Klive Special Article ಕರುನಾಡ ರಸ ಋಷಿ, ರಾಷ್ಟ್ರಕವಿ ಕುವೆಂಪು .
ರಸ ಋಷಿ, ರಾಷ್ಟ್ರಕವಿ ಕುವೆಂಪು ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಲ್ಲಿ ತಾಲೂಕಿನ ಕುಪ್ಪಳ್ಳಿಯಲ್ಲಿ ವೆಂಕಟಪ್ಪ ಮತ್ತು ಸೀತಮ್ಮ ದಂಪತಿಗಳಿಗೆ 1904 ಡಿಸೆಂಬರ್ 29ರಂದು ಜನಿಸಿದರು.
ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ, ಕುವೆಂಪು ಎಂದು ಪ್ರಸಿದ್ಧರಾದ ಇವರು, ಭಾರತೀಯ ಕವಿ, ನಾಟಕಕಾರ, ಕಾದಂಬರಿಕಾರ ಮತ್ತು ವಿಮರ್ಶಕ. ಇವರನ್ನು 20ನೇ ಶತಮಾನದ ಅತ್ಯುತ್ತಮ ಕನ್ನಡ ಕವಿ ಎಂದು ಪರಿಗಣಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಮೊದಲ ಸಾಹಿತಿ ಕುವೆಂಪು ಆಗಿದ್ದಾರೆ. ಇವರು ಸಾಹಿತ್ಯ ಕೃಷಿ, ಸಾಮಾಜಿಕ ಜೀವನ, ವಿಶ್ವ ಮಾನವ ಸಂದೇಶ, ಪಂಚ ಮಂತ್ರ, ಸಪ್ತ ಸೂತ್ರಗಳು ಜಗದ್ವಿಖ್ಯಾತಿ ಪಡೆದಿವೆ. ಹುಟ್ಟುತ್ತಾ ವಿಶ್ವ ಮಾನವನಾಗಿ ಹುಟ್ಟಿದ ಮಗುವನ್ನು ನಂತರದಲ್ಲಿ ಜಾತಿ ಧರ್ಮ ಸಂಕೋಲೆಯಲ್ಲಿ ಸಂಕುಚಿತ ವ್ಯಕ್ತಿಯನ್ನಾಗಿ ಮಾಡುತ್ತೇವೆ, ಆದರೆ ಶಿಕ್ಷಣದ ಮೂಲಕ ಆ ಮಗುವನ್ನು ವಿಶ್ವ ಮನವನ್ನನ್ನಾಗಿ ಮಾಡಬೇಕೆಂದು ಹೇಳುತ್ತಾರೆ.
ಆತ್ಮೀಯರೇ, ಮಹಾಕವಿ ಕುವೆಂಪು ಅವರ ಜನ್ಮ ದಿನ ಇಂದು ಅವರ ಸಾಹಿತ್ಯದಲ್ಲಿ ಸಾಮಾಜಿಕ ಕಳಕಳಿ ಮತ್ತು ವೈಚಾರಿಕತೆ ಬಗ್ಗೆ ತಿಳಿಯೋಣ ಬನ್ನಿ…
“ನೂರು ದೇವರನೆಲ್ಲ ನೂಕಾಚೆ ದೂರ.. ಭಾರತಾಂಬೆಯೆ ನಮ್ಮಯ ದೇವರು ನೋಡ… ” ಎಂದು ನುಡಿದವರು ರಸ ಋಷಿ ಕವಿ ಕುವೆಂಪು.
Klive Special Article ಕನ್ನಡ ಸಾರಸ್ವತ ಲೋಕದ ಮೇರು ಸಾಹಿತಿ, ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಧೀಮಂತ ಸಾಹಿತಿ, ಕನ್ನಡದ ಎರಡನೇ ರಾಷ್ಟ್ರಕವಿ, ಪಂಪ ಪ್ರಶಸ್ತಿ, ಕೆಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಮುಡಿಗೇರಿಸಿಕೊಂಡ ಯುಗದ ಕವಿ, ಜಗದ ಕವಿ , ಸಾಹಿತ್ಯ ದಿಗ್ಗಜ ನಮ್ಮ ಹೆಮ್ಮೆಯ ಕವಿ ಕುವೆಂಪು. ಕುವೆಂಪು ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ಮಲೆನಾಡ ಪರಿಸರದಲ್ಲಿ ಜನಿಸಿದರೂ ಕೂಡ ಕೇವಲ ಪ್ರಕೃತಿ ರಮಣೀಯ ಸಾಹಿತ್ಯಕ್ಕೆ ಸೀಮಿತವಾಗದೆ ಪರಿಸರ, ಸಾಮಾಜಿಕ ಕಳಕಳಿ, ರಾಜಕೀಯ ವಿಡಂಬನೆ, ಧಾರ್ಮಿಕ ನೆಲೆಗಟ್ಟು ಒಳಗೊಂಡಂತೆ ವಿವಿಧ ರಸಗಳ ಸಮಾಗಮ ಸಾಹಿತ್ಯ ರಚನೆ ಮಾಡಿದ್ದಾರೆ. ಇವರೊಬ್ಬ ಶ್ರೇಷ್ಠ ಸಾಮಾಜಿಕ ಚಿಂತಕರಾಗಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮ ಸೃಜನಶೀಲತೆಯನ್ನು ಮೆರೆಯುವಾಗ ಎಲ್ಲಿಯೂ ಸಾಮಾಜಿಕ ನೆಲೆಗಟ್ಟಿನ ಚಿಂತನೆಗಳನ್ನು ಕಡೆಗಣಿಸಿಲ್ಲ . ವಿಶ್ವ ಮಾನವ ಸಂದೇಶ ಸಾರುವ ಕವಿ ಕುವೆಂಪು ಅವರು ಒಂದು ಕಡೆ ಹೀಗೆ ಹೇಳುತ್ತಾರೆ: ಪ್ರತಿಯೊಂದು ಮತದಲ್ಲಿಯೂ ನಿತ್ಯಾಂಶಗಳಿಗಿಂತ ಅನಿತ್ಯಾಂಶಗಳೆ ಹೆಚ್ಚು. ಪ್ರತಿಯೊಬ್ಬ ಸಂತ, ಗುರು, ಆಚಾರ್ಯರು ಆಯಾಯ ಕಾಲ, ದೇಶಗಳ ಧರ್ಮ, ಕರ್ಮಗಳಿಂದ, ಸ್ಥಿತಿ ಸನ್ನಿವೇಶಗಳಿಂದ, ಸಂಪ್ರದಾಯ ನಿರ್ಬಂಧಗಳಿಂದ, ಭಾವಾಲೋಚನೆಗಳಿಂದ ಪೂರ್ವಾಗ್ರಹ ದುರಾಗ್ರಹಗಳಿಂದ, ಕಟ್ಟು ಪಡೆದಿರುತ್ತಾನಾದ್ದರಿಂದ ಎಲ್ಲ ಮತ ಪಂಥಗಳಲ್ಲಿ ಹೊಟ್ಟು ಬಹು ಪ್ರಮಾಣದಲ್ಲಿ ಸೇರಿಕೊಳ್ಳುವ ಅವಕಾಶ ಉಂಟು. ಈ ಸಾಲುಗಳು ನಮಗೆ ಇವರ ಸಾಮಾಜಿಕ ಕಳಕಳಿ ಎಷ್ಟು ಗಾಢವಾಗಿತ್ತು ಎಂಬುದನ್ನು ಹೇಳುತ್ತದೆ.
