ಸಂಘಟನೆಯಿಂದ ಯಶಸ್ಸು, ಸರಳತೆಯೇ ನಿಜವಾದ ವರ್ಚಸ್ಸು
(ಚೆನ್ನಿ ಅಣ್ಣನವರ ಹುಟ್ಟುಹಬ್ಬದ ಸಂದರ್ಭಕ್ಕೆ ವಿಶೇಷ ಅಂಕಣ)
ಇತ್ತೀಚಿನ ದಿನಗಳಲ್ಲಿ ರಾಜಕೀಯ ನಾಯಕರ ಹುಟ್ಟುಹಬ್ಬಗಳು ಎಂದರೆ ಸಾಕು, ಊರಿನ ಪ್ರತಿಯೊಂದು ವೃತ್ತ, ರಸ್ತೆ, ಗೋಡೆ, ವಿದ್ಯುತ್ ಕಂಬಗಳೆಲ್ಲವೂ ಫ್ಲೆಕ್ಸ್, ಬ್ಯಾನರ್, ಕಟೌಟ್‌ಗಳಿಂದ ತುಂಬಿಹೋಗುತ್ತವೆ. ಕೆಲವೊಮ್ಮೆ ಒಂದು ವಾರ್ಡ್ ಮಟ್ಟದ ಮುಖಂಡರ ಹುಟ್ಟುಹಬ್ಬಕ್ಕೂ ನೂರಾರು ಫ್ಲೆಕ್ಸ್‌ಗಳು ರಾರಾಜಿಸುತ್ತವೆ. ಹುದ್ದೆಗಿಂತ ಪ್ರಚಾರ ದೊಡ್ಡದಾಗುತ್ತದೆ. ಸೇವೆಗಿಂತ ಪ್ರದರ್ಶನವೇ ಮುಖ್ಯವಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳ ಸ್ಪರ್ಧೆ, ರಸ್ತೆಗಳಲ್ಲಿ ಬ್ಯಾನರ್‌ಗಳ ಪೈಪೋಟಿ—ಇವೆಲ್ಲವೂ ಇಂದಿನ ರಾಜಕೀಯ ಆಚರಣೆಗಳ ಭಾಗವಾಗಿವೆ.
ಆದರೆ ಈ ಸಂಭ್ರಮದ ಹಿಂದೆ ನಾವು ಮರೆತುಬಿಡುವ ಮತ್ತೊಂದು ಸತ್ಯವಿದೆ. ಪ್ಲಾಸ್ಟಿಕ್ ಫ್ಲೆಕ್ಸ್‌ಗಳಿಂದ ಪರಿಸರಕ್ಕೆ ಆಗುವ ಹಾನಿ, ಕಾರ್ಯಕ್ರಮ ಮುಗಿದ ನಂತರ ಉಳಿಯುವ ಕಸ, ಸಾರ್ವಜನಿಕ ಸ್ಥಳಗಳ ಸೌಂದರ್ಯಕ್ಕೆ ಉಂಟಾಗುವ ಧಕ್ಕೆ ಮತ್ತು ಅನಗತ್ಯ ವೆಚ್ಚ. ಪರಿಸರ ಸಂರಕ್ಷಣೆಯ ಬಗ್ಗೆ ವೇದಿಕೆಗಳಲ್ಲಿ ಮಾತನಾಡುವುದು ಸುಲಭ; ಆದರೆ ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅಪರೂಪ.
ಇಂತಹ ಸಂದರ್ಭದಲ್ಲಿ ಶಿವಮೊಗ್ಗದ ಹಾಲಿ ಶಾಸಕರಾದ ಶ್ರೀ ಎಸ್. ಎನ್. ಚೆನ್ನಬಸಪ್ಪ (ಚೆನ್ನಿ ಅಣ್ಣ) ಅವರ ಹುಟ್ಟುಹಬ್ಬದ ಆಚರಣೆ ವಿಭಿನ್ನ ಸಂದೇಶವನ್ನು ನೀಡಿದೆ.
ನಗರದಾದ್ಯಂತ ಯಾವುದೇ ಫ್ಲೆಕ್ಸ್‌ಗಳ ಅಬ್ಬರವಿಲ್ಲ. ಬ್ಯಾನರ್‌ಗಳ ಸ್ಪರ್ಧೆಯಿಲ್ಲ. ಕಟೌಟ್‌ಗಳ ಪ್ರದರ್ಶನವಿಲ್ಲ. ಆದರೂ ಅವರ ಮೇಲಿನ ಜನರ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿಲ್ಲ. ಏಕೆಂದರೆ ಜನರ ಮನಸ್ಸಿನಲ್ಲಿ ಸ್ಥಾನ ಪಡೆದ ನಾಯಕನಿಗೆ ಗೋಡೆಗಳ ಮೇಲೆ ಸ್ಥಾನ ಹುಡುಕುವ ಅಗತ್ಯವಿರುವುದಿಲ್ಲ.
