District Legal Services Authority ಸಾಮಾಜಿಕ ವ್ಯವಸ್ಥೆಯಲ್ಲಿರುವ ಬಹುಸಂಖ್ಯಾತ ವ್ಯಕ್ತಿಗಳು ಒಂದಿಲ್ಲೊಂದು ವಿಷಯಗಳಲ್ಲಿ ಮಾನಸಿಕ ಸಮಸ್ಯೆಯಿಂದ ನರಳುತ್ತಿದ್ದು, ನೆಮ್ಮದಿಯ ಬದುಕಿಗಾಗಿ ತಡಕಾಡುತ್ತಿದ್ದಾರೆ. ಮಾನಸಿಕ ವಿಕಾರಗಳಿಗೆ ಒಳಗಾಗಿರುವ ವ್ಯಕ್ತಿಗಳಿಗೆ ಸಕಾಲಿಕ ಸಮಾಲೋಚನೆ ಹಾಗೂ ಚಿಕಿತ್ಸೆಯ ಅಗತ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎನ್.ಚಂದನ್ ಅವರು ಹೇಳಿದರು.
ಅವರು ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಿಮ್ಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಮೆಗ್ಗಾನ್ ಬೋಧನಾ ಆಸ್ಪತ್ರೆಯ ಸಭಾಂಗಣದಲ್ಲಿ ಮಾನಸಿಕ ಆರೋಗ್ಯವು ಸಾರ್ವತ್ರಿಕ ಮಾನವ ಹಕ್ಕು ಎಂಬ ಘೋಷವಾಕ್ಯದಡಿ ಏರ್ಪಡಿಸಲಾಗಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾಜದಲ್ಲಿರುವ ಎಲ್ಲಾ ನಾಗರೀಕರಿಗೂ ಸಂವಿಧಾನ ಏಕರೀತಿಯ ಹಕ್ಕು-ಕರ್ತವ್ಯಗಳನ್ನು ಒದಗಿಸಿರುವಂತೆ ಅಭಿವ್ಯಕ್ತಿಗೆ ಅವಕಾಶಗಳನ್ನು ನೀಡಿದೆ. ಆದರೆ, ಪ್ರತಿ ವ್ಯಕ್ತಿಯ ಅಭಿಪ್ರಾಯ, ಆಲೋಚನೆ, ಅನಿಸಿಕೆಗಳಲ್ಲಿ ತೀವ್ರ ತರಹದ ವೆತ್ಯಾಸಗಳಿವೆ. ಎಲ್ಲರ ಆಲೋಚನೆ ಸಮಾನವಾಗಿರುವುದು ಸಾಧ್ಯವಿಲ್ಲ ಎಂದ ಅವರು ಈ ಕ್ಷೇತ್ರದಲ್ಲಿ ಇನ್ನಷ್ಟು ರಚನಾತ್ಮಕವಾಗಿರುವ ಪ್ರಯೋಗ, ಸಂಶೋಧನೆಗಳು ನಡೆಯಬೇಕಾಗಿದೆ ಎಂದರು.
ಮನುಷ್ಯನ ಆಸೆ, ನಿರೀಕ್ಷೆಗಳು ಹೆಚ್ಚಾದಂತೆ ಮಾನಸಿಕ ಒತ್ತಡಗಳು ಹೆಚ್ಚಿವೆ. ಇಂತಹ ಸಂದರ್ಭಗಳಲ್ಲಿ ಅಗತ್ಯವಿರುವವರಿಗೆ ಸಹಾಯ ನೀಡಬೇಕಾದ ಅಗತ್ಯವಿದೆ. ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ? ವ್ಯಕ್ತಿ ಮತ್ತೊಬ್ಬರಿಗೆ ಸಹಾಯ ಮಾಡುವುದು ಹೇಗೆ ಎಂಬ ಬಗ್ಗೆ ಚರ್ಚಿಸುವ ಅಗತ್ಯವಿದೆ. ಮಾನಸಿಕ ನೆಮ್ಮದಿ ನೀಡುವ ಪ್ರಮುಖ ಅಂಗ ಮೆದುಳಿಗೆ ಸಮನಾದ ಸಾಧನ ಬೇರೊಂದಿಲ್ಲ ಎಂದರು.
