Klive Special Article ಮೊನ್ನೆ ಮೊನ್ನೆ ಇನ್ನೂ ದ್ವಿತೀಯ ಪಿಯುಸಿಯ ಫಲಿತಾಂಶ ಪ್ರಕಟವಾಗಿದೆ. ಈಗ ವಿದ್ಯಾರ್ಥಿಗಳಲ್ಲಿ ಮತ್ತು ಅನೇಕ ಪೋಷಕರಲ್ಲಿ ಕಾಡುತ್ತಿರುವ ಪ್ರಶ್ನೆ ಮುಂದೇನು…? ಮುಂದೆ ಯಾವ ಕೋರ್ಸು ಸುಲಭವಾಗಿರುತ್ತೆ…? ಯಾವುದಕ್ಕೆ ಹೆಚ್ಚಿನ ಉದ್ಯೋಗವಕಾಶವಿದೆ…? ಯಾವುದರಲ್ಲಿ ಹೆಚ್ಚಿಗೆ ಕಲಿಬೋದು…? ಹೀಗೆ ಹಲವಾರು ಪ್ರಶ್ನೆಗಳು ಮೂಡುತ್ತಿವೆ. ದ್ವಿತೀಯ ಪಿಯುಸಿ ಮುಗಿದ ಮೇಲೆ ಹಲವಾರು ದಾರಿಗಳಿವೆ. ಅದರಲ್ಲಿ ಒಂದು ದಾರಿಯೇ ಸಮಾಜಕಾರ್ಯ ಶಿಕ್ಷಣ – ಬಿ ಎಸ್ ಡಬ್ಲ್ಯೂ (ಬ್ಯಾಚುಲರ್ ಆಫ್ ಸೋಶಿಯಲ್ ವರ್ಕ್). ಇದೊಂದು ವಿಪುಲ ಉದ್ಯೋಗವಕಾಶಗಳನ್ನು ಹೊಂದಿರುವ ಔದ್ಯೋಗಿಕ (ಪ್ರೊಫೆಷನಲ್) ಕೋರ್ಸ್ ಆಗಿದ್ದು ಬಿ ಎಸ್ ಡಬ್ಲ್ಯೂ ಮೂರು ವರ್ಷ ಓದಿ ಡಿಗ್ರಿ ಮುಗಿಸಿದ ನಂತರದಲ್ಲಿ ಎಂ ಎಸ್ ಡಬ್ಲ್ಯೂ ಸ್ನಾತಕೋತ್ತರ ಪದವಿಯನ್ನು ಸಹ ಮಾಡಬಹುದು. ಇದೂ ಮುಗಿದ ನಂತರ ಪಿ ಹೆಚ್ ಡಿ ಸಹ ಮಾಡಬಹುದಾಗಿದೆ.
ಬಿ ಎಸ್ ಡಬ್ಲ್ಯೂ ಅನ್ನುವುದು ನಾಲ್ಕು ಗೋಡೆಗಳ ನಡುವೆ ಕಲಿಸುವ ಶಿಕ್ಷಣವಲ್ಲ, ಈ ಕೋರ್ಸ್ನಲ್ಲಿ ವಾರದಲ್ಲಿ ನಾಲ್ಕು ದಿನಗಳ ಕಾಲ ಕ್ಲಾಸ್ ರೂಮ್ ನಲ್ಲಿ ಪಾಠ ಮಾಡಿದರೆ ಇನ್ನುಳಿದ ಎರಡು ದಿನಗಳು ವಿದ್ಯಾರ್ಥಿಗಳಿಗೆ ಫೀಲ್ಡ್ ವರ್ಕ್ (ಕ್ಷೇತ್ರಕಾರ್ಯ ಅಧ್ಯಯನದ) ಮೂಲಕ ಕಲಿಸಲಾಗುತ್ತದೆ, ಈ ಫೀಲ್ಡ್ ವರ್ಕ್ ಅನ್ನು ವಿದ್ಯಾರ್ಥಿಗಳಿಗೆ ಬಿ ಎಸ್ ಡಬ್ಲ್ಯೂ ಮುಗಿಸಿದ ನಂತರದಲ್ಲಿ ಅವರಿಗೆ ಉದ್ಯೋಗವಕಾಶ ಸಿಗುವ ಕ್ಷೇತ್ರಗಳಲ್ಲಿಯೇ ಮಾಡಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಡಿಗ್ರಿ ಓದುವ ಹಂತದಲ್ಲಿಯೇ ತಾವು ಡಿಗ್ರಿ ಓದಿ ಮುಗಿಸಿದ ನಂತರ ಎಲ್ಲೆಲ್ಲಿ ಉದ್ಯೋಗವನ್ನು ಮಾಡಬಹುದು ಎಂಬ ಅಂದಾಜು ಸಿಕ್ಕಿಬಿಡುತ್ತದೆ ಜೊತೆಗೆ ಡಿಗ್ರಿ ಮುಗಿಸಿ ಬಂದ ವಿದ್ಯಾರ್ಥಿಗಳಿಗೆ ಹೊರಪ್ರಪಂಚದ ವ್ಯವಹಾರ ಜ್ಞಾನವೂ ಇರುವುದರಿಂದ ಜಗತ್ತಿನ ಯಾವುದೇ ಮೂಲೆಯಲ್ಲಿ ತಮ್ಮನ್ನು ಬಿಟ್ಟರೂ ಬದುಕಬಲ್ಲೆವು ಎಂಬ ಆತ್ಮವಿಶ್ವಾಸ ಮೂಡಿರುತ್ತದೆ ಮತ್ತು ಈ ಫೀಲ್ಡ್ ವರ್ಕ್ ನಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಸಾಮಾಜಿಕ ಸಮಸ್ಯೆಗಳಾದ ಮಹಿಳೆಯರ ಮತ್ತು ಮಕ್ಕಳ ಸಾಗಾಟ, ಬಾಲ್ಯ ವಿವಾಹ, ಬಾಲಕಾರ್ಮಿಕ ಮಕ್ಕಳ ಸಮಸ್ಯೆ, ವೃದ್ಧರ ಸಮಸ್ಯೆ, ಮಾನಸಿಕ ಕಾಯಿಲೆಗಳಿಗೆ ಒಳಗಾಗಿರುವವರ ಸಮಸ್ಯೆ, ಹೆಚ್ ಐ ವಿ, ಕ್ಯಾನ್ಸರ್ ಗೆ ತುತ್ತಾಗಿರುವವರ ಸಮಸ್ಯೆ, ಪ್ರತಿ ಮನುಷ್ಯರಿಗೂ ಇರುವ ಮಾನಸಿಕ ನೋವಿನ ಸಮಸ್ಯೆ…..ಹೀಗೆ ಹಲವಾರು ಸಮಸ್ಯೆಗಳ ವಿರುದ್ಧ ಹೇಗೆ ಹೋರಾಡಬೇಕು ಎಂಬುದನ್ನು ಪ್ರಯೋಗಾತ್ಮಕವಾಗಿ ಕಲಿಸಿಕೊಡಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ತಮ್ಮನ್ನು, ತಮ್ಮ ಸಮಾಜವನ್ನೂ, ತಮ್ಮ ದೇಶವನ್ನೂ ಮುನ್ನಡೆಸಲು ಸಿದ್ಧರಾಗುತ್ತಾರೆ.
ಬಿ ಎಸ್ ಡಬ್ಲ್ಯೂ ವಿನಲ್ಲಿ ವಿದ್ಯಾರ್ಥಿಗಳು ಸಮಾಜಕಾರ್ಯ, ಸಮಾಜಶಾಸ್ತ್ರ, ಮಾನವಶಾಸ್ತ್ರ, ಅರ್ಥಶಾಸ್ತ್ರ, ಮಾನವನ ಅಭಿವೃದ್ಧಿ ಮತ್ತು ಬೆಳವಣಿಗೆ, ರಾಜ್ಯಶಾಸ್ತ್ರ, ಸಾಮಾಜಿಕ ನೀತಿ, ಸಾರ್ವಜನಿಕ ಆಡಳಿತ, ವೈದ್ಯಕೀಯ ಹಾಗೂ ಮನೋವಿಜ್ಞಾನ ಕಲಿಕೆ, ಇತಿಹಾಸ, ಸಂಖ್ಯಾಶಾಸ್ತ್ರ, ವಿಜ್ಞಾನ, ಸಮಾಜ ವಿಜ್ಞಾನ, ಮನಃಶಾಸ್ತ್ರ, ಆಪ್ತಸಮಾಲೋಚನೆ, ಪರಿಸರ ವಿಜ್ಞಾನ, ಮಾನವ ಸಂಪನ್ಮೂಲ ನಿರ್ವಹಣೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಭಾರತದ ಸಂವಿಧಾನ, ವ್ಯಕ್ತಿಗತ ಸಮಾಜಕಾರ್ಯ, ವೃಂದಗತ ಸಮಾಜಕಾರ್ಯ, ಸಮುದಾಯ ಸಂಘಟನೆ, ಸಾಮಾಜಿಕ ಕ್ರಿಯೆ, ಸಮಾಜ ಕಲ್ಯಾಣ ಆಡಳಿತ, ಸಮಾಜಕಾರ್ಯ ಸಂಶೋಧನೆ, ಜೀವನ ಕೌಶಲ್ಯ, ಸಂವಹನ ಕೌಶಲ್ಯ….ಹೀಗೆ ಹತ್ತು ಹಲವು ಕ್ಷೇತ್ರಗಳ, ವಿಷಯಗಳ ಬಗ್ಗೆ ಕಲಿಯಬಹುದು, ಅಂದರೆ ಈ ಕೋರ್ಸ್ ಒಂತರ ಗಡ್ ಬಡ್ ಐಸ್ ಕ್ರೀಮ್ ತಿಂದ ಹಾಗೇ. ಈ ಮೂರು ವರ್ಷದ ಕೋರ್ಸ್ ನಲ್ಲಿ ಒಂದೇ ವಿಷಯಕ್ಕೆ ವಿದ್ಯಾರ್ಥಿಗಳು ಸೀಮಿತವಾಗದೆ ಅನೇಕ ವಿಚಾರಗಳನ್ನು ಕಲಿಯಬಹುದು, ಫೀಲ್ಡ್ ವರ್ಕ್ ನ ಮೂಲಕ ಅನೇಕ ಎನ್.ಜಿ.ಓ ಗಳಿಗೆ ಭೇಟಿ ನೀಡಿ ಸಮಾಜದ ಸಮಸ್ಯೆಗಳ ಅಧ್ಯಯನವನ್ನು ಪ್ರಯೋಗಾತ್ಮಕವಾಗಿ ಮಾಡಬಹುದು ಮತ್ತು ಇಲ್ಲಿ ಬಹುಮುಖ್ಯವಾಗಿ ಹತ್ತಾರು ಜನರಿಂದ ಹಿಡಿದು ನೂರಾರು ಜನರ ಮುಂದೆ ಮಾತನಾಡಲು ನಮ್ಮ ಸ್ಟೇಜ್ ಫಿಯರ್ ಅನ್ನು ಹೋಗಲಾಡಿಸಲು ಅನೇಕ ಅವಕಾಶಗಳು ದೊರೆಯುತ್ತವೆ ಮತ್ತು ನಾವೇ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದನ್ನು ಕಲಿಯಬಹುದಾಗಿದೆ.
Klive Special Article ಬಿ ಎಸ್ ಡಬ್ಲ್ಯೂ ವಿನಲ್ಲಿ (ಎನ್.ಇ.ಪಿ.ಯ ಪ್ರಕಾರ) ಭಾಷಾ ವಿಷಯಗಳು ಮತ್ತು ಎಲ್ಲಾ ಕೋರ್ಸ್ ಗಳಿಗೂ ಅನ್ವಯವಾಗುವ ಕಡ್ಡಾಯ ವಿಷಯವನ್ನು ಬಿಟ್ಟು ಎರಡು ವಿಷಯಗಳು ಮಾತ್ರ ಲಿಖಿತ ರೂಪದ ಪರೀಕ್ಷೆ (written exam) ಮತ್ತು ಒಂದು ವಿಷಯ ಮಾತ್ರ ಮೌಖಿಕ ರೂಪದ ಪರೀಕ್ಷೆ (oral exam) ಬರೆಯಬೇಕಾಗುತ್ತದೆ, ಅಂದರೆ ಆರು ವಿಷಯಗಳ ಪರೀಕ್ಷೆ ಬರೆದರೆ ಒಂದು ವಿಷಯದ ಪರೀಕ್ಷೆ ಓರಲ್ ರೂಪದಲ್ಲಿರುತ್ತದೆ. ಇದರಿಂದ ಓದಲು ಸಹ ಕಷ್ಟವೆನಿಸುವುದಿಲ್ಲ.