ಸಂಘಟನೆಯ ಸಾಮಾನ್ಯ ಕಾರ್ಯಕರ್ತನಾಗಿ ಆರಂಭವಾದ ಅವರ ಪಯಣ ಇಂದು ವಿಧಾನಸಭೆಯವರೆಗೆ ತಲುಪಿದೆ. ಆದರೆ ಹುದ್ದೆ ಅವರ ವ್ಯಕ್ತಿತ್ವವನ್ನು ಬದಲಾಯಿಸಿಲ್ಲ. ಶಾಸಕರಾದ ನಂತರವೂ ಗುಲಗಂಜಿಯಷ್ಟೂ ಬದಲಾಗದ ಅವರ ನಡೆ-ನುಡಿ, ಕಾರ್ಯಕರ್ತರೊಂದಿಗಿನ ಆತ್ಮೀಯತೆ ಮತ್ತು ಜನಸಾಮಾನ್ಯರೊಂದಿಗೆ ಬೆರೆಯುವ ಸರಳತೆ ಅವರನ್ನು ವಿಶೇಷರನ್ನಾಗಿಸಿದೆ. ಜ್ಯೇಷ್ಠರಿಗೆ ವಿಶ್ವಾಸಾರ್ಹ ಸಹೋದ್ಯೋಗಿ, ಕಾರ್ಯಕರ್ತರಿಗೆ ಬೆನ್ನೆಲುಬು, ಕಿರಿಯರಿಗೆ ಮಾರ್ಗದರ್ಶಿ, ಸಾಮಾನ್ಯ ಜನರಿಗೆ ಮನೆಯ ಸದಸ್ಯನಂತಿರುವ ಆತ್ಮೀಯತೆ—ಇವೆಲ್ಲವೂ ಚೆನ್ನಿ ಅಣ್ಣನವರ ವ್ಯಕ್ತಿತ್ವದ ಪರಿಚಯ.
ಪ್ರತಿದಿನ ಬೆಳಿಗ್ಗೆ ದ್ವಿಚಕ್ರ ವಾಹನದಲ್ಲಿಯೇ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ, ನಾಗರಿಕರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲಿಯೇ ಸ್ಪಂದಿಸುವುದು ಅವರ ಕಾರ್ಯಶೈಲಿಯ ವಿಶೇಷತೆ. ಅಭಿವೃದ್ಧಿ ಎಂದರೆ ಕೇವಲ ಯೋಜನೆಗಳನ್ನು ಘೋಷಿಸುವುದಲ್ಲ; ಜನರ ಬಳಿಗೆ ಹೋಗಿ ಸಮಸ್ಯೆಗಳನ್ನು ಅರಿತು ಪರಿಹಾರ ಕಂಡುಕೊಳ್ಳುವುದೆಂಬ ನಂಬಿಕೆ ಅವರದು.
ಚೆನ್ನಿ ಅಣ್ಣನವರ ವ್ಯಕ್ತಿತ್ವದ ಮತ್ತೊಂದು ಪ್ರಮುಖ ಆಯಾಮವೆಂದರೆ ಅವರ ಅಭಿವೃದ್ಧಿ ಚಿಂತನೆ. ಅಭಿವೃದ್ಧಿ ಎಂಬುದು ಅವರಿಗೆ ಚುನಾವಣಾ ಘೋಷಣೆಯಲ್ಲ; ಅದು ನಿರಂತರ ಚಿಂತನೆ ಮತ್ತು ನಿರಂತರ ಕಾರ್ಯ. ಶಿವಮೊಗ್ಗದ ಮೂಲಸೌಕರ್ಯ, ಶಿಕ್ಷಣ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳು, ಸಾರ್ವಜನಿಕ ಸೌಲಭ್ಯಗಳು ಹಾಗೂ ನಾಗರಿಕರ ಬದುಕಿನ ಗುಣಮಟ್ಟವನ್ನು ಉತ್ತಮಗೊಳಿಸುವ ಕೆಲಸಗಳಿಗೆ ಅವರು ವಿಶೇಷ ಆದ್ಯತೆ ನೀಡುತ್ತಿದ್ದಾರೆ. ಅಭಿವೃದ್ಧಿಯ ಪ್ರತಿಯೊಂದು ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಶಿವಮೊಗ್ಗವನ್ನು ಇನ್ನಷ್ಟು ಪ್ರಗತಿಪರ ನಗರವನ್ನಾಗಿಸುವ ಸಂಕಲ್ಪದೊಂದಿಗೆ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅಭಿವೃದ್ಧಿ ಪರವಾದ ಚಿಂತನೆ, ಅಭಿವೃದ್ಧಿ ಪರವಾದ ನಿರ್ಧಾರಗಳು ಮತ್ತು ಅಭಿವೃದ್ಧಿಗಾಗಿ ನಿರಂತರ ಪರಿಶ್ರಮ—ಇವುಗಳ ಮೂಲಕ ಶಿವಮೊಗ್ಗದ ಬೆಳವಣಿಗೆಗೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡುತ್ತಿದ್ದಾರೆ.