ಸರ್ವರಿಗೆ ಸಮಬಾಳು! ಸರ್ವರಿಗೆ ಸಮಪಾಲು!! ಎಂಬ ನವಯುಗವಾಣಿ ಘೂಷಿಸಿದೆ ಕೇಳಿ ಎಂದು ಆರಂಭವಾಗುವ ‘ಹೊಸ ಬಾಳಿನ ಗೀತೆ’ ಎಂಬ ಕವಿತೆ ಏಕಕಾಲಕ್ಕೆ ಸಮಾಜವಾದ, ಸಮತಾವಾದಗಳೆರಡನ್ನೂ ಹೊತ್ತು ತರುವಂಥದ್ದಾಗಿದೆ. ನೂರಾರು ವರ್ಷಗಳಿಂದ ದಾರಿದ್ರ್ಯ ಭಾರದಿಂದ ಇರುವ ಈ ನೆಲದ ಬಹುತೇಕ ಜನರು ಬಹುಸಂಖ್ಯಾತರು. ಆದರೆ ಪುರೋಹಿತಶಾಹಿ ಜನರು ಆಳುತ್ತಾ, ಇವರನ್ನು ಕಡೆಗಣಿಸುತ್ತಾ ಬಂದಿರುವುದು ಸೂಕ್ಷ್ಮವಾಗಿ ಕಾಣುವ ಕಹಿ ಸತ್ಯವೆ ಸರಿ. ಇಂತಹ ಪರಿಸ್ಥಿತಿ ಬದಲಾಗಬೇಕು, ಜನ ಪ್ರಭುತ್ವ ಜಾರಿಯಾಗಬೇಕೆಂದು ಕವಿಯ ಆಶಯವಾಗಿದೆ.
ಇದಕ್ಕೆ ಪೂರಕವಾಗಿ ಕುವೆಂಪು ಅವರ ಈ ಸಾಲುಗಳನ್ನು ಕಾಣಬಹುದು…
ಇಂದು ನೀವೇಳದಿರೆ ಕೆಚ್ಚೆದೆಯ ತಾಳದಿರೆ
ನಿಮ್ಮವರ ಬಾಳು ಎಂದೆಂದಿಗೂ ಹೇಡಿ!
ಇಂದು ರಕ್ತದ ಬಿಂದು ಮುಂದೆ ಸೌಖ್ಯದ ಸಿಂಧು!
ಎಂದು ಸಾಹಸ ಕೇಳಿ, ಹಿಂಜರಿಯಬೇಡಿ.
ಈ ಕವಿತೆಯ ಉದ್ದಕ್ಕೂ ಆಶಾವಾದಿಗಳಾಗಿ ಉಳಿಯುವ ಕವಿಯೂ ಭಾರತದ ಅವಾಸ್ತವ ಪ್ರಜ್ಞೆ ಪರಂಪರೆಯನ್ನೂ ವ್ಯಂಗ್ಯವಾಗಿಯೇ ನೆನಪಿಸುತ್ತಾರೆ.
ಇಂದು ಸಿಂಹಾಸನಕೆ ಬಂದಿಹುದು ಕೊನೆಗಾಲ!
ಕಳಚಿ ಬೀಳುವುದಿಂದು ನಂದನದ ಬೇಲಿ
ದೇವತೆಗಳಶ್ಲೀಲ ಮೋದಕ್ಕೆ ಬದಲಾಗಿ
ಗೋಚರಿಪುದಲ್ಲಿ ಮರ್ತ್ಯದ ಕೃಷಿಯ ಕೇಲಿ!
ಇಂತಹ ಅವಾಸ್ತವ ಪ್ರಜ್ಞೆಯು ವಾಸ್ತವಕ್ಕೆ ಜಾರಿ, ಒಂದು ಸೀಮಿತ ವರ್ಗವು ವಿಶೇಷವಾಗಿ ಪೋಷಿಸುತ್ತಾ ಬಂದ ಜಾತಿ, ನೀತಿ, ಪಕ್ಷಪಾತದಂತಹ ವಿಚಾರಗಳನ್ನು ಜನತೆ ಸಾಮೂಹಿಕ ಪ್ರಯತ್ನದಿಂದ ಬುಡಮೇಲು ಮಾಡಿ, ಮತ್ತೊಂದು ಸ್ವರ್ಗವನ್ನು ಇಲ್ಲಿಯೇ ಸೃಷ್ಟಿಸುತ್ತಾರೆಂಬ ತಿಳುವಳಿಕೆಯೊಂದಿಗೆ ಕವಿ ಮುಂದೆ ಸಾಗುತ್ತಾರೆ.
