ಸಾಮಾನ್ಯವಾಗಿ ಮೊಮ್ಮಕ್ಕಳ ಹುಟ್ಟುಹಬ್ಬವನ್ನು ಅಜ್ಜ ಅಜ್ಜಿಯರು ಸಿಹಿ ತಿಂಡಿ ಹಂಚಿ, ಆಟಿಕೆಗಳನ್ನು ಕೊಟ್ಟು ಸಂಭ್ರಮಿಸುವುದು ವಾಡಿಕೆ. ಆದರೆ, ಶಿವಮೊಗ್ಗದಲ್ಲಿನ ಒಂದು ಕುಟುಂಬವು ಈ ಸಂಭ್ರಮವನ್ನು ವಿಜ್ಞಾನದ ಆಸಕ್ತಿಯೊಂದಿಗೆ ಜೋಡಿಸಿ, ಸಮಾಜಕ್ಕೆ ಪ್ರೇರಣೆಯಾಗುವ ವಿಶಿಷ್ಟ ಕಾರ್ಯಕ್ರಮ ಆಯೋಜಿಸುತ್ತಿದೆ. ಇದು ಕೇವಲ ಒಂದು ಹುಟ್ಟುಹಬ್ಬದ ಆಚರಣೆಯಲ್ಲ, ಬದಲಾಗಿ ಭವಿಷ್ಯದ ವಿಜ್ಞಾನಿಗಳಿಗೆ ಸ್ಫೂರ್ತಿ ನೀಡುವ ಮತ್ತು ಸಮಾಜದಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಒಂದು ಅರ್ಥಪೂರ್ಣ ಹೆಜ್ಜೆಯಾಗಿದೆ.
ಈ ವಿಶಿಷ್ಟ ಕಾರ್ಯಕ್ರಮದ ಹಿಂದಿರುವ ಪ್ರೇರಣೆ ಅಜ್ಜ ಅಜ್ಜಿಯರ ದೂರದೃಷ್ಟಿ. ಅವರು ತಮ್ಮ ಮಕ್ಕಳ ಜನ್ಮದಿನವನ್ನೂ ಕಳೆದ 40 ವರ್ಷಗಳಿಂದಲೂ ನಿರಂತರವಾಗಿ ಆಚರಿಸಿ ಕೊಂಡು ಬಂದಿದ್ದಾರೆ. ಅಲ್ಲಿ ಕಲೆಯಲ್ಲಿ ಸಾಧನೆಗೈದವರಿಗೆ ಪ್ರಶಸ್ತಿ ನೀಡಿ ಕಾರ್ಯಕ್ರಮ ಮಾಡಿದರೆ, ಇಲ್ಲಿ ತಮ್ಮ ಮೊಮ್ಮಕ್ಕಳ ಜನ್ಮದಿನವನ್ನು ಕೇವಲ ವೈಯಕ್ತಿಕ ಸಂತೋಷಕ್ಕೆ ಸೀಮಿತಗೊಳಿಸದೆ, ಅದಕ್ಕೊಂದು ಸಾಮಾಜಿಕ ಮಹತ್ವ ನೀಡಲು ಅವರು ನಿರ್ಧರಿಸಿದ್ದಾರೆ. ವಿಜ್ಞಾನ ಮತ್ತು ಸಂಶೋಧನೆಯ ಮಹತ್ವವನ್ನು ಸಮಾಜಕ್ಕೆ ಪರಿಚಯಿಸುವುದರ ಜೊತೆಗೆ, ಯುವ ಪೀಳಿಗೆಯಲ್ಲಿ ವೈಜ್ಞಾನಿಕ ಆಸಕ್ತಿಯನ್ನು ಮೂಡಿಸುವುದು ಅವರ ಮುಖ್ಯ ಉದ್ದೇಶ. ಈ ಮೂಲಕ, ಮೊಮ್ಮಕ್ಕಳು ಕೂಡ ಬಾಲ್ಯದಿಂದಲೇ ವೈಜ್ಞಾನಿಕ ಚಿಂತನೆ ಮತ್ತು ಸಂಶೋಧನೆಯ ಕಡೆಗೆ ಆಸಕ್ತಿ ಬೆಳೆಸಿಕೊಳ್ಳಲು ಪ್ರೇರೇಪಿಸುವುದು ಅವರ ಆಶಯ.