ಅವರನ್ನು ಹುಡುಕಬೇಕಾದರೆ ದೊಡ್ಡ ವೇದಿಕೆಗಳಿಗೆ ಹೋಗಬೇಕಾಗಿಲ್ಲ. ತಾಸುಗಟ್ಟಳೆ ಕಾಯಬೇಕಿಲ್ಲ, ಪಿಎ ಗಳಿಗೆ ಗೋಗರೆಯಬೇಕಿಲ್ಲ,
ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಕುಳಿತು ಪಕ್ಷದ ಕೆಲಸ ಮಾಡವುದನ್ನು ಕಾಣಬಹುದು. ಬೈಟಕ್ ಮುಗಿದ ನಂತರ ಕಚೇರಿ ಎದುರಿನ ಟೀ ಅಂಗಡಿಯಲ್ಲಿ ಎಲ್ಲರೊಂದಿಗೆ ನಗುತ್ತಾ ಚಹಾ ಕುಡಿಯುವುದನ್ನು ಕಾಣಬಹುದು.
ಮಾರಿಕಾಂಬ ದೇವಸ್ಥಾನದ ಎದುರಿನ ಹೋಟೆಲ್‌ನಲ್ಲಿ ಸ್ನೇಹಿತರೊಂದಿಗೆ ಮಾತನಾಡುತ್ತಾ
ಕಾಣಬಹುದು. ಅಭಿವೃದ್ಧಿಯ ದೃಷ್ಟಿಯಿಂದ ಆಗಬೇಕಾದ ಕೆಲಸ ಕಾರ್ಯಗಳ ಬಗ್ಗೆ ಅವಲೋಕನ ಮಾಡುತ್ತಾ, ಹಿರಿಯರ ಸಲಹೆಗಳನ್ನು, ಕಿರಿಯರಿಗೆ ಪಕ್ಷ ಸಂಘಟನೆಯ ಮಾರ್ಗದರ್ಶನವನ್ನು ನೀಡುತ್ತಾ ಸಂಘಟನೆಗಾಗಿ ಹಗಲಿರುಳು ಸೇವೆಮಾಡುವ, ಸಂಘಟನೆಯ ರೋಚಕ ಅನುಭವಗಳನ್ನು ಮೇಲಕು ಹಾಕುತ್ತಾ ಎಲ್ಲರಲ್ಲಿಯೂ ಒಂದಾಗಿರುವ ಜನಾನುರಾಗಿ ನಮ್ಮ ಚೆನ್ನಿ ಅಣ್ಣ.
ಎರಡು ವರ್ಷಕ್ಕೊಮ್ಮೆ ನಡೆಯುವ ಶ್ರೀ ಮಾರಿಕಾಂಬ ದೇವಿಯ ಜಾತ್ರೆಯಲ್ಲಿ ಕೋಟೆ ಕ್ಯಾಂಟೀನ್‌ನಲ್ಲಿ ಸ್ವತಃ ಅನ್ನ ಬಡಿಸುತ್ತಿರುವುದನ್ನು ಕಂಡಿದ್ದೇವೆ.
