Sunday, December 7, 2025
Sunday, December 7, 2025

Davanagere Dosa ಬಾಯಲ್ಲಿ ನೀರೂರಿಸುವ ದಾವಣಗೆರೆ ಬೆಣ್ಣೆ ದೋಸೆ ಟೇಸ್ಟ್ ಫುಲ್ ಕಹಾನಿ- ಎಚ್.ಬಿ.ಮಂಜುನಾಥ್

Date:

Davanagere Dosa ಬೆಣ್ಣೆ ದೋಸೋತ್ಸವ ಸಂದರ್ಭವಾಗಿ ದಾವಣಗೆರೆ ಬೆಣ್ಣೆ ದೋಸೆಯ ಜನಕರಾದ ಶಂಕರಪ್ಪ ಬಸವಂತಪ್ಪ ಶಾಂತಪ್ಪ ಮಹಾದೇವಪ್ಪ ಹಾಗೂ ಬೆಣ್ಣೆ ದೋಸೆ ಇತಿಹಾಸ ಕುರಿ ಕುರಿತಾದ ಸಂಕ್ಷಿಪ್ತ ಲೇಖನ- ಎಚ್ ಬಿ ಮಂಜುನಾಥ ಹಿರಿಯ ಪತ್ರಕರ್ತ-

ದಾವಣಗೆರೆ ಬೆಣ್ಣೆ ದೋಸೆ ಅಗಾಧವಾದ ಜನಪ್ರಿಯತೆ ಗಳಿಸಿದೆ, ‘ಜಿಹ್ವಾ ಚಾಪಲ್ಯ’ ಅಂದರೆ ನಾಲಿಗೆ ರುಚಿ ಉಳ್ಳವರೆಲ್ಲ ಇದನ್ನು ಸವಿಯಲು ಹಾತೊರೆಯುತ್ತಾರೆ. ಇಂತಹ ಸುಪ್ರಸಿದ್ಧ ದಾವಣಗೆರೆ ಬೆಣ್ಣೆ ದೋಸೆಯ ಮೂಲಪುರುಷರು ಶಂಕರಪ್ಪ, ಬಸವಂತಪ್ಪ, ಶಾಂತಪ್ಪ, ಮಹಾದೇವಪ್ಪ ಸಹೋದರ ಚತುಷ್ಟಯರು.

ಇವರಿಗೆ ಪ್ರೇರಣೆ ಇವರ ತಾಯಿ ಕೀರ್ತಿಶೇಷ ಚನ್ನಮ್ಮನವರು. -ಬೆಣ್ಣೆ ದೋಸೆ ಸೃಷ್ಟಿಯಾದ ಬಗೆ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬೀಡ್ಕಿ ಗ್ರಾಮದ ವಿಠ್ಠಪ್ಪನವರ ಧರ್ಮಪತ್ನಿ ಚನ್ನಮ್ಮ ಮಕ್ಕಳೊಂದಿಗೆ ಬದುಕನ್ನು ಅರಸಿಕೊಂಡು ದಾವಣಗೆರೆಗೆ ಬಂದಾಗ 1928ರ ವೇಳೆಯಲ್ಲಿ ನೆಲೆ ಕೊಟ್ಟವರು ಸುಪ್ರಸಿದ್ಧ ಕಲಾಪೋಷಕರೂ ಸಮಾಜ ಸೇವಾಸಕ್ತ ಸಾವಳಗಿ ಮನೆತನದ ಗುರುಶಾಂತಪ್ಪ ನಾಗಪ್ಪನವರು.

