ಶಿವಮೊಗ್ಗ ನಗರದ ಸೋಮಿನಕೊಪ್ಪದಲ್ಲಿರುವ ಮೈತ್ರಾ ದೈವಿ ಕಾಲೇಜು ಎದುರು ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ವೇಗವಾಗಿ ಬರುತ್ತಿದ್ದ ಐ20 ಕಾರು ಏಕಾಏಕಿ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆಗೆ ರಸ್ತೆ ಮಧ್ಯದಲ್ಲಿದ್ದ ಲೈಟ್ ಕಂಬ ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅಪಘಾತದ ವೇಳೆ ಕಾರಿನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರ ನೆರವಿನಿಂದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದ ರಭಸದಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ.