ಪರಂಪರೆಯು ಪೋಷಿಸಿಕೊಂಡು ಬಂದ ಹಣೆಬರಹ, ಕೀಳರಿಮೆ, ಅಸಹಾಯಕ ಮನೋಭಾವ ಮೊದಲಾದ ಮೌಢ್ಯಗಳು ಸಂಸ್ಕೃತಿಯ ಹೆಸರಿನಲ್ಲಿ ಮೇಲುವರ್ಗದ ಜನರು ವಿಶೇಷವಾಗಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಹಾಗೆ ಶತಮಾನಗಳಿಂದಲೂ ಜಡವಾದ ‘ಮನಸ್ಸು’ ಇಂದು ಕ್ರಾಂತಿಯತ್ತ ಕಾರ್ಯೋನ್ಮುಖಗೊಳ್ಳುವುದು ಸುಲಭ ಸಾಧ್ಯವಲ್ಲ. ಇದಕ್ಕೆ ಎದೆಗಾರಿಕೆ ಬೇಕು. ಅಂತಹ ಕ್ರಾಂತಿಯಿಂದಲೇ ಸಾಮಾಜಿಕ, ಆರ್ಥಿಕ ಬದಲಾವಣೆ ಸಾಧ್ಯ ಎಂಬ ನಿಲುವು ಕವಿಗಿದೆ.
ಇಂದು ನೆತ್ತರು ಚೆಲ್ಲಿ ಮುಂದೆ ಬಹ ಮಕ್ಕಳಿಗೆ
ಹೊಟ್ಟೆಗನ್ನವ, ಮೈಗೆ ಬಟ್ಟೆಯನು ನೀಡಿ
ಇಂದು ನೋವಾದರೂ ಇಂದು ಸಾವಾದರೂ
ಮುಂದೆ ಬಾಳಿಗೆ ಸೊಗಸು ನೆಮ್ಮದಿಯ ಮಾಡಿ!
ಈ ಕವಿತೆಯಲ್ಲಿ ಕವಿ ತಮ್ಮ ಸಾಮಾಜಿಕ ಕಳಕಳಿಯ ಆಶಯವನ್ನು ಹಾಗೂ ಎಚ್ಚರಿಸುವ ಪ್ರಯತ್ನವನ್ನು ವ್ಯಕ್ತಪಡಿಸುತ್ತಾರೆ. ಈ ನಡುವೆ ಪರಂಪರೆಯನ್ನು ಕುರಿತ ವಾಸ್ತವವಾದಿ ಪ್ರಜ್ಞೆ ಇಲ್ಲಿ ಪ್ರಖರವಾಗಿ ಕಾಣುತ್ತದೆ. ಈ ನೆಲೆಯಲ್ಲಿ ಧರ್ಮ, ದೈವ, ಸಂಸ್ಕೃತಿ ಎಂದೆಂಬ ಹೆಸರುಗಳಿಂದ ನಡೆದ ಶೋಷಣೆಯ ಇತಿಹಾಸವನ್ನು ಅರಿವಿಗೆ ತರುತ್ತಾರೆ. ಈ ನೆಲೆಯಲ್ಲಿ ಬಂಡಾಯ ಧೋರಣೆ ಸ್ಫುಟವಾಗಿದೆ. ಆರೋಗ್ಯಕರವಾದ ಸಮಾಜ ನಿರ್ಮಾಣದ ಕನಸು ಸ್ಪಷ್ಟವಾಗಿದೆ.
ಇದೇ ಆಶಯವನ್ನು ಕುವೆಂಪುರವರು ತಮ್ಮ ‘ಕಲ್ಕಿ’ ಪದ್ಯದಲ್ಲಿಯೂ ವ್ಯಕ್ತಪಡಿಸುತ್ತಾರೆ. ಆದರೆ ಅಲ್ಲಿ ತಂತ್ರಗಾರಿಕೆ ವಿಭಿನ್ನವಾದುದು. ಅದು ಕಥನದ ಧಾಟಿಯಲ್ಲಿದೆ. ಅಂತಹ ಕಥನ ಕವನದ ಮೂಲಕವಾಗಿ ಇಂದಿನ ಅಸಮಾನತೆಯ ಸಮಾಜವು ಸಮಾನತೆಯ ನೆಲೆಯಲ್ಲಿ ಕ್ರಾಂತಿಕಾರಕವಾಗಿ ಮಾರ್ಪಡುತ್ತದೆಂಬ ಕನಸುಗಾರಿಕೆಯನ್ನು ಕವಿ ಇಟ್ಟುಕೊಂಡಿದ್ದಾರೆ. ಇಂತಹ ಆಶಯವನ್ನು ಪ್ರತಿಮಾತ್ಮಕ ನೆಲೆಯಲ್ಲಿ ಮೂಡಿಸಲೆತ್ನಿಸುತ್ತಾರೆ.
ಪುರಾಣ ಪ್ರಪಂಚ ಕಟ್ಟಿಕೊಡುವ ‘ಕಲ್ಕಿ’ ಎಂಬ ಕಲ್ಪನೆಗೆ ಕುವೆಂಪು ಅವರು ಈ ಪದ್ಯದಲ್ಲಿ ಹೊಸ ಸ್ವರೂಪವನ್ನು ನೀಡುತ್ತಾರೆ. ಅದರಂತೆ ಅಲ್ಲಿಯ ಕಲ್ಕಿ ಇಲ್ಲಿಯ ಬಡವನೊಂದಿಗೆ ರೂಪಕವಾಗಿ, ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಪ್ರತಿಮೆಯಾಗಿ ಕಾಣಬರುತ್ತಾನೆ. ಇಂತಹ ಅವತಾರ ಮೂಡುವುದು ಬಡಹೊಟ್ಟೆಗಳ ಗರ್ಭದಲ್ಲಿ ಅಡಗಿರುವ ಬಡಬಾಗ್ನಿಯಿಂದ ಎಂಬ ವಾಸ್ತವದ ಕಟ್ಟೆಚ್ಚರವನ್ನು ಕವಿ ನೀಡುತ್ತಾರೆ. ರೊಟ್ಟಿ ಮೂಲದ ಫ್ರಾನ್ಸಿನ ಕ್ರಾಂತಿ ನೆನಪಾಗುವುದು ನಮಗೆ ಇಲ್ಲಿಯೇ. ಸಮುದ್ರದಾಳದ ಈ ಬಡಬಾಗ್ನಿ ಎಂಬ ಬೆಂಕಿ ಹೊರಕ್ಕೆ ಚಿಮ್ಮಿದಾಗ ಸಂಸ್ಕೃತಿ ನಾಶವಾಗುವಂತೆ, ಬಡವನ ಜಠರಾಗ್ನಿಯು ಬಡಬಾಗ್ನಿಯಾಗಿ ಹೊರ ಚಿಮ್ಮಿದಾಗ ಸಮಾಜದ ಎಲ್ಲ ವರ್ಗದ ಜನರೂ ಅಪಾಯಕ್ಕೀಡಾಗುತ್ತಾರೆ. ಅಂತಹ ಸಮಾಜವೇ ಮಹಾ ಸ್ಮಶಾನವಾಗಿ ಮಾರ್ಪಡುತ್ತದೆ! ಅಲ್ಲಿಯೇ ನಿಜದ ಸಮಾಜವಾದ ಮೂಡುತ್ತದೆ. ಈ ಮೂಲಕ ಇಂಡಿಯಾದ ಶತಶತಮಾನಗಳ ಸಮಾನತೆಯ ಕನಸು ಇಲ್ಲಿ ನನಸಾಗುತ್ತದೆ. ಇದನ್ನು ಊಹಿಸಿ, ಎದುರಿಸುವ ಎದೆಗಾರಿಕೆಯು ವಾಸ್ತವವಾಗಿ ಯಾರಿಗೂ ಇಲ್ಲ ಎಂಬುದನ್ನು ಕವಿ ಕಡೆಯ ಸಾಲುಗಳಲ್ಲಿ ಧ್ವನಿಪೂರ್ಣವಾಗಿ ಅಭಿವ್ಯಕ್ತಿಸುತ್ತಾರೆ.
