S. Rudregowda ಪರಿಸರ ಸಂರಕ್ಷಣೆಯು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಆಗಿದ್ದು, ಉತ್ತಮ ಪರಿಸರದ ವಾತಾವರಣ ನಿರ್ಮಿಸಲು ಪ್ರತಿಯೊಬ್ಬರು ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸಿ ಪೋಷಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಹೇಳಿದರು.
ಎಲ್‌ಬಿಎಸ್ ಶಿವಮೊಗ್ಗ ನಗರದ ಸ್ವಾಮಿ ವಿವೇಕಾನಂದ ಪಾರ್ಕ್ನಲ್ಲಿ ಔಷಧ ವನ ನಿರ್ಮಾಣಕ್ಕಾಗಿ ಎಸ್.ರುದ್ರೇಗೌಡರ 75 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಜೆಸಿಐ ಶಿವಮೊಗ್ಗ ವಿವೇಕ್ ವತಿಯಿಂದ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಪ್ರತಿಯೊಬ್ಬರು ಆರೋಗ್ಯದಿಂದ ಜೀವನ ನಡೆಸಲು ಉತ್ತಮ ಪರಿಸರ, ಶುದ್ಧ ಗಾಳಿ, ಕುಡಿಯುವ ನೀರು, ಒಳ್ಳೆಯ ವಾತಾವರಣ ತುಂಬಾ ಅವಶ್ಯಕ ಎಂದು ತಿಳಿಸಿದರು.
ವಿವೇಕಾನಂದ ಪಾರ್ಕ್ ಶಿವಮೊಗ್ಗದಲ್ಲಿ ಮಾದರಿ ಉದ್ಯಾನವನ ಆಗಿ ರೂಪುಗೊಂಡಿದ್ದು, ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್ ಅವರ ಪ್ರಯತ್ನ ಹಾಗೂ ಛಲದಿಂದ ಸುಂದರ ಉದ್ಯಾನವನ ನಿರ್ಮಾಣ ಆಗಿದೆ. ಇಂತಹ ಪಾರ್ಕ್ಗಳ ಸಂರಕ್ಷಣೆಯು ಮುಖ್ಯ ಎಂದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್ ಮಾತನಾಡಿ, ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಡಿ.ಎಸ್.ಅರುಣ್ ಅವರ ಅನುದಾನದಿಂದ ಮಾದರಿ ಪಾರ್ಕ್ ನಿರ್ಮಾಣ ಮಾಡಲು ಸಾಧ್ಯವಾಗಿದೆ. ಯೋಗ ಮಂದಿರ, ನವಗ್ರಹ ವನ, ಔಷಧಿ ವನ ಒಳಗೊಂಡಿದೆ ಎಂದು ಹೇಳಿದರು.
ಜೆಸಿಐ ವಿವೇಕ್ ಕಾರ್ಯದರ್ಶಿ ಮಂಜು, ಪಾರ್ಕ್ ನಿರ್ವಹಣೆ ಅಧ್ಯಕ್ಷ ಕಾಟನ್ ಜಗದೀಶ್, ಸತೀಶ್ ಪಾರ್ಕ್ ಸಮಗ್ರ ಅಭಿವೃದ್ಧಿ ಕುರಿತು ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಅವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.
S. Rudregowda ನಿವಾಸಿ ಸಂಘದ ಅಧ್ಯಕ್ಷ ಪಂಚಣ್ಣ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಮಲತಾ ಭೂಪಾಳಂ, ಸುರೇಖಾ ಮುರಳೀಧರ್, ಮಂಜುನಾಥ, ರಾಮದಾಸ್, ವೆಂಕಟೇಶ್, ಮಹೇಶ್ವರಪ್ಪ, ರೋಟರಿ ಜಿ.ವಿಜಯಕುಮಾರ್, ಹರ್ಷ ಕಾಮತ್, ಪರಿಸರ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.