Friday, April 18, 2025
Friday, April 18, 2025

KLive Special Article ಶರಾವತಿ ಅಂತರ್ಗತ ಜಲವಿದ್ಯುತ್ ಯೋಜನೆ ಸರ್ಕಾರ ಕೈ ಬಿಡದಿದ್ದರೆ ಜನಾಂದೋಲನ- ಅಖಿಲೇಶ್ ಚಿಪ್ಪ್ಳಿ

Date:

KLive Special Article 2017ರಿಂದ ಮುನ್ನೆಲೆಗೆ ಬಂದು ಕಾಲ ಕಾಲಕ್ಕೆ ಜನವಿರೋಧದ ಕಾರಣಕ್ಕೆ ಹಿನ್ನೆಲೆಗೆ ಸೇರಿದ್ದ ಶರಾವತಿ ಅಂತರ್ಗತ ಜಲವಿದ್ಯುತ್ ಯೋಜನೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಇದುವರೆಗೂ ನಾಗರಿಕ ಪ್ರಪಂಚದ ಅರಿವಿಗೆ ಹೊರತಾದ ದಟ್ಟಾರಣ್ಯ ಪ್ರದೇಶವನ್ನು ಸಂಪೂರ್ಣವಾಗಿ ನಾಶ ಮಾಡುವ ಯೋಜನೆಯನ್ನು ವಿರೋಧಿಸುವುದು ಇಂದು ಅನಿವಾರ್ಯವಾಗಿದೆ. ತಲಕಳಲೆ ಆಣೆಕಟ್ಟಿನಿಂದ ಹರಿದು ಒಮ್ಮೆ ವಿದ್ಯುತ್ ಉತ್ಪಾದನೆಯಾಗಿ ಗೇರುಸೊಪ್ಪಾ ಆಣೆಕಟ್ಟಿಗೆ ಸೇರುವ ನೀರನ್ನು ಮತ್ತೆ ಗುರುತ್ವಾಕರ್ಷಣ ಶಕ್ತಿಗೆ ವಿರುದ್ಧವಾಗಿ ಗೇರುಸೊಪ್ಪಾ ಆಣೆಕಟ್ಟಿನಿಂದ ತಲಕಳಲೆ ಆಣೆಕಟ್ಟಿಗೆ ಎತ್ತಿತಂದು, ಬೇಡಿಕೆ ಇರುವ ಹೊತ್ತಿನಲ್ಲಿ ಒಮ್ಮೆ ಬಳಕೆಯಾದ ನೀರಿನಿಂದ ಮತ್ತೆ ವಿದ್ಯುತ್ ಮರು ಉತ್ಪಾದನೆ ಮಾಡುವ ಯೋಜನೆಯಿದು. ಈ ಯೋಜನೆಯಿಂದ 2000 ಮೆ.ವ್ಯಾ. ಉತ್ಪಾದನೆ ಮಾಡುತ್ತೇವೆ ಎಂದು ಕೆ.ಪಿ.ಟಿ.ಸಿ.ಎಲ್. ಪ್ರತಿಪಾಧಿಸುತ್ತಿದೆ. ಇದೊಂದು ಅನವಶ್ಯಕ ಯೋಜನೆಯೆಂದು, ಇದರಿಂದ ನಾಗರಿಕ ಪ್ರಪಂಚಕ್ಕೆ ಆಗುವ ಲಾಭಕ್ಕಿಂತ ನಷ್ಟವೇ ಅತಿ ಹೆಚ್ಚು, ಆದ್ದರಿಂದ ಈ ಯೋಜನೆಯನ್ನು ತಕ್ಷಣದಲ್ಲಿ ಕೈಬಿಡಬೇಕು ಎಂದು ಸರ್ಕಾರವನ್ನು ಆಗ್ರಹಿಸಲಾಗಿದ್ದು, ವಿರೋಧಿಸಲು ಈ ಕೆಳಗಿನ ಸಕಾರಣಗಳನ್ನು ಪಟ್ಟಿ ಮಾಡಲಾಗಿದೆ.