ಕಲ್ಕಿ! ಕಲ್ಕಿ! ಎನ್ನುತ ಚೀರಿ
ಕನಸೊಡೆದೆದ್ದೆ-
ಇನ್ನೆಲ್ಲಿಯ ನಿದ್ದೆ?
ಸಾಮಾಜಿಕ ಚಿಂತಕರು, ಶ್ರೇಷ್ಟ ಬರಹಗಾರರು ಯಾವಾಗಲೂ ಮೇಲು ವರ್ಗಕ್ಕೆ ಪ್ರತಿಯಾದ ಕೆಳವರ್ಗದ ಕಡೆಗೇ ಇರುತ್ತಾರೆಂಬ ತತ್ವ ಇಲ್ಲಿಯೂ ಸ್ಪಷ್ಟವಾಗಿದೆ. ಜ್ಯೋತಿಯ ಮಣಿದೀಪಗಳಲ್ಲಿ, ಕತ್ತಲು, ಕಗ್ಗತ್ತಲು ಇಲ್ಲಿ, ಆ ಕಡೆ ಉದ್ಯಾನ ಈ ಕಡೆ ಸ್ಮಶಾನ ಎನ್ನುವಲ್ಲಿ ಕವಿ ಇಲ್ಲಿ, ಈ ಕಡೆಗೇ ಎಂಬ ಬಡವರ ಎಡೆಯತ್ತ ನಿಂತಿರುವುದನ್ನು ಗಮನಿಸಬಹುದು. ಇದರ ಮೂಲಕವೂ ಕವಿಯು ಯಾರ ಪರವೆಂಬುದನ್ನು ಊಹಿಸಬಹುದು. ಇದಕ್ಕೆ ಪೂರಕವಾದ ‘ರಾಮಧಾನ್ಯ ಚರಿತೆ’ ಯಲ್ಲಿ.
ಬಡತನವೇ ಭಯೋತ್ಪಾದಕ ಲೌಕಿಕ ಚಟುವಟಿಕೆಗಳ ಮೂಲ. ಇಂತಹ ಚಿತ್ರಣಗಳನ್ನು ಇಂದು ಆಂಧ್ರದಂತಹ ಪ್ರದೇಶಗಳಲ್ಲಿ ವಿಶೇಷವಾಗಿ ಗಮನಿಸಬಹುದಾಗಿದೆ. ಅನಕ್ಷರತೆ, ಮೌಢ್ಯತೆ, ನಿರುದ್ಯೋಗ, ಬಡತನ ಮೊದಲಾದವುಗಳ ಆವಾಸಸ್ಥಾನವಾದ ಕಲ್ಕಿ ಅವತಾರವಾಗುವುದು ಈ ಹಿನ್ನೆಲೆಯಲ್ಲಿಯೇ.
ಒಟ್ಟಾರೆಯಾಗಿ ಸಮಾಜವು ಆರೋಗ್ಯಕರವಾಗಿ ಬದಲಾಗುತ್ತದೆಂಬ ಆಶಯವನ್ನು ಹೊತ್ತ ಕವಿ ತಮ್ಮ ಪಾದಗಳನ್ನು ನವೋದಯದ ನೆಲೆಯಲ್ಲಿ ನಿಲ್ಲುತ್ತಾರೆ.
ಸೌಂದರ್ಯೋಪಾಸನೆಯ ನೆಲೆಯಲ್ಲಿಯೆ ಬಹಳವಾಗಿ ನಿಲ್ಲುವ ಭಾರತದ ನವೋದಯ ಮನಸ್ಸು ಕನ್ನಡದ ಕವಿಗಳಲ್ಲಿಯೂ ಕ್ರಿಯಾತ್ಮಕವಾಗಿ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಕಂಡು ಬರುವ ಕುವೆಂಪು ಅವರು ಬದ್ಧತೆ ಮತ್ತು ಮೀರುವಿಕೆಯ ನೆಲೆಯಲ್ಲಿ ಮುಖ್ಯರಾಗುತ್ತಾರೆ. ಆದ್ದರಿಂದ ಕವಿಗೆ ಸಾಮಾಜಿಕ ಪ್ರಜ್ಞೆ ಬೇಕು ಎಂಬ ಆಶಯವನ್ನು ಮತ್ತೆ ಮತ್ತೆ ಒತ್ತಿಹೇಳುತ್ತಾರೆ. ಇದರೊಂದಿಗೆ ಶ್ರಮ ಸಂಸ್ಕೃತಿಯ ನೆಲೆಗಳು ಸಾಂಪ್ರದಾಯಿಕ ಕಾವ್ಯದ ಕಟ್ಟನ್ನು ಒಡೆಯಬೇಕೆಂದು ಸಾಹಿತ್ಯದ ನಿರ್ಮಾಪಕರಿಗೆ ನೇರವಾಗಿಯೂ ಮಾರ್ಗದರ್ಶನ ನೀಡಿ ಬಿಡುತ್ತಾರೆ.
