ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ.
ಕಾಂಗ್ರೆಸ್ ಪದಾಧಿಕಾರಿಗಳ ಸಭೆ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಎಐಸಿಸಿ ವೀಕ್ಷಕ ಶರತ್ ನೇತೃತ್ವದ ತಂಡ ಸಭೆ ನಡೆಸುತ್ತಿತ್ತು. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಕುರಿತು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಗಲಾಟೆ ಆರಂಭವಾಗಿದೆ.
ಕಾಂಗ್ರೆಸ್ ಮುಖಂಡ ರಂಗೇಗೌಡ ಅವರಿಗೆ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಪ್ರವೇಶ ನೀಡದ ಹಿನ್ನೆಲೆಯಲ್ಲಿ ಗಲಾಟೆ ಶುರುವಾಗಿದೆ ಎನ್ನಲಾಗಿದೆ. ಸಭಾಂಗಣದ ಹೊರಭಾಗದಲ್ಲಿ ನಿಂತಿದ್ದ ಕಾರ್ಯಕರ್ತರೊಬ್ಬರು ರಂಗೇಗೌಡರನ್ನು ತಡೆದಿದ್ದು, ಈ ವೇಳೆ ರಂಗೇಗೌಡ ಧರಿಸಿದ್ದ ಶರ್ಟ್ ಹರಿದು ರಾದ್ಧಾಂತ ಉಂಟಾಗಿದೆ.
ಬಳಿಕ ಕಾಂಗ್ರೆಸ್ ಮುಖಂಡ ಕಲೀಂ ಪಾಷಾ ಗುಂಪು ಹಾಗೂ ರಂಗೇಗೌಡ ಗುಂಪಿನ ನಡುವೆ ಮಾತಿನ ಚಕಮಕಿ ನಡೆದು, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಸಭಾಂಗಣದಲ್ಲಿದ್ದ ಕುರ್ಚಿಗಳನ್ನು ಎತ್ತಿ ಹಾಕಿ ಪುಡಿ ಮಾಡಲಾಗಿದೆ.
ಗಲಾಟೆ ಬಿಡಿಸಲು ಬಂದವರು ಕೂಡ ಕೆಲಕಾಲ ತಬ್ಬಿಬ್ಬಾದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಜಯನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಗಲಾಟೆ ನಿಯಂತ್ರಿಸಿ ಎರಡೂ ಗುಂಪಿನವರನ್ನು ಅಲ್ಲಿಂದ ಕಳುಹಿಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