District Legal Services Authority ವಿಶೇಷವಾಗಿ ಮಾನಸಿಕ ಕಾಯಿಲೆಯಿಂದ ನರಳುತ್ತಿರುವ ಯಾವುದೇ ವಯೋಮಾನದ ಮಹಿಳೆಯರ ಸುರಕ್ಷತೆಯ ಬಗ್ಗೆ ತುರ್ತು ಗಮನಹರಿಸಬೇಕಾದ ಅಗತ್ಯವಿದೆ. ತಪ್ಪಿದಲ್ಲಿ ಸಮಾಜಕ್ಕೆ ಕಂಟಕವಾಗುವ ಸಂಭವವಿದೆ. ಆದ್ದರಿಂದ ಸಂತ್ರಸ್ಥರಿಗೆ ಉತ್ತಮ ವಾತಾವರಣ ಕಲ್ಪಿಸಬೇಕಾದುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಮಾನಸಿಕ ಅನಾರೋಗ್ಯಕ್ಕೆ ಒಳಗಾದ ಶೇ.10-12ರಷ್ಟು ಜನರಿಗೆ ಮಾತ್ರ ಚಿಕಿತ್ಸೆಯ ಸೌಲಭ್ಯ ದೊರೆಯುತ್ತಿದೆ ಆದರೆ, ಇನ್ನೂ ಶೇ.೭೦-೮೦ರಷ್ಟು ಜನರಿಗೆ ಚಿಕಿತ್ಸೆಯೇ ದೊರೆಯುತ್ತಿಲ್ಲ. ತಜ್ಞ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂಧಿಗಳು ಮಾತ್ರ ಅವರನ್ನು ಗುರುತಿಸಿ, ಚಕಿತ್ಸೆ ನೀಡಿದಲ್ಲಿ, ಸಮಾಲೋಚನೆ ನಡೆಸಿದಲ್ಲಿ ಸಮಸ್ಯೆಗೆ ಅಲ್ಪಮಟ್ಟಿನ ಪರಿಹಾರ ದೊರೆಯಲಿದೆ. ಇದಕ್ಕೆ ಮಾಧ್ಯಮದ ಹೊಣೆಗಾರಿಕೆಯೂ ಇದೆ ಎಂದರು.
ಸಂತ್ರಸ್ಥರನ್ನು ಚಿಕಿತ್ಸೆಯ ನಂತರ ನೋಡಿಕೊಳ್ಳುವವರಿಗಾಗಿ ಮಾಸಾಶನ, ವಿಕಲಚೇತನರಿಗೆ ನೀಡುವಂತೆ ನಿರ್ವಹಣಾ ಮೊತ್ತ ಪಾವತಿಸುವಂತಾದಲ್ಲಿ ಇದನ್ನು ನಿಯಂತ್ರಿಸಲು ಸಹಕಾರಿಯಾಗಲಿದೆ. ಮನುಕುಲ ಇರುವವರೆಗೂ ಈ ಸಮಸ್ಯೆಗಳು ಇರುತ್ತವೆ. ಆದರೆ, ಅವುಗಳ ಪ್ರಕಾರ ಬೇರೆಬೇರೆಯಾಗಿರಬಹುದು ಅಷ್ಟೆ. ಭವಿಷ್ಯದ ದಿನಗಳಲ್ಲಾದರೂ ಈ ಬಗ್ಗೆ ಗಮನಿಸಲೇಬೇಕಾದ ಅಗತ್ಯವಿದೆ. ಸಮಸ್ಯೆಯ ಪರಿಹಾರಕ್ಕೆ ಎಲ್ಲರೂ ಸಹಕರಿಸುವಂತೆ ಅವರು ಮನವಿ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ರಾಜೇಶ್ ಸುರಗೀಹಳ್ಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಿಮ್ಸ್ ನಿರ್ದೇಶಕ ಡಾ|| ವಿರೂಪಾಕ್ಷಪ್ಪ ವಿ., ಜಿಲ್ಲಾ ಶಸ್ತç ಚಿಕಿತ್ಸಕ ಡಾ|| ಸಿದ್ಧನಗೌಡ ಪಾಟೀಲ್, ಜಿಲ್ಲಾ ನ್ಯಾಯಾವಾದಿಗಳ ಸಂಘ ಬಿ.ಜಿ.ಶಿವಮೂರ್ತಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ|| ಮಲ್ಲಪ್ಪ ಒ ಸೇರಿದಂತೆ ಆರೋಗ್ಯ ಇಲಾಖೆಯ ಹಿರಿಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.