ವಿಜ್ಞಾನ ಸಂಶೋಧಕರಿಗೆ ಪ್ರಶಸ್ತಿ ಪ್ರದಾನ:
ಮೊಮ್ಮಕ್ಕಳ ಜನ್ಮದಿನದಂದು, ವಿಜ್ಞಾನ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಯುವ ಪ್ರತಿಭೆ ಪ್ರಶಸ್ತಿ ನೀಡಿ ಗೌರವಿಸುವ ಕಾಯಕವನ್ನು ಕಳೆದ 8 ವರ್ಷಗಳಿಂದ ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಈ ಪ್ರಶಸ್ತಿಯು ನಗದು ಪ್ರಥಮ ಬಹುಮಾನ 25,000ರೂ. ಸ್ವರ್ಣ ಪ್ರಶಸ್ತಿಯಾದರೆ 15,000ರೂ.ನ ರಜತ ಪ್ರಶಸ್ತಿ ಇದರ ಜೊತೆಗೆ ಒಂದು ಪ್ರಮಾಣ ಪತ್ರ ಮತ್ತು ಸ್ಮರಣಿಕೆ ಒಳಗೊಂಡಿರುತ್ತದೆ. ಪ್ರಶಸ್ತಿಗಾಗಿ ಆಯ್ಕೆ ಮಾಡುವಾಗ, ಆ ಸಂಶೋಧಕರ ಕೊಡುಗೆ ಸಮಾಜಕ್ಕೆ ಹೇಗೆ ಉಪಯುಕ್ತವಾಗಿದೆ ಮತ್ತು ಭವಿಷ್ಯದ ಪೀಳಿಗೆಗೆ ಹೇಗೆ ಸ್ಫೂರ್ತಿ ನೀಡಬಲ್ಲದು ಎಂಬುದನ್ನು ಪರಿಗಣಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಮೊಮ್ಮಕ್ಕಳು, ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಸ್ಥಳೀಯ ಶಾಲಾ ಮಕ್ಕಳು ಸಹ ಹಾಜರಾಗುತ್ತಾರೆ.
ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರು ತಮ್ಮ ಸಂಶೋಧನೆಯ ಕುರಿತು ಮತ್ತು ವಿಜ್ಞಾನ ಕ್ಷೇತ್ರದ ಕುರಿತು ಚಿಕ್ಕದಾಗಿ ಮಾತನಾಡುತ್ತಾರೆ. ಇದು ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಸಹಾಯ ಮಾಡುತ್ತದೆ. ವಿಜ್ಞಾನ ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆ ಕೂಡ ಈ ಕಾರ್ಯಕ್ರದಲ್ಲಿ ಆಯೋಜನೆಯಾಗಿದೆ. ಶಿವಮೊಗ್ಗ ಪ್ರೌಢಶಾಲಾ ವಿಜ್ಞಾನ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಗಳು ಇದನ್ನು ನಡೆಸಿಕೊಡಲಿದ್ದಾರೆ.
ಸಮಾಜಕ್ಕೆ ಸಂದೇಶ ನೀಡುವ ಉತ್ತಮ ಕಾರ್ಯಕ್ರಮ:
ಈ ವಿಶಿಷ್ಟ ಕಾರ್ಯಕ್ರಮವು ಸಮಾಜಕ್ಕೆ ಹಲವು ಸಕಾರಾತ್ಮಕ ಸಂದೇಶಗಳನ್ನು ನೀಡುತ್ತದೆ.
- ವೈಜ್ಞಾನಿಕ ಮನೋಭಾವದ ಪ್ರೋತ್ಸಾಹ: ವಿಜ್ಞಾನ ಮತ್ತು ಸಂಶೋಧನೆಯ ಮಹತ್ವವನ್ನು ಎತ್ತಿ ಹಿಡಿಯುವ ಮೂಲಕ ಸಮಾಜದಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುತ್ತದೆ.
- ಯುವ ಪೀಳಿಗೆಗೆ ಪ್ರೇರಣೆ: ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ಯುವಜನರನ್ನು ಪ್ರೇರೇಪಿಸುತ್ತದೆ.
