Innerwheel Club Shivamogga ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಹೆಚ್ಚಾಗಿ ಮಂಡಿ ನೋವು ಕಾಣಿಸುತ್ತಿದ್ದು, ಉತ್ತಮ ಆಹಾರ ಪದ್ಧತಿ, ಸರಿಯಾದ ಜೀವನ ಶೈಲಿ ಇಲ್ಲದಿರುವುದು ಹಾಗೂ ಸ್ಥೂಲ ಕಾಯ ಪ್ರಮುಖ ಕಾರಣವಿದೆ ಎಂದು ಕೀಲುಮೂಳೆ ತಜ್ಞ ಡಾ. ಪಿ.ಸುಧೀಂದ್ರ ಹೇಳಿದರು.
ರಾಜೇಂದ್ರನಗರದ ರೋಟರಿ ಸಭಾಂಗಣದಲ್ಲಿ ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ಸದಸ್ಯರು ಹಾಗೂ ಸಾರ್ವಜನಿಕರಿಗೆ ಆಯೋಜಿಸಿದ್ದ ಮಂಡಿ ನೋವಿನ ತಪಾಸಣೆ ಶಿಬಿರ ಹಾಗೂ ಸಲಹೆ ಮುನ್ನೆಚ್ಚರಿಕಾ ಕ್ರಮಗಳ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉತ್ತಮ ಆಹಾರ ಪದ್ಧತಿ ಪಾಲಿಸಬೇಕು. ಸರಿಯಾದ ಜೀವನ ಶೈಲಿ ಪಾಲಿಸಬೇಕು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಮಂಡಿ ನೋವಿನ ವಿವಿಧ ಬಗೆಯ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಮಂಡಿ ನೋವಿನ ಕಾರಣಗಳು, ಬರದೇ ಇರುವ ರೀತಿ ಮುಂಜಾಗ್ರತಾ ಕ್ರಮಗಳು, ಬಂದ ನಂತರ ಮಾಡುವ ಚಿಕಿತ್ಸಾ ಕ್ರಮಗಳನ್ನು ವಿವರಿಸಿದರು. ಆಹಾರ ಪದ್ಧತಿ ಮತ್ತು ವ್ಯಾಯಾಮಗಳ ಮಹತ್ವ ತಿಳಿಸಿದರು. ಮೂಳೆ ಸವಕಳಿ ತಡೆಗಟ್ಟುವುದು ಹಾಗೂ ಚಿಕಿತ್ಸಾ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಮುಖಾಂತರ ಮಾಹಿತಿ ನೀಡಿದರು.
ಫಿಜಿಯೋಥೆರಪಿಸ್ಟ್ ವೈದ್ಯೆ ಪವಿತ್ರಾ ರಾಯ್ಸದ್ ಅವರು ಮಂಡಿ ನೋವಿಗೆ ಫಿಜಿಯೋಥೆರಪಿ, ವ್ಯಾಯಾಮ ಹಾಗೂ ಸೂಕ್ತವಾದ ಯೋಗಾಸನಗಳ ಬಗ್ಗೆ ಪ್ರಾತ್ಯಕ್ಷಿತೆ ಮೂಲಕ ವಿಸ್ತಾರವಾಗಿ ತಿಳಿಸಿದರು.
ರೋಟರಿ ಜಿಲ್ಲಾ ಗವರ್ನರ್ ದೇವ್ ಆನಂದ್ ಮಾತನಾಡಿ, ರೋಟರಿ ಸಂಸ್ಥೆ ಹಾಗೂ ಇನ್ನರ್ ವ್ಹೀಲ್ ಸಂಸ್ಥೆ ಒಂದೇ ಮುಖದ ಎರಡು ನಾಣ್ಯಗಳು. ಎರಡು ಅಂತರಾಷ್ಟ್ರೀಯ ಸೇವಾ ಸಂಸ್ಥೆಗಳಾಗಿದ್ದು, ಪ್ರೀತಿ ಸ್ನೇಹ ಸಮಾಜಮುಖಿ ಸೇವೆಗಾಗಿ ಸ್ಥಾಪಿಸಿರುವ ಸಂಸ್ಥೆಗಳಾಗಿವೆ ಎಂದು ಹೇಳಿದರು.
ಶಿಬಿರದ ಅಧ್ಯಕ್ಷತೆ ವಹಿಸಿದ್ದ ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷೆ ವಾಗ್ದೇವಿ ಬಸವರಾಜ್ ಮಾತನಾಡಿ, ಈಗಾಗಲೇ ಇಂತಹ ಆರೋಗ್ಯ ಶಿಬಿರಗಳನ್ನು ಎಲ್ಲಾ ಕಡೆಗಳಲ್ಲಿ ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಮಹಿಳೆಯರಿಗೆ ತುಂಬಾ ಅಗತ್ಯವಾಗಿ ಬೇಕಾಗಿರುವಂತಹ ಸಮಸ್ಯೆಗಳ ಬಗ್ಗೆ ಅರಿವು ಜಾಗೃತಿ ಬೇಕಾಗಿರುವುದರಿಂದ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿದ್ದೇವೆ ಎಂದರು.
Innerwheel Club Shivamogga ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ವಲಯ 11ರ ಸಹಾಯಕ ಗವರ್ನರ್ ಎಚ್.ಎಂ.ಸುರೇಶ್, ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯಕುಮಾರ್, ಶಬರಿ ಕಡಿದಾಳ್, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್, ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ಡಾ. ಧನಂಜಯ, ಡಾ. ಕೌಸ್ತುಭ ಅರುಣ್ ಹಾಗೂ ಪದಾಧಿಕಾರಿಗಳು, ಸದಸ್ಯರು ಇದ್ದರು.