ಲೇ: ಡಾ.ಸತೀಶ್ ಕುಮಾರ್. ಅಂಡಿಂಜೆ
Klive Special Article ಇತ್ತೀಚೆಗೆ ಬಿಡುಗಡೆಯಾಗಿ ತುಂಬಾ ಜನಪ್ರಿಯತೆ ಪಡೆದ ರಾಜ್ ಬಿ. ಶೆಟ್ಟಿಯವರ ‘ಸು ಫ್ರಂ ಸೋ’ ಚಲನಚಿತ್ರವನ್ನು ತುಂಬಾ ಜನ ನೋಡಿ ನಕ್ಕು ನಲಿದಿದ್ದಾರೆ. ಆದರೆ ನೋಡಿದವರಲ್ಲಿ ಕೆಲವರಾದರೂ ಆ ಚಿತ್ರ ಕೊಡುವ ಸಂದೇಶವನ್ನು ಸೂಕ್ಷ್ಮವಾಗಿ ಗಮನಿಸಿರಬಹುದು. ನಾನು ಗಮನಿಸಿದಂತೆ ಆ ಚಿತ್ರವು ಒಂದು ಸುಳ್ಳನ್ನು ಮರೆ ಮಾಚುವುದಕ್ಕೆ ಹೋಗಿ ಚಿತ್ರದ ಅಶೋಕ ಪಾತ್ರಧಾರಿ ಎದುರಿಸುವ ಸಮಸ್ಯೆಗಳು, ಸುಳ್ಳನ್ನೇ ಸತ್ಯವೆಂದು ನಂಬಿದ ಜನ ಮಾಡುವ ಹೋಮ ಹವನಗಳು ಇಂದಿನ ಸಾಮಾಜಿಕ ಮಾಧ್ಯಮಗಳು ಹರಡುವ ಸುಳ್ಳುಗಳು ಮತ್ತು ಅದನ್ನು ನಂಬುವ ಜನರು ಮಾಡುವ ಅನಾಹುತಗಳಿಗೆ ಸಮವಾಗಿದೆ.
ಮಹಿಳೆಯೊಬ್ಬಳು ಸ್ನಾನ ಮಾಡುವುದನ್ನು ಕದ್ದು ನೋಡಲು ಹೋದ ಗುರುತುಗಳನ್ನು ಅಳಿಸಲು ಹೋಗಿ ಸಿಕ್ಕಿ ಬಿದ್ದಾಗ ಬಿಡಿಸಿಕೊಳ್ಳುವ ಉಪಾಯವಾಗಿ ದೆವ್ವ ಮೈಮೇಲೆ ಬಂದ ನಾಟಕವನ್ನು ಚಿತ್ರದಲ್ಲಿ ಅಶೋಕ ಮಾಡುತ್ತಾನೆ. ಅದನ್ನು ಬಿಡಿಸಲು ಮನೆಯವರು ಮತ್ತು ಊರಿನವರು ಮಾಡುವ ಮಂತ್ರ ತಂತ್ರ ಹೋಮ ಹವನ ಕಷಾಯ ಮದ್ದು ಎಲ್ಲವನ್ನೂ ಆತ ಅನುಭವಿಸಬೇಕಾಗುತ್ತದೆ. ಆತ ಸತ್ಯ ಹೇಳಿದರೂ ಜನ ನಂಬಲು ಸಿದ್ಧರಿರಲಿಲ್ಲ. ಸ್ವಾಮೀಜಿಯ ಮೂಲಕ ದೆವ್ವ ದೂರವಾಯಿತು ಎಂದರೂ ಜನ ನಂಬಲಿಲ್ಲ. ಒಮ್ಮೆ ದೆವ್ವಗಿವ್ವ ಇಲ್ಲವೆಂದ ಅಶೋಕನೇ ದೆವ್ವ ಬಂತೆಂದು ಹೆದರಿ ಪ್ರಸಾದ ಹಾಕಿಕೊಳ್ಳುವ ಸ್ಥಿತಿಗೆ ಬರುತ್ತಾನೆ. ಇದೇ ಸ್ಥಿತಿಯನ್ನು ಇಂದಿನ ಸಾಮಾಜಿಕ ಮಾಧ್ಯಮಗಳೂ ಮಾಡುತ್ತಿವೆ. ಸುಳ್ಳನ್ನೇ ಮತ್ತೆ ಮತ್ತೆ ಹೇಳಿ ಜನರನ್ನು ನಂಬಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಅವು ಹರಡುತ್ತಿರುವ ಸುಳ್ಳಿನ ದೆವ್ವಗಳನ್ನು ಸಾಮಾನ್ಯರಿಂದ ಬಿಡಿಸಲು ಸಾಧ್ಯವಾಗುತ್ತಿಲ್ಲ.
ಇಂದು ಸಮಾಜದಲ್ಲಿ ಜನರ ಮನಸ್ಥಿತಿಯನ್ನು ಕೆಡಿಸಿ ಸಾಮಾಜಿಕ ಶಾಂತಿಗೆ ಭಂಗ ತರುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ. ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಕೆಲಸ ಸಾಮಾಜಿಕ ಮಾಧ್ಯಮಗಳಿಂದ ನಡೆಯುತ್ತಿದೆ. ಸಮಾಜದ ಸುವ್ಯವಸ್ಥೆ ಅಥವಾ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಯಾಗಿರುವಂತೆ ಮಾಡುವುದನ್ನು ಸಾಮಾಜಿಕ ಸ್ವಾಸ್ಥ್ಯವೆಂದು ಕರೆಯಬಹುದು. ಒಂದು ಸಮಾಜ ಸುವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವುದು ಕೂಡಾ ಸಾಮಾಜಿಕ ಸ್ವಾಸ್ಥ್ಯವಾಗಿದೆ. Klive Special Article ಸಮಾಜದ ಕಟ್ಟು ಕಟ್ಟಳೆ, ನಿಯಮಗಳಿಗೆ ಬದ್ಧವಾಗಿರುವುದು ಕೂಡಾ ಸಾಮಾಜಿಕ ಸ್ವಾಸ್ಥ್ಯವೆಂದು ಕರೆಯಲ್ಪಡುತ್ತದೆ. ಸಮಾಜದ ವಿವಿಧ ಜಾತಿ, ಜನಾಂಗ, ಧರ್ಮಗಳಿಗೆ ಸಂಬಂಧಿಸಿದ ವಿವಿಧ ವರ್ಗ, ಗುಂಪುಗಳ ನಡುವೆ ಸೌಹಾರ್ದಯುತ ಸಂಬಂಧ ಬೆಳೆಸುವುದು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಕರ‍್ಯವಾಗಿದೆ. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಸಮೂಹ ಮಾಧ್ಯಮಗಳು ಪ್ರಮುಖವಾದ ಪಾತ್ರವನ್ನು ವಹಿಸುತ್ತಿವೆ. ಆದರೆ ಫೇಸ್‌ಬುಕ್, ಯುಟ್ಯೂಬ್, ಇನ್ಸ್ಟಾಗ್ರಾಮ್, ವಾಟ್ಸಾಪ್‌ನಂತಹ ಸಾಮಾಜಿಕ ಮಾಧ್ಯಮಗಳಿಂದು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದಕ್ಕಿಂತ ಕೆಡಿಸುವುದರಲ್ಲೇ ಸುದ್ದಿಯಾಗುತ್ತಿರುವುದನ್ನು ಕಾಣಬಹುದು. ಇಂದು ಸಮೂಹ ಮಾಧ್ಯಮಗಳ ಬಗೆಗೆ ಸಕಾರಾತ್ಮಕ ಟೀಕೆಯ ಬದಲು ನಕಾರಾತ್ಮಕ ಟೀಕೆಗಳು ಹೆಚ್ಚು ಕೇಳಿ ಬರುತ್ತಿವೆ. ಸಮೂಹ ಮಾಧ್ಯಮಗಳು ಅದರಲ್ಲೂ ಸಾಮಾಜಿಕ ಮಾಧ್ಯಮಗಳು ಹಿಂಸೆ, ಲೈಂಗಿಕತೆ, ಜನಾಂಗೀಯ ಬೇಧಭಾವ, ಕೋಮುವಾದಗಳನ್ನು ಪ್ರಚೋದಿಸುತ್ತವೆ, ಮಕ್ಕಳು, ಮಹಿಳೆಯರ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಸಮೂಹ ಮಾಧ್ಯಮಗಳಲ್ಲಿ ಕಂಡು ಬರುವ ಅಶ್ಲೀಲ ಚಿತ್ರಗಳು, ಲೈಂಗಿಕತೆ ಪ್ರಚೋದಿಸುವ ದೃಶ್ಯಗಳು, ಮೋಸದ ಜಾಹಿರಾತುಗಳು, ಸುಳ್ಳು ಸುದ್ದಿಗಳು, ತಿರುಚಿದ ಸುದ್ದಿಗಳು, ತಪ್ಪು ಮಾಹಿತಿಗಳು, ಎಐ ವೀಡಿಯೊಗಳು ಜನರ ಮನಸ್ಸನ್ನು ಭ್ರಷ್ಟಗೊಳಿಸುವುದರ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸುತ್ತವೆ. ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಯುಟ್ಯೂಬ್ ವಾಹಿನಿಗಳು ಹಣದಾಸೆಯಿಂದ ವೀವ್ಸ್, ಲೈಕ್ಸ್, ಶೇರ್‌ಗಾಗಿ ಹಸಿ ಹಸಿ ಸುಳ್ಳುಗಳನ್ನು ತಲೆಗೆ ಹೊಡೆಯುವ ಸತ್ಯದಂತೆ ಬಿಂಬಿಸಿ ಜನರನ್ನು ನಂಬುವಂತೆ ಮಾಡುತ್ತಿದ್ದಾರೆ. ಇದನ್ನು ನಂಬಿದ ಮತ್ತು ನಂಬದ ಜನರ ನಡುವೆ ವಾದ ವಿವಾದ ಜಗಳ ಪ್ರತಿಭಟನೆಗಳು ನಡೆದು ಇಡೀ ಸಮಾಜದ ನೆಮ್ಮದಿ ಕೆಡಿಸುವ ಕೆಲಸ ನಡೆಯುತ್ತಿದೆ.
ಇತ್ತೀಚೆಗೆ ಉಡುಪಿಯ ಪತ್ರಕರ್ತರೊಬ್ಬರು ಮನೆಯ ಅಂಗಳದಲ್ಲಿ ಬಿದ್ದ ವೀಡಿಯೊ ಹಾಕಿದ್ದನ್ನು ಅವರು ರಜನಿಕಾಂತ್ ತರಹ ಕಾಣುವ ಕಾರಣಕ್ಕೆ ರಜನಿಕಾಂತ್ ಬಿದ್ದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಿ ಅವರ ಅಭಿಮಾನಿಗಳಲ್ಲಿ ಗಾಬರಿ ಹುಟ್ಟಿಸಿದ್ದರು. ಉತ್ತರ ಕರ್ನಾಟಕದಲ್ಲಿ ಒಂದು ಕಡೆ ಯಾರೋ ಅಮಾಯಕನನ್ನು ಮಕ್ಕಳ ಕಳ್ಳ ಎಂದು ಬಿಂಬಿಸಿ, ಜನ ಆತನನ್ನು ಹೊಡೆದು ಸಾಯುವಂತೆ ಮಾಡಿದ್ದರು. ಯಾವುದೋ ಲಸಿಕೆ ಹಾಕಿಸಿಕೊಂಡ ಮಗು ಸತ್ತು ಹೋಗಿದೆ ಎಂದು ಬಿಂಬಿಸಿ ಆ ಲಸಿಕೆ ಹಾಕಿಸಿಕೊಂಡ ಮಕ್ಕಳ ಪೋಷಕರೆಲ್ಲ ತಮ್ಮ ಮಕ್ಕಳೊಂದಿಗೆ ಆಸ್ಪತ್ರೆಗೆ ಗಾಬರಿಯಿಂದ ಧಾವಿಸುವಂತೆ ಮಾಡಿದ್ದರು. ಪ್ರಸಿದ್ಧ ಯಾತ್ರಾಸ್ಥಳವೊಂದರ ಸಮೀಪ ನಡೆದ ವಿವಿಧ ತನಿಖೆಗಳು ನಡೆದು ಮುಕ್ತಾಯಗೊಂಡ ಅತ್ಯಾಚಾರ ಪ್ರಕರಣವೊಂದನ್ನು ಹಿನ್ನೆಲೆಯಾಗಿಟ್ಟುಕೊಂಡು ಕ್ಷೇತ್ರದ ಹೆಸರನ್ನು ಕೆಡಿಸುವ ಮತ್ತು ಆ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರಲ್ಲಿ ಭಯ ಮೂಡಿಸುವ ಕೆಲಸ ಆನೇಕ ಯುಟ್ಯೂಬರ್‌ಗಳಿಂದ ನಡೆಯುತ್ತಿದೆ. ಕೊರೊನಾ ಸಮಯದಲ್ಲಿ ಬೇರೆ ದೇಶಗಳಲ್ಲಿ ನಡೆದ ಸಾವಿನ ದೃಶ್ಯಗಳನ್ನು ತೋರಿಸಿ ಇಲ್ಲಿನ ಜನರಲ್ಲಿ ಭಯ ಮೂಡಿಸುವ ಕೆಲಸ ಮಾಡಲಾಗಿತ್ತು.
ಕೋಮು ಸಂಘರ್ಷದ ಕಪೋಲಕಲ್ಪಿತ ಸುದ್ದಿ, ವಿಡಿಯೋಗಳನ್ನು ತೋರಿಸಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಲಾಗುತ್ತದೆ. ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಇಂತಹ ಅನೇಕ ಘಟನೆಗಳನ್ನು ಉದಾಹರಣೆಯಾಗಿ ನೀಡಬಹುದು.
ಸಾಮಾಜಿಕ ಜಾಲತಾಣಗಳಲ್ಲಿ ಯಾವುದು ಬಿಂಬಿತವಾಗುತ್ತಿರುತ್ತದೋ ಅವೆಲ್ಲವೂ ಸತ್ಯವಾಗಿರುವುದಿಲ್ಲ. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು ಎಂಬ ಮಾತಿನಲ್ಲಿ ಸತ್ವವಿದೆ. ಕಣ್ಣಿಗೆ ಕಂಡಿದ್ದೆಲ್ಲವನ್ನೂ ಸತ್ಯ ಎಂದು ನಂಬಿಕೊಂಡು ಹಣದಾಸೆಗೆ ಬರೆಯುವ ಜಾಯಮಾನಕ್ಕೆ ಇಂದಿನ ಯುಟ್ಯೂಬ್ ಪತ್ರಕರ್ತ ಪಕ್ಕಾದರೆ ಅದಕ್ಕಿಂತ ಆತ್ಮಘಾತುಕತನ ಮತ್ತೊಂದಿಲ್ಲ. ಕಣ್ಣಿಗೆ ಕಾಣುವ ವ್ಯಕ್ತಸತ್ಯಗಳಾಚೆಗಿನ ಆಯಾಮಗಳನ್ನು ಶೋಧಿಸುವುದರ ಕಡೆಗೂ ಆತನ ಗಮನವಿರಬೇಕು. ಅವ್ಯಕ್ತ, ತೆರೆಮರೆಯ ನಿಗೂಢ ಸತ್ಯಗಳಿಗೆ ಬಹಿರ್ಮುಖೀ ಸ್ವರೂಪ ಇರುವುದಿಲ್ಲ. ಅವ್ಯಕ್ತ ಸತ್ಯಗಳು ಸೀಮಿತ ವಲಯಕ್ಕೆ ಮಾತ್ರ ಗೊತ್ತಿರುತ್ತವೆ. ಆ ಪರಿಧಿಯ ಮಿತಿಯೊಳಗಷ್ಟೇ ಗಿರಕಿ ಹೊಡೆಯುತ್ತಿರುತ್ತವೆ. ಅದನ್ನು ದಾಟಿ ಎಲ್ಲರ ಗಮನಕ್ಕೆ ಬಾರದಂತೆ ತಡೆಯುವ ಪ್ರಯತ್ನಗಳು ನಡೆದರೂ ಅವ್ಯಕ್ತ ಸತ್ಯಗಳು ಒಂದು ದಿನ ಜನರ ಗಮನಕ್ಕೆ ಬಂದೇ ಬರುತ್ತವೆ. ಆ ಎಚ್ಚರ ಇಂದಿನ ಸೋ ಕಾಲ್ಡ್ ಪತ್ರಕರ್ತರಂತೆ ವರ್ತಿತ್ತಿರುವ ಯುಟ್ಯೂಬರ್‌ಗಳಿಗಿರಬೇಕು.