- ಸೃಜನಾತ್ಮಕ ಚಿಂತನೆ: ಹುಟ್ಟುಹಬ್ಬದಂತಹ ಆಚರಣೆಗಳನ್ನು ಹೇಗೆ ಹೆಚ್ಚು ಅರ್ಥಪೂರ್ಣವಾಗಿಸಬಹುದು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ.
ಈ ರೀತಿ, ಮೊಮ್ಮಕ್ಕಳ ಜನ್ಮದಿನದ ಈ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿರುವುದು ಡಾಕ್ಟರ್ ವಿಘ್ನೇಶ್ ಎನ್. ಭಟ್ ಮತ್ತು ಡಾಕ್ಟರ್ ಸುಮಿತ್ರಾ ವಿ. ಭಟ್ ಇವರು. ತಮ್ಮ ಮಕ್ಕಳದ ಓಜೋಸ್ ಇಶಾನ್ ಮತ್ತು ತೇಜಸ್ ಇವರ ಜನ್ಮದಿನದ ಆಚರಣೆ ಅಂಗವಾಗಿ ತಂತ್ರಜ್ಞಾನ ರಂಗದಲ್ಲಿ ಈ ಸ್ಪರ್ಧಾತ್ಮಕ ವಾರ್ಷಿಕ ಪ್ರಶಸ್ತಿಗಳನ್ನು ಸ್ಥಾಪಿಸಿದ್ದಾರೆ. 23 ವರ್ಷದೊಳಗಿನ ಭಾರತೀಯ ಯುವ ತಂತ್ರಜ್ಞಾನಗಳು ಸಾಮಾಜಿಕ ಅಭಿವೃದ್ಧಿಯ ದಿಸೆಯಲ್ಲಿ ಸಾಧಿಸಿದ ಹೊಸ ಆವಿಷ್ಕಾರಗಳಿಗಾಗಿ ಸ್ವರ್ಣ ಮತ್ತು ರಜತ ಪ್ರಶಸ್ತಿಗಳನ್ನು ರಾಷ್ಟ್ರಮಟ್ಟದ ಕಿರಿಯ ವಿಜ್ಞಾನಿಗಳ ನಿರ್ಣಾಯಕ ಸಮಿತಿಯು ಇದನ್ನು ನಿರ್ಧಾರ ಮಾಡುತ್ತದೆ. ಮೊಮ್ಮಕ್ಕಳ ಹೆಸರಿನಲ್ಲಿ ಇದೊಂದು ವಿಶೇಷ ಕಾರ್ಯಕ್ರಮವಾಗಿದೆ. ಅದಕ್ಕಾಗಿ ಇಲ್ಲಿ ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ದಸವು ಜನ ಜೀವನಕೆ ಎಂಬ ಡಿವಿಜಿ ಅವರ ಮಾತನ್ನು ಕೂಡ ಸಾರ್ಥಕ ಗೊಳಿಸಲಾಗಿದೆ.
ಈ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ನಿರ್ಣಾಯಕ ವಿಜ್ಞಾನ ಸಮಿತಿ ಎಂದರೆ ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನ ಪ್ರೊ. ಶಿವರಾಮ ಹೆಗಡೆ, ಭಾರತ ಸರ್ಕಾರದ ಇಸ್ರೋದಲ್ಲಿ ಕಾರ್ಯ ನಿರ್ವಹಿಸಿದ ಅನುಭವಿ ಡಾ. ವೆಂಕಟ್ರಮಣ ಎಸ್. ಹೆಗಡೆ, ಬೆಂಗಳೂರಿನ ಪ್ರೇರಣ ಸಂಸ್ಥೆಯ ಪ್ರೊ. ರಾಮಚಂದ್ರ ಶಾಸ್ತ್ರಿಯವರೇ ಅಲ್ಲದೇ ನಮ್ಮ ಶಿವಮೊಗ್ಗದ ಡಾ. ಕೆ. ಆರ್. ಶ್ರೀಧರ್, ಡಾ. ರಜನಿ ಪೈ, ಡಾ. ಎಸ್. ಮಹೇಶ್ ಇವರುಗಳು ಇದ್ದಾರೆ. ಅಲ್ಲದೆ ಈ ಕಾರ್ಯಕ್ರಮಕ್ಕೆ ಸ್ಥಾನೀಯ ಸಲಹಾ ಸಮಿತಿಯಲ್ಲಿ ಡಾ. ಶ್ರೀಪಾದ್ ಜಿ. ಹೆಗಡೆ, ಡಾ. ಎಚ್.ಎಸ್. ಕೃಪಾಲನಿ, ಶ್ರೀ ರಾಘವೇಂದ್ರ ಕೇಶವ್ ಪುರಾಣಿಕ್, ಶ್ರೀ ರಘು ಬಿ. ಎನ್., ಡಾ. ಮೈತ್ರೇಯಿ ಆದಿತ್ಯಪ್ರಸಾದ್ ಇವರುಗಳು ಜೊತೆಯಾಗಿದ್ದಾರೆ.