ಆಧುನಿಕ ಸಂದರ್ಭದಲ್ಲಿ ಕನ್ನಡ ಸಾಹಿತ್ಯವು ಹಲವು ಸ್ಥಿತ್ಯಂತರಗಳಿಗೆ ಒಳಗಾಗಿದೆ. ಅದಕ್ಕೆ ಹಿನ್ನೆಲೆಯಾಗಿ ವಸಾಹತು ಮತ್ತು ನವ ವಸಾಹತುಗಳಾದ ನಮ್ಮ ಸಾಂಸ್ಕೃತಿಕ ಸಂದರ್ಭವನ್ನು ಗಮನಿಸಬೇಕು. ಈ ಸಂದರ್ಭದಲ್ಲಿ ವಿವಿಧ ಮೂಲಗಳ ಹಲವು ಬೌದ್ಧಿಕ ಸಂಘರ್ಷಗಳು ಜರುಗಿವೆ. ಸಾಹಿತ್ಯವನ್ನು ತನ್ನ ಸ್ವತ್ತನ್ನಾಗಿಸಿಕೊಂಡು ಸೀಮಿತ ಪುರೋಹಿತಶಾಹಿ ವರ್ಗ ಮತ್ತು ಆ ಸಾಹಿತ್ಯದ ಪರಿಧಿಯೊಳಕ್ಕೆ ತನ್ನ ಸಾಚಾ ಸಂವೇದನೆಗಳೊಂದಿಗೆ ಪ್ರವೇಶಿಸಲೆತ್ನಿಸುತ್ತಿದ್ದ ಶೂದ್ರ ವರ್ಗ-ಇವುಗಳ ನಡುವಣ ಉಂಟಾದ ಸಂಘರ್ಷವೇ ಈ ಕವಿತೆಯ ವಸ್ತು. ಹೀಗೆ ಎರಡು ಭಿನ್ನ ಬೌದ್ಧಿಕತೆಗಳ ನಡುವಣ ಸಂಘರ್ಷದ ಪ್ರಕಟಿತ ರೂಪವಾಗಿ ‘ಗೊಬ್ಬರ’ ಮೈತಾಳುತ್ತದೆ. ಆದರೆ ಪದ್ಯದ ಉತ್ತರಾರ್ಧದಲ್ಲಿ ನಿಂತು ಮಾತನಾಡುವಂತೆ ಕೇಳುತ್ತದೆ. ಇದೇ ಕವಿಯ ಆಶಯವೂ ಹೌದು. ಈ ಮೂಲಕ ಹೊಸ ಸಾಹಿತ್ಯ ಮೀಮಾಂಸೆಯನ್ನು ಮಂಡಿಸವ ಈ ಪದ್ಯ ಏಕಕಾಲಕ್ಕೆ ಪದ್ಯ ಕೃತಿಯೂ, ನೂತನ ಕಾವ್ಯ ಮೀಮಾಂಸೆಯ ಕೃತಿಯೂ ಆಗಿ ಮಾರ್ಪಡುತ್ತದೆ.
ನಾವು ನಮ್ಮ ಇತಿಹಾಸ-ಸಂಸ್ಕೃತಿಗಳನ್ನು ಪರಿಶೀಲಿಸಲು ಸಾಮಾನ್ಯವಾಗಿ ಎರಡು ಕ್ರಮಗಳನ್ನು ಅನುಸರಿಸುತ್ತೇವೆ. ಅವುಗಳಲ್ಲಿ ಮೊದಲನೆಯದು, ಪ್ರಧಾನ ನೆಲೆಗಳ ಮೂಲಕ ಇತಿಹಾಸ, ಸಂಸ್ಕೃತಿಗಳನ್ನು ಅರಿಯುವ ಆಕಾಶದ ಕಣ್ಣಿನ ದೃಷ್ಟಿ. ಎರಡನೆಯದು ಅಲಕ್ಷಿತ ನೆಲೆಗಳ ಮೂಲಕ ಅದನ್ನೇ ಅರಿಯುವ ನೆಲದ ಕಣ್ಣಿನ ದೃಷ್ಟಿ. ಒಂದು ಆಕಾಶದಲ್ಲಿ ಹಾರಾಡಿ ಭೂಮಿಯ ವಿವಿಧ ವಿವರಗಳನ್ನು ನೋಡುವ ಹಕ್ಕಿಯ (ವಿಹಂಗಮ) ಆಕಾಶದ ಕಣ್ಣಿನ ದೃಷ್ಟಿಯಾದರೆ ಮತ್ತೊಂದು ಹಾವಿನಂತೆ ನೆಲದಲ್ಲಿ ಹರಿದಾಡಿ ಎಲ್ಲಾ ಚರಾಚರಗಳನ್ನೂ ಗ್ರಹಿಕೆಗೆ ತಂದುಕೊಳ್ಳುವ ನೆಲದ ಕಣ್ಣಿನ ದೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ನಾವು ಇತಿಹಾಸವನ್ನು ನೈತಿಕ ಪುರಾಣ ಎಂದೇ ಭಾವಿಸಿದ್ದೇವೆ. ಇದು ನಮಗೆ ವಸಾಹತುಶಾಹಿ ಸಂಸ್ಕೃತಿ ಕಲಿಸಿದ ಪಾಠ. ಈ ತಿಳುವಳಿಕೆಯ ಹಿನ್ನೆಲೆಯಲ್ಲಿ ಕರ್ನಾಟಕದ ಇತಿಹಾಸಕಾರನಿಗೆ ಕಾಣುವುದು ಕೇವಲ ಕದಂಬ, ಗಂಗ, ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ ಮೊದಲಾದ ಪ್ರಭುತ್ವಗಳು ಮಾತ್ರ. ಇವರ ಕಥನಗಳ ಒಟ್ಟು ರೂಪವೇ ಕರ್ನಾಟಕದ ಪ್ರಭುತ್ವದ ಇತಿಹಾಸ ಎಂಬುದು ಆಕಾಶದ ಕಣ್ಣಿಗೆ ವೇದ್ಯಗೊಳ್ಳುವ ಸಂಗತಿ. ಆದರೆ ಕರ್ನಾಟಕದ ಪ್ರಭುತ್ವ ಎಂಬುದು ಇಷ್ಟೇ ಅಲ್ಲ. ಇದನ್ನೂ ಒಳಗೊಂಡ ಹಲವು ಸ್ಥಳೀಯ ಪ್ರಭುತ್ವಗಳು ಸೇರಿದಾಗ ಮಾತ್ರ ಅದು ಪೂರ್ಣತೆಯನ್ನು ಪಡೆದುಕೊಳ್ಳುತ್ತದೆ. ಮತ್ತು ಇವುಗಳನ್ನು ಕುರಿತಾದ ‘ನೈತಿಕ ಪುರಾಣ’ದ ಧೋರಣೆಗೆ ಹೊರತಾಗಿ ಗುಣಾತ್ಮಕ ಮತ್ತು ನಕಾರಾತ್ಮಕವಾದ ಅಂಶಗಳು ಸೇರ್ಪಡೆಗೊಂಡಿರುವ ಒಟ್ಟು ಚರ್ಚೆಯೇ ಕರ್ನಾಟಕದ ಸಮಗ್ರ ನೈಜ ಇತಿಹಾಸ ಎಂಬುದು ನೆಲದ ಕಣ್ಣಿಗೆ ಗೋಚರವಾಗುವ ವಸ್ತು ಸತ್ಯ. ಇದರೊಂದಿಗೆ ಪ್ರಭುಗಳು ಎಂಬುವರು ಅತಿಮಾನುಷರಲ್ಲ. ವಾಸ್ತವವಾಗಿ ಅವರೂ ಶ್ರೀಸಾಮಾನ್ಯರೆ ಎಂಬುದು ಈ ತಾರ್ಕಿಕತೆಯ ಮುಖ್ಯ ಭಾಗ. ಇದೇ ನಿಟ್ಟಿನಲ್ಲಿ ರೈತ ಪರವಾದ ನೆಲೆಯಲ್ಲಿ ನಿಂತು ಕುವೆಂಪುರವರು ‘ರೈತನ ದೃಷ್ಟಿ’ ಪದ್ಯದಲ್ಲಿ ಮಾತಾಡಿದ್ದಾರೆ.
ಕರಿಯರದೊ ಬಿಳಿಯರದೊ ಯಾರದಾದರೆ ಏನು?
ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ!
ವಿಜಯನಗರವೊ? ಮೊಗಲರಾಳ್ವಿಕೆಯೊ? ಇಂಗ್ಲೀಷರೊ?
ಎಲ್ಲರೂ ಜಿಗಣೆಗಳೆ ನನ್ನ ನೆತ್ತರಿಗೆ!
ಕತ್ತಿ ಪರದೇಶಿಯಾದರೆ ಮಾತ್ರ ನೋವೆ?
ನಮ್ಮವರೆ ಹದಹಾಕಿ ತಿವಿದರದು ಹೂವೆ?
ಎನ್ನುವ ಕವಿ, ಸಾಮ್ರಾಜ್ಯ ಸುಖವು ಭೂರ್ಜ್ವಾಗಳಿಗೆ ಮಾತ್ರ ಎಂಬ ವಿಚಾರವನ್ನು ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವ ಕಾಲದವರೆಗಿನ ಇತಿಹಾಸದ ಅವಧಿಯ ಹಿನ್ನೆಲೆಯಲ್ಲಿ ಸೂಚಿಸುತ್ತಾರೆ. ಇಂತಹ ವೈಟ್‌ಕಾಲರ್‌ಗಳ ಸಂಸ್ಕೃತಿಯನ್ನು ಪ್ರತಿರೋಧಿಸುತ್ತ, ಶ್ರಮಸಂಸ್ಕೃತಿಯನ್ನು ಎತ್ತಿ ಹಿಡಿಯುವ ಮುಲಕ ಸಾಮಾಜಿಕ ಕಳಕಳಿಯ ಬಗ್ಗೆ ಗಮನ ಹರಿಸಲು ಪ್ರಯತ್ನಿಸಿದ್ದಾರೆ.
ಕಾನೂರು ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು ಕಾದಂಬರಿಗಳ ಮೂಲಕ ಅಡುಗೆ ಕೋಣೆಯ ಚಿತ್ರಣ ಇಲ್ಲಿದೆ. ಕುವೆಂಪು ಅವರ ಕಾದಂಬರಿಗಳಲ್ಲಿ ಬರುವ ಊಳಿಗಮಾನ್ಯ ವ್ಯವಸ್ಥೆಯ ಸಾಮಾಜಿಕ ಸಂರಚನೆಯಲ್ಲಿ ಗಂಡು ಹೆಣ್ಣಿನ ಸ್ಥಳಗಳು ಅಪೂರ್ವವಾಗಿಯೇ ಭಿನ್ನವಾಗುತ್ತವೆ. ಕುವೆಂಪು ಕಂಡ ಶ್ರೇಣೀಕರಣದ ವಸಾಹತುಕಾಲದ ಜಗತ್ತಿನಲ್ಲಿ ಅಧಿಕಾರದ ಬಿಳಿಲುಗಳು ಎಲ್ಲೆಲ್ಲಿಯೊ ಹರಡಿಕೊಂಡು ಪಿತೃಪ್ರಧಾನತೆಯ ಸಂಕೇತವಾದ ಎಲ್ಲ ಬಗೆಯ ಅಧಿಕಾರಗಳನ್ನು ಯಾವ ಎಗ್ಗ ಇಲ್ಲದೆ ಬಳಸುತ್ತಿದ್ದವು. ಅಲ್ಲಿ ಅಧಿಕಾರದ ಪ್ರಶ್ನೆಯೇ ಮುಂಚೂಣಿಯಲ್ಲಿರುತ್ತಿದ್ದು ಅದರ ಜುಟ್ಟು ಊಳಿಗಮಾನ್ಯ ವ್ಯವಸ್ಥೆಯ ಯಜಮಾನನ ಕೈಯಲ್ಲಿರುತ್ತಿತ್ತು.
