Ministry Of Heavy industry ಉತ್ತರ ಕನ್ನಡದ ತದಡಿಯನ್ನು ಪರಿಸರ ಸೂಕ್ಷ್ಮ ವಲಯವನ್ನಾಗಿಯೇ ಉಳಿಸಿಕೊಂಡು, ವಿಶ್ವ ದರ್ಜೆಯ ಪರಿಸರ ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಇದಕ್ಕಾಗಿ ಮಾಸ್ಟರ್ ಪ್ಲ್ಯಾನ್ ಸಿದ್ಧವಾಗಿದ್ದು, ರಾಜ್ಯ ಮತ್ತು ಕೇಂದ್ರ ಸರಕಾರಗಳ ಪರಿಸರ ಹಾಗೂ ಅರಣ್ಯ ಸೇರಿದಂತೆ ಇನ್ನೂ ಹಲವು ಇಲಾಖೆಗಳಿಂದ ತ್ವರಿತವಾಗಿ ಅನುಮೋದನೆ ಪಡೆದುಕೊಳ್ಳಲಾಗುವುದು ಎಂದು ಭಾರೀ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಈ ಸಂಬಂಧವಾಗಿ ಕರ್ನಾಟಕ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ (ಕೆಎಸ್‌ಐಐಡಿಸಿ) ಮತ್ತು ಇನ್ನಿತರ ಅಧಿಕಾರಿಗಳ ಜತೆ ಅವರು ಸಭೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಐಡೆಕ್ ಸಂಸ್ಥೆಯು ಸಿದ್ಧಪಡಿಸಿರುವ ಮಾಸ್ಟರ್ ಪ್ಲ್ಯಾನ್ ಅನ್ನು ವೀಕ್ಷಿಸಿ, ಮಾಹಿತಿ ಪಡೆದುಕೊಂಡರು.
ನಂತರ ಮಾತನಾಡಿದ ಅವರು, ಹಿಂದೆ ತದಡಿಯನ್ನು ಬಂದರಾಗಿ ಅಭಿವೃದ್ಧಿ ಪಡಿಸಲು ಚಿಂತಿಸಲಾಗಿತ್ತು. ಆಗ ಅದಕ್ಕೆ ತೀವ್ರ ಪ್ರತಿರೋಧ ವ್ಯಕ್ತವಾಯಿತು. ಹೀಗಾಗಿ ಇದನ್ನು 300 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಪರಿಸರ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಲು ತೀರ್ಮಾನಿಸಲಾಗಿದೆ. ಸಂಬಂಧಿಸಿದ ಇಲಾಖೆಗಳಿಂದ ತ್ವರಿತ ಅನುಮತಿ ಪಡೆದುಕೊಂಡ ಬಳಿಕ ಇದನ್ನು ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಕೆಎಸ್‌ಐಐಡಿಸಿಯನ್ನು ಹಿಂದೆಯೇ ಇದಕ್ಕೆ ನೋಡಲ್ ಏಜೆನ್ಸಿಯಾಗಿ ಮಾಡಲಾಗಿತ್ತು. ನನೆಗುದಿಗೆ ಬಿದ್ದಿದ್ದ ಈ ಯೋಜನೆಯನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Ministry Of Heavy industry ಉದ್ದೇಶಿತ ಯೋಜನೆಯಡಿಯಲ್ಲಿ ಹೈಟೆಕ್ ರೆಸಾರ್ಟ್, 184 ಟ್ರೀ ಹಟ್‌ಗಳು, 70 ಹೋಟೆಲ್ ಕೊಠಡಿಗಳು, ಪರಿಸರಸ್ನೇಹಿ ವಾಯುವಿಹಾರ ಪಥ, ಯೋಗ ತಾಣ, ಪೆಡ್ಲಿಂಗ್ ಬೋಟ್, ತೂಗುಸೇತುವೆಗಳು, ಸ್ಕೈವಾಕ್ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗುವುದು. ಇದಕ್ಕಾಗಿ ಜಾಗತಿಕ ಮಟ್ಟದಲ್ಲಿ ಟೆಂಡರ್ ಕರೆಯಲಾಗುವುದು. ಸದ್ಯಕ್ಕೆ ಕೆಎಸ್‌ಐಐಡಿಸಿ ಬಳಿ 1,419 ಎಕರೆ ಭೂಮಿ ಇದ್ದು, ಕೆಪಿಸಿಎಲ್ 400 ಎಕರೆಯನ್ನು ಬಿಟ್ಟುಕೊಡಬೇಕಾಗಿದೆ. ಇವೆಲ್ಲಕ್ಕೂ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಒಟ್ಟಿನಲ್ಲಿ ತದಡಿಯನ್ನು ಕಡಲತೀರ ವಲಯ ನಿರ್ವಹಣಾ ಯೋಜನೆಯಡಿ ಸೇರಿಸಲಾಗುವುದು. ಜತೆಗೆ ಇಲ್ಲಿರುವ ಮ್ಯಾನ್‌ಗ್ರೋವ್ ಕಾಡನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಮಾಸ್ಟರ್ ಪ್ಲಾನ್ ಸಿದ್ಧಪಡಿಸಿರುವ ಐಡೆಕ್ ಸಂಸ್ಥೆಯು ಜಗತ್ತಿನಲ್ಲಿರುವ ವಿಖ್ಯಾತ ಸಮುದ್ರ ದಂಡೆಯ ಪ್ರವಾಸಿ ತಾಣಗಳೊಂದಿಗೆ ತದಡಿ ಪರಿಸರದ ತೌಲನಿಕ ಅಧ್ಯಯನ ನಡೆಸಿದೆ. ಇದರ ಸಮಗ್ರ ಅಭಿವೃದ್ಧಿಗಾಗಿ ‘ತದಡಿ ಇಕೋ ಟೂರಿಸಂ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್’ ಎನ್ನುವ ಪ್ರತ್ಯೇಕ ಘಟಕ ತೆರೆಯಲಾಗುವುದು ಎಂದು ಪಾಟೀಲ ನುಡಿದರು.
ಸಭೆಯಲ್ಲಿ ಕೆಎಸ್‌ಐಐಡಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ ಆರ್ ರವಿ, ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ, ಮತ್ತು ಐಡೆಕ್ ಸಂಸ್ಥೆಯ ಸಿಇಒ ಜಯಕಿಷನ್ ಇದ್ದರು. ಉತ್ತರ ಕನ್ನಡ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ, ಕುಮಟಾ ಉಪವಿಭಾಗಾಧಿಕಾರಿ ಮತ್ತು ಜಿಲ್ಲಾ ಅರಣ್ಯಾಧಿಕಾರಿಗಳು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.
ತದಡಿ ಪರಿಸರ ಪ್ರವಾಸೋದ್ಯಮ ತಾಣ ಅಭಿವೃದ್ಧಿ ಕುರಿತು ಸಚಿವ ಎಂ ಬಿ ಪಾಟೀಲ ಅವರು ಮಂಗಳವಾರ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಕೆಎಸ್‌ಐಐಡಿಸಿ ವ್ಯವಸ್ಥಾಪಕ ನಿರ್ದೇಶಕ ಎಂ ಆರ್ ರವಿ, ಐಡೆಕ್ ಸಂಸ್ಥೆಯ ಸಿಇಒ ಜಯಸಿಂಹ ಮುಂತಾದವರಿದ್ದರು