ದಿನಪತ್ರಿಕೆ, ಟೆಲಿವಿಷನ್ ರೇಡಿಯೋ ಈ ಮಾಧ್ಯಮಗಳಂತೆ ಸಾಮಾಜಿಕ ಮಾಧ್ಯಮಗಳಿಗೂ ಇಡೀ ಜನಸಮೂಹಕ್ಕೆ ಸರಿಯಾದ ದಾರಿ ತೋರಿಸುವ ಶಕ್ತಿ ಇದೆ. ಅಂಥದ್ದೊಂದು ಶಕ್ತಿಯಿರುವ ಕಾರಣಕ್ಕೇ ಅವುಗಳಿಗೆ ಸಾರ್ವಕಾಲಿಕ ಮನ್ನಣೆ ದೊರಕುತ್ತದೆ. ಸಾಮಾಜಿಕ ಮಾಧ್ಯಮವೊಂದು ನೀಡುವ ಮಾಹಿತಿಯೊಂದು ಆಳುವ ಸರ್ಕಾರದ ಕಣ್ಣು ತೆರೆಸಬಹುದು. ಅದರ ಮೂಲಕ ಪ್ರಕಟವಾಗುವ ವಿವರವೊಂದು ನಿರ್ಗತಿಕರ ಬಾಳನ್ನು ಬೆಳಗಿಸಬಹುದು. ನೋವಿನೊಂದಿಗೆ ನರಳುವವರಿಗೆ ಪರಿಹಾರದ ದಾರಿಗಳನ್ನು ಕಂಡರಿಸಬಹುದು. ಅಸಾಧ್ಯ ಎಂದು ಕೈಚೆಲ್ಲಿ ಕುಳಿತವರೊಳಗೆ ಹುಮ್ಮಸ್ಸು ತುಂಬಿ ಅವರನ್ನು ಹೊಸ ಸಾಧ್ಯತೆಗಳ ಕಡೆಗೆ ಕಣ್ಣು ಹಾಯಿಸುವಂತೆ ಪ್ರೇರೇಪಿಸಬಹುದು.
ಅಸಂಖ್ಯ ಜನರನ್ನು ದಿಢೀರನೆ ಸೆಳೆದು ಗಾಢವಾದ ಪ್ರಭಾವ ಬೀರುವ ಸಾಮರ್ಥ್ಯ ಅದಕ್ಕಿದೆ. ಇಂಥ ಅಗಾಧ ಸಾಮರ್ಥ್ಯದ ಮಾಧ್ಯಮಗಳನ್ನು ಹಣ, ಪ್ರಚಾರ ಅಪೋಶನ ತೆಗೆದುಕೊಂಡಾಗ ಏನೆಲ್ಲಾ ಅಪಾಯಗಳಿರುತ್ತವೆ ಎಂಬುದನ್ನು ಈಗಾಗಲೇ ಕಂಡಿದ್ದೇವೆ. ಹಾಗಾದಾಗ, ಸಹಜವಾಗಿಯೇ ಮಾಧ್ಯಮವೊಂದು ತಾನು ನಿರ್ವಹಿಸಬೇಕಾದ ಹೊಣೆಗಾರಿಕೆಯಿಂದ ನುಣುಚಿಕೊಳ್ಳಬೇಕಾದ ಪ್ರಸಂಗ ಎದುರಾಗಬಹುದು. ಅದಕ್ಕೆ ಇಂದಿನ ಸಾಮಾಜಿಕ ಮಾಧ್ಯಮಗಳು ಅವಕಾಶ ನೀಡಬಾರದು. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು ಇಂದಿನ ಪ್ರತಿಯೊಂದು ಮಾಧ್ಯಮದ ಜವಾಬ್ದಾರಿಯಾಗಬೇಕು.

-ಡಾ.ಸತೀಶ್ ಕುಮಾರ್ ಅಂಡಿಂಜೆ,
ಪ್ರಾಧ್ಯಾಪಕರು,
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,
ಕುವೆಂಪು ವಿಶ್ವವಿದ್ಯಾಲಯ,
ಶಂಕರಘಟ್ಟ-577451
ಶಿವಮೊಗ್ಗ
ಮೊಬೈಲ್:9448870461
E-mail: sathishandinje@gmail.com