ಶಿವಮೊಗ್ಗದ ಐತಿಹಾಸಿಕ ಶ್ರೀ ಕೋಟೆ ಭೀಮೇಶ್ವರ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ಕಾರ್ಯಕರ್ತರು ಹಾಗೂ ಭಕ್ತರೊಂದಿಗೆ ಹೆಜ್ಜೆ ಹಾಕುತ್ತಾ ಸಂಭ್ರಮಿಸಿ ಲಕ್ಷಾಂತರ ಭಕ್ತರಿಗೆ ಬೇಕಾದ ಎಲ್ಲಾ ವ್ಯವಸ್ಥೆಯ ಮಾಡಿಸಿ, ಬೆಳಗ್ಗೆ ಆರರಿಂದ ಮರುದಿನ ಬೆಳಿಗ್ಗೆಯವರೆಗೂ ಗಣಪತಿಯ ವಿಸರ್ಜನೆಯಾಗುವವರೆಗೂ ಜೊತೆನಿಂತು ಸಂಭ್ರಮಿಸುವ ಭಕ್ತನಾಗಿ,ಹಿಂದುತ್ವದ ಧ್ವನಿಯಾಗಿ ನೋಡಿದ್ದೇವೆ.
ಶಾಸನಸಭೆಯಲ್ಲಿ
ಪಕ್ಷದ ತತ್ವ-ಸಿದ್ಧಾಂತಗಳ ಪರವಾಗಿ ದೃಢವಾಗಿ ಮಾತನಾಡುವ; ರಾಷ್ಟ್ರ ವಿರೋಧಿ ಶಕ್ತಿಗಳಿಗೆ ಅವರದೇ ಧಾಟಿಯಲ್ಲಿ ಉತ್ತರಿಸುವುದನ್ನು ಕಂಡು ಹೆಮ್ಮೆಪಟ್ಟಿದ್ದೇವೆ.
ವೈಯಕ್ತಿಕವಾಗಿ ನನಗೆ ತಿಳಿದಿರುವಂತೆ, ಚೆನ್ನಿ ಅಣ್ಣ ಯಾವುದೇ ಕಾರಣಕ್ಕೂ ತಮ್ಮ ಮನೆಯಲ್ಲಿಯೂ ಪ್ಲಾಸ್ಟಿಕ್ ಬಳಕೆಯನ್ನು ದೂರವಿಡುತ್ತಾರೆ. ಪರಿಸರದ ಮೇಲಿನ ಅವರ ಕಾಳಜಿ ಭಾಷಣದಲ್ಲಲ್ಲ, ಬದುಕಿನಲ್ಲಿದೆ.
ಕಳೆದ ವಿಧಾನಸಭಾ ಅಧಿವೇಶನದಲ್ಲಿ ನೂರಾರು ಕಾರ್ಯಕರ್ತರನ್ನು ವಿಧಾನಸೌಧಕ್ಕೆ ಕರೆದುಕೊಂಡು ಹೋಗಿ, ಪ್ರಜಾಪ್ರಭುತ್ವದ ಶಕ್ತಿಪೀಠವನ್ನು ಕಾರ್ಯಕರ್ತರಿಗೂ ಪರಿಚಯಿಸುವ ಮೂಲಕ ಅವರು ಹೊಸ ಇತಿಹಾಸ ನಿರ್ಮಿಸಿದರು. ಆ ಸಂದರ್ಭದಲ್ಲಿ ಕಾರ್ಯಕರ್ತರಿಗೆ ನೀಡಿದ್ದು ಪ್ಲಾಸ್ಟಿಕ್ ನೀರಿನ ಬಾಟಲಿಗಳಲ್ಲ; ಮರುಬಳಕೆ ಮಾಡಬಹುದಾದ ಸ್ಟೀಲ್ ಬಾಟಲಿಗಳು. ಸಣ್ಣ ವಿಷಯವೆಂದು ಕಾಣಬಹುದಾದ ಈ ನಿರ್ಧಾರದ ಹಿಂದೆಯೂ ಪರಿಸರದ ಮೇಲಿನ ಅವರ ಬದ್ಧತೆಯೇ ಅಡಗಿತ್ತು.
ಮಲೆನಾಡಿನ ಮಗನಿಗೆ ಇರಬೇಕಾದ ದೊಡ್ಡ ಗುಣವೆಂದರೆ ಮಲೆನಾಡನ್ನು ಮಲೆನಾಡಿನಂತೆಯೇ ಪ್ರೀತಿಸುವುದು. ಆ ಗುಣ ಚೆನ್ನಿ ಅಣ್ಣನವರಲ್ಲಿ ಸಹಜವಾಗಿ ಕಾಣುತ್ತದೆ. ಅಭಿವೃದ್ಧಿಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ಅವರು, ಅದೇ ಸಮಯದಲ್ಲಿ ಪರಿಸರವನ್ನೂ ಪರಿವಾರದಂತೆ ಪ್ರೀತಿಸುತ್ತಾರೆ. ಅಭಿವೃದ್ಧಿ ಮತ್ತು ಪರಿಸರ ಪರಸ್ಪರ ವಿರೋಧಿಗಳಲ್ಲ; ಒಂದಕ್ಕೊಂದು ಪೂರಕವಾಗಬಹುದು ಎಂಬುದನ್ನು ಅವರು ತಮ್ಮ ಬದುಕಿನ ಮೂಲಕವೇ ತೋರಿಸುತ್ತಿದ್ದಾರೆ.
