Uttaradi Mutt ಬೆಣ್ಣೆಯಂತೆ ಶುದ್ಧವಾದ ಮನಸ್ಸಿನವರನ್ನು ಮಾತ್ರ ನಾನು ಸ್ವೀಕಾರ ಮಾಡುತ್ತೇನೆ ಎಂಬ ಪ್ರತೀಕವಾಗಿ ಶ್ರೀ ಕೃಷ್ಣ ತನ್ನ ಬಾಲ ಲೀಲೆಯಲ್ಲಿ ಬೆಣ್ಣೆಯನ್ನು ಸ್ವೀಕರಿಸಿದ್ದಾನೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರು ಹೇಳಿದರು.
ಸೋಮವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆಯುತ್ತಿರುವ ಶ್ರೀ ಸತ್ಯಧರ್ಮ ತೀರ್ಥ ಶ್ರೀಪಾದಂಗಳವರ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ಮನಸ್ಸಿನಲ್ಲಿ ಕಲ್ಮಶ, ಕಾಮನೆ ಇಟ್ಟುಕೊಂಡು ದೇವರ ಬಳಿ ಹೋದರೆ ಯಾವ ಪ್ರಯೋಜನವೂ ಇಲ್ಲ. ದ್ವೇಷ, ಅಸೂಯಾ ಭಾವನೆ ಮನಸ್ಸಿನಲ್ಲಿದ್ದರೂ ದೇವರು ನಮ್ಮನ್ನು ಸ್ವೀಕಾರ ಮಾಡುವುದಿಲ್ಲ. ಶುಭ್ರವಾದ ಮನಸ್ಸು, ಚಾರಿತ್ರ‍್ಯ ಮತ್ತು ವ್ಯಕ್ತಿತ್ವ ಇದ್ದರೆ ಮಾತ್ರ ದೇವರು ಸ್ವೀಕಾರ ಮಾಡುತ್ತಾನೆ ಎಂದರು.
ಶ್ರೀಕೃಷ್ಣ ಬೆಣ್ಣೆ ಕಳ್ಳನೇ ?
ಕೃಷ್ಣ ತನ್ನ ಬಾಲ ಲೀಲೆಯಲ್ಲಿ ಬೆಣ್ಣೆಯನ್ನು ಕದ್ದಂತೆ ತೋರಿಸಿದ್ದಾನೆ. ಯಾವ ವಸ್ತು ಯಾರದ್ದು ಅಲ್ಲವೋ ಅದನ್ನು ತೆಗೆದುಕೊಂಡರೆ ಅದು ಕಳ್ಳತನವಾಗುತ್ತದೆ.
ಬೇರೆಯವರ ವಸ್ತು ಒಪ್ಪಿಗೆ ಇಲ್ಲದೆ ತೆಗೆದುಕೊಂಡರೆ ಕಳ್ಳತನವಾಗುತ್ತದೆ. ಜಗತ್ತು ಸೇರಿ ಎಲ್ಲ ಸೃಷ್ಟಿಯೂ ಭಗವಂತನದ್ದು ಎಂದಾದ ಮೇಲೆ ಅದು ಕಳ್ಳತನ ಹೇಗಾಗುತ್ತದೆ? ಇದೇ ಅನುಸಂಧಾನವನ್ನು ನಾವು ಎಲ್ಲ ಕಾಲದಲ್ಲೂ ಇಟ್ಟುಕೊಳ್ಳಬೇಕು ಎಂದರು.
ಸತ್ಯಧರ್ಮರು ದಾರಿದೀಪ :
ಪ್ರವಚನ ನೀಡಿದ ಪಂಡಿತ ಬಿದರಹಳ್ಳಿ ಕೃಷ್ಣಾಚಾರ್ಯ, ವೇದಾಂತದ ಅಧ್ಯಯನ ಮಾಡುವ ಮುಮುಕ್ಷುವಿಗೆ ಯಾವ ರೀತಿಯ ಮನಸ್ಥಿತಿ ಇರಬೇಕು ಎಂಬುದನ್ನು ಶ್ರೀ ಸತ್ಯಧರ್ಮ ತೀರ್ಥರಿಂದ ಕಲಿಯಬೇಕು. ಅವರ ವ್ಯಾಖ್ಯಾನ ಶೈಲಿಯೇ ಅದ್ಭುತ ಮತ್ತು ಅವರಿಗೆ ಪರಂಪರೆಯ ಹಿರಿಯರ ಬಗ್ಗೆ ಇದ್ದಂತಹ ಅಪಾರ ಗೌರವವನ್ನು ಕಾಣಬಹುದಾಗಿದೆ ಎಂದರು.
Uttaradi Mutt ಪಂಡಿತ ರಘೂತ್ತಮಾಚಾರ್ಯ ನಾಗಸಂಪಿಗೆ ಪ್ರವಚನ ನೀಡಿದರು. ದ್ವೈತದ್ವಿಮಣ ಕಾರರು ರಚನೆ ಮಾಡಿದ ಶ್ರೀ ರಮಾ ಸ್ತೋತ್ರದ ಪ್ರತಿಯನ್ನು ಶ್ರೀಪಾದಂಗಳವರು ಬಿಡುಗಡೆ ಮಾಡಿದರು.
ಬೆಂಗಳೂರಿನ ಶ್ರೀ ಜಯತೀರ್ಥ ವಿದ್ಯಾಪೀಠದ ಕುಲಪತಿಗಳಾದ ಗುತ್ತಲ ರಂಗಾಚಾರ್ಯ, ಶ್ರೀಮಠದ ದಿವಾನರಾದ ಶಶಿ ಆಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಅನಿಲ್ ರಾಮಧ್ಯಾನಿ, ಮುರಳಿ, ಧೃವಾಚಾರ್, ಗೋಪಿನಾಥ ನಾಡಿಗ್, ಗುರುರಾಜ ಕಟ್ಟಿ ಮೊದಲಾದವರಿದ್ದರು
