ಪ್ರಪ್ರಥಮ ಬಾರಿಗೆ ಶಂಕರಾಚಾರ್ಯರಿಗೆ ಆನೆ ಅಂಬಾರಿಯ ಉತ್ಸವ
Shankaracharya Jayanti ವೈಶಾಖ ಶುದ್ಧ ಪಂಚಮಿ – ಶ್ರೀಶ್ರೀ ಶಂಕರ ಭಗವತ್ಪಾದರು ಅವತರಿಸಿದ ಹಿನ್ನೆಲೆಯಲ್ಲಿ ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳ ಆಜ್ಞಾನುಸಾರ – ವಿದ್ಯಾರಣ್ಯರ ಕ್ಷೇತ್ರ ವಿಜಯನಗರ (ಹೊಸಪೇಟೆ)ದಲ್ಲಿ ಇದೇ ಮೊದಲ ಬಾರಿಗೆ ಶಂಕರಾಚಾರ್ಯರಿಗೆ ಆನೆ ಅಂಬಾರಿ ಉತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಯಿತು
ತಾ- 12-05-2024 ಭಾನುವಾರ “ಶಂಕರ ವರ್ಧಂತಿ”ಯ ಅಂಗವಾಗಿ ಚಿಂತಾಮಣಿ ಮಠದಲ್ಲಿ ಬೆಳಗ್ಗೆ ಆಚಾರ್ಯ ಶಂಕರರಿಗೆ ರುದ್ರಾಭಿಷೇಕ, ರುದ್ರ ಸ್ವಾಹಾಕಾರ ಹೋಮ, ಶಂಕರಾಚಾರ್ಯರ ಅಷ್ಟೋತ್ತರ ಪಾರಾಯಣ ಉದ್ಯಾಪನೆಯ ಹೋಮ, ಗೋ ಪೂಜೆ ಗಳನ್ನು ನೆರವೇರಿಸಿ, ಸಂಜೆ ಹೊಸಪೇಟೆ ನಗರದ ಮುಖ್ಯರಸ್ತೆಗಳಲ್ಲಿ ಶಂಕರರ ಮೆರವಣಿಗೆ ಮಾಡಲಾಯಿತು
ಗಣಪತಿ ಪೂಜೆಯೊಂದಿಗೆ ಆರಂಭವಾದ ಮೆರವಣಿಗೆಯ ಮುಂಭಾಗದಲ್ಲಿ ನಾದಸ್ವರ, ಅದರ ಹಿಂದೆ ಶಂಕರರ ಭಾವಚಿತ್ರವನ್ನು ಹೊತ್ತ (ಟ್ಯಾಕ್ಟರ್) ವಾಹನ, ಹೆಣ್ಣುಮಕ್ಕಳ ಕೋಲಾಟ, ನೃತ್ಯ, ಭಜನೆ, ಶಂಕರರಿಗೆ ಜಯಘೋಷಗಳನ್ನು ಕೂಗುವ ತಂಡ, ಅದರ ಹಿಂದೆ ಶ್ರೀಶ್ರೀ ಶಂಕರಾಚಾರ್ಯರ ಮೂರ್ತಿಯನ್ನು ಹೊತ್ತ ಆನೆ ಅಂಬಾರಿ, ಅದರ ಹಿಂದೆ ಶ್ರೀಶ್ರೀ ಶಿವಾನಂದ ಭಾರತೀ ಚೆಂತಾಮಣಿ ಸ್ವಾಮಿಗಳು ಆಸೀನರಾಗಿದ್ದ ರಥ ಇದ್ದವು
ಸ್ವರ್ಗವೇ ಹೊಸಪೇಟೆ ನಗರಕ್ಕಿಳಿದು ಬಂದಂತಿದೆ. ನಯನ ಮನೋಹರವಾದ ಅದ್ಭುತ ಅಮೋಘ ವೈಭವೋಪೇತವಾದ ಆನೆ ಅಂಬಾರಿಯನ್ನು ಕಂಡು ಸದ್ಭಕ್ತರು ಆನಂದ ಭರಿತರಾದರು. ಜನ್ಮ ಸಾರ್ಥಕವಾಯಿತು ಎಂದು ಉದ್ಗರಿಸಿದರು. ವಿಜಯನಗರ ಸಾಮ್ರಾಜ್ಯದ ನೆನಪು ತರುತಿದೆ. ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳನ್ನು ಪಡೆದ ನಾವೇ ಧನ್ಯರು ಎಂದು ಗುರುಗಳಿಗೆ ಜಯ ಘೋಷಗಳನ್ನು ಕೂಗಿದರು
ಮೆರವಣಿಗೆಯ ನಂತರ, ಶ್ರೀ ಅನೂಪ್ ರವರ ತಂಡದಿಂದ ಸುಶ್ರಾವ್ಯವಾದ ಸಂಗೀತ ಸೇವೆ ಸಲ್ಲಿಸಲಾಯಿತು
Shankaracharya Jayanti “ಆಚಾರ್ಯ ಶಂಕರರಿಗಲ್ಲದೆ ಮತ್ ಇನ್ಯಾರಿಗೆ ಆನೆ ಅಂಬಾರಿ ಉತ್ಸವ !? ಜಗದ್ಗುರು, ನಾಡು ಕಂಡಂತಹ ಪ್ರಥಮಗುರು ಶಂಕರಾಚಾರ್ಯರಿಗೇ ಸಲ್ಲಬೇಕು, ಸಲ್ಲಿದೆ. ಶಂಕರರನ್ನು ಹೊತ್ತ ಆನೆ ಅಂಬಾರಿಯ ದರ್ಶನದಿಂದ ಆನಂದದ ಅಲೆಯಲ್ಲಿ ತೇಲುತ್ತಿರುವ ನಿಮ್ಮೆಲ್ಲರನ್ನು ಕಂಡು ನನಗೆ ಬಹಳ ಆನಂದವಾಗಿದೆ. ಇದನ್ನು ನಾವು ಶಂಕರ ವರ್ಧಂತಿ ಎಂದು ಕರೆದಿದ್ದೇವೆ ಕಾರಣ ವರ್ಷದಿಂದ ವರ್ಷಕ್ಕೆ ಹೀಗೆ ಶಂಕರರ ಕಾರ್ಯಗಳು ಹೆಚ್ಚಾಗಬೇಕು. ಯಾವ ಅತಿಶಯೋಕ್ತಿಯೂ ಇಲ್ಲದೆ ಹೇಳಬೇಕಾದರೆ ಶಂಕರಾಚಾರ್ಯರು ಇಲ್ಲದಿದ್ದರೆ ಇಂದು ಸನಾತನ ವೈದಿಕ ಧರ್ಮ ಉಳಿಯುತ್ತಿರಲಿಲ್ಲ. ಅಷ್ಟೇಕೆ ಭಗವದ್ಗೀತೆ ಇಂದು ನಮ್ಮ ಕೈಗೆ ಸಿಗುತ್ತಿರಲಿಲ್ಲ. ಪೂರ್ವಾಶ್ರಮದಲ್ಲಿ ನಾನು ನನ್ನ ಸಹೋದರ ಶ್ರೀಕಾಂತ್ ಋಗ್ವೇದಿ ಅತ್ಯಂತ ಕಿಂಚಿತ್ ಶಂಕರರ ಸೇವೆ ಸಲ್ಲಿಸಿದಕ್ಕಾಗಿ ಆಚಾರ್ಯರು ಅಪಾರವಾದ ಕೃಪೆತೋರಿ ಸಿದ್ಧಿ ಪೀಠವಾದ ಚಿಂತಾಮಣಿ ಪೀಠದ ಮೇಲೆ ನಾವು ಆಸೀನವಾಗುವಂತೆ ಮಾಡಿದ್ದಾರೆ. ಶಂಕರಾಚಾರ್ಯರ ಸೇವೆಯ ಫಲವೇನು ಎಂದು ಯಾರಾದರು ಕೇಳಿದರೆ ಅದಕ್ಕೆ ನಾವೇ ಜೀವಂತ ನಿದರ್ಶನ. ಈ ಸುಸಂದರ್ಭದಲ್ಲಿ ನನ್ನ ಸಂನ್ಯಾಸಕ್ಕೆ ಕಾರಣರಾದ ನನ್ನ ಪೂರ್ವಾಶ್ರಮದ ಹಿರಿಯರನ್ನು ಸ್ಮರಿಸುತ್ತೇನೆ. ನಿನ್ನೆ ಧಾರಾಕಾರವಾಗಿ ಮಳೆ ಸುರಿದಿದೆ. ಇಂದೂ ಸಹ ಮಳೆ ಬರುವಹಾಗಿದ್ದರೂ……ಅದ್ಯಾವುದನ್ನೂ ಲೆಕ್ಕಿಸದೆ ಭಕ್ತರೆಲ್ಲರೂ ಇಂದಿನ ಉತ್ಸವದಲ್ಲಿ ಸೇರಿರುವುದು – ಕೊಟ್ಟ ಪರೀಕ್ಷೆಯಲ್ಲಿ ಗೆದ್ದಂತಾಗಿದೆ. ಇಂದಿನ ಮೆರವಣಿಗೆಯಲ್ಲಿ ಭಾಗವಹಿಸಿದ ತಮ್ಮಲ್ಲರಿಗೂ ಮಂಗಳವಾಗಲೆಂದು ಆಶೀರ್ವದಿಸುತಿದ್ದೇವೆ”…ಎಂದು ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳು ಪ್ರವಚನ ನೀಡಿದರು
ನಂತರದಲ್ಲಿ, ಆನೆ ಮಾವುತ ತಂಡದವರಿಗೆ ಶ್ರೀಗುರುಗಳು ಫಲ ಮಂತ್ರಾಕ್ಷತೆ ಕೊಟ್ಟು ಅನುಗ್ರಹಿಸಿದರು
ಶ್ರೀ ಗುರುಗಳ ಸಂನ್ಯಾಸ ದೀಕ್ಷೆಯ ಸಮಯದಲ್ಲಿ ಸೇವೆ ಸಲ್ಲಿಸಿದ ಹೊಸಪೇಟೆ ತಾಲ್ಲೂಕು ಬ್ರಾಹ್ಮಣ ಸಂಘದವರಿಗೆ ಶ್ರೀಮಠದಿಂದ ಸನ್ಮಾನಿಸಲಾಯಿತು