Sunday, July 13, 2025
Sunday, July 13, 2025

Klive Special Article ಮಾದರಿ ಮಾರ್ಗದರ್ಶಕರ ಕೊರತೆ

Date:

Klive Special Article ಮಾದರಿ – ಮಾರ್ಗದರ್ಶಕರ ಕೊರತೆ.

ಮಕ್ಕಳು, ಯುವಕರು, ಗ್ರಾಮೀಣ ಪ್ರದೇಶದ ಜನರು, ಕೆಲವು ಮಹಿಳೆಯರು ಇವರುಗಳಿಗೆ
ಮಾರ್ಗದರ್ಶಕರ ಕೊರತೆ ತುಂಬಾ ಕಾಡುತ್ತಿದೆ.

ಅದರಲ್ಲೂ, ಮುಖ್ಯವಾಗಿ 15 ರಿಂದ 35 ವರ್ಷ ವಯಸ್ಸಿನ ಯುವ ಜನಾಂಗ ಈ ವಿಷಯದಲ್ಲಿ ಉತ್ತಮ ಗುಣಮಟ್ಟದ ಕೊರತೆ ಎದುರಿಸುತ್ತಿದೆ.

ಶಿಕ್ಷಣ – ಉದ್ಯೋಗ – ಆರೋಗ್ಯ – ಮದುವೆ – ಕುಟುಂಬದ ನಿರ್ವಹಣೆ ‌- ಸಾಮಾಜಿಕ ಜವಾಬ್ದಾರಿ – ಮಾನವೀಯ ಮೌಲ್ಯಗಳ ನಿರ್ವಹಣೆ – ವೈಯಕ್ತಿಕ ಮಾನಸಿಕ ಒತ್ತಡ ಇವುಗಳಲ್ಲಿ ಸ್ಪಷ್ಟವಾದ ತೀರ್ಮಾನ ಕೈಗೊಳ್ಳುವಲ್ಲಿ ಯುವ ಜನಾಂಗ ವಿಫಲವಾಗುತ್ತಿದೆ.

ಕೆಲವು ಕಾರ್ಪೊರೇಟ್ ಸಂಸ್ಥೆಗಳು ವ್ಯಕ್ತಿತ್ವ ವಿಕಸನದ ಕೆಲವು ಸಲಹಾ ಕೇಂದ್ರಗಳನ್ನು ಅಲ್ಲಲ್ಲಿ ‌ಸ್ಥಾಪಿಸಿವೆ. ಆದರೆ ಅವುಗಳು ಸಂಪೂರ್ಣ ವಾಣಿಜ್ಯೀಕರಣವಾಗಿವೆ ಮತ್ತು ಅದರಲ್ಲಿ ಭಾರತೀಯ ಸಂಸ್ಕೃತಿಯ – ಈ ಮಣ್ಣಿನ ಮೂಲದ್ರವ್ಯವೇ ಇರುವುದಿಲ್ಲ.

ಎಸ್ಎಸ್ಎಲ್ ಸಿ , ಪಿಯುಸಿ ನಂತರದ ಶಿಕ್ಷಣದ ಆಯ್ಕೆಗಳ ಬಗ್ಗೆ ಪೋಷಕರಲ್ಲಿ ಆತಂಕ ಮತ್ತು ಗೊಂದಲ ಉಂಟಾಗುತ್ತದೆ. ಮಗ ಅಥವಾ ಮಗಳು ತೆಗೆದುಕೊಳ್ಳುವ ಅಂಕಗಳು, ಆ ಮಕ್ಕಳ ಆಸಕ್ತಿ, ಅದಕ್ಕಿರುವ ಅವಕಾಶ ಯಾವುದನ್ನೂ ಸರಿಯಾಗಿ ನಿರ್ಧರಿಸಲು ಸಾಧ್ಯವಾಗುತ್ತಿಲ್ಲ.
ಒಂದು ವೇಳೆ ಪರೀಕ್ಷೆಗಳಲ್ಲಿ ಅನುತ್ತೀರ್ಣವಾದರೆ ಆಗ ಇರುವ ಅವಕಾಶದ ಬಗ್ಗೆಯೂ ಮಾಹಿತಿ ಇರುವುದಿಲ್ಲ. ಆ ಮಕ್ಕಳ ಬದುಕೇ ಮುಗಿದು ಹೋದಂತೆ ಆಡುತ್ತಾರೆ.

ಆರೋಗ್ಯದಲ್ಲಿ ಆಗುವ ಬದಲಾವಣೆಗಳು – ಅದರ ಚಿಕಿತ್ಸಾ ವಿಧಾನಗಳ ಬಗ್ಗೆಯೂ ಸರಿಯಾದ ಗುಣಮಟ್ಟದ ಮಾರ್ಗದರ್ಶನ ದೊರಕದೆ ಮಾಧ್ಯಮಗಳ ಜಾಹೀರಾತುಗಳಿಗೆ ಮರುಳಾಗುವದನ್ನು ಗಮನಿಸಬಹುದು.