ಅವರ ಸರಳತೆ ಕೇವಲ ವೈಯಕ್ತಿಕ ಗುಣವಲ್ಲ; ಅದು ಅವರ ರಾಜಕೀಯದ ತತ್ವ. ಬಂದವರನ್ನು ನಗುಮುಖದಿಂದ ಸ್ವಾಗತಿಸುವುದು, ಸಹಾಯ ಕೇಳಿದವರಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದು, ಕಾರ್ಯಕರ್ತರನ್ನು ಗೌರವಿಸುವುದು, ಸಂಘಟನೆಯನ್ನು ಕುಟುಂಬದಂತೆ ಕಾಣುವುದು—ಇವೆಲ್ಲವೂ ಅವರನ್ನು ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಗೊಳಿಸಿವೆ.
ಅದಕ್ಕಾಗಿಯೇ ಅವರು ಅಭ್ಯರ್ಥಿಯಾದಾಗ ಕಾರ್ಯಕರ್ತರು ಅವರನ್ನು “ಕಾರ್ಯಕರ್ತರ ಅಭ್ಯರ್ಥಿ”, ನಂತರ “ವಿನಯವಂತ ಶಾಸಕ” ಎಂದು ಹೃದಯದಿಂದ ಕರೆದರು. ಅದು ಯಾವುದೇ ಪ್ರಚಾರದಿಂದ ಬಂದ ಬಿರುದಲ್ಲ; ಜನರು ಮತ್ತು ಕಾರ್ಯಕರ್ತರು ಅವರ ವ್ಯಕ್ತಿತ್ವಕ್ಕೆ ನೀಡಿದ ಗೌರವ.
ಇಂದು ಅನೇಕರು ತಮ್ಮ ಮುಖವನ್ನು ಊರಿನ ನಗರಗಳಲ್ಲಿ ಕಂಡಕಂಡಲ್ಲಿ ಬಿತ್ತುತ್ತಿದ್ದಾರೆ. ಮುಖಬಿತ್ತುವುದೆ ನಾಯಕನ ಗುಣವೆಂದು ಭಾವಿಸಿದ್ದಾರೆ.
ಆದರೆ ಚೆನ್ನಿ ಅಣ್ಣ ಜನರ ಮನಗಳಲ್ಲಿ ಪ್ರೀತಿ ವಿಶ್ವಾಸ ಅಭಿವೃದ್ಧಿ ಮತ್ತು ಮೌಲ್ಯಗಳನ್ನು ಬಿತ್ತುತ್ತಿದ್ದಾರೆ. ಅದಕ್ಕಾಗಿಯೇ ಅವರಿಗೆ ಫ್ಲೆಕ್ಸ್‌ಗಳ ಅಗತ್ಯವಿಲ್ಲ; ಜನರ ಪ್ರೀತಿಯೇ ಅವರ ಅತಿದೊಡ್ಡ ಬ್ಯಾನರ್.
ಅದೇ ಅವರ ಪವರ್.
ಮಲೆನಾಡಿನ ಹೆಮ್ಮೆಯ ಮಗ, ಕಾರ್ಯಕರ್ತರ ಅಣ್ಣ, ಅಭಿವೃದ್ಧಿಯ ಚಿಂತಕ, ಪರಿಸರದ ಕಾವಲುಗಾರ ಹಾಗೂ ಸರಳತೆಯ ಪ್ರತಿರೂಪವಾದ ಚೆನ್ನಿ ಅಣ್ಣನವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ನಿಮ್ಮ ಈ ಸರಳ ನಡೆ, ಅಭಿವೃದ್ಧಿಯ ದೃಷ್ಟಿಕೋನ, ಪರಿಸರದ ಮೇಲಿನ ಬದ್ಧತೆ ಮತ್ತು ಕಾರ್ಯಕರ್ತರ ಮೇಲಿನ ಪ್ರೀತಿ ನಮ್ಮಂಥ ಸಾವಿರಾರು ಯುವಕರಿಗೆ ದಾರಿದೀಪವಾಗಲಿ.
– ಸಂಗಮೇಶ್. ಎಸ್.
ಶಿವಮೊಗ್ಗ
