ಶಿವಮೊಗ್ಗ ಜಿಲ್ಲೆಯಲ್ಲಿ ಅಣು ವಿದ್ಯುತ್ ಸ್ಥಾವರ ಯೋಜನೆಗೆ ವಿರೋಧದ ಕಿಚ್ಚು ಮತ್ತೊಮ್ಮೆ ಭುಗಿಲೆದ್ದಿದೆ. ಸಾಗರ ತಾಲೂಕಿನ ಬೇಸೂರಿನಲ್ಲಿ ಅಣು ವಿದ್ಯುತ್ ಯೋಜನೆ ವಿರೋಧಿಸಿ ಸಾವಿರಾರು ರೈತರು ಮತ್ತು ಸಾರ್ವಜನಿಕರು ಭಾರೀ ಪಾದಯಾತ್ರೆ ನಡೆಸಿದ್ದಾರೆ. ಬಿಸಿಲನ್ನೂ ಲೆಕ್ಕಿಸದೆ ನಡೆದ ಈ ಪ್ರತಿಭಟನೆ ಇದೀಗ ಜಿಲ್ಲೆಯಾದ್ಯಂತ ಚರ್ಚೆಗೆ ಕಾರಣವಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬೇಸೂರಿನಲ್ಲಿ ಅಣು ವಿದ್ಯುತ್ ಸ್ಥಾವರ ಯೋಜನೆ ವಿರುದ್ಧ ಜನರ ಆಕ್ರೋಶ ತೀವ್ರಗೊಂಡಿದೆ. ಯೋಜನೆ ಕೈಬಿಡುವಂತೆ ಒತ್ತಾಯಿಸಿ ಬೇಸೂರಿನಿಂದ ಸಾಗರದವರೆಗೆ ಬೃಹತ್ ಪಾದಯಾತ್ರೆ ಆಯೋಜಿಸಲಾಯಿತು.
ಈ ಪಾದಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು, ಮಹಿಳೆಯರು, ಯುವಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದರು. ಅಣು ವಿದ್ಯುತ್ ಯೋಜನೆ ಪರಿಸರ ಮತ್ತು ಕೃಷಿಗೆ ಮಾರಕವಾಗಲಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ತೀವ್ರ ಬಿಸಿಲನ್ನೂ ಲೆಕ್ಕಿಸದೆ ಜನರು ಘೋಷಣೆ ಕೂಗಿ ತಮ್ಮ ವಿರೋಧ ವ್ಯಕ್ತಪಡಿಸಿದರು. ಪಾದಯಾತ್ರೆ ಸಾಗರ ನಗರ ಸಮೀಪಿಸುತ್ತಿದ್ದಂತೆ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿತು.
ಅಣು ವಿದ್ಯುತ್ ಯೋಜನೆ ವಿರುದ್ಧ ಸಾಗರ ತಾಲೂಕಿನ ಜನರ ಹೋರಾಟ ಮುಂದುವರಿದಿದ್ದು, ಸರ್ಕಾರ ಈ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕಾದು ನೋಡಬೇಕಿದೆ.
