ಬಯಸುವವರು ಮತ್ತು ಈಗಾಗಲೇ ಗಾಯನ ಕ್ಷೇತ್ರದಲ್ಲಿರುವವರು ತಮ್ಮ ಕಂಠದ ಆರೈಕೆಗೆ ವಿಶೇಷ ಗಮನ ನೀಡಬೇಕು ಎಂದು ತಿಳಿಸಿದರು.
ಚಲನಚಿತ್ರ ಸಂಗೀತದ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ತಾವು ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದ ಅವರು, ಗಾನಕೋಗಿಲೆ ಎಸ್. ಜಾನಕಿ ಅವರ ಸಾಧನೆಯನ್ನು ಸ್ಮರಿಸಿದರು. ಹಲವು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಜಾನಕಿ ಅವರು ಪ್ರತಿಯೊಂದು ಭಾಷೆಯ ಭಾವವನ್ನು ಅರ್ಥಮಾಡಿಕೊಂಡು ಗಾಯನ ಮಾಡುವ ಮೂಲಕ ಸಂಗೀತ ಕ್ಷೇತ್ರದಲ್ಲಿ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸಿದ್ದಾರೆ. ಕನ್ನಡ ನಾಡು ಮತ್ತು ಭಾಷೆಗೆ ಅವರು ನೀಡಿರುವ ಕೊಡುಗೆಯನ್ನು ಕನ್ನಡಿಗರು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಅಧ್ಯಕ್ಷ ಶೇಷಗಿರಿ ಅವರು ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಪತ್ರಿಕೆ ಓದುವ ಹಾಗೂ ಸುದ್ದಿವಾಹಿನಿಗಳನ್ನು ವೀಕ್ಷಿಸುವ ಅಭ್ಯಾಸ ಕಡಿಮೆಯಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಎಸ್. ಜಾನಕಿ, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಡಾ. ರಾಜಕುಮಾರ್, ಕುವೆಂಪು ಸೇರಿದಂತೆ ಅನೇಕ ಮಹನೀಯರ ಸಾಧನೆ ಮತ್ತು ಕೊಡುಗೆಗಳನ್ನು ಯುವಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಹೇಳಿದರು.
Rotary Club of Shivamogga ರೋಟರಿ ಮಾಜಿ ಸಹಾಯಕ ಗವರ್ನರ್ ರೊಟೇರಿಯನ್ ಜಿ. ವಿಜಯ್ ಕುಮಾರ್ ಮಾತನಾಡಿ, ಕಲೆ ಸಾಧಕನ ಅಮೂಲ್ಯ ಸ್ವತ್ತು. ಅದಕ್ಕೆ ಪರಿಶ್ರಮ ಅತ್ಯಗತ್ಯ. ಸಂಗೀತವು ದೈವದತ್ತ ಕಲೆ ಆಗಿದ್ದು, ಅದು ಎಲ್ಲರನ್ನೂ ಆಕರ್ಷಿಸುವ ಶಕ್ತಿ ಹೊಂದಿದೆ. ಜೊತೆಗೆ ಮಾನಸಿಕ ಒತ್ತಡ ಮತ್ತು ಖಿನ್ನತೆಯನ್ನು ದೂರ ಮಾಡುವ ಸಾಮರ್ಥ್ಯವನ್ನೂ ಹೊಂದಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಮುಂದಿನ ಪೀಳಿಗೆಗೆ ನಾಡು, ನುಡಿ ಹಾಗೂ ಸಂಸ್ಕೃತಿಯ ಮಹತ್ವವನ್ನು ಪರಿಚಯಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದೆ ಕುಮಾರಿ ಆದ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಅವರು ಹಳೆಯ ಕನ್ನಡ ಚಿತ್ರಗೀತೆಗಳು, ಭಾವಗೀತೆಗಳು ಹಾಗೂ ನವೀನ ಚಿತ್ರಗೀತೆಗಳನ್ನು ಹಾಡುವ ಮೂಲಕ ಸಭಿಕರನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಚುನಾಯಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ಝೋನಲ್ ಲೆಫ್ಟಿನೆಂಟ್ ಮಹೇಶ್ ಆಲೇಮನೆ, ಕ್ಲಬ್ ಕಾರ್ಯದರ್ಶಿ ಆರ್. ಮನೋಹರ, ಮಾಜಿ ಅಧ್ಯಕ್ಷರಾದ ಎಚ್.ಬಿ. ಗಣೇಶ್, ಎಸ್. ಶ್ರೀಕಾಂತ್, ಡಾ. ಪರಮೇಶ್ವರ್ ಶಿಗ್ಗಾವ್, ಕೃಷ್ಣಮೂರ್ತಿ, ಬಿ. ಸತೀಶ್ ಚಂದ್ರ, ನಿಕಟ ಪೂರ್ವ ಅಧ್ಯಕ್ಷ ಡಿ. ಕಿಶೋರ್ ಕುಮಾರ್, ಬಿ.ಆರ್. ಧನಂಜಯ್, ರಘುರಾಜ್ ಎಚ್.ಕೆ., ಡಾ. ರವಿಕಿರಣ್ ಎಚ್.ಕೆ., ರವಿಪ್ರಕಾಶ್ ಕಾಳಾಚಾರ್, ದಿಲೀಪ್ ಕುಮಾರ್ ಜೈನ್, ಕಾಸಲ ವಿ. ಸುರೇಂದ್ರ, ಸಂತೋಷ್ ಕುಮಾರ್ ಬಿ.ಎನ್., ಸಂಜೀವ್ ಎಸ್.ಎನ್., ಅಜಿತ್ ಎಚ್.ಎಸ್., ಶ್ರೀನಿವಾಸ್ ಗೌಡ, ಡಾ. ಅರುಣ್ ಎಂ., ಗಂಗಪ್ಪ, ಜಗದೀಶ್, ಗುರುಮೂರ್ತಿ ಸೇರಿದಂತೆ ಅನೇಕ ಪದಾಧಿಕಾರಿಗಳು, ರೊಟೇರಿಯನ್ಸ್, ಇನ್ನರ್ ವೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯ್ ಕುಮಾರ್, ವೀಣಾ ಕಿಶೋರ್ ಹಾಗೂ ಇನ್ನರ್ ವೀಲ್ ಸದಸ್ಯರು ಉಪಸ್ಥಿತರಿದ್ದರು.
