ಶಿವಮೊಗ್ಗ ಜಿಲ್ಲೆಯ ನಿರಂತರ ವರ್ಷಧಾರೆಯಿಂದ ಶಿಕಾರಿಪುರ ತಾಲೂಕಿನ ಪ್ರಮುಖ ಅಂಜನಾಪುರ ಜಲಾಶಯ ಸಂಪೂರ್ಣ ಭರ್ತಿಯಾಗಿದೆ.
ಸುಮಾರು 1.80 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಈ ಜಲಾಶಯಕ್ಕೆ ಹೊಸನಗರ ತಾಲೂಕಿನಲ್ಲಿ ಹುಟ್ಟುವ ಕುಮದ್ವತಿ ನದಿಯಿಂದ ಸಾಕಷ್ಟು ನೀರು ಹರಿದು ಬಂದಿದೆ.
ಶಿಕಾರಿಪುರ ಪಟ್ಟಣಕ್ಕೆ ಕುಡಿಯುವ ನೀರಿನ ಪ್ರಮುಖ ಮೂಲವಾಗಿರುವ ಅಂಜನಾಪುರ ಜಲಾಶಯ, ತಾಲೂಕಿನ ಸಾವಿರಾರು ಎಕರೆ ಕೃಷಿ ಭೂಮಿಗೂ ಜೀವದಾಯಿನಿಯಾಗಿದೆ. ಜಲಾಶಯ ಭರ್ತಿಯಾಗಿರುವುದು ರೈತರಿಗೆ ಹೊಸ ಆಶಾಕಿರಣ ಮೂಡಿಸಿದ್ದು, ಈ ಬಾರಿಯ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.
ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಡ್ಯಾಂನ ಗೇಟ್ಗಳಿಂದ ನೀರು ಧುಮ್ಮಿಕ್ಕಿ ಹರಿಯುತ್ತಿದ್ದು, ಮನಮೋಹಕ ದೃಶ್ಯವನ್ನು ಸೃಷ್ಟಿಸಿದೆ.
ಶಿಕಾರಿಪುರ ತಾಲೂಕಿನ ಮೂಲಕ ಹರಿದು ಹಾವೇರಿ ಜಿಲ್ಲೆಯ ಮದಗದ ಕೆರೆಗೆ ಸೇರುವ ಈ ಜಲಾಶಯ ಇದೀಗ ಸಂಪೂರ್ಣ ಭರ್ತಿಯಾಗಿರುವುದು ಸಾರ್ವಜನಿಕರಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.
ಇದೇ ವೇಳೆ, ಇಂದು ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ ಹಾಗೂ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅಂಜನಾಪುರ ಜಲಾಶಯಕ್ಕೆ ಭೇಟಿ ನೀಡಿ, ಬಾಗೀನ ಅರ್ಪಿಸುವ ಸಾಧ್ಯತೆ ಇದೆ.