ಸಾಮಾನ್ಯವಾಗಿ ಅಡುಗೆ ಕೋಣೆ ಮಾತಿನ ಕೋಣೆಯಾದಂತೆ ಮೌನದ ಕೋಣೆಯೂ ಹೌದು. ಅಲ್ಲಿ ಮಾತು ಮೌನಗಳ ವೈರುಧ್ಯವು ತಾನೇ ತಾನಾಗಿರುತ್ತದೆ. ಒಂದೊ ಹೆಂಗಸರ ಜಗಳಗಳಿಂದ ಅಡುಗೆಕೋಣೆಯ ಅಸ್ತಿತ್ವವು ಕಾಣುತ್ತಿದ್ದರೆ ಇನ್ನೊಂದೆಡೆ ಮೌನದಲ್ಲಿ ಇರುವ ಉರಿಯುವ ಒಲೆ, ಪಾತ್ರೆ ಪಡಗಗಳು, ಕಡೆಗೋಲು ಕಂಬಗಳು ಅನೇಕಾನೇಕ ಆಖ್ಯಾನಗಳನ್ನು ತಮ್ಮೊಳಗೆ ಹುದುಗಿಸಿಕೊಂಡು ಚರಿತ್ರೆಯ ನೀರವತೆಯನ್ನು ತಮ್ಮೊಳಗೆ ಹಿಡಿದಿಟ್ಟುಕೊಂಡಂತೆ ಇವೆ. ಅವು ಹೆಣ್ಣಿನ ಎರಡು ಗುಣ ಲಕ್ಷಣಗಳನ್ನು ಬಣ್ಣಿಸುವಂತಿವೆ. ವಾಚಾಳಿತನ ಇಲ್ಲವೇ ಮೌನದ ನಡುವಿನ ಸಂಕಟಗಳನ್ನೂ ಅವು ಹೇಳುತ್ತಲಿವೆ.
ಇನ್ನು ಕುವೆಂಪು ಅವರ ನಾಟಕಗಳಲ್ಲೂ ಸಾಮಾಜಿಕ ಕಳಕಳಿಯ ಲೇಪನ ಕಂಡುಬರುತ್ತದೆ. ಅವರ ನಾಟಕಗಳಲ್ಲಿ ‘ಜಲಗಾರ’ ಮತ್ತು ‘ಬಲಿದಾನ’ ಈ ಎರಡು ನಾಟಕಗಳು ಸಾಮಾಜಿಕ ನಟಕಗಳೆಂದೆ ಹೇಳಬಹುದು. 1928ರ ಸುಮಾರಿಗೆ ರಚನೆಯಾದ ಜಲಗಾರ ನಾಟಕದಲ್ಲಿ ಅಸ್ಪೃಶ್ಯತೆ, ಅಂಧಶ್ರದ್ಧೆ, ಆಡಂಬರ ಅನ್ಯಾಯಗಳು ಅಭಿವ್ಯಕ್ತಗೊಂಡಿವೆ. ಇಲ್ಲಿ ಕವಿ ಕಾಯಕದಿಂದ ಮಾತ್ರ ದೈವ ಸಾಕ್ಷಾತ್ಕಾರ ಸಾಧ್ಯವೆಂಬುದನ್ನು ಸಾರಿದ್ದಾರೆ. ಕಸ ಗುಡಿಸುವ ಜಲಗಾರ, ರೈತ, ಬ್ರಾಹ್ಮಣ, ಮಂತ್ರ ಹೇಳುವ ಭಟ್ಟ, ತಿರುಕ ಈ ಪಾತ್ರಗಳ ನಡುವೆ ಸಂಭಾಷಿಸುವ ಜಲಗಾರ ನಾಟಕದ ಕೊನೆಯಲ್ಲಿ ಶ್ರಮ ಸಂಸ್ಕೃತಿ ಮತ್ತು ಸಾಮಾಜಿಕ ಕಳಕಳಿಯ ಸಂದೇಶ ನೀಡಿ ಬೀದಿ ಗುಡಿಸುವ ಬಡವನೆದೆಯಲ್ಲಿ ಶಿವ ಇದ್ದಾನೆಂದು ಸಾರುವರು. ಕುವೆಂಪು ಅವರು ಹೇಳುವಂತೆ ಜಲಗಾರ, ಶೂದ್ರ ತಪಸ್ವಿ, ಬೆರಳ್ಗೆ ಕೊರಳ್ ಮತ್ತು ಶ್ಮಶಾನ ಕುರುಕ್ಷೇತ್ರ ಈ ನಾಲ್ಕು ನಾಟಕಗಳಲ್ಲಿ ಅವರ ಸಮಾಜಮುಖಿ ನಿಲುವನ್ನು ಕಾಣಬಹುದು. ಶೂದ್ರ ತಪಸ್ವಿ ನಾಟಕದಲ್ಲಿ ಬ್ರಾಹ್ಮಣ ಮತ್ತು ಶೂದ್ರನ ತಪಸ್ಸು ಎರಡು ಎದುರುಗೊಂಡಾಗ ಜಾತಿಗಿಂತ ಜ್ಞಾನ ಮುಖ್ಯವೆಂಬುದನ್ನು, ತಪಸ್ಸು , ಧ್ಯಾನ, ಪೂಜೆ, ಆಧ್ಯಾತ್ಮ ಕೇವಲ ಪ್ರಧಾನ ವರ್ಣಕ್ಕೆ ಒಳಪಡದೆ ಎಲ್ಲರಿಗೂ ಮುಕ್ತವಾದವುಗಳು ಎಂದು ಸಾರುವ ಮೂಲಕ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿದ್ದಾರೆ.
ಕುವೆಂಪು ಅವರ ವೈಚಾರಿಕತೆ ಎಷ್ಟರ ಮಟ್ಟಿಗೆ ಬಲವಾಗಿತ್ತು ಎಂಬುದನ್ನು ನೋಡಲು ಬನ್ನಿ, ಒಂದೇ ಒಂದು ಸಣ್ಣ ಘಟನೆ ತಿಳಿಯೋಣ. 1931ರಲ್ಲಿ ಕುವೆಂಪುರವರು ಶ್ರೀರಂಗಪಟ್ಟಣದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಉಪನ್ಯಾಸ ನೀಡಿದ್ದರು. ಈ ಉಪನ್ಯಾಸ ಕುರಿತು ದೇವುಡು ನರಸಿಂಹಶಾಸ್ತ್ರಿಗಳು ಸರ್ಕಾರಕ್ಕೆ ದೂರು ಸಲ್ಲಿಸಿದರು. ಕುವೆಂಪು ಒಬ್ಬ ಸರ್ಕಾರಿ ನೌಕರನಾಗಿದ್ದು (ಆಗ ಕುವೆಂಪು ಉಪನ್ಯಾಸಕರಾಗಿದ್ದರು) ಯುವಜನತೆಯನ್ನು ಧರ್ಮದ ವಿಷಯದಲ್ಲಿ ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂಬುದು ದೇವುಡು ಆರೋಪವಾಗಿತ್ತು. ಇಂತಹ ಅವಕಾಶಕ್ಕೆ ಕಾಯುತ್ತಿದ್ದ ಅನೇಕರು “ಗರಿಕೆ ಹುಲ್ಲುಗಳು ಗೂಟವಾದವು” ಎಂಬಂತೆ ಕುವೆಂಪು ಮೇಲೆ ತಿರುಗಿಬಿದ್ದರು. ಆದರೆ, ಕುವೆಂಪುರವರು ತಮ್ಮ ವಿರುದ್ಧ ಕೇಳಿ ಬಂದ ಯಾವ ಆರೋಪ, ಟೀಕೆ ಟಿಪ್ಪಣಿ ಮತ್ತು ಬೈಗುಳಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅಂತಿಮವಾಗಿ ಸರ್ಕಾರವು ಟಿ.ಎಸ್. ವೆಂಕಣ್ಣಯವರನ್ನು ಈ ವಿಷಯ ಕುರಿತಂತೆ ತನಿಖೆಗೆ ನೇಮಕ ಮಾಡಿ, ವರದಿ ಸಲ್ಲಿಸುವಂತೆ ಸೂಚಿಸಿತು. ಸರ್ಕಾರಕ್ಕೆ ಕುವೆಂಪು ಮಾಡಿದ್ದ ಉಪನ್ಯಾಸ ಕುರಿತು ಒಂದು ಸಾಲಿನ ಅಥವಾ ಒಂದು ವಾಕ್ಯದ ವರದಿಯನ್ನು ವೆಂಕಣ್ಣಯ್ಯ ಸಲ್ಲಿಸಿದರು. ಅವರ ವರದಿಯ ಸಾರಾಂಶ ಹೀಗಿತ್ತು. “ನಾನು ನನ್ನ ಮಗನಿಗೆ ಇದಕ್ಕಿಂತ ಒಳ್ಳೆಯ ಉಪದೇಶ ನೀಡಲಾರೆ..!”. ನಂತರ ಗಲಾಟೆ ತಣ್ಣಗಾಯಿತು. ವಿವಾದವೆಲ್ಲವೂ ಮುಗಿದ ನಂತರ ಕುವೆಂಪು ಶಿಷ್ಯರು ಒಮ್ಮೆ ಕುವೆಂಪು ಅವರನ್ನು ಕೇಳಿದರು. “ಸಾರ್ ನೀವು ಇಷ್ಟೆಲ್ಲಾ ಗಲಾಟೆಯಾದರೂ ಸಹ ಏಕೆ ಮೌನವಾಗಿದ್ದಿರಿ?” ಇದಕ್ಕೆ ಕುವೆಂಪು ನೀಡಿದ ಉತ್ತರ ಹೀಗಿತ್ತು: “ನೋಡ್ರಯ್ಯಾ, ನನ್ನ ವಿರುದ್ಧ ಸೆಣಸಾಡಲಿಕ್ಕೆ ಅಥವಾ ಕುಸ್ತಿಯಾಡಲಿಕ್ಕೆ ಬರುವ ವ್ಯಕ್ತಿ ಯಾವ ಜಾತಿಯವನು, ಅವನ ವಯಸ್ಸೆಷ್ಟು, ಅವನು ಪಂಡಿತನೆ? ಪುರುಷೋತ್ತಮನೆ? ಇವು ನನಗೆ ಮುಖ್ಯವಲ್ಲ. ನಾನು ಅಖಾಡಕ್ಕೆ ಇಳಿಯಬೇಕಾದರೆ, ನನ್ನ ಎದುರಾಳಿಗೆ ಕನಿಷ್ಟ ಸೊಂಟದ ಮೇಲೆ ಒಂದು ಲಂಗೋಟಿ ಇರಬೇಕು. ಅದೇ ಇಲ್ಲದೆ ಬೆತ್ತಲೆ ನಿಂತು ಕುಸ್ತಿಗೆ ಕರೆಯುವನ ಜೊತೆ ನಾನು ಹೋರಾಡಲಾರೆ..!”
ಅಂದು ಕುವೆಂಪು ನೀಡಿದ್ದ ಹೇಳಿಕೆಯಲ್ಲಿ ಅಂತಹ ಘನತೆಯಿತ್ತು. ಕುವೆಂಪುರವರ ಪ್ರಖರ ವೈಚಾರಿಕತೆಯ ಜೊತೆಗೆ ಇಂತಹ ವಿವೇಕ ಮತ್ತು ತಾಳ್ಮೆ ಮನನೀಯ.
ಕುವೆಂಪು ಅವರು ಕೇವಲ ಕವಿ ಸಾಹಿತಿಯಾಗಿ ಅಷ್ಟೇ ಅಲ್ಲದೆ, ಸಾಮಾಜಿಕ, ರಾಜಕೀಯ ಗುರುವಾಗಿ, ಪರಿಸರ ಪ್ರೇಮಿಯಾಗಿ, ಮಾರ್ಗದರ್ಶಕರು, ಚಿಂತಕರೂ ಆಗಿ ಇಂದು ಅವರ ಸಾಹಿತ್ಯ ಎಲ್ಲೆಡೆ ಬೆಳಕು ಬೀರಿದೆ. ಇಂತಹ ಮಹಾ ಕವಿಯನ್ನು ಸ್ಮರಿಸುತ್ತಾ, ಅವರ ತತ್ವ , ಚಿಂತನೆ, ಸಿದ್ಧಾಂತಗಳನ್ನು ಅರಿತು ಅಳವಡಿಸಿಕೊಂಡು ಅವರ ವಸುದೈವ ಕುಟುಂಬಕಂ ಬಾ ಮಂತ್ರಕ್ಕೆ ಇಂಬು ಕೊಡೋಣ.
ಸಂತೋಷ್ ಬಿದರಗಡ್ಡೆ
( ಲೇಖಕರು ಶಿಕ್ಷಕ ಸಾಹಿತಿ )