Karnataka Women Lawyers Federation ಶಿವಮೊಗ್ಗ ನಗರದಲ್ಲಿ ಎರಡನೇ ಬಾರಿಗೆ ದಕ್ಷಿಣ ಕರ್ನಾಟಕ ನ್ಯಾಯವಾದಿಗಳ ಸಮ್ಮೇಳನ ಆ. 10ರಂದು ನಡೆಯಲಿದೆ.
ಕರ್ನಾಟಕ ಮಹಿಳಾ ನ್ಯಾಯವಾದಿಗಳ ಒಕ್ಕೂಟ, ಶಿವಮೊಗ್ಗ ಜಿಲ್ಲಾ ನ್ಯಾಯವಾದಿಗಳ ಸಮಿತಿ ಹಾಗೂ ಶಿವಮೊಗ್ಗ ಜಿಲ್ಲಾ ನ್ಯಾಯವಾದಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಈ ಸಮ್ಮೇಳನ ಆಯೋಜನೆಯಾಗಿದೆ ಎಂದು ಮಹಿಳಾ ನ್ಯಾಯವಾದಿಗಳ ಸಮಿತಿ ಜಿಲ್ಲಾ ಅಧ್ಯಕ್ಷೆ ಸರೋಜ ಪಿ.ಚಂಗೊಳ್ಳಿ ಹೇಳಿದರು.
ಪ್ರೆಸ್ ಟ್ರಸ್ಟಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,ಪ್ರಸ್ತುತ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಜಿಲ್ಲಾ ವೇದಿಕೆಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾ ತಾಲ್ಲೂಕು ಮಟ್ಟದಲ್ಲೂ ಸಹ ಮಹಿಳಾ ವಕೀಲರ ವೇದಿಕೆಗಳು ಸ್ಥಾಪಿಸುವ ನಿಟ್ಟಿನಲ್ಲಿ ಫೆಡರೇಷನ್ ಪ್ರಯತ್ನಿಸುತ್ತಿದೆ.
2002ರಲ್ಲಿ ಆರಂಭವಾದ ಕರ್ನಾಟಕ ಫೆಡರೇಷನ್ ವಿಮೆನ್ ಲಾಯರ್ಸ್ ಸಂಸ್ಥೆಯು ಹಲವು ಅಡೆತಡೆಗಳನ್ನು ದಾಟಿ ಈಗ ಸಶಕ್ತವಾಗಿ ನಿಂತಿದೆ ಎಂದರು.
ಸಮ್ಮೇಳನದಲ್ಲಿ ೧೦ ಜಿಲ್ಲೆಗಳ ಸುಮಾರು 700ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ರಾಜ್ಯದಲ್ಲಿ ಮಹಿಳಾ ವಕೀಲರ ಸಂಖ್ಯೆ 20 ಸಾವಿರಕ್ಕೂ ಹೆಚ್ಚಿದ್ದು, ಮಹಿಳಾ ವಕೀಲರ ಹಿತರಕ್ಷಣೆ, ಅವರ ಕಾರ್ಯದಕ್ಷತೆ ಹೆಚ್ಚಿಸುವುದು. ಅವರಿಗೆ ಸಿಗಬೇಕಾದ ಸ್ಥಾನಮಾನ, ಅವಕಾಶ ನೋಡಿಕೊಳ್ಳುವುದು ಫೆಡರೇಶನ್ ಆದ್ಯತೆಯಾಗಿದೆ ಎಂದು ಹೇಳಿದರು.
ಆಗಸ್ಟ್ 10ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆಯ ವರೆಗೆ ಆರ್‌ಟಿಓ ಕಚೇರಿ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ನಡೆಯುವುದು. ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಶಿವಮೊಗ್ಗ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಬಿ.ಎಂ. ಶ್ಯಾಮ್‌ಪ್ರಸಾದ್ ಸಮ್ಮೇಳನ ಉದ್ಘಾಟಿಸಲಿದ್ದು, ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಂ.ಜಿ. ಉಮಾ ಮುಖ್ಯ ಅತಿಥಿಗಳಾಗಿ ಆಗಮಿಸುವರು.
Karnataka Women Lawyers Federation ಅಖಿಲ ಭಾರತ ಮಹಿಳಾ ನ್ಯಾಯವಾದಿಗಳ ಒಕ್ಕೂಟದ ಅಧ್ಯಕ್ಷೆ ಹೇಮಲತಾ ಮಹಿಷಿ ಅಧ್ಯಕ್ಷತೆ ವಹಿಸುವರು ಎಂದರು.
ಇದೇ ಸಂದರ್ಭದಲ್ಲಿ ಎರಡು ವಿಚಾರಗೋಷ್ಠಿಗಳು ನಡೆಯುವವು. ಬೆಳಿಗ್ಗೆ 12ರಿಂದ 1:30ರ ವರೆಗೆ ನಡೆಯುವ ಮೊದಲ ವಿಚಾರ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಸರ್ಕಾರಿ ಅಭಿಯೋಜಕ, ಕಾನೂನು ತಜ್ಞ ಹೆಚ್.ಡಿ. ಆನಂದಕುಮಾರ್ ಹೊಸ ಕಾನೂನುಗಳ ಬಗ್ಗೆ ವಿಷಯ ಮಂಡಿಸುವರು.
ಮಧ್ಯಾಹ್ನ 1ರಿಂದ 2:30ರವರೆಗೆ ನಡೆಯುವ ಗೋಷ್ಠಿಯಲ್ಲಿ ಮಹಿಳಾ ವಕೀಲರ ವೃತ್ತಿಪರತೆಯ ಸಮಸ್ಯೆಗಳು, ಸವಾಲು ಗಳು ಮತ್ತು ಪರಿಹಾರೋಪಯಳ ಕುರಿತು ಒಕ್ಕೂಟದ ಅಧ್ಯಕ್ಷೆ ಶೀಲಾ ಅನೀಶ್ ಮಾತನಾಡಲಿದ್ದಾರೆ ಎಂದರು.
ಸಂಜೆ 4 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಮಿಥುನ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತೆ ಡಾ|| ಕವಿತಾ ಯೋಗಪ್ಪನವರ್ ಆಗಮಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ, ಜಿಲ್ಲಾ ಮಹಿಳಾ ನ್ಯಾಯವಾದಿಗಳ ಒಕ್ಕೂಟದ ಪದಾಧಿಕಾರಿಗಳಾದ ಹೆಚ್.ಎಂ.ರೇಣುಕಾ ನಂದಿನಿ ದೇವಿ, ಕಿಲಕಾ ಮಧುಸೂದನ್, ಪೂರ್ಣಿಮಾ, ಪ್ರಮಿಳಾ, ಅಶ್ವಿನಿ, ರೇಖಾ ಸತ್ಯನಾರಾಯಣ, ವಿದ್ಯಾರಾ ಮೊದಲಾದವರಿದ್ದರು.