ಜೀವನ ರಥ ಸಾಗಿಸಲು ಚನ್ನಮ್ಮನವರು ತನ್ನ ನಾಲ್ಕು ಮಕ್ಕಳಾದ ಶಂಕ್ರಪ್ಪ ಬಸವಂತಪ್ಪ ಶಾಂತಪ್ಪ ಮಹಾದೇವಪ್ಪರೊಂದಿಗೆ ‘ವಡ್ಡ ರಾಗಿ ಹಿಟ್ಟಿ’ನ ಅಂದರೆ ರಾಗಿ ಹಿಟ್ಟನ್ನು ಬಟ್ಟೆಯ ಚರಡಿಯಲ್ಲಿ ಸೋಸಿದ ‘ನುಣ್ಣನೆ ರಾಗಿ ಹಿಟ್ಟಿನ ತುಪ್ಪದ ದೋಸೆ’ ಮಾಡಿ ಮಾರಲು ಆರಂಭಿಸಿದರು.

ಚನ್ನಮ್ಮನ ಮಕ್ಕಳು 1938 ರ ಹೊತ್ತಿಗೆ ಅಕ್ಕಿ ಉದ್ದಿನ ಬೇಳೆ ಮಂಡಕ್ಕಿಯನ್ನು ಬಳಸಿ ಬೆಣ್ಣೆ ದೋಸೆಯನ್ನು ಹುಟ್ಟು ಹಾಕಿದರು. ಆಕಾಲದಲ್ಲಿ ರಾಗಿ ಬಡವರ ಆಹಾರವಾದರೆ ಅಕ್ಕಿ ಶ್ರೀಮಂತರ ಆಹಾರ ಅಷ್ಟೇ ಅಲ್ಲ ಅಕ್ಕಿಯು ಅಷ್ಟು ಸುಲಭವಾಗಿ ಸಿಗುತ್ತಿರಲೂ ಇಲ್ಲ. ಚೆನ್ನಮ್ಮನ ಮಕ್ಕಳು ಹುಟ್ಟು ಹಾಕಿದ ಈ ಬೆಣ್ಣೆದೋಸೆ ಅತ್ಯಂತ ಜನಪ್ರಿಯವಾಗಿ ಬೆಳಗಿನಜಾವ 5 ಗಂಟೆಯಿಂದ ರಾತ್ರಿ 10 ಗಂಟೆಗೆವರೆಗೂ ಜನ ಬಂದು ಸವಿಯುತ್ತಿದ್ದರು.

1944ರ ವೇಳೆಗೆ ಚನ್ನಮ್ಮನವರು ಕಾಲ ವಾದ ನಂತರ ಶಂಕ್ರಪ್ಪ ಮತ್ತು ಬಸವಂತಪ್ಪನವರು ತಮ್ಮ ಮೂಲ ಸ್ಥಳವಾದ ಬೀಡ್ಕಿಗೆ ವಾಪಸಾದರು, ಮಹಾದೇವಪ್ಪನವರು ಜೈಲ್ ರೋಡ ಈಗಿನ ವಸಂತ ಟಾಕೀಸ್ ಎದುರಿಗಿದ್ದ ಸಾವಳಗಿ ಥಿಯೇಟರ್ ಬಳಿಯಲ್ಲಿಯೇ ಬೆಣ್ಣೆ ದೋಸೆ ಹೋಟೆಲನ್ನು ಮುಂದುವರಿಸಿದರೆ ಶಾಂತಪ್ಪನವರು ಕಾಯಿಪೇಟೆ ಮತ್ತು ಒಕ್ಕಲಿಗರ ಪೇಟೆಯ ಮಧ್ಯದ ಗಲ್ಲಿಯ ಮುಂಭಾಗದಲ್ಲಿ ತಮ್ಮ ಹೋಟೆಲನ್ನು 1944ರ ಜನವರಿ 24ರಂದು ಆರಂಭಿಸಿದರು.

ಇದನ್ನು ಶಾಂತಪ್ಪನವರ ಪುತ್ರರಾದ ಗಣೇಶ ರವರು ಈಗಲೂ ಅದೇ ರೀತಿಯಲ್ಲಿ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಮಹಾದೇವಪ್ಪನವರ ಪುತ್ರರಾದ ರವಿಕುಮಾರ್ ರವರು ಪಿ ಜೆ ಬಡಾವಣೆಯ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದ ಸಮೀಪ ಅಂದರೆ ಚರ್ಚ್ ರಸ್ತೆಯಲ್ಲಿ ತಮ್ಮ ಬೆಣ್ಣೆ ದೋಸೆ ಹೋಟೆಲ್ ಅನ್ನು ವ್ಯವಸ್ಥಿತವಾಗಿ ನಡೆಸುತ್ತಿದ್ದಾರೆ.

ನಮ್ಮ ಬಾಲ್ಯದಲ್ಲಿ ಕಂಡ ಹಾಗೆ ಮಹಾದೇವಪ್ಪನವರ ಬೆಣ್ಣೆ ದೋಸೆ ಹೋಟೆಲಿಗೆ ಹೆಚ್ಚಾಗಿ ಶ್ರೀಮಂತರು ಹೋಗುತ್ತಿದ್ದರೆ ಶಾಂತಪ್ಪನವರ ಬೆಣ್ಣೆ ದೋಸೆ ಹೋಟೆಲಿಗೆ ಬಹುತೇಕ ಮಧ್ಯಮ ವರ್ಗದವರು ಹಾಗೂ ಬಡವರು ಬರುತ್ತಿದ್ದರು, ಆದರೆ ಶ್ರೀಮಂತರಿಗಾಗಲಿ ಬಡವರಿಗಾಗಲಿ ದೋಸೆಯ ಗುಣಮಟ್ಟ ರುಚಿ ದರ ಯಾವುದರಲ್ಲೂ ಭೇದವಿಲ್ಲದ ಹಾಗೆ ಶಾಂತಪ್ಪ ಮಹಾದೇವಪ್ಪ ಸಹೋದರರು ಕಾಯಕ ಕಾಪಾಡಿಕೊಂಡಿದ್ದರು.

ಶುದ್ಧ ಬೆಣ್ಣೆಯ ಲಭ್ಯತೆ: ಆಗ ಶಾಂತಪ್ಪ ಮಹದೇವಪ್ಪನವರು ಕೆಲವು ಹಳ್ಳಿಯವರಿಗೆ ಎಮ್ಮೆಗಳನ್ನು ಕೊಡಿಸಿ ಅದರ ಹಾಲು ಅವರಿಗೆ ಬೆಣ್ಣೆ ಮಾತ್ರ ಇವರಿಗೆ ಎನ್ನುವ ಕರಾರಿನಂತೆ ಶುದ್ಧ ಬೆಣ್ಣೆಯನ್ನು ಪಡೆಯುತ್ತಿದ್ದರು, ನಂತರದಲ್ಲಿ ತಂಬಾಕು ಪೇಟೆ ಅಂದರೆ ಈಗಿನ ವಿಜಯಲಕ್ಷ್ಮಿ ರಸ್ತೆ ಹಾಗೂ ಬೆಳ್ಳುಳ್ಳಿ ಗಲ್ಲಿ ಮೂಲೆಯಲ್ಲಿರುವ ಬೆಳ್ಳುಳ್ಳಿ ಷಣ್ಮುಖಪ್ಪನವರ ಅಂಗಡಿ ಮುಂಭಾಗದಲ್ಲಿ ಹಾಗೂ ರೈಲ್ವೇ ಸ್ಟೇಷನ್ ರಸ್ತೆ ಮತ್ತು ತಂಬಾಕು ಪೇಟೆ ಕೂಡುವ ಕಾಯಿಪೇಟೆಯ ಮುಂಭಾಗದ ಮೂಲೆಯ ಅಂಬರ್ಕರ್ ಯಲ್ಲಪ್ಪ ಸ್ವಾಮಿ ರಾವ್ ಬಣ್ಣದ ಅಂಗಡಿಯ ಪಕ್ಕದಲ್ಲಿ ಬೆಣ್ಣೆ ವ್ಯಾಪಾರ ಏರ್ಪಾಡು ಮಾಡಿಸಿ ಶುದ್ಧ ಬೆಣ್ಣೆ ಖರೀದಿಸುತ್ತಿದ್ದರು.

ಕೊಂಡಜ್ಜಿ ಕಡೆಯಿಂದ ಬರುತ್ತಿದ್ದ ಗಂಗಮ್ಮ ಮತ್ತು ದೇವೀರಮ್ಮ ಮುಂತಾದವರು ಇಲ್ಲಿಗೇ ಬಂದು ಬೆಣ್ಣೆ ಕೊಡುತ್ತಿದ್ದರು, ಇವರಿಂದಲೂ ಶುದ್ಧ ಬೆಣ್ಣೆಯನ್ನು ಶಾಂತಪ್ಪ ಮಹಾದೇವಪ್ಪರು ಖರೀದಿಸುತ್ತಿದ್ದರು.

ನಂತರ ಚನ್ನಗಿರಿ ತಾಲೂಕಿನಿಂದಲೂ ಇವರಿಗೆ ಬೆಣ್ಣೆ ಬರುತ್ತಿತ್ತು. ಈಗ ಗಣೇಶರ ಪತ್ನಿ ಪುಷ್ಪಾ ಹಾಗೂ ರವಿಕುಮಾರ್ ಪತ್ನಿ ಜಯಶ್ರೀ ಜಗಳೂರು ಹರಪನಹಳ್ಳಿ ತಾಲೂಕಿನ ಗ್ರಾಮಗಳಿಗೂ ಹೋಗಿ ಶುದ್ಧ ಬೆಣ್ಣೆಯನ್ನು ತಾವೇ ಖರೀದಿಸಿ ತರುತ್ತಿದ್ದಾರೆ, ಬಸ್ ಮೂಲಕವೂ ಅಲ್ಲಿಂದ ಬರುತ್ತಿದೆ.

Davanagere Dosa ಬೆಲೆ ಕಾಸಿನಿಂದ ರೂಪಾಯಿಗೆ: ನಮ್ಮ ಬಾಲ್ಯದಲ್ಲಿ ಅರ್ಧಾಣೆ ಅಂದರೆ ಆರು ಕಾಸಿಗೆ ಬೆಣ್ಣೆ ದೋಸೆ, ಕಾಲಾಣೆ ಅಂದರೆ ಮೂರು ಕಾಸಿಗೆ ಖಾಲಿ ದೋಸೆ! ನಂತರ 40 ನಯಾ ಪೈಸೆಗೆ ಬೆಣ್ಣೆ ದೋಸೆ, 10 ನಯಾ ಪೈಸೆಗೆ ಖಾಲಿ ದೋಸೆ ಅಂತ ಆಗಿದ್ದು ಈಗ ಬೆಣ್ಣೆ ದೋಸೆಗೆ 65 ರೂಪಾಯಿ ವರೆಗೂ ಇದೆ. ವಿಶೇಷವೆಂದರೆ ದಾವಣಗೆರೆ ಬೆಣ್ಣೆ ದೋಸೆಗೆ ಕಟ್ಟಿಗೆ ಒಲೆಯೇ ಬೇಕು, ಇದೂ ಸಹಾ ವಿಶೇಷ ಸ್ವಾದವನ್ನು ದೋಸೆಗೆ ಕೊಡುತ್ತದೆ ಎನ್ನಲಾಗುತ್ತದೆ.

ಅದೂ ಸಹಾ ದಿಂಡದ ಮರದ ಕಟ್ಟಿಗೆ ತುಂಬಾ ಒಳ್ಳೆಯದು, ಅದು ಲಭ್ಯವಾಗದಿದ್ದರಿಂದ ಈಗ ಕರಿ ಮತ್ತೆ, ಬಿಳಿ ಮತ್ತಿ ಕಟ್ಟಿಗೆಯನ್ನು ಉಪಯೋಗಿಸಲಾಗುತ್ತಿದೆ. ಶಾಂತಪ್ಪ ಮಹಾದೇವಪ್ಪರ ಸಂಬಂಧಿಗಳಾದ ಮಹಾರುದ್ರಪ್ಪ ಕಾಡಪ್ಪ ಮರಿಯಪ್ಪರು ದಾವಣಗೆರೆಯಲ್ಲಿ ಬೆಣ್ಣೆ ದೋಸೆ ಹೋಟೆಲ್ ಗಳನ್ನು ಆರಂಭಿಸಿದರು, ಈಗ ದಾವಣಗೆರೆಯಾದ್ಯಂತ ಹಾಗೂ ರಾಜ್ಯ, ಹೊರ ರಾಜ್ಯ ಮುಂತಾದಡೆಗಳಲ್ಲೆಲ್ಲ ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್ ಗಳು ಆಗಿದ್ದು ಒಂದು ಉದ್ಯಮವಾಗಿಯೇ ಬೆಳೆದು ಅನೇಕರಿಗೆ ಬದುಕು ನೀಡುತ್ತಿದೆ.

ಇದಕ್ಕೆಲ್ಲಾ ಮೂಲಪುರುಷರಾದ ಶಂಕರಪ್ಪ ಬಸ್ವಂತಪ್ಪ ಶಾಂತಪ್ಪ ಮಹಾದೇವಪ್ಪರನ್ನು ಮರೆಯುವಂತಿಲ್ಲ ಹಾಗೂ ಮೂಲ ಪ್ರೇರಣೆಯಾದ ಚನ್ನಮ್ಮನವರನ್ನೂ ಮರಿಯುವಂತೆಯೇ ಇಲ್ಲ. ಶಾಂತಪ್ಪನವರು ಸ್ಥಾಪಿಸಿದ ಗಣೇಶ್ ಮುಂದುವರಿಸಿಕೊಂಡು ಬರುತ್ತಿರುವ ಹಳೆಯ ನಗರದ ಒಕ್ಕಲಿಗರ ಪೇಟೆಯ ಬಳಿಯ ಶಾಂತಪ್ಪ ಬೆಣ್ಣೆ ದೋಸೆ ಹೋಟೆಲ್ ಲ್ಲಿ ಈಗಲೂ ಸುಪ್ರಸಿದ್ಧ ಸಾವಳಗಿ ಥಿಯೇಟರಿನ ಹಳೆಯ ಕಬ್ಬಿಣದ ಕುರ್ಚಿಗಳನ್ನು ನೋಡಬಹುದು!, ನಮ್ಮ ಬಾಲ್ಯದಲ್ಲಿ ಈ ಕುರ್ಚಿಗಳ ಮೇಲೆ ಕುಳಿತು ನಾವು ನಾಟಕಗಳನ್ನು ಸಾವಳಗಿ ಥಿಯೇಟರ್ ನಲ್ಲಿ ನೋಡಿದ ನೆನಪು ಇಂದಿಗೂ ಮಾಸಿಲ್ಲ, ದಪ್ಪ ಕಬ್ಬಿಣದಲ್ಲಿ ಮಾಡಿದ, ಬಾಂಬೆಯಿಂದ ತರಿಸಿದ ಸದೃಢವಾದ ಈ ಕುರ್ಚಿಗಳನ್ನು ಥಿಯೇಟರ್ ಮುಚ್ಚಿದ ನಂತರ ಸಾವಳಗಿಯವರು ಕುರ್ಚಿಗಳನ್ನು ಕೇವಲ ಎರಡು ರೂಪಾಯಿ ಒಂದರಂತೆ ಶಾಂತಪ್ಪನವರಿಗೆ ಕೊಟ್ಟಿದ್ದಾರೆ.

ಗಣೇಶ್ ಈಗಲೂ ಸಾವಳಗಿ ಮನೆತನದವರ ಔದಾರ್ಯವನ್ನು ಮನಸಾ ಸ್ಮರಿಸುತ್ತಾರೆ. -ಎಚ್.ಬಿ.ಮಂಜುನಾಥ,ಹಿರಿಯ ಪತ್ರಕರ್ತ-

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...