ಶಿವಮೊಗ್ಗದ ಈ ಕುಟುಂಬ ಸಮಾಜಕ್ಕೆ ನೀಡುತ್ತಿರುವ ಒಂದು ಬಹುದೊಡ್ಡ ಕೊಡುಗೆಯಾಗಿದೆ. ಇದು ಭವಿಷ್ಯದ ವಿಜ್ಞಾನಿಗಳಿಗೆ ಸ್ಫೂರ್ತಿಯಾಗುವುದರ ಜೊತೆಗೆ, ವೈಜ್ಞಾನಿಕ ಪ್ರಗತಿಗೆ ಸಮಾಜದ ಸಹಕಾರವನ್ನು ಪ್ರೋತ್ಸಾಹಿಸುವ ಒಂದು ಮಾದರಿ ಪ್ರಯತ್ನವಾಗಿದೆ. ಇವರ ಕಾರ್ಯವನ್ನು ನೋಡಿದಾಗ ಯಾರು ಪ್ರಪಂಚದ ಸುಖವನ್ನು ಹೆಚ್ಚಿಸಲು ಹೆಚ್ಚಿಸುತ್ತಾರೋ ಅವರು ತಮ್ಮ ಸುಖವನ್ನು ಹೆಚ್ಚಿಸಿಕೊಳ್ಳುತ್ತಾರೆ ಎನ್ನುವ ಡಾ. ಶಿವರಾಮ ಕಾರಂತರ ಮಾತು ಇಲ್ಲಿ ಸಾಕಾರಗೊಂಡಿರುವುದನ್ನು ಕಾಣಬಹುದು. ಈ ಬಾರಿಯ ಮೊಮ್ಮಕ್ಕಳು ಏಸ್ ಆಫ್ ಇನ್ನೋವೇಟಿವ್ ಪ್ರಶಸ್ತಿ ಪ್ರದಾನ ಸಮಾರಂಭ ಶಿವಮೊಗ್ಗದ ಅನುಪಿನಕಟ್ಟೆಯ ಶ್ರೀರಾಮಕೃಷ್ಣ ಗುರುಕುಲ ವಸತಿ ಶಾಲೆಯಲ್ಲಿ ದಿ. 11-06-2024 ರಂದು ಸರಿಯಾಗಿ 10 ಗಂಟೆಗೆ ಆಯೋಜನೆಯಾಗಿದೆ. ಇಂತಹ ವಿಶೇಷ ಕಾರ್ಯಕ್ರಮ ಆಯೋಜಿಸಿದವರು ನಮ್ಮ ಶಿವಮೊಗ್ಗದವರೇ ಎನ್ನುವುದು ನಮ್ಮೆಲ್ಲರ ಹೆಮ್ಮೆ ಹಾಗು ಇಂತಹ ಸಂಸ್ಕೃತಿ ಸಮಾಜಕ್ಕೆ ಅನುಕರಣ ಯೋಗ್ಯ ಎನ್ನುವುದನ್ನು ಡಾ. ವಿಘ್ನೇಶ್ ಭಟ್ ಹಾಗೂ ಡಾ. ಸುಮಿತ್ರಾ ವಿ. ಭಟ್ ದಂಪತಿಗಳು ಇಲ್ಲಿ ಸಾಕಾರ ಮಾಡಿದ್ದಾರೆ. - ಡಾ. ಮೈತ್ರೇಯಿ ಆದಿತ್ಯಪ್ರಸಾದ್,
ಉಪನ್ಯಾಸಕರು,
ಪೇಸ್ ಕಾಲೇಜು, ಶಿವಮೊಗ್ಗ.