Shivamogga News ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡಾ ಸ್ಪೂರ್ತಿಯನ್ನು ರೂಡಿಸಿಕೊಳ್ಳಬೇಕು. ಕ್ರೀಡಾ ಸ್ಪೂರ್ತಿ ಬದುಕಿನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಶಿವಮೊಗ್ಗ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಪದವಿಪೂರ್ವ ವಿಭಾಗದ ಉಪ ನಿರ್ದೇಶಕ ಶ್ರೀ ಚಂದ್ರಪ್ಪ ಎಸ್. ಗುಂಡಪಲ್ಲಿ ಹೇಳಿದರು.
ಸಾಗರದ ಎಲ್ ಬಿ ಮತ್ತು ಎಸ್ ಬಿ ಎಸ್ ಕಾಲೇಜಿನ ಕ್ರೀಡಾಂಗಣದಲ್ಲಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಎಂ ಡಿ ಎಫ್ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಗರ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ 2026-2027ನೇ ಸಾಲಿನ ಕ್ರೀಡಾ ಕೂಟ ವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ಕ್ರೀಡಾಸ್ಪೂರ್ತಿಯ ಬೆಳವಣಿಗೆ ಸಾಧ್ಯವಾಗುತ್ತದೆ. ಇಂದಿನ ವಿದ್ಯಾರ್ಥಿ ಸಮೂಹದಲ್ಲಿ ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಕಡಿಮೆಯಾಗುತ್ತಿದೆ. ಬದುಕಿನಲ್ಲಿ ಸೋಲು ಮತ್ತು ಗೆಲುವನ್ನು ಸ್ವೀಕರಿಸಬೇಕಾದ ಸಮಚಿತ್ತತೆಯನ್ನು ಕ್ರೀಡೆಗಳು ಕಲಿಸಿಕೊಡುತ್ತವೆ. ಶಿಕ್ಷಣದ ಸಂದರ್ಭದಲ್ಲಿ ಸೂಕ್ತ ಕ್ರೀಡಾಸಕ್ತಿಯನ್ನು ಬೆಳೆಸಿಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಉತ್ತಮ ಕ್ರೀಡಪಟುಗಳಾಗುವ ನಿಟ್ಟಿನಲ್ಲಿ ಯುವ ಸಮೂಹ ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದ ಎಲ್ ಬಿ ಮತ್ತು ಎಸ್ ಬಿ ಎಸ್ ಕಾಲೇಜಿನ ಪ್ರಾಚಾರ್ಯರಾದ ಡಾ.ಎ.ಎಸ್ . ಲಕ್ಷ್ಮೀಶ ಮಾತನಾಡಿ ತರಗತಿಯ ಬೋಧನೆ, ಅಂಕ ಗಳಿಕೆಗೆ ಮಾತ್ರ ಸೀಮಿತವಾಗಬಾರದು. ಕ್ರೀಡಾ ಮನೋಭಾವದಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ನಮ್ಮ ಕಾಲೇಜು ಸುವ್ಯವಸ್ಥಿತವಾದ ಒಳಾಂಗಣ ಕ್ರೀಡಾ ಭವನವನ್ನು ಹೊಂದಿದೆ. ಪದವಿ ವಿದ್ಯಾರ್ಥಿಗಳು ಇಲ್ಲಿಯ ಕ್ರೀಡಾ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಕ್ರೀಡಾ ಸಾಧನೆಯನ್ನು ಮಾಡಬೇಕು ಎಂದು ಹೇಳಿದರು.
Shivamogga News ಅಧ್ಯಕ್ಷತೆ ವಹಿಸಿದ್ದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎಂ. ಶಿವಕುಮಾರ್ ಮಾತನಾಡಿ, ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಆಯೋಜಿಸುವುದು ಅತ್ಯಂತ ಸವಾಲಿನ ಕೆಲಸ. ತಾಲೂಕಿನ ದೈಹಿಕ ಶಿಕ್ಷಕರ ಸಹಕಾರದಿಂದ ಇಂತಹ ಕ್ರೀಡಾಕೂಟಗಳನ್ನು ನಡೆಸಲು ಸಾಧ್ಯವಾಗುತ್ತಿದೆ. ವಿದ್ಯಾರ್ಥಿ ಸಮುದಾಯ ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮೂಲಕ ಸೋಲನ್ನು ಸ್ವೀಕರಿಸುವ ಆತ್ಮ ಬಲವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು. ಕ್ರೀಡಾ ಧ್ವಜಾರೋಹಣ ನೆರವೇರಿಸಿದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಕವಲಕೋಡು ವೆಂಕಟೇಶ ಕೆ. ಮಾತನಾಡಿದರು ದೈಹಿಕ ಶಿಕ್ಷಣಾಧಿಕಾರಿ ಶ್ರೀ ರಮೇಶ್ ಎನ್.ಕೆ., ಕರ್ನಾಟಕ ರಾಜ್ಯ ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ಸಾಗರ ಶಾಖೆಯ ಅಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಟಿ.ಪಿ. ಎಲ್ ಬಿ ಮತ್ತು ಎಸ್ ಬಿ ಎಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಭರತ್ ರಾಜ್ ಎನ್. ,ಸಿರಿವಂತೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಮಂಜಪ್ಪ ಕೆ. ವೇದಿಕೆಯಲ್ಲಿದ್ದರು.
ನೇಹ ಪ್ರಾರ್ಥಿಸಿದರು.
ಶ್ರೀಪಾದ ಜಿ.ಪಿ. ಸ್ವಾಗತಿಸಿದರು. ವೈಶಾಲಿ ಕೆ.ಬಿ. ವಂದಿಸಿದರು. ಡಿಂಪಲ್ ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಿದರು. ವಿವಿಧ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರಾದ ಶ್ರೀ ರವಿಶಂಕರ್, ಶ್ರೀ ಪರಮೇಶ್ವರಪ್ಪ ಜಿ, ಶ್ರೀ ನಂಜುಂಡ, ಕ್ರೀಡಾ ಕಾರ್ಯದರ್ಶಿಗಳು, ದೈಹಿಕ ಶಿಕ್ಷಕರು, ಎಂ ಡಿ ಎಫ್ ಕಾಲೇಜಿನ ಕ್ರೀಡಾ ಸಂಚಾಲಕ ಶ್ರೀ ಕೆ.ಎಲ್.ನುರೇಂದ್ರ ಮುಂತಾದವರು ಹಾಜರಿದ್ದರು.ಶಿಲ್ಪಾ ಎಸ್ ಎಂ ನಿರೂಪಿಸಿದರು. ತಾಲೂಕಿನ 15ಕ್ಕೂ ಹೆಚ್ಚು ಪದವಿಪೂರ್ವ ಕಾಲೇಜುಗಳ 350 ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
