Chamber of Commerce Shivamogga ಟ್ರೇಡ್ ಲೈಸೆನ್ಸ್ ಮೇಳ ಆಯೋಜನೆ ಸೇರಿದಂತೆ ಶಿವಮೊಗ್ಗ ನಗರದ ಸಮಗ್ರ ಅಭಿವೃದ್ಧಿ ಕುರಿತಂತೆ ಮಹಾನಗರ ಪಾಲಿಕೆ ನೂತನ ಆಯುಕ್ತ ಮಾಯಣ್ಣಗೌಡ ಅವರೊಂದಿಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಚರ್ಚಿಸಿದರು.
ಮಹಾನಗರ ಪಾಲಿಕೆಗೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಮಾಯಣ್ಣ ಗೌಡ ಅವರಿಗೆ ಸಂಘದ ಪರವಾಗಿ ಶುಭಕೋರಿ ಮಾತನಾಡಿದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್, ನಗರಕ್ಕೆ ನೀರಿನ ಪೂರೈಕೆ, ಆಸ್ತಿ ತೆರಿಗೆ, ಕಸ ಸಂಗ್ರಹ, ಪ್ರವಾಹ ಮುನ್ನೆಚ್ಚರಿಕೆ ಕ್ರಮಗಳು, ಯುಜಿಡಿ ಸಂಪರ್ಕದ ನಿರ್ವಹಣೆ, ಚರಂಡಿಗಳ ಸ್ವಚ್ಛತೆ, ನಗರದ ಪಾರ್ಕ್ಗಳ ನಿರ್ವಹಣೆ, ಇ-ಖಾತಾ ಗೊಂದಲದ ಪರಿಹಾರ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಪರಿಸರ ರಕ್ಷಣೆ, ಕೈಗಾರಿಕಾ ಪ್ರದೇಶಗಳಲ್ಲಿ ಸ್ವಚ್ಛತೆ, ನಿರ್ವಹಣೆ, ಜನಸಂದಣಿ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಶೌಚಾಲಯ ನಿರ್ಮಾಣ, ಬೀದಿದೀಪಗಳ ನಿರ್ವಹಣೆ, ವಾಚನಲಯಗಳನ್ನು ಅಭಿವೃದ್ಧಿಪಡಿಸುವುದು, ಬೀದಿ ನಾಯಿಗಳು ಮತ್ತು ಹಂದಿಗಳನ್ನು ನಿಯಂತ್ರಿಸುವುದು, ಪರಿಸರ ಮಾಲಿನ್ಯ ತಡೆಗಟ್ಟುವುದು, ನಗರದ ಸೌಂದರ್ಯ ಹೆಚ್ಚಿಸುವುದು, ನಗರದಲ್ಲಿ ಸಾಧ್ಯವಿರುವ ಕಡೆ ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸುವುದು, ಬೀದಿ ಬದಿ ವ್ಯಾಪಾರಗಳನ್ನು ನಿಯಂತ್ರಿಸುವುದು, ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಆದ್ಯತೆ ಮೇರೆಗೆ ಮಾಡುವುದು ಇನ್ನೂ ಮುಂತಾದ ವಿಷಯಗಳನ್ನು ಆಯುಕ್ತರ ಗಮನಕ್ಕೆ ತರಲಾಯಿತು.
ಶಿವಮೊಗ್ಗ ಜಿಲ್ಲಾ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಟ್ರೇಡ್ ಲೈಸೆನ್ಸ್ ಮೇಳ ಆಯೋಜಿಸಬೇಕು. ಆದಷ್ಟು ಬೇಗ ಇ ಖಾತಾ ಗೊಂದಲ ಬಗೆಹರಿಸಬೇಕು. ಶಿವಮೊಗ್ಗ ನಗರದ ಸಾಗರ ರಸ್ತೆ, ಆಟೋ ಕಾಂಪ್ಲೆಕ್ಸ್ ಹಾಗೂ ಕಲ್ಲೂರ್ – ಮಂಡಳಿ ಕೈಗಾರಿಕಾ ಪ್ರದೇಶಗಳ ನಿರ್ವಹಣೆ ಮತ್ತು ಸ್ವಚ್ಛತೆಯನ್ನು ನಿಯಮಿತವಾಗಿ ನಿರ್ವಹಿಸಬೇಕು ಎಂದು ಮನವಿ ಮಾಡಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಬೆಳವಣಿಗೆಗಳ ಅನುಕೂಲಕರ ವಾತಾವರಣ ಮುಂದುವರಿಯಲು ಹಾಗೂ ನಗರದ ಅಭಿವೃದ್ಧಿಗೆ ಸ್ಥಳೀಯ ಆಡಳಿತದೊಂದಿಗೆ ಸಹಕರಿಸಲು ಸಂಘ ಸದಾ ಸಿದ್ಧವಾಗಿದೆ ಎಂದು ತಿಳಿಸಿದರು.
Chamber of Commerce Shivamogga ನೂತನ ಆಯುಕ್ತ ಮಾಯಣ್ಣಗೌಡ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಹಿಂದೆ ಕೆಲಸ ಮಾಡಿದ ಅನುಭವ ಇದ್ದು, ನಗರದ ಎಲ್ಲಾ ಸಮಸ್ಯೆಗಳ ಅರಿವು ಇದೆ. ಇವುಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್ ಮನೋಹರ್, ನಿರ್ದೇಶಕರಾದ ಪ್ರದೀಪ್ ವಿ ಯೆಲಿ, ಗಣೇಶ್ ಅಂಗಡಿ, ಲಕ್ಷ್ಮೀದೇವಿ ಗೋಪಿನಾಥ್ ಹಾಜರಿದ್ದರು.