ಬಿ ಎಸ್ ಡಬ್ಲ್ಯೂ / ಎಂ ಎಸ್ ಡಬ್ಲ್ಯೂ ಓದಿದ ನಂತರ ಖಾಸಗಿ ವಲಯ, ಸರ್ಕಾರಿ ವಲಯ, ಸರ್ಕಾರೇತರ ವಲಯ, ಸ್ವಯಂ ಸೇವಾ ಸಂಸ್ಥೆಗಳ ವಲಯ, ಆರೋಗ್ಯ ಮತ್ತು ಮನೋರೋಗದ ವಲಯ, ಅನಾಥಾಶ್ರಮ, ವೃದ್ಧಾಶ್ರಮಗಳಂತಹ ಸೇವಾ ವಲಯ, ತಿದ್ದುಪಡಿ ವಲಯ, ಆಪ್ತಸಮಾಲೋಚನಾ ವಲಯ, ಯುವಕರ ಅಭಿವೃದ್ಧಿ ವಲಯ, ಸಮುದಾಯ ಅಭಿವೃದ್ಧಿ ವಲಯ, ಹಿಂದುಳಿದ ಮತ್ತು ದುರ್ಬಲ ವರ್ಗಗಳ ಅಭಿವೃದ್ಧಿ ವಲಯ, ಕುಟುಂಬ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಲಯ, ಸಮಾಜ ಕಲ್ಯಾಣದ ವಲಯ, ಉದ್ಯಮ ವಲಯ, ಕೈಗಾರಿಕಾ ವಲಯ, ಮಾನವ ಸಂಪನ್ಮೂಲದ ವಲಯ, ಸಮುದಾಯ ಅಭಿವೃದ್ಧಿಯ ವಲಯ, ಸಮಾಜ ಕಲ್ಯಾಣ ಆಡಳಿತದ ವಲಯ, ಶಾಲಾ-ಕಾಲೇಜು- ವಿಶ್ವವಿದ್ಯಾಲಯದ ಬೋಧನಾ ವಲಯ, ಸ್ವಯಂ ಉದ್ಯೋಗ ವಲಯ, ಪತ್ರಿಕೋದ್ಯಮ ವಲಯ….. ಹೀಗೆ ನೂರಾರು ವಲಯಗಳಲ್ಲಿ ಉದ್ಯೋಗಗಳು ಸಿಗುವುದು ಖಚಿತವಾಗಿರುತ್ತದೆ.
ದ್ವಿತೀಯ ಪಿಯುಸಿಯಲ್ಲಿ ಕಾಮರ್ಸ್, ಸೈನ್ಸ್, ಆರ್ಟ್ಸ್, ತೆಗೆದುಕೊಂಡ ಅಥವಾ ಐಟಿಐ, ಡಿಪ್ಲೋಮಾ ಮಾಡಿದ ಯಾವುದೇ ವಿದ್ಯಾರ್ಥಿಗಳು ಈ ಬಿ ಎಸ್ ಡಬ್ಲ್ಯೂ ಕೋರ್ಸನ್ನು ಓದಬಹುದು. ಶಿವಮೊಗ್ಗದ ವಿದ್ಯಾರ್ಥಿಗಳಿಗಾಗಿ ಮಲ್ಲಿಗೇನಹಳ್ಳಿಯ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ವಿದ್ಯಾನಗರದ ಸಹ್ಯಾದ್ರಿ ಕಾಲೇಜು, ನರಸಿಂಹರಾಜಪುರ, ಅಜ್ಜಂಪುರ, ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಈ ಬಿ ಎಸ್ ಡಬ್ಲ್ಯೂ ಕೋರ್ಸ್ ಲಭ್ಯವಿದೆ ಮತ್ತು ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂ ಎಸ್ ಡಬ್ಲ್ಯೂ ಕೋರ್ಸ್ ಲಭ್ಯವಿದೆ. ಶಿವಮೊಗ್ಗದ ವಿದ್ಯಾರ್ಥಿಗಳು ಬಿ ಎಸ್ ಡಬ್ಲ್ಯೂ ಕೋರ್ಸ್ ನ ಸದುಪಯೋಗ ಪಡೆದುಕೊಳ್ಳಿರಿ ಮತ್ತು ಸಮಾಜವನ್ನು ಕಟ್ಟುವ, ಸಮಾಜವನ್ನು ಮುನ್ನಡೆಸುವ ಸಮಾಜಕಾರ್ಯಕರ್ತರಾಗಿ. (ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳಲ್ಲೂ ಮತ್ತು ಅನೇಕ ಕಾಲೇಜುಗಳಲ್ಲೂ ಈ ಕೋರ್ಸ್ ಲಭ್ಯವಿದೆ)
ಬರಹ : ನಾಗೇಂದ್ರ.ಟಿ.ಆರ್, ಅಂತಿಮ ವರ್ಷದ ಬಿ ಎಸ್ ಡಬ್ಲ್ಯೂ ವಿದ್ಯಾರ್ಥಿ, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