Siridhanya Mela ಸಿರಿಧಾನ್ಯಗಳ ಗಾತ್ರ ಚಿಕ್ಕದಾದರೂ ಪಾತ್ರ ದೊಡ್ಡದು. ಕಿರುಧಾನ್ಯಗಳಲ್ಲಿರುವ ಅಪಾರ ‘ಸಿರಿ’ ಯಿಂದಾಗಿ ಸಿರಿಧಾನ್ಯಗಳೆಂದು ಕರೆಯಲಾಗುತ್ತದೆ. ನಮ್ಮ ಆಹಾರ ಪದ್ದತಿಯಲ್ಲಿ ಇವು ಹಳೆಯ ಧಾನ್ಯಗಳಾಗಿದ್ದು, ಪ್ರಮುಖ ಸ್ಥಾನ ಪಡೆದಿವೆ.
ರಾಗಿ, ಜೋಳ, ಸಜ್ಜೆ, ನವಣೆ, ಸಾಮೆ, ಹಾರಕ, ಬರಗು, ಕೊರಲೆ ಹಾಗೂ ಊದಲು ಇವೇ ಸಿರಿಧಾನ್ಯಗಳು ಅಥವಾ ನವ ಧಾನ್ಯಗಳು. ಸಿರಿ ಎಂದರೆ ಸಂಪತ್ತು. ಧಾನ್ಯ ಎಂದರೆ ಕಾಳುಗಳು. ಒಟ್ಟಾರೆ ಸಿರಿ ಧಾನ್ಯಗಳೆಂದರೆ ಪೌಷ್ಟಿಕಾಂಶಗಳೆಂಬ ಸಂಪತ್ತು ತುಂಬಿರುವ ಕಾಳುಗಳು. ಕೆಲವು ಸಿರಿಧಾನ್ಯಗಳಲ್ಲಿ ನಾರಿನಂಶ ಹೆಚ್ಚು. ಇನ್ನು ಕೆಲವು ಸಿರಿಧಾನ್ಯಗಳಲ್ಲಿ ಅಕ್ಕಿ, ಗೋಧಿಗಿಂತ ಹತ್ತು ಪಟ್ಟು ಹೆಚ್ಚಿನ ಕ್ಯಾಲ್ಸಿಯಂ ಮತ್ತು ಇತರ ಖನಿಜಗಳಿರುತ್ತವೆ. ಇಂತಹ ಸಿರಿಧಾನ್ಯಗಳ ಸೇವನೆ ಆರೋಗ್ಯಕ್ಕೆ ಉತ್ತಮವೆಂದು ಇತ್ತೀಚಿನ ಬಹಳಷ್ಟು ಸಂಶೋಧನೆ ತಿಳಿಸಿವೆ.
ಸಿರಿ ಧಾನ್ಯಗಳ ಉಪಯೋಗಗಳು ಯಾವುವು?
ಇತ್ತೀಚಿನ ದಿನಗಳಲ್ಲಿ ಅಕ್ಕಿ ಎಂದರೆ ಕೇವಲ ಭತ್ತದ ಅಕ್ಕಿ ಎಂದರ್ಥ. ಆದರೆ ಹಿಂದೆ ನವಣಕ್ಕಿ, ಹಾರಕದಕ್ಕಿ, ಸಾಮಕ್ಕಿ, ನೆಲ್ಲಕ್ಕಿ ಹೀಗೆ ಹಲವಾರು ಬಗೆಯ ಅಕ್ಕಿಗಳಿರುತ್ತಿದ್ದವು. ಈ ಸಿರಿಧಾನ್ಯಗಳಿಂದ ಸಿದ್ಧಪಡಿಸಿದ ಅಡುಗೆ ಪೌಷ್ಟಿಕರ ಹಾಗೂ ರುಚಿ ಕೂಡ ಹೆಚ್ಚು. ಆದ್ದರಿಂದಲೇ ಈ ಧಾನ್ಯಗಳಿಂದ ತಯಾರಿಸಿದ ಪಾಯಸ, ರೊಟ್ಟಿ, ಮುದ್ದೆ, ಉಂಡೆ ಮುಂತಾದ ಖಾದ್ಯಗಳನ್ನು ಸೇವಿಸಿದರೆ ಬಹಳ ಹೊತ್ತು ಹಸಿವಾಗುತ್ತಿರಲಿಲ್ಲ.