ಉದ್ಯೋಗದ ಆಯ್ಕೆ, ತದನಂತರ ಗಂಡ ಅಥವಾ ಹೆಂಡತಿಯ ಆಯ್ಕೆ, ಆ ಸಂದರ್ಭದಲ್ಲಿ ಪೋಷಕರ ಜವಾಬ್ದಾರಿ, ಸಾಮಾನ್ಯ ಕೌಟುಂಬಿಕ ಕಲಹಗಳ ನಿರ್ವಹಣೆ ಈ ವಿಷಯಗಳಲ್ಲಿ ಸಹ ತುಂಬಾ ಎಡುವುತ್ತಿದ್ದಾರೆ. ಪೋಲೀಸು ಕೋರ್ಟು ಕಚೇರಿ ಎಂದು ಅಲೆದಾಡುತ್ತಾ ಸಣ್ಣ ವಿಷಯಗಳಿಗೂ ಒತ್ತಡವನ್ನು ತಮ್ಮ ಮೇಲೆ ಎಳೆದುಕೊಳ್ಳುತ್ತಿದ್ದಾರೆ.

ವ್ಯಾಪಾರ ವ್ಯವಹಾರ ಸಂಗೀತ ಸಾಹಿತ್ಯ ಕಲೆ ಕ್ರೀಡೆ ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಆಸಕ್ತಿ ಇರುವವರು ಬೆರಳೆಣಿಕೆಯಷ್ಟು ಇರುವ ಯಶಸ್ವಿ ಜನರನ್ನು ಅನುಕರಣೆ ಮಾಡಲು ಹೋಗಿ ಸರಿಯಾದ ಮಾರ್ಗದರ್ಶವಿಲ್ಲದೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.
ಜಾಗತೀಕರಣದ ಈ ಸಂದರ್ಭದಲ್ಲಿ ಬದಲಾದ ವ್ಯವಸ್ಥೆಯನ್ನು ಗುರುತಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ.

ಮೊದಲಿದ್ದ ಹಿತೈಷಿಗಳ ಮಾರ್ಗದರ್ಶನಕ್ಕೆ ಪರ್ಯಾಯವಾಗಿ ಈಗ ಇಂಟರ್ ನೆಟ್ ನಲ್ಲಿ ಎಲ್ಲಾ ಮಾಹಿತಿಗಳೂ ಸಿಗುತ್ತಿವೆ. ಇದು ಮೇಲ್ನೋಟಕ್ಕೆ ಉತ್ತಮ ಬೆಳವಣಿಗೆ. ಆದರೆ ನಿಜವಾದ ಅಂತಃಸತ್ವ ಇಲ್ಲದ ಯಾಂತ್ರಿಕ ಮತ್ತು ನಿರ್ಜೀವ ಸ್ಥಿತಿಯತ್ತ ಯುವ ಜನಾಂಗವನ್ನು ಕೊಂಡೊಯ್ಯುತ್ತಿದೆ.

ಮಾಹಿತಿಯೇ ಜ್ಞಾನ ಎಂಬ ತಪ್ಪು ಅಭಿಪ್ರಾಯ ಸಾಕಷ್ಟು ಜನರಲ್ಲಿ ಮನೆ ಮಾಡಿದೆ. ಇದು ವ್ಯಕ್ತಿಯ ಕ್ರಿಯಾತ್ಮಕತೆಯನ್ನು ಕೊಲ್ಲುತ್ತಿದೆ. ಹರಿಯುವ ನೀರಿನಂತೆ ಜ್ಞಾನವು ಸಹ ಸದಾ ಚಲಿಸುತ್ತಲೇ ಇರುತ್ತದೆ. ಅದು ನಿಂತ ನೀರಾದಾಗ ಕೊಳೆಯಲಾರಂಭಿಸುತ್ತದೆ. ನಮ್ಮೊಳಗಿನ ಅಜ್ಞಾನವನ್ನು ಹುಡುಕಿ ಹೋಗಲಾಡಿಸುವುದು ಸಹ ಜ್ಞಾನದ ಒಂದು ಭಾಗ. ಅದರ ಆಳಕ್ಕೆ ಇಳಿಯುವ ತಾಳ್ಮೆ, ಸಾಮಾಜಿಕ ಸಾಂಸ್ಕೃತಿಕ ಶೈಕ್ಷಣಿಕ ವಾತಾವರಣ ಇಲ್ಲವಾಗಿದೆ.

ಇದು ಅಪಾಯಕಾರಿ ಎನ್ನುವುದಕ್ಕಿಂತಲೂ ಇದೊಂದು ಸವಾಲು ಎಂದು ಪರಿಗಣಿಸಿ ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಮತ್ತು ಆ ಮಕ್ಕಳಿಗೆ ಪ್ರಬುದ್ದತೆಯ ಗುಣಮಟ್ಟದ ಮಾರ್ಗದರ್ಶನ ಸಿಗುವಂತೆ ಮಾಡುವ ಜವಾಬ್ದಾರಿ ಹಿರಿಯರು ತೆಗೆದುಕೊಳ್ಳಬೇಕಾಗಿದೆ.