ಯೋಜನಾ ಪ್ರದೇಶವು ಶರಾವತಿ ಕಣಿವೆ ಅಭಯಾರಣ್ಯದ ಹೊರಭಾಗದ ಸೂಕ್ಷ್ಮ ಪ್ರದೇಶದಲ್ಲಿ ಬರುತ್ತದೆ. ಇದರಿಂದ ಅಭಯಾರಣ್ಯಕ್ಕೆ ಯಾವುದೇ ಹಾನಿ ಆಗುವುದಿಲ್ಲವೆಂದು ಕೆ.ಪಿ.ಟಿ.ಸಿ.ಎಲ್ ಪ್ರತಿಪಾಧಿಸುತ್ತಿದೆ. ಆದರೆ, ಪ್ರಸ್ತಾವಿತ ಯೋಜನೆಯು ಶರಾವತಿ ಕಣಿವೆ ಸಿಂಗಳೀಕ ಅಭಯಾರಣ್ಯದ ಕೇಂದ್ರ ಭಾಗದಲ್ಲಿ ನಿರ್ಮಿಸಲು ನಿಗದಿಯಾದ ಅಂಶವನ್ನು ಪ್ರಜ್ಞಾಪೂರ್ವಕವಾಗಿ ಮರೆಮಾಚಲಾಗಿದೆ. ಪ್ರಸ್ತಾವಿತ ಈ ಯೋಜನೆಯ ಪ್ರದೇಶದಲ್ಲಿ ಪ್ರಪಂಚದಲ್ಲೇ ಅಳಿವಿನಂಚಿನಲ್ಲಿರುವ ಸಿಂಹಬಾಲದ ಸಿಂಗಳೀಕಗಳು ಅತಿ ಹೆಚ್ಚು ಗುಂಪುಗಳು ವಾಸ ಮಾಡುತ್ತಿರುವುದನ್ನು ಯೋಜನಾ ದುರಂಧರು ಮುಚ್ಚಿ ಇಟ್ಟಿರುತ್ತಾರೆ.
ಯಾವುದೇ ನದಿ ಜೀವಂತವಾಗಿರಬೇಕು ಎಂದರೆ, ಅದರಲ್ಲಿ ನಿರಂತರ ಹರಿವು ಇರಬೇಕು. ಹೀಗಿದ್ದಲ್ಲಿ ಮಾತ್ರ ನದಿಯನ್ನೇ ನಂಬಿಕೊಂಡ ಜನರು, ಮೀನುಗಾರರು ಹಾಗೂ ಜೀವಿವೈವಿಧ್ಯಗಳು ಬದುಕುಳಿಯಲು ಸಾಧ್ಯ. ಈ ಯೋಜನೆ ಜಾರಿಯಾದಲ್ಲಿ, ಗೇರುಸೊಪ್ಪೆಯಿಂದ ಕೆಳಗಿನ ಭಾಗದ ಶರಾವತಿ ನದಿ ಸಂಪೂರ್ಣ ಅವಸಾನವಾಗಲಿದೆ. ಶರಾವತಿ ನದಿಯನ್ನು ನಂಬಿಕೊಂಡ ಅತಿಚಿಕ್ಕ ರೈತರು, ಸಂತಾನೋತ್ಪತ್ತಿ ನದಿಯ ಅಳಿವೆಯನ್ನೇ ನೆಚ್ಚಿಕೊಂಡ ಸಮುದ್ರ ಜಲಚರಗಳು ಮತ್ತು ಜೀವನೋಪಾಯಕ್ಕಾಗಿ ಜಲಚರಗಳನ್ನೇ ನಂಬಿಕೊಂಡ ಬೆಸ್ತರು ಹಾಗೂ ಇಡೀ ಹೊನ್ನಾವರ ತಾಲ್ಲೂಕಿನ ಜನತೆ ಶಾಶ್ವತ ಜಲ ಸಂಕಷ್ಟಕ್ಕೀಡಾಗಲಿದ್ದಾರೆ.
ಅರಣ್ಯ ಪ್ರದೇಶ, ಅಭಯಾರಣ್ಯಗಳನ್ನು ಅರಣ್ಯೇತರ ಉದ್ದೇಶಕ್ಕೆ ಬಳಸುವುದಕ್ಕೂ ಪೂರ್ವದಲ್ಲಿ ಅನೇಕ ಕಾನೂನು/ನಿಯಮಗಳನ್ನು ಪರಿಗಣಿಸುವುದು ಹಾಗೂ ಅವುಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ. ಆದರೆ, ಕೆ.ಪಿ.ಟಿ.ಸಿ.ಎಲ್ ಸಂಸ್ಥೆಯು ಬಹಳ ತರಾತುರಿಯಲ್ಲಿ ಸಕ್ಷಮ ಪ್ರಾಧಿಕಾರಗಳನ್ನು ಪರಿಗಣಿಸದೇ, ಅಂದರೆ, ಅರಣ್ಯ ಇಲಾಖೆಯಿಂದ ಪಡೆಯಬೇಕಾದ ಅನುಮತಿಗಳನ್ನು ಪಡೆಯದೇ, ಕೇಂದ್ರ ಪರಿಸರ ಇಲಾಖೆಯಿಂದ ಒಪ್ಪಿಗೆ ಪಡೆದಿರುವುದಿಲ್ಲ; ಜೊತೆಗೆ ಯೋಜನಾ ಪ್ರದೇಶದವು ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುವುದರಿಂದ, ಕೇಂದ್ರ ವನ್ಯಜೀವಿ ಮಂಡಳಿಯ ಒಪ್ಪಿಗೆ ಪಡೆಯುವುದು ಕಡ್ಡಾಯವಾಗಿದ್ದರೂ, ಈ ಪ್ರಕ್ರಿಯೆಯನ್ನು ಬಿಟ್ಟು ಟೆಂಡರ್ ಕರೆದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ. ವಿಸೃತ ಯೋಜನಾ ವರದಿಯನ್ನು ಸಿದ್ದ ಪಡಿಸದೆ, ಪರಿಸರ ಪರಿಣಾಮ ಅಧ್ಯಯನ (EIA) ವರದಿಯನ್ನು ಪಡೆಯದೇ ಯೋಜನೆ ಜಾರಿಗೆ ಮುಂದಾಗಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ.
ವಿಸೃತ ಯೋಜನಾ ವರದಿಯ (DPR) ನಕಲನ್ನು ಕೊಡಿ ಎಂಬ ಮಾಹಿತಿ ಹಕ್ಕು ಅರ್ಜಿಗೆ ಉತ್ತರವಾಗಿ ಕೆ.ಪಿ.ಟಿ.ಸಿ.ಎಲ್ ಸಂಸ್ಥೆಯು ದಿನಾಂಕ: 16/01/2024ರಂದು ಇದುವರೆಗೂ DPR ಅನ್ನು ಸಿದ್ದಪಡಿಸಿರುವುದಿಲ್ಲ ಎಂದು ಉತ್ತರ ನೀಡಿರುತ್ತದೆ.
2017ರಲ್ಲಿ ತಯಾರಿಸಲಾದ ಯೋಜನಾ ಪೂರ್ವ (ಪ್ರಿ-ಫಿಸಿಬಲಿಟಿ) ವರದಿಯಲ್ಲಿ ಯೋಜನಾ ವೆಚ್ಚವನ್ನು 4000 ಕೋಟಿಗಳೆಂದು ಹೇಳಲಾಗಿತ್ತು. ಈಗ 2024ರಲ್ಲಿ ಈ ಮೊತ್ತ ದುಪ್ಪಟ್ಟಾಗಿ 8000 ಕೋಟಿಗೆ ಏರಿಕೆಯಾಗಿದೆ. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಯಾರಿಗೂ ಪ್ರಯೋಜನವಿಲ್ಲದ ಈ ಯೋಜನೆಗಾಗಿ ಸರ್ಕಾರ ಸಾರ್ವಜನಿಕ ಎಂಟು ಸಾವಿರ ಕೋಟಿಯನ್ನು ವ್ಯಯಿಸುವುದು ಪ್ರಜಾಪ್ರಭುತ್ವ ವಿರುದ್ದದ ನಡೆಯಾಗಿದೆ.
ವಿವಿಧ ಗುತ್ತಿಗೆ ಮಾಫಿಯಾಗಳ ಹಾಗೂ ಭ್ರಷ್ಟ ಅಧಿಕಾರಿಗಳ ಹಿತಾಸಕ್ತಿಯನ್ನು ಕಾಪಾಡಲು ಮಾತ್ರ ಈ ಯೋಜನೆಯನ್ನು ಮುನ್ನೆಲೆಗೆ ತರಲಾಗುತ್ತಿದ್ದು, ಈ ಯೋಜನೆ ಜಾರಿಯಿಂದ ಪಶ್ಚಿಮಘಟ್ಟದ ಅಪಾರ ಪ್ರಮಾಣದ ಸಸ್ಯ ಮತ್ತು ಜೀವಿವೈವಿಧ್ಯವು ಸಂಪೂರ್ಣವಾಗಿ ನಾಶವಾಗಲಿದೆ.

KLive Special Article ಆದ್ದರಿಂದ, ಹವಾಗುಣ ತುರ್ತು ಪರಿಸ್ಥಿತಿಯ ಈ ಕಾಲದಲ್ಲಿ, ಹಾಲಿ ಇರುವ ದಟ್ಟಾರಣ್ಯಗಳನ್ನು ಉಳಿಸುವುದು ಇಡೀ ಜಗತ್ತಿನ ಮಾನವ ಹಾಗೂ ಇತರೆ ಜೀವಿವೈವಿಧ್ಯಗಳ ಹಿತದೃಷ್ಟಿಯಿಂದ ಬಹಳ ಮುಖ್ಯವಾಗಿದ್ದು, ಅಭಿವೃದ್ಧಿಯೆಂಬ ಏಕಮುಖ ಚಲನೆಯನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಜಾರಿಯಾಗುತ್ತಿರುವ ಈ ಯೋಜನೆಯನ್ನು ಸರ್ಕಾರ ಈ ಕ್ಷಣದಲ್ಲೇ ಹಿಂಪಡೆಯುವುದರ ಮೂಲಕ ಸಮಸ್ಥರ ಹಿತದೃಷ್ಟಿಯನ್ನು ಕಾಪಾಡಬೇಕೆಂದು ಆಗ್ರಹಿಸುತ್ತೇವೆ. ತಪ್ಪಿದಲ್ಲಿ, ಈ ಯೋಜನೆಯನ್ನು ನಿಲ್ಲಿಸಲು ಜನಾಂದೋಲನ, ಧರಣಿ, ಹೋರಾಟ ಮತ್ತು ಕಾನೂನು ಮೊರೆ ಹೋಗುವುದು ನಮಗೆ ಅನಿವಾರ್ಯವಾಗುತ್ತದೆ.

ಅಖಿಲೇಶ್ ಚಿಪ್ಪಳಿ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sonia Gandhi ಸೋನಿಯಾ & ರಾಹುಲ್ ಮೇಲೆ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ- ಶಿವಮೊಗ್ಗ ಎನ್ಎಸ್ ಯು ಐ ಆರೋಪ- ಪ್ರತಿಭಟನೆ

ಕೇಂದ್ರ ಬಿ ಜೆ ಪಿ ಸರ್ಕಾರ ಜಾರಿ ನಿರ್ದೇಶನಾಲಯದ ಮೂಲಕ ನ್ಯಾಷನಲ್...

MESCOM ಏಪ್ರಿಲ್ 18 ಆಲ್ಕೊಳ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ...

ದತ್ತಿ ನಿಧಿ ಕಾರ್ಯಕ್ರಮಗಳು ಸಮಾಜಮುಖಿಯಾಗಿರಲಿ-ಮಾನಸ ಶಿವರಾಮಕೃಷ್ಣ

ವಮೊಗ್ಗ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘದಿಂದ ದತ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು....