Dr. Rajkumar ಡಾ. ರಾಜ್ ನಮ್ಮನ್ನು ಅಗಲಿ ಆಗಲೇ 18 ವರ್ಷವಾಯಿತು. ಏ.12 ಅವರ ಸ್ಮರಣೆಯ ದಿನ.
ನಾವು ಸಾಂತ್ವನ ಮತ್ತು ಸಮಾಧಾನ ಪಡೆಯಲು ಪದೇ ಪದೇ ಹಾಡಿಕೊಳ್ಳುವ, ಬಿಕ್ಕುತ್ತಲೇ ಹಾಡಿ ಕಣ್ಣೀರಾಗುವ ಅಮರಗೀತೆ ಹೊಸಬೆಳಕು ಚಿತ್ರದ “ಕಣ್ಣೀರ ಧಾರೆ ಇದೇಕೆ, ಇದೇಕೆ?” ಇದು ಲಲಿತ್ ರಾಗಾಧಾರಿತ. ಕರ್ನಾಟಕ ಸಂಗೀತದಲ್ಲಿ ಇದರ ಸಂವಾದಿ ರಾಗ ಶುಭಪಂತುವರಾಳಿ. ವಿಷಾದ ಮತ್ತು ಸಾಂತ್ವನ ಎರಡೂ ಒಟ್ಟಿಗೆ ಬೆರೆತ ವಿಶಿಷ್ಟ ಸಂಯೋಜನೆ. ಭೀಮ್‌ಪಲಾಸಿ ರಂಗರಾವ್ ಎಂದು ಖ್ಯಾತರಾಗಿದ್ದ ಎಂ. ರಂಗರಾವ್ ಅವರ ಅನನ್ಯ ಸಂಯೋಜನೆ. ‘ಏಕ್ ಶಹನ್ ಶಾಹ್‌ನೆ ಬನ್‌ವಾಯ ಹಸೀನ್ ತಾಜ್‌ಮಹಲ್’ ಹಾಡು ಗುನುಗಿದ್ದೀರಲ್ಲವೆ? ಅದೇ ಧಾಟಿಯ ಹಾಡಿದು.
ಕನ್ನಡಕ್ಕೂ ಲಲಿತ್‌ಗೂ ಅವಿನಾ ಸಂಬಂಧ. ವೈದೇಹಿ ಏನಾದಳೋ, ಸಿಹಿಯಾಗು ಬಾಳಿನಲ್ಲಿ … ರೋಷ ಬಿಡು ಬಿಡು, ಕನ್ನಡದಲ್ಲಿ ಲಲಿತ್‌ಗೆ ಒಂದೆರಡು ಉದಾಹರಣೆಗಳು. ಗಾಢವಿಷಾದವನ್ನು ತಬ್ಬಿಕೊಳ್ಳುತ್ತಲೇ ಸಾಂತ್ವನವನ್ನು ಅರಸುವ ಭಾವ. ಹಿಂದಿಯ ‘ಅಮರ್ ಪ್ರೇಮ್’ ಚಿತ್ರದ ಕಮಾಚ್ ರಾಗದ ಲತಾ ದೀದಿಯ ಅಮರಕಂಠದಲ್ಲಿನ ಮೊರೆ; ‘ರೈನಾ ಬೀತೀ ಜಾಯೇ, ಶಾಮ್ ನ ಆಯೇ’ ಸಹ ದಶಕಗಳಿಂದ ತನ್ನ ಜನಪ್ರಿಯತೆಯನ್ನು ಮಾಸದೆ ಉಳಿಸಿಕೊಂಡಿದೆ. ಅದೇ ಶೋಕಭಾವವನ್ನು “ಕಣ್ಣೀರ ಧಾರೆ ಇದೇಕೆ, ಇದೇಕೆ ಎಂದು ಕನ್ನಡಕ್ಕೆ ತಂದವರು ಡಾ. ರಾಜ್. ಇಲ್ಲಿ ರಾಗ ಬೇರಾದರೂ, ಭಾವವೊಂದೇ!
ಡಾ. ರಾಜ್ ಅವರದು ರಹ-ವಿರಹ, ರಕ್ತಿ-ವಿರಕ್ತಿ, ಆರ್ದ್ರತೆ-ಆರ್ತತೆಗಳ ಅಭಿವ್ಯಕ್ತಿಗೆ ಹೇಳಿ ಮಾಡಿಸಿದ ಕಂಠ. ತಾರಾಸ್ಥಾಯಿಯ ಸಂಚಾರವಿರದ, ಮಧ್ಯಮ ಶ್ರುತಿಯ ಹಾಡುಗಳಿಗೆ ಅವರು ಭಾವ ತುಂಬುತ್ತಿದ್ದರು.
ಖರಹರಪ್ರಿಯ ರಾಗದ ‘ಆರಾಧಿಸುವೆ ಮದನಾರಿ’ ಅವರ ಗಾಯನ ಶ್ರೇಷ್ಠತೆಗೆ ನಿದರ್ಶನ. ದರ್ಬಾರಿ ಕಾನಡ ರಾಗದಲ್ಲಿ ಘಂಟಸಾಲ ಅವರು ಜಗದೀಕವೀರನ ಕಥೆಗಾಗಿ ಹಾಡಿರುವ “ಶಿವಶಂಕರಿ ಶಿವಾನಂದ ಲಹರಿ” ಗೀತೆಯಷ್ಟೇ ಸವಾಲಿನದು. ಐವರಿಗೆ ಓರ್ವ ಗಾಯಕನೇ ಹಾಡಿದ ಹಾಡದು. ಘಂಟಸಾಲ ಪಳಗಿದ ಮೇರು ಗಾಯಕ. ಆದರೆ ರಾಜ್ ಸಹ ಅವರಂತೆಯೇ ಐವರಿಗೆ ಏಕಕಾಲಕ್ಕೆ ಬಬ್ರುವಾಹನ ಚಿತ್ರಕ್ಕಾಗಿ ಖರಹರಪ್ರಿಯ ರಾಗದಲ್ಲಿ ಆರಾಧಿಸುವೆ ಮದನಾರಿ ಎಂದು ಹಾಡಿ ಯಶಸ್ಸಿನ ಶಿಖರವೇರಿದರು.
ಗಾನಲೋಕ ನಿಬ್ಬೆರಗಿನಿಂದ ಅವರ ಈ ಉತ್ತುಂಗ ಸಾಧನೆಯನ್ನು ನೋಡಿ-ಕೇಳಿ, ಹಾಡಿ ಹೊಗಳಿತು.
ಹಿಂದೋಳದಲ್ಲಿನ ”ಆಕಾಶ ಭೂಮಿಗಳ ಒಂದು ಮಾಡಿ ನಿಂತ” ಹಾಡು ಪಂಡಿತ-ಪಾಮರ ಕೇಳುಗರನ್ನು ಏಕಕಾಲಕ್ಕೆ ತಣಿಸುತ್ತಲೇ ಇದೆ. ಬಾನಿನ ಅಂಚಿಂದ ಬಂದೆ ಎಂಬ ಹಾಡಿನಲ್ಲಿ ರಾಜ್ ಬೆಳಕನ್ನು ಚೆಲ್ಲುತ್ತಾ ಉದಯರಾಗ ಹಾಡಿದರಲ್ಲವೇ? ಹಾಡಿನ ಸಾಹಿತ್ಯದಲ್ಲಿ ಉದಯರಾಗ ಎಂದಿದೆ. ಅದರೆ ಅದು ಉದಯರಾಗ ಭೂಪಾಲಿಯಲ್ಲ. ಅದು ಕರ್ನಾಟಕ ಸಂಗೀತದಲ್ಲಿನ ಹಿಂದೋಳ. ಹಿಂದೂಸ್ತಾನಿ ಸಂಗೀತದಲ್ಲಿ ಇದರ ಸಂವಾದಿ ರಾಗ ಅಂದರೆ ಇದನ್ನು ಹೋಲುವ ಹತ್ತಿರದ ರಾಗ ಮಾಲ್ಕೌನ್ಸ್. ಮೃದುಮಧುರ ಭಾವನೆಗಳ ಒಟ್ಟು ಮೊತ್ತ ಎಂದು ಹೇಳಬಹುದಾದ ರಾಗ.
ರಾಜ್ ಅವರದು ಬಾಲಮುರಳಿಯಂತೆ, ಏಸುದಾಸರಂತೆ ಒಂದು ಅನನ್ಯ ಕಂಠ. ಅವರಿಬ್ಬರೂ ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದವರು; ರಾಜ್ ಅವರು ಕಲಿಯದೆಯೇ ಕಲಿತಿದ್ದರೇನೋ ಎಂಬ ಭಾವ-ಬೆರಗು ಮೂಡಿಸಿದ್ದರು. ತೆರೆಕಾಣದ ಅಮೃತವರ್ಷಿಣಿ ಚಿತ್ರಕ್ಕಾಗಿ ಧ್ವನಿಮುದ್ರಿತಗೊಂಡು, ಜೀವನಚೈತ್ರದಲ್ಲಿ ಬಳಕೆಯಾದ ತೋಡಿ ರಾಗದಲ್ಲಿನ ”ನಾದಮಯ ಈ ಲೋಕವೆಲ್ಲಾ” ಹಾಡು ಕೇಳುಗರನ್ನು ಭಾವಪರವಶಗೊಳಿಸುತ್ತಲೇ ಇದೆ.
ಮೋಹನ ರಾಗದಲ್ಲಿನ ಚಲಿಸುವ ಮೋಡಗಳು ಚಿತ್ರದ ”ಜೇನಿನ ಹೊಳೆಯೋ, ಹಾಲಿನ ಮಳೆಯೋ” ಮತ್ತು ಸನಾದಿ ಅಪ್ಪಣ್ಣದ ”ರಾಗ ಅನುರಾಗ ಶುಭಯೋಗ ತಂದಿದೆ” ಗೀತೆಗಳು ವಾಣಿಯ ವೀಣೆಯ ಸ್ವರಮಾಧುರ್ಯದಂತೆಯೇ ಇದ್ದು ಕನ್ನಡಕ್ಕೆ ಶುಭಯೋಗ ತಂದಿವೆ. ಇದೇ ಮೋಹನ ರಾಗದಲ್ಲಿನ “ಇನ್ನು ಹತ್ತಿರ, ಹತ್ತಿರ ಬರುವೆಯಾ” ನಿಜಕ್ಕೂ ಆಹ್ಲಾದಕರ ತಂಗಾಳಿ ಬೀಸಿದಂತಿದೆ. ರಾಜ್ ಹಾಡಿದ ಮೊದಲ ಯುಗಳ ಗೀತೆ ಮಹಿಷಾಸುರ ಮರ್ದಿನಿ ಚಿತ್ರದ “ತುಂಬಿತು ಮನವ ತಂದಿತು ಸುಖವಾ ಪ್ರೇಮದ ಗಾಳಿ.” ಎಸ್. ಜಾನಕಿ ಅವರೊಂದಿಗಿನ ಈ ಯುಗಳವೂ ಮೋಹನ ರಾಗಾಧಾರಿತ. ಈ ನಾಲ್ಕು ಗೀತೆಗಳನ್ನು ಗಮನಿಸಿದರೆ ಕಾಲಾನುಕ್ರಮದಲ್ಲಿ ಅವರ ಕಂಠ ಮಾಗುತ್ತಾ ಸಾಗಿರುವುದನ್ನು ಗಮನಿಸಬಹುದು. ಅನಂತರ ಹಾಡಿದ ಮೋಹನ ರಾಗದ್ದೇ ಆದ ಕುವೆಂಪು ಅವರ “ಎಲ್ಲಾದರು ಇರು ಎಂತಾದರು ಇರು…ಕನ್ನಡವೇ ಸತ್ಯ ಕನ್ನಡವೇ ನಿತ್ಯ” ಎಂಬ ಭಾವಗೀತೆಯನ್ನು ಆಲಿಸಬಹುದು. ಆ ವೇಳೆಗೆ ಅವರ ದೇಹ ಮತ್ತು ಕಂಠದ ಮೇಲೆ ವಯಸ್ಸು ತನ್ನ ಛಾಪು ಒತ್ತಿರುವುದನ್ನು ಮನಗಾಣಬಹುದು. ಪಿ.ಬಿ. ಶ್ರೀನಿವಾಸ್ ಅವರು ಗಂಧದಗುಡಿ ಚಿತ್ರಕ್ಕಾಗಿ ತಮ್ಮ ಮಕಮಲ್ಲಿನಂತಹ ನವಿರಾದ ಧ್ವನಿಯಲ್ಲಿ ಹಾಡಿ ಜನಪ್ರಿಯಗೊಳಿಸಿದ ಅರ್ಧಶತಮಾನದ ಹಿಂದಿನ ಗೀತೆ, ಇದೇ ಮೋಹನರಾಗದ “ನಾವಾಡುವ ನುಡಿಯೇ ಕನ್ನಡನುಡಿ.” ಇದೇ ಡಾ. ಶಿವರಾಜಕುಮಾರ್ ಅವರ ಗಂಧದಗುಡಿ ಭಾಗ-1ರ ಮುಂದುವರೆದ ಸರಣಿ ಚಿತ್ರಕ್ಕಾಗಿ ಡಾ. ರಾಜ್ 1994ರಲ್ಲಿ ಹಾಡುವ ಅವಕಾಶ ಒದಗಿತು.
ಅವರ ಸ್ಪಷ್ಟ ಉಚ್ಚಾ(√)ರಕ್ಕೆ ಕವಿರತ್ನ ಕಾಳಿದಾಸ ಚಿತ್ರದಲ್ಲಿನ ಸಂಸ್ಕೃತದಲ್ಲಿರುವ ‘ಶ್ಯಾಮಲಾ ದಂಡಕ’ವನ್ನು ಉದಾಹರಿಸಬಹುದು. ”ಮಾಣಿಕ್ಯವೀಣಾಂ ಉಪಲಾಲಯಂತೀ ಮದಾಲಸ ಮಂಜುಳ ವಾಗ್ವಿಲಾಸ”ವು ಕಲ್ಯಾಣಿ ರಾಗದಲ್ಲಿ ತನುತುಂಬಿ, ಮನತುಂಬಿ, ಚಿತ್ತಚೇತನ ತುಂಬಿ ನಾದಝರಿಯಾಗಿ ಹರಿದಿರುವುದನ್ನು ನೆನಪಿಸಿಕೊಳ್ಳಬಹುದು.
ಕಲ್ಯಾಣಿ ರಾಗದಲ್ಲಿ ಸಂಯೋಜಿಸಲ್ಪಟ್ಟಿರುವ ಕಾಳಿದಾಸನ ಸಂಕೀರ್ಣವಾದ ‘ಶ್ಯಾಮಲಾ ದಂಡಕ’ವನ್ನು ರಾಜ್ ಸುಲಲಿತವಾಗಿ ಹಾಡಿ ಎಲ್ಲರನ್ನೂ ನಿಬ್ಬೆರಗಾಗಿಸಿದರು. ಅವರ ಪಾಲಿಗದು ಸಲಲಿತ ರಾಗ ಸುಧಾರಸ ಸಾರ. ಅದು ಸಂಸ್ಕೃತದಲ್ಲಿನ ರಚನೆ. ಉಚ್ಚಾರಣೆಯಲ್ಲಿ ಆಭಾಸ ಆಗಬಾರದೆಂದು ಕಾಶಿಯೂ ಸೇರಿದಂತೆ ಹಲವು ಕಡೆಗಳಿಂದ ಸಂಸ್ಕೃತ ವಿದ್ವಾಂಸರನ್ನು ಮನೆಗೆ ಕರೆಸಿಕೊಂಡು ಚರ್ಚಿಸಿ, ಅವರ ಮುಂದೆ ಹಾಡಿ ಅನಂತರ ಧ್ವನಿಮುದ್ರಣಕ್ಕೆ ತೆರಳಿದರು. ಯಾವುದೇ ಕಾರ್ಯದಲ್ಲೂ ಅವರದು ಅಪರಿಮಿತ ಶ್ರದ್ಧೆ ಮತ್ತು ಮುನ್ನೆಚ್ಚರಿಕೆ.
ಅವರೇ ಹಾಡಿರುವ ಯಮನ್ ಕಲ್ಯಾಣಿಯಲ್ಲಿನ “ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕತೆಯಾ ಹೇಳಿವೆ” ಗೀತೆಯ ಆರ್ತತೆಗೆ ಎಣೆಯುಂಟೆ?
Dr. Rajkumar ದೇಶ್ ರಾಗದ “ಬಾಳೆ ಪ್ರೇಮಗೀತೆ, ನಲ್ಲ ನಲ್ಲೆ ಸೇರಿದಾಗ” ಅನಿರ್ವಚನೀಯವಾದ ಆನಂದ ನೀಡದಿರದು. ಚಂದ್ರಕೌಂಸ್ ರಾಗದಲ್ಲಿನ ಯಾವ ಕವಿಯು ಬರೆಯಲಾರ ಒಲವಿನಿಂದ ಕಣ್ಣೋಟದಿಂದ” ಗೀತೆಯು ಕಡೆದಿಟ್ಟ ಭಾವವನ್ನು ಸುಲಭದಲ್ಲಿ ಚದುರಿಸಲಾಗದು. ಇನ್ನು ಅಠಾಣ ರಾಗದಲ್ಲಿ ಹೊಡೆದಾಟದ ದೃಶ್ಯಕ್ಕೆಂದು ಸಂಯೋಜಿಸಲಾದ ಹಾಸ್ಯದ ಸ್ಪರ್ಶವುಳ್ಳ “ಬಿಸಿಬಿಸಿ ಕಜ್ಜಾಯ, ರುಚಿರುಚಿ ಕಜ್ಜಾಯ ಮಾಡಿಕೊಡಲೆ ನಾನು?” ಗೀತೆ ಹೊಡೆದಾಟದ ಬಿಸಿ, ಕಜ್ಜಾಯದ ಸಿಹಿ, ತುಪ್ಪದ ಸಮ್ಮಿಶ್ರಣದಂತೆ ಭಾಸವಾಗುತ್ತದೆ.
ಚಕ್ರವಾಕವೆಂಬುದು ಒಂದು ರಾಗದ ಹೆಸರು. ಪ್ರಧಾನವಾಗಿ ಭಕ್ತಿ ಅಥವಾ ಶೋಕತಪ್ತ ಭಾವದ ಅಭಿವ್ಯಕ್ತಿಗಾಗಿ ಬಳಸುವ ರಾಗವಿದು. ಇದೇ ರಾಗವನ್ನು ಜ್ವಾಲಾಮುಖಿ ಚಿತ್ರದಲ್ಲಿ ಹಾಸ್ಯಾಭಿವ್ಯಕ್ತಿಗಾಗಿ ಬಳಸಲಾಗಿದೆ: ಹೇಳುವುದು ಒಂದು, ಮಾಡುವುದು ಇನ್ನೊಂದು. ಅದನ್ನೂ ಹಾಡಿ ಗೆದ್ದವರು ರಾಜ್.
ಪಹಾಡಿ ಎಂಬುದು ಕೋಮಲ ಮಲಯ ಸಮೀರದಂತಹ ರಾಗ. ಹಿಂದೂಸ್ತಾನಿ ಸಂಗೀತದ ಈ ರಾಗದಲ್ಲಿನ “ಏನೇನೋ ಆಸೆ ನೀ ತಂದಾ ಭಾಷೆ”ಯನ್ನು ಜೇನದನಿಯ ಗಾಯಕಿ ವಾಣಿ ಜಯರಾಮ್ ಅವರ ಜೊತೆ ಹಾಡಿ ಕನ್ನಡದ ಸವಿಯನ್ನು ಸವಿಯುವಂತೆ ಮಾಡಿದವರು ರಾಜ್. ಇದೇ ಪಹಾಡಿಯಲ್ಲಿ ಗುಲಾಮ್ ಅಲಿ ಖಾನ್ ಅವರ ಗಜಲ್ ನೆನಪಿಸುವಂತಹ “ಗೆಳತಿ ಬಾರದು ಇಂಥಾ ಸಮಯ, ಅನುರಾಗ ಬೇಕೆಂದಿದೆ ಹೃದಯ” ಎಂದು ನಿವೇದಿಸಿಕೊಳ್ಳುವ ಶೀತಲ ಶೃಂಗಾರದ ಧಾಟಿ ಮನಕ್ಕೆ ನಾಟಿಕೊಳ್ಳದಿರದು.
ಅಭೇರಿ ರಾಗದಲ್ಲಿನ ಚೆಲುವೆಯೇ ನಿನ್ನ ನೋಡಲು ಮಾತುಗಳು ಬರದವನು ಬರೆಯುತ ಹೊಸ ಕವಿತೆಯ, ಹಾಡುವ ನೋಡಿ ಅಂದವನು” ಎಂಬುದು ನಿಜಕ್ಕೂ ಪ್ರಣಯಭಾವ ಸ್ಫುರಿಸಬಲ್ಲ ಚೇತೋಹಾರಿ ಗೀತೆ. ಇದೇ ರಾಗದಲ್ಲಿ ಕಸ್ತೂರಿ ಶಂಕರ್ ಅವರೊಂದಿಗೆ ಟಿ.ಜಿ. ಲಿಂಗಪ್ಪನವರ ಸಂಯೋಜನೆಯಲ್ಲಿ ಹಾಡಿದ ಸೂರ್ಯನ ಕಾಂತಿಗೆ ಸೂರ್ಯನೆ ಸಾಟಿ ಬೇರೆ ಯಾರಿಲ್ಲ” ಗೀತೆಗೆ ಸಾಟಿಯಾದದ್ದು ಬೇರೆಲ್ಲುoಟು? ಪರಸ್ತ್ರೀಯೊಬ್ಬಳ ದೈವೀಕ ಸೌಂದರ್ಯಕ್ಕೆ ಬೆರಗಾಗಿ ಮೆಚ್ಚಿ ಸ್ತುತಿಸುವ ಗೀತೆ “ಎಂಥ ಸೌಂದರ್ಯ ಕಂಡೆ! ಆದಿಲಕ್ಷ್ಮಿಯೋ, ಮಹಾಲಕ್ಷ್ಮಿಯೋ, ವಾಣಿಯೋ ಬೇರೆ ಕಾಣೆ ನಾ” ಸಹ ಅಭೇರಿಯೇ.
ಪ್ರೇಮದ ಕಾಣಿಕೆ ಚಿತ್ರದ ಪೀಲು ರಾಗದ “ಇದು ಯಾರು ಬರೆದ ಕಥೆಯೋ” ಸಹ ಅನನ್ಯ. ಅದೇ ಚಿತ್ರದಲ್ಲಿನ ಕಾಪಿ ರಾಗದ “ಬಾನಿಗೊಂದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಲ್ಲಿ ಕೊನೆಯಿದೆ?” ಗೀತೆ ಸಹ ಒಗರಲ್ಲ, ಕಡುವಲ್ಲ, ಕಹಿಯಲ್ಲ; ಸವಿ- ಸವಿ- ಸವಿ! ಇಂತಹುದೇ ಸವಿ ತುಂಬಿದ ಮತ್ತೊಂದು ಹಾಡು ಬೇಕೆಂದರೆ ನೇರ ‘ಶ್ರಾವಣ ಬಂತು’ ಚಿತ್ರದ “ಇದೇ ರಾಗದಲ್ಲಿ ಇದೇ ತಾಳದಲ್ಲಿ ರಾಧೆಗಾಗಿ ಹಾಡಿದ ನೀಲಮೇಘ ಶ್ಯಾಮ” ಗೀತೆಯನ್ನು ಆಲಿಸಿ.
ಎಪ್ಪತ್ತು, ಎಂಬ(√)ತ್ತರ ದಶಕಗಳಲ್ಲಿ ರಾಜ್ ಹಾಡಿದ ಈ ಗೀತೆಗಳನ್ನು ನೀರವ ರಾತ್ರಿಗಳಲ್ಲಿ ಆಲಿಸುವುದೇ ಒಂದು ರಸಾನುಭೂತಿ. ನೀರವತೆ ಕಳೆದು ರವದ ಚೈತನ್ಯವನ್ನು ಬಾಳಿಗೆ ಮರಳಿ ತರುವ ಸಾಮರ್ಥ್ಯವುಳ್ಳ ಗೀತೆಗಳಿವು. ಮಾಧುರ್ಯದಿಂದ ಆಚೆಗೆ ಹೊರಳಿ ವ್ಯತಿರಿಕ್ತ ಭಾವದ ಪ್ರತೀಕವಾದ, ಭಕ್ತಪ್ರಹ್ಲಾದ ಚಿತ್ರದ ಹಂಸಧ್ವನಿ ರಾಗದ ಬೀಭತ್ಸ ತುಂಬಿದ “ಸಿಗಿವೆಮ್ ಕ್ಷಣದಲಿ ನಿನ್ನ ನಾಮ್” ವೈರಿಗಳ ಜಂಘಾಬಲ ಉಡುಗಿಸದಿರದು. ಪರಿಸರ ಪ್ರೇಮವನ್ನು ಅನನ್ಯವಾಗಿ ಮೆರೆದ ಗೀತೆ ಗಿರಿಕನ್ಯೆ ಚಿತ್ರದ “ಏನೆಂದು ನಾ ಹೇಳಲಿ ಮಾನವನಾಸೆಗೆ ಕೊನೆಯೆಲ್ಲಿ?”
ಗಜ಼ಲ್‌ಪ್ರಿಯ ರಾಜ್ ಇಷ್ಟಪಟ್ಟು “ಸದಾ ಕಣ್ಣಲೇ ಪ್ರಣಯದಾ ಕವಿತೆ” ಹಾಡಿದವರು. ಹಿಂದಿಯಲ್ಲಿರುವ ಅದನ್ನು ಕನ್ನಡಕ್ಕೆ ಬರುವಂತೆ ಮಾಡಿದರು. ಮಧ್ಯಮಾವತಿ ಎಂಬ ಮಂಗಳ ರಾಗದಲ್ಲಿ ದನಿಯಿರದ ಬಾಳಿನಲ್ಲಿ ಕೊಳಲಾದೆ ನೀನು ಎಂದು ದೊಡ್ಡರಂಗೇಗೌಡರ ಭಾವಗೀತೆಗೆ ರಾಗ-ರಂಗು ತುಂಬಿದವರು. ವಾರ ಬಂತಮ್ಮ ಗುರುವಾರ ಬಂತಮ್ಮ ಎಂದು ಮಧ್ಯಮಾವತಿಗೆ ಶರಣಾದವರು. ದುರ್ಗಾ ರಾಗದಲ್ಲಿ “ಅನುರಾಗದಾ ಭೋಗ” ಎಂದು ಆಕಸ್ಮಿಕ ಚಿತ್ರಕ್ಕಾಗಿ ಹಾಡಿ ರಂಗಗೀತೆಯ ಮಟ್ಟುಗಳನ್ನು ನೆನಪಿಸಿದವರು ಅವರು.
ನೀ ತಂದೆ, ನಾ ಕಂದ ಎಂಬ ಸಮರ್ಪಣಾ ಭಾವ, ಹಾಲಲ್ಲಾದರು ಹಾಕು, ನೀರಲ್ಲಾದರು ಹಾಕು ಎಂಬ ಉದಾರ ಭಾವ, ಹಾಡು ಕೋಗಿಲೆ, ನಲಿದಾಡು ಕೋಗಿಲೆ ಎಂಬ ಪರವಶ ಭಾವಗಳ ಅಭಿವ್ಯಕ್ತಿಗೆ ರಾಜ್ ಅವರ ಗಳಕ್ಕೆ ಸರಿಸಾಟಿಯುಂಟೆ? “ಏನು ದಾಹ, ಯಾವ ಮೋಹ ತಿಳಿಯದಾಗಿದೆ ಸ್ವಾಮಿ. ಇಂದು ನಿನ್ನ ಹೆಸರ ಹೇಳೊ ಆಸೆಯಾಗಿದೆ” ಎಂಬ ಭಕ್ತಿಗೀತೆಯಲ್ಲಿ ತನ್ಮಯತೆಯ ಜೊತೆಗೆ ಭಗವಂತನೆಡೆಗೆ ನೆಟ್ಟ ನಂಬಿಕೆಯನ್ನೂ ಮನಗಾಣಬಹುದು. ಇದು ಲತಾ ಮಂಗೇಷ್ಕರ್ ಅವರು ಶರ್ಮೀಲಿ ಚಿತ್ರಕ್ಕಾಗಿ ಹಾಡಿರುವ ಪಟದೀಪ್ ರಾಗದ ಮೇಘಾ ಛಾಯೆ ಆಧೀ ರಾತ್ ಭೈರನ್ ಬನಗಯೀ ನಿಂದಿಯ ಗೀತೆಯ ಆರ್ತತೆಯನ್ನೂ ನೆನಪಿಸದಿರದು. ಭಾರತರತ್ನ ಸುಬ್ಬುಲಕ್ಷ್ಮಿ ಅವರಂತೆ ಭಕ್ತಿಯನ್ನು ಆವಾಹನೆ ಮಾಡಿಕೊಂಡು ಆಲಾಪಿಸುತ್ತಿದ್ದ ಅಪ್ರತಿಮ ಗಾಯಕ…
ಡಾ. ರಾಜ್ ಅವರ ಸಿರಿಕಂಠ ಅವರ ತಂದೆಯ ಬಳುವಳಿ. ತಮ್ಮ ಮಗ ಒಳ್ಳೆಯ ಗಾಯಕನಾಗಬೇಕೆಂದು ಬಯಸಿ
ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ರಾಜ್ ಅವರನ್ನು ಬಾಲ್ಯದಲ್ಲೇ ಸಂಗೀತ ಕಲಿಕೆಗೆ ಹಚ್ಚಿದ್ದರು. ಸಂಗೀತ ಪಾಠಕ್ಕೆ ರಾಜ್ ಅವರಿಗೆ ಶಿಕ್ಷಕರೊಬ್ಬರನ್ನು ನೇಮಿಸಲಾಗಿತ್ತು. ಇದು ಗುಬ್ಬಿ ಕಂಪನಿಗೆ ಸೇರುವ ಮುನ್ನ ಆದದ್ದು. ಅನಂತರ ನಾಟಕ ಕಂಪನಿಯಲ್ಲಿ ಸಂಗೀತಾಭ್ಯಾಸ ಮುಂದುವರೆಯಿತು. ರಾಜ್ ಅವರದು ಅನುಕರಣೆಯ ಹಾಡುಗಾರಿಕೆಯಲ್ಲ. ಅದು ಪರಿಶ್ರಮ, ಆಸಕ್ತಿ ಮತ್ತು ಬದ್ಧತೆಯ ಮುಪ್ಪುರಿ. ಸ್ವಂತಿಕೆಯ ಛಾಪನ್ನು ಅವರ ಹಾಡುಗಳಲ್ಲಿ ಕೇಳಬಹುದು.
ಬೆಳಗ್ಗೆ ಎದ್ದು ರಾಜ್ ಸಂಗೀತಾಭ್ಯಾಸ ಮಾಡಬೇಕಾಗಿತ್ತು. ಸಂಗೀತ ಕಲಿಯಲು ಹೋಗುವಾಗ ಚಡ್ಡಿ ಧರಿಸಬೇಕಾಗುತ್ತಿತ್ತು. ಅಲ್ಲಿ ಸರಿಯಾಗಿ ಹಾಡದಿದ್ದರೆ ಆ ದೂರ್ವಾಸ ಸ್ವಭಾವದ ಶಿಕ್ಷಕರು ತೊಡೆಯ ಮೇಲೆ ಬಡಿಯುತ್ತಿದ್ದರು. ತೊಡೆ ಕೆಂಪಗೆ ಆಗಿದ್ದನ್ನು ಕಂಡರೆ ರಾಜ್ ಅವರ ತಂದೆ ಮತ್ತಷ್ಟು ಬಡಿಯುತ್ತಿದ್ದರು! ಹಾಗಾಗಿ ಸಂಗೀತದ ಕಲಿಕೆಯಲ್ಲಿ ರಾಜ್ ತಪ್ಪುವಂತೆಯೇ ಇರಲಿಲ್ಲ.
ಮದರಾಸಿನಲ್ಲಿ ನೆಲೆಸಿದ್ದಾಗ ಅವರ ಮನೆಯಲ್ಲಿ ಒಂದರ ಪಕ್ಕ ಇನ್ನೊಂದು ಹೀಗೆ ಎರಡು ಬಚ್ಚಲು ಇದ್ದವಂತೆ. ಒಂದರಲ್ಲಿ ರಾಘವೇಂದ್ರ, ಮತ್ತೊಂದರಲ್ಲಿ ರಾಜ್ ಅವರ ಸ್ನಾನ. ಹಾಡುವಾಗ ರಾಘವೇಂದ್ರ ತಪ್ಪು ಮಾಡಿದರೆ ಈ ಕಡೆಯ ಬಚ್ಚಲಿನಿಂದ ರಾಜ್ ಅದನ್ನು ಸರಿಯಾಗಿ ಹಾಡಿ ಕೇಳಿಸುತ್ತಿದ್ದರಂತೆ. ಎಷ್ಟು ಹೊತ್ತಾದರೂ ಇಬ್ಬರ ಸ್ನಾನ ಮುಗಿಯುತ್ತಿರಲಿಲ್ಲವಂತೆ.
ರಾಜ್ ಅವರ ಸೋದರಿ ಶಾರದಮ್ಮನವರೂ ಚೆನ್ನಾಗಿ ಹಾಡುತ್ತಿದ್ದರು. ರಾಜ್ ಅವರ ಹಿರಿಯ ಮಗಳು ಲಕ್ಷ್ಮಿ ಗೋವಿಂದರಾಜ್. ನಾನು ಅವರನ್ನು ಇತ್ತೀಚಿಗೆ ಕೇಳಿದಾಗ ತಾನೂ ಸಹ ಹಾಡುತ್ತೇನೆಂದರು. ಪುನೀತ್, ಶಿವರಾಜಕುಮಾರ್ ಅವರು ಸಹ ಆಗೊಮ್ಮೆ, ಈಗೊಮ್ಮೆ ಚಲನಚಿತ್ರಗಳಿಗಾಗಿ ಉಲಿದಿದ್ದನ್ನು ಕೇಳಿದ್ದೇವೆ. ರಾಘವೇಂದ್ರ ರಾಜಕುಮಾರ್ ಪಳಗಿದ ಗಾಯಕ ಎಂದು ಆರಂಭದಿಂದಲೇ ಸಾಬೀತುಪಡಿಸಿದವರು.
ರಾಜ್ ವೇದಿಕೆಯ ಮೇಲೆ ಹಾಡುವಾಗ ಸಂಭ್ರಮದ ತೊರೆಯಾಗುತ್ತಿದ್ದರು. ನಾಟ್ಯದ ನವಿಲಾಗುತ್ತಿದ್ದರು. ಅವರ ಹಾಡು ಶ್ರೋತೃಗಳ ಕಣ್ಣು-ಕಿವಿ-ಮನಸ್ಸು; ಈ ಮೂರನ್ನೂ ಏಕಕಾಲಕ್ಕೆ ತಾಕುತ್ತಿತ್ತು. ಯಾವುದೇ ಹಾಡಿಗೂ ಸಾಹಿತ್ಯವನ್ನು ನೋಡದೆ ವೇದಿಕೆಯ ಮೇಲೆ ಹಾಡಬಲ್ಲ ಸಾಮರ್ಥ್ಯವಿದ್ದ ಏಕೈಕ ಕಲಾವಿದ. ಅವರು ಹಾಡುವಾಗ ಆ ಹಾಡಿನ ಭಾವವನ್ನೂ ಅಭಿವ್ಯಕ್ತಿಸಬಲ್ಲ ಸಮರ್ಥ ನಟ ಅವರಲ್ಲಿದ್ದ. ಆ ಮೊಗದಲ್ಲಿ ಎಂದೂ ಮುಖ ಕಿವುಚುವ ‘ಮುದ್ರಾದೋಷ’ ಕಂಡಿದ್ದೇ ಇಲ್ಲ. ರಾಜ್ ವಿಚಾರದಲ್ಲಿ ಗಾಯನ ಎಂಬುದು ಒಂದು ಪ್ರದರ್ಶಕ ಕಲೆಯೂ ಹೌದು.
ಕವಿರತ್ನ ಕಾಳಿದಾಸ ಚಿತ್ರಕ್ಕಾಗಿ ಸಂಸ್ಕೃತದಲ್ಲಿನ ‘ಶ್ಯಾಮಲಾ ದಂಡಕ’ವನ್ನು ಹಾಡಬೇಕಾಗಿ ಬಂದಾಗ ಉಚ್ಚಾರಣೆಯಲ್ಲಿ ದೋಷವಾಗಬಾರದು ಎಂದು ನಾಡಿನ ಶ್ರೇಷ್ಠ ಸಂಸ್ಕೃತ ವಿದ್ವಾಂಸರನ್ನು ತಮ್ಮ ಮನೆಗೆ ಕರೆಸಿ ಒಂದು ವಾರ ಅವರ ಮುಂದೆ ತಾಲೀಮು ಮಾಡಿ ಧ್ವನಿಮುದ್ರಣಕ್ಕೆ ಅಣಿಯಾದರು ಎಂಬುದನ್ನು ರಾಘವೇಂದ್ರ ರಾಜಕುಮಾರ್ ಅವರು ಹೇಳಿದ್ದನ್ನು ನೆನೆದರೆ ಅಭಿನಯಿಸಲು ಅಷ್ಟೇ ಅಲ್ಲ, ಹಾಡುವಾಗಲೂ ಅವರು ವಹಿಸುತ್ತಿದ್ದ ಎಚ್ಚರಿಕೆಯನ್ನು
ಮನಗಾಣಬಹುದು.
ಸ್ವರಲಿಪಿ/notations ಸಹಿತ, ರಾಜ್ ಹಾಡಿರುವ ಶಾಸ್ತ್ರೀಯ ರಾಗಾಧಾರಿತ ಹಾಡುಗಳ, ಪೂರ್ವಗ್ರಹ ಪೀಡನೆಯಿಲ್ಲದ, ಅಧ್ಯಯನಯೋಗ್ಯ ಕೃತಿಯೊಂದನ್ನು ಕರ್ನಾಟಕ ಸಂಗೀತ ವಿಶ್ವವಿದ್ಯಾಲಯ ಅಥವಾ ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸುವ ಅಗತ್ಯವಿದೆ. ತಾವು ಹಾಡಿದ ಅಷ್ಟೂ ಗೀತೆಗಳಿಗೆ ಜೀವತುಂಬಿದ ಗಾನ ಶಿರೋಮಣಿ ಅವರು. ಗಾಯನದಲ್ಲಿ ಅಭಿನಯದ ಮಟ್ಟುಗಳನ್ನು ಹದವಾಗಿ ಬೆರೆಸಿ ನೋಡಿದ ಪ್ರಯೋಗಶೀಲರೂ ಹೌದು. ಒಂದೆರಡು ಸಹಜ ಮಿತಿ ಮತ್ತು ಅತಿಗಳ ನಡುವೆಯೂ, ರಾಜ್ ಅವರು ಗಾಯನ ಕ್ಷೇತ್ರದ ಒಂದು ಸುಮೇರು ಪ್ರತಿಭೆ.
ಅರವತ್ತರ ದಶಕದಲ್ಲಿ ಒಂದೆರಡು ಹಾಡುಗಳನ್ನು ಮಾತ್ರ ಹಾಡಿದ್ದ ಅವರು 1974ರಲ್ಲಿ ತೆರೆಕಂಡ ಸಂಪತ್ತಿಗೆ ಸವಾಲ್ ಚಿತ್ರದಲ್ಲಿನ ಎಮ್ಮೆಯನ್ನು ಕುರಿತಾದ “ಯಾರೇ ಕೂಗಾಡಲಿ ಊರೇ ಹೋರಾಡಲಿ” ಎಂಬ ಹಾಡಿನ ಮೂಲಕ ನಿರತವಾಗಿ ಹಾಡಲು ತೊಡಗಿದರು. ಈ ಹಾಡನ್ನು ಅವರಿಂದಲೇ ಹಾಡಿಸಬೇಕೆಂದು ತಮ್ಮ ಗುರುಗಳಾದ ಜಿ.ಕೆ. ವೆಂಕಟೇಶ್ ಅವರಿಗೆ ಸಲಹೆ ನೀಡಿದ್ದವರು ಅವರ ಸಂಗೀತ ಸಹಾಯಕ ಇಳಯರಾಜಾ. ರಾಜಾ ಅವರಿಂದ ಸಂಗೀತ ಕ್ಷೇತ್ರಕ್ಕೆ ಸಂದ ಮಹದುಪಕಾರಗಳಲ್ಲಿ ಇದೂ ಒಂದು.
ರಾಜ್ ತಮ್ಮ ಇಳಿವಯಸ್ಸಿನಲ್ಲಿ ಉಪೇಂದ್ರಕುಮಾರ್ ಅವರಿಂದ ಸಿತಾರ್ ಕಲಿಯಲು ಹೊರಟ ವಿಧೇಯ ವಿದ್ಯಾರ್ಥಿ. ಸಂಗೀತದ ಯಾವುದೇ ಪ್ರಕಾರವಿರಲಿ, ಶೈಲಿಯಿರಲಿ ಅದರ ನಾಡಿ ಹಿಡಿಯುತ್ತಿದ್ದ ರಸಜ್ಞ ಡಾ. ರಾಜ್. ಕನ್ನಡದ ಸಾರ್ವಕಾಲಿಕವಾದ ಕೆಲವು ಶ್ರೇಷ್ಠಗೀತೆಗಳು ಕನ್ನಡಕ್ಕೆ ಬಂದಿದ್ದು ಅವರ ಸೂಚನೆಯಿಂದಾಗಿ. ಹಿಂದಿಯ ಎರಡು ಜನಪ್ರಿಯ ಗಜಲ್‌ಗಳನ್ನು ಆಲಿಸಿ ಅವು ಕನ್ನಡಕ್ಕೆ ಇಳಿದು ಬರಲಿ ಎಂದು ಇಷಾರೆ ನೀಡಿದರು. ಕಣ್ಣೀರಧಾರೆ ಇದೇಕೆ, ಇದೇಕೆ ಮತ್ತು ಕವಿರತ್ನ ಕಾಳಿದಾಸ ಚಿತ್ರದ ಸದಾ ಕಣ್ಣಲಿ ಪ್ರಣಯದ ಕವಿತೆ ಹಾಡುವೆ ಗೀತೆಗಳು ಕನ್ನಡಕ್ಕೆ ಒಲಿದು ಬಂದಿದ್ದು ಹಾಗೆ. ಸಂಗೀತದ ಬಗೆಗಿನ ಅವರ ಅಭಿರುಚಿ ನಿರುಪಮ. ಡಾ. ರಾಜ್ ಕನ್ನಡದ ನಿಜ ಹಂಸಗೀತೆ!
ಲೇಖಕರು
ಕೆ.ರಾಜಕುಮಾರ್. ಬೆಂಗಳೂರು