ಹಿರಿಯರು ಸಿರಿಧಾನ್ಯಗಳನ್ನೇ ಸೇವಿಸಿ ಬಹುಕಾಲ ಯಾವುದೇ ರೋಗ ರುಜಿನಗಳಿಲ್ಲದೇ ಬದುಕುತ್ತಿದ್ದರು. ಸಿರಿಧಾನ್ಯಗಳಲ್ಲಿ ನಾರು ಮತ್ತು ಕಬ್ಬಿಣದ ಅಂಶಗಳು, ಕಾರ್ಬೋಹೈಡ್ರೇಟ್‍ಗಳು ಮತ್ತು ಕೊಬ್ಬಿನಂಶಗಳು ಬೇರೆಯ ಧಾನ್ಯಗಳಿಗೆ ಹೋಲಿಸಿದರೆ ಹೆಚ್ಚಾಗಿವೆ. ಜೊತೆಗೆ ಇವುಗಳಲ್ಲಿ ಶಕ್ತಿಶಾಲಿ ಆಂಟಿಆಕ್ಸಿಡೆಂಟ್‍ಗಳು ಮತ್ತು ರೋಗ ನಿರೋಧಕ ಶಕ್ತಿ ಇರುವುದರಿಂದ ಪೌಷ್ಟಿಕತೆಯ ಕಣಜಗಳೇ ಆಗಿವೆ.
ಅಕ್ಕಿ ಮತ್ತು ಗೋಧಿಗಿಂತ ಐದು ಪಟ್ಟು ಪ್ರೊಟೀನ್ ವಿಟಮಿನ್, ನಾರಿನಂಶ ಹಾಗೂ ಖನಿಜಗಳು ಸಿರಿಧಾನ್ಯಗಳಲ್ಲಿವೆ. ಸಾಮೆ ಮತ್ತು ನವಣೆಗಳು ಪೆÇೀಷಕಾಂಶಗಳ ಸಿರಿಗಳೇ ಆಗಿವೆ. ಅದೇ ಅಕ್ಕಿ, ರಾಗಿ ಮತ್ತು ಗೋಧಿ ತಿನ್ನುವುದರ ಬದಲಿಗೆ ವಿವಿಧ ಪೋಷಕಾಂಶಗಳ ಗಣಿಗಳೇ ಆಗಿರುವ ಸಿರಿಧಾನ್ಯಗಳ ಸೇವನೆ ಇಂದು ಆರೋಗ್ಯಕ್ಕಾಗಿ ಅಗತ್ಯವಾಗಿದೆ.
ಮದುಮೇಹ ತೂಕ ಇಳಿಕೆಗೆ ಉತ್ತಮ ಆಹಾರ :
ಕನಿಷ್ಠ ಗ್ಲೈಸೆಮಿಕ್ ಸೂಚ್ಯಂಕವು ಸಿರಿಧಾನ್ಯವನ್ನು ಅಕ್ಕಿಗೆ ಉತ್ತಮ ಬದಲಿಯಾಗಿ ಶಿಫಾರಸ್ಸು ಮಾಡಬಹುದು. ಕೊಲೆಸ್ಟ್ರಾಲ್, ಮಧುಮೇಹ ಮತ್ತು ತೂಕ ಇಳಿಕೆಗೆ ಈ ಧಾನ್ಯಗಳು ಬಹಳ ಉತ್ತಮ ಆಹಾರವಾಗಿದೆ.
ಸಿರಿಧಾನ್ಯಗಳ ಕೃಷಿ ಮಾಡುವ ಬಗೆ :
ಸಿರಿಧಾನ್ಯಗಳನ್ನು ಬೆಳೆಯಲು ಫಲವತ್ತಾದ ಭೂಮಿಯೇ ಬೇಕು ಎಂದಿಲ್ಲ. ತೆಳ್ಳನೆಯ ಮಣ್ಣಿನ ಪದರದ ನೆಲದಲ್ಲಿಯೂ ಸಿರಿಧಾನ್ಯಗಳು ಚೆನ್ನಾಗಿ ಬೆಳೆಯುತ್ತವೆ. ಕಲ್ಲಿನ ಜಮೀನಿನಲ್ಲಿ ಹಾರಕ ಹಾಗೂ ಕೊರಲೆ ಬೆಳೆಯುತ್ತವೆ. ಇಂತಹ ವಿಶಿಷ್ಟ ಗುಣಗಳಿಂದಲೇ ಸಿರಿಧಾನ್ಯಗಳು ರೈತರಿಗೆ ವರದಾನವಾಗಿರುವ ಬೆಳೆಗಳಾಗಿವೆ. ಈ ಧಾನ್ಯಗಳನ್ನು ಬೆಳೆಯಲು ರೈತರು ರಾಸಾಯನಿಕ ಗೊಬ್ಬರವನ್ನು ನೆಚ್ಚಿಕೊಂಡಿಲ್ಲ. ಕೊಟ್ಟಿಗೆ ಗೊಬ್ಬರ, ತರಗೆಲೆ ಗೊಬ್ಬರ ಬಳಸಿ ಸಿರಿಧಾನ್ಯಗಳನ್ನು ಬೆಳೆಯುತ್ತಾರೆ. ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸದೇ ಇರುವುದರಿಂದ ಪರಿಸರದ ಮೇಲೂ ಕೆಟ್ಟ ಪರಿಣಾಮ ಬೀರುವುದಿಲ್ಲ. ಈ ಧಾನ್ಯಗಳನ್ನು ಬೆಳೆಯಲು ಹೆಚ್ಚಿನ ನೀರು, ಗೊಬ್ಬರ ಮತ್ತು ಆರೈಕೆಯ ಅವಶ್ಯಕತೆ ಇಲ್ಲ. ಮಳೆಯಾಧಾರಿತವಾಗಿ ಹಾಗೂ ಎಲ್ಲಾ ಹವಾಮಾನಕ್ಕೂ ಹೊಂದಿಕೊಂಡು ಬೆಳೆಯುವ ಈ ಧಾನ್ಯಗಳು ನಿಜಕ್ಕೂ ಸಿರಿಧಾನ್ಯಗಳೇ ಆಗಿವೆ.
Siridhanya Mela ಸಿರಿಧಾನ್ಯಗಳು ಸಾಮಾನ್ಯವಾಗಿ ಅಲ್ಪಾವಧಿ ಬೆಳೆಯಾಗಿದ್ದು, ಮಳೆಯಾಶ್ರಿತ ಪ್ರದೇಶಗಳಿಗೆ ಸೂಕ್ತವಾಗಿದೆ. ಬರ ಸಹಿಷ್ಣು ಬೆಳೆಗಳು ಮತ್ತು ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಂಡು ಬೆಳೆಯುವ ಬೆಳೆಗಳು ಆಗಿರುತ್ತವೆ. ಕೀಟ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೊಂದಿವೆ. ಕಡಿಮೆ ಉತ್ಪಾದನಾ ವೆಚ್ಚ ಮತ್ತು ಉತ್ತಮ ಇಳುವರಿ ಕೊಡಬಲ್ಲ ಪರಿಸರ ಸ್ನೇಹಿ ಬೆಳೆಗಳು. ಸತ್ವಯುತ ಆಹಾರಗಳು, ಗಾತ್ರದಲ್ಲಿ ಕಿರಿದಾದರು ಪೋಷಣಾ ಮೌಲ್ಯದಲ್ಲಿ ಹಿರಿಯದು.
ಶಿವಮೊಗ್ಗ ಜಿಲ್ಲೆಯಲ್ಲಿ ಶಿಕಾರಿಪುರದ ಸುಮಾರು25 ರಿಂದ 30 ಹೆಕ್ಟೇರ್ ಪ್ರದೇಶದಲ್ಲಿ ರಾಗಿ, ನವಣೆ, ಸಜ್ಜೆ, ಬರಗು, ಹಾರಕ ಬೆಳೆಯಲಾಗುತ್ತದೆ. ಶಿವಮೊಗ್ಗದಲ್ಲಿ ಸುಮಾರು 25 ಹೆ. ಹಾಗೂ ಸೊರಬದಲ್ಲಿ ಸುಮಾರು 10 ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ.
ಪೌಷ್ಟಿಕಾಂಶದ ಸಂಪತ್ತಾಗಿರುವ ಸಿರಿಧಾನ್ಯಗಳ ಕುರಿತು ಅರಿವು ಮತ್ತು ಮಹತ್ವವನ್ನು ಜನರಿಗೆ ತಿಳಿಸಲು ಹಾಗೂ ಸಿರಿಧಾನ್ಯಗಳ ಬೆಳೆಯನ್ನು ಉತ್ತೇಜಿಸಲು 2023 ನೇ ಸಾಲನ್ನು ಅಂತರಾಷ್ಟ್ರೀಯ ಮಿಲೆಟ್ಸ್(ಸಿರಿಧಾನ್ಯ)ವರ್ಷವೆಂದು ಘೋಷಿಸಲಾಗಿದೆ.
ಸಿರಿಧಾನ್ಯದ ಕುರಿತು ಹೆಚ್ಚಿನ ಅರಿವು ಮೂಡಿಸಲು ಶಿವಮೊಗ್ಗದಲ್ಲಿ ಡಿ.22 ರಂದು ‘ಸಿರಿಧಾನ್ಯ ಜಾಥಾ’ ಮತ್ತು ಡಿ.27 ರಂದು ‘ಸಿರಿಧಾನ್ಯ ಮೇಳ’ ಆಯೋಜಿಸಲಾಗಿದೆ. ಹೆಚ್ಚಿನ ಜನರು ಪಾಲ್ಗೊಂಡು ಇದರ ಉಪಯೋಗ ಪಡೆಯಬೇಕು ಜಂಟಿ ಕೃಷಿ ನಿರ್ದೇಶಕರಾದ ಪೂರ್ಣಿಮಾ ಅವರು ಹೇಳಿದ್ದಾರೆ.