ಕೆಲವು ದಶಕಗಳ ಹಿಂದೆ ಸಾಕಷ್ಟು ಜನರು ಮಾದರಿ ವ್ಯಕ್ತಿತ್ವ ಹೊಂದಿದ್ದರು ಮತ್ತು ಹಾಗೆಯೇ ಬದುಕುತ್ತಿದ್ದರು. ಆದರೆ ಈಗ ಸಹಜತೆಯು ಮಾಯವಾಗಿ ಮುಖವಾಡಗಳೇ ಮೇಲುಗೈ ಪಡೆದಿರುವುದರಿಂದ ಯುವ ಜನತೆ ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಇದರ ಬಗ್ಗೆ ಸ್ಪಷ್ಟವಾಗಿ ಅರಿವು ಮೂಡಿಸಬೇಕು.

ಅಯೋಗ್ಯರು, ಅನರ್ಹರು, ದುಷ್ಟರು, ಕೆಟ್ಟ ಮಾರ್ಗದಲ್ಲಿ ಜನಪ್ರಿಯರಾದವರು, ಗೋಮುಖ ವ್ಯಾಘ್ರಗಳು, ಅನ್ಯಾಯದ ವಿಧಾನದಲ್ಲಿ ಯಶಸ್ವಿಯಾದವರು ಮುಖ್ಯವಾಹಿನಿಯಲ್ಲಿ ಇದ್ದಾರೆ. ಅವರನ್ನು ಗುರುತಿಸಿ ಅತ್ಯಂತ ಪ್ರಾಮಾಣಿಕರು, ದಕ್ಷರು, ಪ್ರತಿಭಾವಂತರು, ಸಾಹಸಿಗಳು, ಒಳ್ಳೆಯವರನ್ನು ಈ ಸಮಾಜಕ್ಕೆ ಪರಿಚಯಿಸಬೇಕಿದೆ.

ಆ ಕೆಲಸ ಮಾಡುವ ಮೊದಲು ನಾವು‌ ಹಾಗೆ ಬದುಕಬೇಕಿದೆ.
ನಮ್ಮ ಬದುಕೇ ನಮ್ಮ ‌ಸಂದೇಶವಾಗಬೇಕು.

ಆಗ ಮುಂದಿನ ಪೀಳಿಗೆ ಉತ್ತಮ ಗುಣಮಟ್ಟದ ಜೀವನ ಶೈಲಿಯನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತದೆ.

Klive Special Article ಆ ದಿನಗಳ ನಿರೀಕ್ಷೆಯಲ್ಲಿ…
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.

ಲೇ:
ವಿವೇಕಾನಂದ ಎಚ್ ಕೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Miss Universe Karnataka ಚಿಕ್ಕಮಗಳೂರಿನ ಕು.ವಂಶಿ ಅವರಿಗೆ ಮಿಸ್ ಯೂನಿವರ್ಸ್ ಕರ್ನಾಟಕ ಪುರಸ್ಕಾರ

Miss Universe Karnataka ಮಿಸ್ ಯೂನಿವರ್ಸ್ ಕರ್ನಾಟಕ ಸ್ಪರ್ಧೆಯಲ್ಲಿ ವಿಜೇತರಾಗಿರುವ ಚಿಕ್ಕಮಗಳೂರಿನ...

Department of Agriculture ಶೇ 48. ರಷ್ಟು ಮಾರುಕಟ್ಟೆ ಶುಲ್ಕ ವಿಧಿಸಲು ಅವಕಾಶ ಬೇಕೆಂಬ ಮನವಿಯನ್ನ ಪರಿಶೀಲಿಸಲಾಗುತ್ತದೆ- ಸಚಿವ ಶಿವಾನಂದ ಪಾಟೀಲ್

Department of Agriculture ಕ್ಯಾಂಪ್ಕೋದಿಂದ ಸಂಗ್ರಹಿಸುತ್ತಿರುವ ಮಾರುಕಟ್ಟೆ ಶುಲ್ಕವನ್ನು ಈ ಮೊದಲಿನಂತೆ...

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಅರ್ಹತೆಗಳಲ್ಲಿ‌ ತಿದ್ದುಪಡಿ ಆದೇಶ

ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಗಾಗಿ ತಿದ್ದುಪಡಿ ಆದೇಶ ಹೊರಡಿಸಲಾಗಿದ್ದು,...

University of Horticultural Sciences ಕೃಷಿ ಪದವಿಧರರು ಕೃಷಿಮಾಡಿ ಅಭಿವೃದ್ಧಿಗೆ ಕೊಡುಗೆ ನೀಡಿ-ನಟ ಶಶಿಕುಮಾರ್

ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ...