ಸನಾತನವಾದಿಗಳ ಷಡ್ಯಂತ್ರದ ಬಂಧನದಲ್ಲಿ ಸಿಕ್ಕಿಕೊಂಡಿರುವ ಹಿಂದುಳಿದ ಜಾತಿ-ವರ್ಗಗಳ ಜನರು ತಮ್ಮ ಮೆದುಳುಗಳಿಗೆ ಹಾಕಿಕೊಂಡಿರುವ ಬೇಡಿಯನ್ನು ಬಿಚ್ಚಿ ಬಿಸಾಕಬೇಕೆಂದು ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಕರೆ ನೀಡಿದರು.
ಅವರು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಹಿಂದುಳಿದ ಜನ ಜಾಗೃತಿ ವೇದಿಕೆ ಏಪ೯ಡಿಸಿದ್ದ “ಕಾಂತರಾಜ ಆಯೋಗದ ವರದಿ ವಿರೋಧಿಗಳನ್ನು ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳಿಸಿ” ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು.
ಮೇಲ್ವರ್ಗದ ಮನುವಾದಿಗಳು ಕೆಳವರ್ಗಗಳ ಜನರ ತಲೆಗಳಲ್ಲಿ ದೇವರು ಧರ್ಮ ಎಂಬ ಭ್ರಮೆಗಳನ್ನು ತುಂಬಿ ಕೈ ಅಥವ ಕಾಲುಗಳಿಗೆ ಹಾಕುವ ಬೇಡಿಯನ್ನು ಅಮಾನವೀಯವಾಗಿ ಶೂದ್ರ ಜನಾಂಗದವರ ಮೆದುಳುಗಳಿಗೇ ಹಾಕಿಬಿಟ್ಟಿದ್ದಾರೆ.
ಶತಮಾನಗಳಿಂದ ಸಂಪ್ರದಾಯದ ಸೋಗಿನಲ್ಲಿ ಮನುವಾದಿಗಳ ತಾಳಕ್ಕೆ ತಕ್ಕಂತೆ ಕುಣಿಯುವ ದಲಿತ ಹಾಗು ಹಿಂದುಳಿದ ಜಾತಿಗಳ ಜನರು ಸ್ವತ: ತಮ್ಮ ಮೆದುಳುಗಳಿಗೆ ತಾವೇ ಸರಪಳಿಯನ್ನು ಬಿಗಿದು ಕೊಂಡಿದ್ದಾರೆ ಎಂದೂ ಅವರು ವಿಷಾದ ವ್ಯಕ್ತಪಡಿಸಿದರು.
ಈ ಸಮಾಜದ ಕೆಳವರ್ಗಗಳ ಜನರು ಮದುವೆ, ಗೃಹಪ್ರವೇಶ, ನಾಮಕರಣ ಇತ್ಯಾದಿ ಕಾಯ೯ಗಳನ್ನು ಮಾಡಲು ಶುಭಮುಹೂರ್ತ ನಿಗಧಿ ಪಡಿಸಿಕೊಡುವಂತೆ ಜ್ಯೋತಿಷಿಗಳ ಮೊರೆ ಹೋಗುವುದು, ತಾನೇ ಹುಟ್ಟಿಸಿದ ಮಗುವಿಗೆ ಸ್ವತ: ನಾಮಕರಣ ಮಾಡಲಾಗದೆ ಪುರೋಹಿತರ ಮನೆ ಬಾಗಿಲು ಕಾಯುವ ಮನಸ್ಥಿತಿಗಳು ನಿಜಕ್ಕೂ ವಿಷಾದಕರ ಎಂದು ಸ್ವಾಮೀಜಿ ಹೇಳಿದರು.
Jnana Prakash Swamiji ಮುಖ್ಯ ಅತಿಥಿಗಳಾಗಿ ಮಾತನಾಡಿದ ಮೈಸೂರಿನ ಪ್ರೊ. ಆರ್. ಮಹಾದೇವಪ್ಪ, ದೇಶದ ಬಹುಸಂಖ್ಯಾತ ಸಮುದಾಯವಾದ ಹಿಂದುಳಿದ ಜಾತಿಗಳು ಸಂವಿಧಾನವನ್ನು ಅಥೈ೯ಸಿಕೊಂಡು ಒಗ್ಗಟ್ಟಾಗಿ ರಾಜಕಾರಣಕ್ಕಿಳಿದರೆ ಅಧಿಕಾರವನ್ನು ತಮ್ಮದಾಗಿಸಿಕೊಳ್ಳಬಹುದು ಎಂಬುದಕ್ಕೆ ಉತ್ತರಪ್ರದೇಶದಲ್ಲಿ ಮಾಯಾವತಿ ನಾಲ್ಕು ಬಾರಿ ಮುಖ್ಯಮಂತ್ರಿಗಳಾಗಿದ್ದೆ ನಿದರ್ಶನ ಎಂದು ತಿಳಿಸಿದರು.
ಸೊರಬದ ರಾಜಪ್ಪ ಮಾಸ್ಟರ್, ಪ್ರತಿಯೊಬ್ಬರೂ ದಲಿತ ಹಿಂದುಳಿದ ಜನಾಂಗಗಳ ಶೋಷಿತರನ್ನು ಸಂಘಟಿಸುವ ನಿಟ್ಟಿನಲ್ಲಿ ಬಿತ್ತನೆ ಕಾಳಿನಂತೆ ಕೆಲಸ ಮಾಡಿದರೆ ಯಥೇಚ್ಛವಾದ ಫಸಲು ತೆಗೆಯುವುದರಲ್ಲಿ ಅನುಮಾನವಿಲ್ಲ ಎಂಬ ಆಶಯ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಹಿಂದುಳಿದ ಜನ ಜಾಗೃತಿ ವೇದಿಕೆ ಗೌರವ ಅಧ್ಯಕ್ಷ ಪ್ರೊ. ಹೆಚ್. ರಾಚಪ್ಪ ಮಾತನಾಡಿದರು.
ಕೆ.ಜಿ. ವೆಂಕಟೇಶ್ ಸ್ವಾಗತಿಸಿದರು ಜನ ಜಾಗೃತಿ ವೇದಿಕೆ ಸಂಚಾಲಕ ಆರ್.ಟಿ. ನಟರಾಜ್ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಚನ್ನವೀರಪ್ಪ ಗಾಮನಗಟ್ಟಿ ವಂದಿಸಿದರು.